»   » ವಿಷ್ಣುವರ್ಧನ್ ಅಂತಿಮ ಯಾತ್ರೆಗೆ ಮಹಾಪೂರ

ವಿಷ್ಣುವರ್ಧನ್ ಅಂತಿಮ ಯಾತ್ರೆಗೆ ಮಹಾಪೂರ

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರದ ಮೆರವಣಿಗೆ ಜಯನಗರ ಶಾಪಿಂಗ್ ಕಾಂಪ್ಲೆಸ್ ಮಾರ್ಗವಾಗಿ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನಕ್ಕೆ ಹೊರಡುತ್ತಿದೆ. ಜಯನಗರ, ಕೆನರಾಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಆನೆಬಂಡೆ ಹಾಗೂ ಆರ್ಮುಗಂ ರಸ್ತೆ ಮೂಲಕ ವಿಷ್ಣು ಅಂತಿಮ ಯಾತ್ರೆ ಸಾಗಲಿದೆ.

ಬುಧವಾರ ಸಂಜೆ 4 ಗಂಟೆ ನಂತರ ಬನಶಂಕರಿ ಚಿತಾಗಾರದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ ಎಂದು ವಿಷ್ಣು ಕುಟುಂಬ ಮೂಲಗಳು ತಿಳಿಸಿವೆ. ಸಾರ್ವಜನಿಕರು ವಿಷ್ಣುವರ್ಧನ್ ಅವರ ಪಾರ್ಥೀವ ಶರೀರ ದರ್ಶನ ಪಡೆಯಲು ನ್ಯಾಶನಲ್ ಕಾಲೇಜು ಫ್ಲೈ ಓವರ್, ಪಂಪಮಹಾಕವಿ ರಸ್ತೆ ಮೂಲಕ ನ್ಯಾಶನಲ್ ಕಾಲೇಜು ಮೈದಾನ ತಲುಪಲು ಕೋರಲಾಗಿದೆ.

ವಿಷ್ಣುವರ್ಧನ್ ಅಂತಿಮ ದರ್ಶನ ಪಡೆಯಲು ಬರುವ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಲಾಗಿದೆ. ಶಂಕರಮಠ, ಕೆ ಆರ್ ರಸ್ತೆ, ಉತ್ತರಾಧಿಮಠದ ಬಳಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಅನುವು ಮಾಡಿಕೊಡಲಾಗಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಸಂಯಮ ವಹಿಸಬೇಕು ಎಂದು ಭಾರತಿ ವಿಷ್ಣುವರ್ಧನ್ ಅವರು ಮನವಿ ಮಾಡಿದ್ದಾರೆ.

ವಿಷ್ಣು ಅವರ ಜಯನಗರದ ನಿವಾಸದ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ಮಾಡಬೇಕಾಯಿತು. ವಿಷ್ಣುವರ್ಧನ್ ಅವರ ಅಂತಿಮ ದರ್ಶನ ಪಡೆಯುವ ವೇಳೆ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ನೋವು ಭರಿಸಲಾಗದೆ ಕುಸಿದುಬಿದ್ದ್ದ ಘಟನೆ ನಡೆದಿದೆ.

ವಿಷ್ಣು ನಿಧನದ ಹಿನ್ನೆಲೆಯಲ್ಲಿ ಮೈಸೂರು, ಚಿತ್ರದುರ್ಗ ಬಂದ್ ಗೆ ಅಲ್ಲಿನ ಅಭಿಮಾನಿಗಳು ಕರೆಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿಷ್ಣುವರ್ಧನ್ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಆಗಮಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಗಣ್ಯರು, ಇಡೀ ಕನ್ನ್ನಡ ಚಿತ್ರರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada