For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಅದ್ದೂರಿ ಬಿಡುಗಡೆ; ಭರ್ಜರಿ ಸುದ್ದಿ

  |

  ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಅಭಿನಯದ ಮೊಟ್ಟಮೊದಲ ಸಿನಿಮಾ ಅದ್ದೂರಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 15ಕ್ಕೆ (ಜೂನ್ 15, 2012) ಬೆಂಗಳೂರಿನ ಸಾಗರ್ ಹಾಗೂ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಅದ್ದೂರಿ, ಎ ಪಿ ಅರ್ಜುನ್ ನಿರ್ದೇಶನದ 'ಅಂಬಾರಿ' ನಂತರ ಬರುತ್ತಿರುವ ಚಿತ್ರ.

  ಎ ಪಿ ಅರ್ಜುನ್ ಮೊಟ್ಟಮೊದಲು ಕನ್ನಡದಲ್ಲಿ ನಿರ್ದೇಶಿಸಿರುವ 'ಅಂಬಾರಿ' ಸೂಪರ್ ಹಿಟ್ ಎನಿಸಿತ್ತು. ಅಂಬಾರಿ ಚಿತ್ರದ ಗೆಲುವಿನ ಮೂಲಕ ಅರ್ಜುನ್ ಈಗ ಭರವಸೆಯ ನಿರ್ದೇಶಕ. ಜೊತೆಗೆ ಒಳ್ಳೆಯ ಕಥೆ ಇದ್ದರೆ ಮಾತ್ರ ಒಪ್ಪಿಕೊಳ್ಳುವ ರಾಧಿಕಾ ಪಂಡಿತ್ ಈ ಅದ್ದೂರಿ ಚಿತ್ರದ ನಾಯಕಿ. ಹೀಗಾಗಿ, ಈ ಅದ್ದೂರಿ ಚಿತ್ರಕ್ಕೆ ಬಹುನಿರೀಕ್ಷೆ ಮೂಡಿದೆ.

  ಅದ್ದೂರಿ ಚಿತ್ರದ ನಾಯಕ ಧ್ರುವ ಸರ್ಜಾ. ಇವರು ಅರ್ಜುನ್ ಸರ್ಜಾರ ಅಕ್ಕನ ಮಗ. ಅಷ್ಟೇ ಅಲ್ಲ, ಕನ್ನಡದಲ್ಲಿ ಈಗಾಗಲೇ ನಾಯಕನಟನೆಂದು ಗುರುತಿಸಿಕೊಂಡಿರುವ 'ಚಿರಂಜೀವಿ ಸರ್ಜಾ'ರ ತಮ್ಮ. ಇವರೆಲ್ಲರ ಕಿರಿಯ ಸಹೋದರ ಭರತ್ ಸರ್ಜಾ ನಟನೆಯ ಮೊಟ್ಟಮೊದಲ ಚಿತ್ರ 'ಪುಲಿಕೇಶಿ'ಯ ಚಿತ್ರೀಕರಣ ನಡೆಯುತ್ತಿದೆ.

  "ಬಣ್ಣದ ಲೋಕಕ್ಕೆ ಮೊದಲು ಕಾಲಿಟ್ಟ ಸರ್ಜಾ ಕುಟುಂಬದ ಎರಡನೇ ತಲೆಮಾರಿನ ಚಿರಂಜೀವಿ ಸರ್ಜಾ, ಅಂದುಕೊಂಡಷ್ಟು ಮಿಂಚಲು ಸಾಧ್ಯವಾಗಿಲ್ಲ. ಆದರೆ ಚಿರು ತಮ್ಮ ಧ್ರುವ ಸರ್ಜಾ ನಿರಾಸೆ ಮಾಡುವುದಿಲ್ಲ" ಎಂಬುದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾರ ಭರವಸೆಯ ಮಾತು. ಅವರ ಮಾತಿಗೆ ಪುಷ್ಟಿ ಕೊಡುವಂತೆ ಧ್ರುವ ಸರ್ಜಾರ 'ಅದ್ದೂರಿ' ಚಿತ್ರವು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

  'ಅ ಅಂದ್ರೆ ಅಮ್ಮಾಟಿ...'' ಎಂಬ ಅದ್ಧೂರಿಯ ಹಾಡು ಈಗಾಗಲೇ ಬಹಳಷ್ಟು ಜನಪ್ರಿಯವಾಗಿದೆ. ಹೆಸರಿಗೆ ತಕ್ಕಂತೆ ಚಿತ್ರವೂ ಅದ್ಧೂರಿಯಾಗಿದೆ ಎಂಬ ಅನಿಸಿಕೆ ಚಿತ್ರದ ಪ್ರಮೋಶನ್ ನೋಡಿದವರ ಅನಿಸಿಕೆ. ಧ್ರುವ ಸರ್ಜಾರ ಅಭಿನಯ ಹಾಗೂ ಡಾನ್ಸ್ ಎಲ್ಲರ ಗಮನಸೆಳೆಯುವಂತಿದೆ. ಇವೆಲ್ಲಾ ಕೇವಲ ಚಿತ್ರ ಟ್ರೇಲರ್ ನೋಡಿಯೇ ಸ್ಯಾಂಡಲ್ ವುಡ್ ಪ್ರೇಕ್ಷಕರಿಂದ ಬಂದ ಪ್ರಶಂಸೆಗಳು.

  ಶಂಕರ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಹ್ಯಾಟ್ರಿಕ್ ನಟಿ ರಾಧಿಕಾ ಪಂಡಿತ್ ನಾಯಕಿ. ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಜನಪ್ರಿಯತೆ ಪಡೆದುಕೊಂಡಿವೆ. ನಿರ್ದೇಶಕ ಅರ್ಜುನ್ ಅವರ ಅಂಬಾರಿ ಚಿತ್ರಕ್ಕೂ ಕೂಡ ಹರಿಕೃಷ್ಣ ಸಂಗೀತವೇ ಇತ್ತು.

  ಅದ್ದೂರಿ ನಾಯಕ ಧ್ರುವ ಸರ್ಜಾಗೆ ಸಿನಿಮಾಗಳಿಗೆ ಬೇಕಾದ ಸಾಕಷ್ಟು ವಿದ್ಯೆಗಳು ಗೊತ್ತು. ಜಿಮ್ನಾಸ್ಟಿಕ್ಸ್, ನಾಟಕ, ಈಜು, ಕಲರಿಯಪಟು, ಕತ್ತಿವರಸೆ, ಕುದುರೆ ಸವಾರಿ ಸೇರಿದಂತೆ ಇನ್ನಿತರ ಬಹಳಷ್ಟು ವಿದೇಶಿ ಫೈಟ್ಸ್ ಗಳನ್ನೆಲ್ಲ ಅರೆದುಕುಡಿದಿದ್ದಾರೆ. ಅವರು ಕಲಿತಿರುವ ವಿದ್ಯೆಗಲ್ಲಿ ಸಾಕಷ್ಟು ಈ ಅದ್ದೂರಿಯಲ್ಲಿ ಪ್ರಯೋಜನಕ್ಕೆ ಬಂದಿದೆಯಂತೆ.

  ಈ ಹಿಂದೆ ಧ್ರುವ ಸರ್ಜಾ ಬಾಕ್ಸಿಂಗ್‌ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದವರು. ಆಗಿದ್ದ ತೂಕ 104 ಕೇಜಿಯನ್ನು ಚಿತ್ರನಟನಾಗುವ ಕಾರಣಕ್ಕೆ 30 ಕೆಜಿ ಇಳಿಸಿದ್ದಾರೆ. ಸತತ ಬಾಕ್ಸಿಂಗ್‌ನಿಂದಾಗಿ ಆಗಿದ್ದ ಮುಖದ ಮೇಲಿನ ಗಾಯದ ಗುರುತುಗಳನ್ನು ತೆಗೆಸಿದ್ದಾರೆ. ಚಿತ್ರನಟನಾಗುವ ಕನಸನ್ನು ಹೊತ್ತು ಬಾಕ್ಸಿಂಗ್ ನಿಂದ ಸಂಪೂರ್ಣ ದೂರವಾಗಿದ್ದಾರೆ.

  ಅರ್ಜುನ್ ಸರ್ಜಾರ ಸಲಹೆಯಂತೆ ಸಾಕಷ್ಟು ತಯಾರಿ ನಡೆಸಿಯೇ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಸುಮಾರು 60 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಟನೆಯ ತರಬೇತಿ ಪಡೆದಿದ್ದಾರೆ. ಎಲ್ಲವೂ ಆದ ಮೇಲೆ ಮತ್ತೆ ಅರ್ಜುನ್ ಸರ್ಜಾ ಮುಂದೆ ನಿಂತು ಈಗ ನಟಿಸಬಹುದೇ ಎಂದು ಕೇಳಿ ಅವರ ಒಪ್ಪಿಗೆ ಪಡೆದಿದ್ದಾರೆ.

  ಒಟ್ಟಿನಲ್ಲಿ ಕನ್ನಡಿಗನಾದ ಧ್ರುವ ಕನ್ನಡ ಚಿತ್ರದ ಮೂಲಕವೇ ಪಾದಾರ್ಪಣೆ ಮಾಡುತ್ತಿದ್ದಾರೆ. ಧ್ರುವ ಸರ್ಜಾರಿಗೆ ಸದ್ಯಕ್ಕೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ತರಾತುರಿಯಿಲ್ಲ. ಮೊದಲ ಹೆಜ್ಜೆಯನ್ನಂತೂ ಅದ್ದೂರಿಯಾಗಿಯೇ ಇಡುತ್ತಿದ್ದಾರೆ. ಫಲಿತಾಂಶ ಬಂದ ನಂತರ ಮುಂದಿನ ಹೆಜ್ಜೆಯನ್ನು ಯೋಚಿಸಿ ಇಡಲಿದ್ದಾರೆ. ಅದ್ದೂರಿ ಚಿತ್ರ ಹೊಸ 'ಸ್ಟಾರ್' ಉದಯಕ್ಕೆ ನಾಂದಿ ಹಾಡಲಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie AP Arjun directed Addhuri releases on 15th June 2012 all over Karnataka. Dhruv Sarja, brother of Chiranjeevi Sarja is introducing to Sandalwood through this Addhuri film. Radhika Pandit is the Heroine and V Harikishna is the Music Director. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X