»   » ನಿರ್ದೇಶಕನ ವಿರುದ್ಧ ತಿರುಗಿಬಿದ್ದ ರಕ್ಷಿತಾ

ನಿರ್ದೇಶಕನ ವಿರುದ್ಧ ತಿರುಗಿಬಿದ್ದ ರಕ್ಷಿತಾ

Posted By: ಇಂದ್ರಾಣಿ
Subscribe to Filmibeat Kannada
Rakshita
ಅಪ್ಪು ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ, ಇಂಗ್ಲೀಷಿನಲ್ಲಿ ಕನ್ನಡ ಮಾತನಾಡುವ ರಕ್ಷಿತಾ ತೆಲುಗಿನಲ್ಲೀಗ ಹಿಟ್‌ ಹಿರೋಯಿನ್‌. ಅಪ್ಪು ಚಿತ್ರದ ತೆಲುಗು ರೂಪ 'ಈಡಿಯಟ್‌"ನಲ್ಲಿ ಬೋಲ್ಡ್‌ ಹುಡುಗಿಯಾಗಿ ರಸಿಕ ಪ್ರೇಕ್ಷಕರ ಮನ ಗೆದ್ದ ರಕ್ಷಿತಾಗೆ ಈಗ ಅಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು.

ರಕ್ಷಿತಾಳ ಇತ್ತೀಚೆಗಿನ ಬಹು ನಿರೀಕ್ಷಿತ ಚಿತ್ರ 'ನಿಜಂ". ತೆಲುಗಿನ ಸಿಕ್ಕಾಪಟ್ಟೆ ಫೇಮಸ್‌ ನಿರ್ದೇಶಕ ತೇಜ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ರಕ್ಷಿತಾ ಅಲ್ಲಿ ಕಿರಿಕ್ಕು ಮಾಡಿಕೊಂಡಿದ್ದಾಳೆ. ತೇಜ ಮೇಲೆ ರಕ್ಷಿತಾಗೆ ಯದ್ವಾ ತದ್ವಾ ಕೋಪ ಬಂದಿದ್ದು , ತೇಜಾ ತನಗೆ ಉಪದ್ರ ಕೊಡುತ್ತಿದ್ದಾನೆ ಎಂದು ದೂರಿಕೊಂಡಿದ್ದಾಳೆ.

ನಿಜಂ ಚಿತ್ರದಲ್ಲಿ ರಕ್ಷಿತಾಗೆ ಕಿರಿ ಕಿರಿ ಎನಿಸುವ ವಿಪರೀತ ದೃಶ್ಯಗಳಿವೆಯಂತೆ. ಅದು ತೀರಾ ಚೆಲ್ಲು ಹುಡುಗಿಯ ಪಾತ್ರವಾಗಿದ್ದು, ಪುರುಷನಿಗಾಗಿ ತಹ ತಹಿಸುವ ಹುಡುಗಿಯ ಪಾತ್ರವಂತೆ. ಸೆಟ್‌ನಲ್ಲಿ ರಕ್ಷಿತಾಗೆ ಸಿಕ್ಕಾಪಟ್ಟೆ ಕಿರಿಕಿರಿ ಎನಿಸುತ್ತಿದ್ದು, ನಿರ್ದೇಶಕ ತೇಜ ಜೊತೆಗೆ ಕೆಲಸ ಮಾಡುವುದು ಒಳ್ಳೆಯ ಅನುಭವವೇ ಅಲ್ಲ . ಆತನೊಂದಿಗೆ ಇನ್ನೆಂದೂ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾಳೆ.

ಈ ನಡುವೆ ತೇಜ ಕೂಡ ಸುದ್ದಿಗೋಷ್ಠಿಯಾಂದರಲ್ಲಿ 'ನಿಜಂ" ಚಿತ್ರದ ನಿಜವಾದ ಹೀರೋಯಿನ್‌ ತಲ್ಲೂರಿ ರಾಮೇಶ್ವರಿಯೇ ಹೊರತು ರಕ್ಷಿತಾ ಅಲ್ಲ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದ್ದು , ಈ ಹೇಳಿಕೆಯಿಂದಾಗಿ ರಕ್ಷಿತಾಗೆ ಕೆಂಡಾ ಮಂಡಲ ಸಿಟ್ಟು ಬಂದಿದೆ.

ಸೆಕೆಂಡ್‌ ಹೀರೋಯಿನ್‌ ಪಾತ್ರ ಮಾಡುವಷ್ಟು ದರಿದ್ರ ನನಗೇನೂ ಬಂದಿಲ್ಲ ಎನ್ನುವುದು ರಕ್ಷಿತಾ ವಾದ. ಅದೂ ನಿಜವೆನ್ನಿ- ಆಕೆಯೀಗೆ ತೆಲುಗಿನ 'ಮನ್ಮಥುಡು" ನಾಗಾರ್ಜುನ ಜೊತೆಗೆ ಹಾಗೂ ಆದಿ ಖ್ಯಾತಿಯ ಜೂನಿಯರ್‌ ಎನ್‌ಟಿಆರ್‌ ಜೊತೆಗೆ ಹೊಸ ಚಿತ್ರಗಳಲ್ಲಿ ಬಿರಿkು. ಶಿವಮಣಿ ಮತ್ತು ಆಂಧ್ರವಾಲಾ ಚಿತ್ರದ ಹೆಸರುಗಳು. ಕನ್ನಡದಲ್ಲೂ ಅಷ್ಟೇ. ಕುಟುಂಬ ಬಲದಿಂದ ಚೇತರಿಸಿಕೊಂಡಿರುವ ಉಪೇಂದ್ರ ತಮಿಳಿನ ಅಣ್ಣಾ ಮಲೈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಈ ರೀಮೇಕ್‌ನ ಹೆಸರು 'ಸಿದ್ಧ ". ಉಪೇಂದ್ರರ ಚಿತ್ರಗಳಲ್ಲಿ ನಟಿಸಬೇಡ ಎನ್ನುವ ಅಪ್ಪನ ಮಾತನ್ನು ಪಕ್ಕಕ್ಕಿಟ್ಟಿರುವ ರಕ್ಷಿತಾ, 'ಸಿದ್ಧ " ಚಿತ್ರದಲ್ಲಿ ಉಪೇಂದ್ರನಿಗೆ ನಾಯಕಿಯಾಗಲು ಒಪ್ಪಿಕೊಂಡಿದ್ದಾಳೆ. ರಾಜೇಂದ್ರಸಿಂಗ್‌ ಬಾಬು ಅವರ ಪುತ್ರ ಆದಿತ್ಯನ ಲವ್‌ಗೂ ರಕ್ಷಿತಾಳೇ ನಾಯಕಿ. ಈ ಮೂಲಕ ರಕ್ಷಿತಾ ಕನ್ನಡದಲ್ಲೂ ಚಾಲ್ತಿಯಲ್ಲಿರುವುದು ಸಾಬೀತಾಗಿದೆ.

ಏನೇ ಕಿರಿಕ್ಕುಗಳಿದ್ದರೂ ಗೆಲುವಿನ ದೆಸೆಯಲ್ಲಿರುವ ರಕ್ಷಿತಾಗೆ ಯಾರು ಗಾಡ್‌ ಫಾದರ್‌ ಅಂತ ಕೇಳಿದರೆ ರಕ್ಷಿತಾ ಭಕ್ತಿಯಿಂದ ಪೂರಿ ಜಗನ್ನಾಥರನ್ನು ನೆನೆಸಿಕೊಳ್ಳುತ್ತಾರೆ. ಯಾಕೆಂದರೆ ಪೂರಿಯೇ ರಕ್ಷಿತಾರನ್ನು ಅಪ್ಪು ಚಿತ್ರದ ಮೂಲಕ ರಂಗಕ್ಕೆ ಪರಿಚಯಿಸಿದ್ದು. ಆತನೇ ನನ್ನ ಗಾಡ್‌ ಫಾದರ್‌, ಫಿಲಾಸಫರ್‌, ಮಾರ್ಗದರ್ಶಕ ಎಂದೆಲ್ಲಾ ಅಪರೂಪಕ್ಕೆಂಬಂತೆ ವಿನಯವಂತೆಯಾಗಿ ನುಡಿಯುತ್ತಾಳೆ.

English summary
Rakshita lashes out at Telugu Director Raviteja

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada