»   » ಶಿವಣ್ಣನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆ

ಶಿವಣ್ಣನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆ

Posted By:
Subscribe to Filmibeat Kannada

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಕುಟುಂಬಿಕರೊಂದಿಗೆ ಆಶ್ಲೇಷ ಬಲಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ, ಮಗಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶುಕ್ರವಾರವೇ(ಮೇ.28) ಆಗಮಿಸಿದ ಶಿವಣ್ಣ ಶನಿವಾರ ಈ ವಿಶೇಷ ಪೂಜೆಯನ್ನು ನೆರವೇರಿಸಿದರು.

ಶನಿವಾರ ಮುಂಜಾನೆ ಮಹಾಪೂಜೆ ಮತ್ತು ವಿಶೇಷ ಸೇವೆ ಸಲ್ಲಿಸಿ ಶಿವಣ್ಣ ಕೃತಾರ್ಥರಾದರು. ಬಳಿಕ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದ ಪಡೆದರು. ಕುಕ್ಕೆಗೆ ಇದೇ ಮೊದಲ ಬಾರಿಗೆ ಬಂದಿದ್ದ ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, 2011 ತಮ್ಮ ಬದುಕಿನಲ್ಲಿ ತುಂಬ ಮಹತ್ವಪೂರ್ಣವಾದ ವರ್ಷ. 2011ರ ಹೊತ್ತಿಗೆ ತಾವು ಚಿತ್ರರಂಗಕ್ಕೆ ಅಡಿಯಿಟ್ಟು 25 ವರ್ಷಗಳು ಪೂರ್ಣವಾಗಲಿವೆ. ಹಾಗೆಯೇ ತಮ್ಮ ದಾಂಪತ್ಯ ಜೀವನಕ್ಕೂ 25 ವರ್ಷಗಳು ತುಂಬುತ್ತವೆ. ಅಷ್ಟೇ ಅಲ್ಲದೆ ತಾವು 50ನೇ ವರ್ಷಕ್ಕೆ ಅಡಿಯಿಡಲಿದ್ದೇವೆ ಎಂದು ತಿಳಿಸಿದ್ದಾರೆ.

'ಮೈಲಾರಿ' ಚಿತ್ರ ತಮ್ಮ ಅಭಿನಯದಲ್ಲಿ ಮೂಡಿಬರುತ್ತಿರುವ 99ನೆಯ ಚಿತ್ರವಾಗಲಿದೆ. ಜೋಗಯ್ಯ ನೂರನೇ ಚಿತ್ರ. 2011ಕ್ಕೆ ಜೋಗಯ್ಯ ತೆರೆ ಕಾಣಲಿದ್ದಾನೆ ಎಂದು ಶಿವರಾಜ್ ಕುಮಾರ್ ವಿವರ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೈಲಾರಿ ಚಿತ್ರದ ನಿರ್ದೇಶಕ ಆರ್ ಚಂದ್ರು ಉಪಸ್ಥಿತರಿದ್ದರು.

ಆಶ್ಲೇಷ ಬಲಿ ಪೂಜೆ ವಿಶೇಷತೆ

ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರ ಇವೆರಡೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪದೋಷ ನಿವಾರಣೆಗಾಗಿ ಮಾಡುವ ವಿಶೇಷ ಪೂಜಾ ವಿಧಾನಗಳು. ಆಶ್ಲೇಷ ಬಲಿ ಪೂಜೆ ಕೆಲವು ಗಂಟೆಗಳ ಕಾಲ ನೆರವೇರುತ್ತದೆ. ಆಶ್ಲೇಷ ನಕ್ಷತ್ರದ ದಿನ ಈ ಪೂಜೆಯನ್ನು ಮಾಡಿದರೆ ಉತ್ತಮ ಫಲ ಸಿಗುತ್ತದೆ ಎಂಬುದು ನಂಬಿಕೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada