»   » ಯಶಸ್ವಿ 25ನೇ ದಿನಕ್ಕೆ ಕಾಲಿಟ್ಟ ಅರ್ಜುನ್ 'ಅದ್ದೂರಿ'

ಯಶಸ್ವಿ 25ನೇ ದಿನಕ್ಕೆ ಕಾಲಿಟ್ಟ ಅರ್ಜುನ್ 'ಅದ್ದೂರಿ'

Posted By:
Subscribe to Filmibeat Kannada

ಎಪಿ ಅರ್ಜುನ್ ನಿರ್ದೇಶನ ಹಾಗೂ ಧ್ರುವ ಸರ್ಜಾ ನಟನೆಯ 'ಅದ್ದೂರಿ' ಚಿತ್ರವು ಅಮೋಘ 25 ನೇ ದಿನ ಪೂರೈಸಿದೆ ಎಂಬ ಜಾಹೀರಾತುಗಳು ಎಲ್ಲೆಡೆ ಗೋಚರಿಸುತ್ತಿವೆ. ಇತ್ತೀಚಿಗೆ ಬಂದ ಹೊಸಬರ ತಂಡದ ಚಿತ್ರಗಳು ಒಂದು ವಾರ ಪೂರೈಸುವುದೇ ದುಸ್ತರ ಎನಿಸಿರುವಾಗ ಅದ್ದೂರಿ ತಂಡದ ಈ ಯಶಸ್ಸು ಭಾರೀ ಎನ್ನಲೇಬೇಕು.

ಅಷ್ಟೇ ಅಲ್ಲ, ಅದ್ದೂರಿ ಚಿತ್ರ ಚೆನ್ನಾಗಿದೆ ಎಂಬುದು ಪ್ರೇಕ್ಷಕರು ಹಾಗೂ ವಿಮರ್ಶಕರು ಎಲ್ಲರ ಅಭಿಪ್ರಾಯ. ಈ ಚಿತ್ರ ಬಿಡುಗಡೆಯಾದ ಬಹಳಷ್ಟು ಚಿತ್ರಮಂದಿರಗಳಲ್ಲಿ ಇನ್ನೂ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿದೆ ಎಂಬುದು ಗಮನಿಸಬೇಕಾದ ಅಂಶವೇ ಆಗಿದೆ. ನವನಟ ಧ್ರುವ ಸರ್ಜಾ, ಬಿಡುಗಡೆಯಾದ ಒಂದೇ ಚಿತ್ರದ ಮೂಲಕ ಸ್ಟಾರ್ ಪಟ್ಟಕ್ಕೆ ತೀರಾ ಹತ್ತಿರವಾಗುತ್ತಿದ್ದಾರೆ.

ಹ್ಯಾಟ್ರಿಕ್ ನಟಿ, ಕನ್ನಡದ ಪ್ರತಿಭಾವಂತೆ ಬಿರುದಾಂಕಿತೆ ರಾಧಿಕಾ ಪಂಡಿತ್ ಅವರಿಗೂ ಈ ಚಿತ್ರ ಪ್ಲಸ್ ಆಗಿದೆ. ಅವರೇನೂ ಚಿತ್ರರಂಗಕ್ಕೆ ಹೊಸಬರಲ್ಲ, ಅದ್ದೂರಿ ಚಿತ್ರದ ಮೂಲಕ ಪ್ರತಿಭೆ ತೋರಿಸಬೇಕಾದ ಅನಿವಾರ್ಯತೆಯೂ ಅವರಿಗಿಲ್ಲ. ಅವರ ಕೈಯಲ್ಲಿ ದೊಡ್ಡ ದೊಡ್ಡ ಬ್ಯಾನರ್ ಹಾಗೂ ನಿರ್ದೇಶಕರ ಚಿತ್ರಗಳಿವೆ. ಆದರೆ ಈ ಚಿತ್ರದಿಂದ ಬರುವ ಯಶಸ್ಸು, ವೃತ್ತಿಜೀವನದ ಯಶಸ್ಸಿನ ಏಣಿಯಲ್ಲಿ ಅವರನ್ನು ಇನ್ನೂ ಮೇಲಕ್ಕೆ ಏರಿಸುವುದರಲ್ಲಿ ಸಂದೇಹವೇ ಇಲ್ಲ.

ಅಂಬಾರಿ ನಂತರ ಈ ಚಿತ್ರ ನಿರ್ದೇಶಿಸಿರುವ ಅರ್ಜುನ್ ಅವರಿಗೆ ಈ ಅದ್ದೂರಿ ಚಿತ್ರದ ಯಶಸ್ಸಿನಿಂದ ಸಾಕಷ್ಟು ಸಹಾಯವಾಗಲಿದೆ. ಮೊದಲೇ ಸಾಕಷ್ಟು ಆತ್ಮವಿಶ್ವಾಸದಿಂದ, ಹೋಮ್ ವರ್ಕ್ ಮಾಡಿಕೊಂಡು ಈ ಅದ್ದೂರಿ ಚಿತ್ರವನ್ನು ತೆರೆಗೆ ತಂದಿದ್ದ ಅರ್ಜುನ್ ಅವರಿಗೆ ಈಗ ಬಂದಿರುವ ಇದರ ಯಶಸ್ಸಿನಿಂದ ಸಂತೋಷದೊಂದಿಗೆ ಇನ್ನೂ ಹೆಚ್ಚಿನ ಜವಾಬ್ಧಾರಿ ಜೊತೆಗೂಡಿದೆ ಎಂಬುದನ್ನು ಮರೆಯುವಂತಿಲ್ಲ.

ಅದ್ದೂರಿ ನಂತರ ಬಿಡುಗಡೆಯಾಗಿರುವ ದಂಡುಪಾಳ್ಯದಿಂದಾಗಲೀ ಅಥವಾ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ 'ರೋಮಿಯೋ'ದಿಂದಾಗಲೀ ಈ ಚಿತ್ರದ ಯಶಸ್ಸಿನ ಓಟಕ್ಕೆ ಸ್ವಲ್ಪವೂ ಧಕ್ಕೆ ಬಂದಿಲ್ಲ ಎಂಬ ಮಾತು ಈ ಚಿತ್ರಕ್ಕೆ ಸಿಕ್ಕ ಯಶಸ್ಸಿಗೆ ಸಿಕ್ಕ ಸಾಕ್ಷಿಯಷ್ಟೇ ಅಲ್ಲ, ಇದು 25 ದಿನಗಳ ನಂತರವೂ ಯಶಸ್ವಿಯಾಗಿ ಮುನ್ನಗ್ಗುತ್ತಾ ನಡೆಯಲಿದೆ ಎಂಬುದಕ್ಕೂ ಪುರಾವೆ ನೀಡಿದೆ.

ಸದ್ಯದ ಬಹುನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್ ಫಾದರ್' ಬಿಡುಗಡೆ ಆಗುವವರೆಗಂತೂ ಅದ್ದೂರಿಗೆ ಯಾವುದೇ ತೀವ್ರ ಸ್ಪರ್ಧೆ ಇಲ್ಲ ಎಂಬುದು ಚಿತ್ರರಂಗದ ಏಳು-ಬೀಳುಗಳ ಭವಿಷ್ಯದ ಮುನ್ಸೂಚನೆ ನೀಡವ ಕೆಲವು ಗಾಂಧಿನಗರಿಗರ ಮಾತು. ಅದು ಸದ್ಯಕ್ಕೆ 'ಹೌದು' ಎನ್ನುವಂತಿದೆ ಎಂಬುದು ಬಹುತೇಕ ಎಲ್ಲರ ಮಾತು.

ಒಟ್ಟಿನಲ್ಲಿ ಅದ್ದೂರಿಯ ವಿಜಯಯಾತ್ರೆ 25 ದಿನಗಳಿಗೂ ಮೀರಿ ಮುನ್ನಡೆಯುತ್ತಿದೆ. ಅಂಬಾರಿ ನಂತರ ಅದ್ದೂರಿಯಲ್ಲಿ ಗೆಲುವಿನ ಪತಾಕೆ ಹಾರಿಸಿ ವಿಜಯದ ನಗೆ ಬೀರುತ್ತಿದ್ದಾರೆ ನಿರ್ದೇಶಕ ಎಪಿ ಅರ್ಜುನ್. ರಾಧಿಕಾ ಪಂಡಿತ್ ಅವರಿಗೊಂದು ಬೋನಸ್ ದೊರೆಯಲಿರುವುದು ಖಾತ್ರಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ 'ಧ್ರುವ ಸರ್ಜಾ' ಎಂಬ 'ನವ ಸ್ಟಾರ್' ಉದಯಕ್ಕೆ ವೇದಿಕೆ ಸಜ್ಜಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Kannada Movie Addhuri screening successfully in everywhere. Now, this movie reached 25 days on 07, june 2012 and became super hit. New comer Dhruv Sarja and Radhika Pandit starer Addhuri movie is directed by AP Arjun. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada