For Quick Alerts
  ALLOW NOTIFICATIONS  
  For Daily Alerts

  ನಟ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿ ಮತ್ತೊಂದು ದೂರು

  |

  ನಟ ಪುನೀತ್ ಅಗಲಿ ಏಳು ದಿನ ಕಳೆದರೂ ದಕ್ಷಿಣ ಭಾರತದ ಸಿನಿ ದಿಗ್ಗಿಜರು ಭೇಟಿ ನೀಡಿ ಕಂಬನಿ ಮಿಡಿಯುತ್ತಿರುವುದು ಕಡಿಮೆಯಾಗುತ್ತಿಲ್ಲ. ತಮಿಳು ನಟ ಸೂರ್ಯ, ತೆಲಗು ನಟ ರಾಜೇಂದ್ರ ಪ್ರಸಾದ್ ಸೇರಿದಂತೆ ಗಣ್ಯರು ಪುನೀತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಇದರ ನಡುವೆ ನಟ ಪುನೀತ್ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಡಾ. ರಾಜ್‌ಕುಮಾರ್ ಸೇನೆಯಿಂದ ಶುಕ್ರವಾರ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

  ಪುನೀತ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಡಾ. ರಮಣರಾವ್ ಮಾಡಿರುವ ಪ್ರಮಾದದ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಡಾ. ರಮಣರಾವ್ ವಿರುದ್ಧ ಅಭಿಮಾನಿಗಳು ನೀಡುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್, ನನ್ನ ಸಹೋದರ ಇಲ್ಲದ ಮೇಲೆ ದೂರು ಕೊಟ್ಟು ಏನು ಪ್ರಯೋಜನ. ಅವರವರ ಹೃದಯಕ್ಕೆ ಅದು ಅರ್ಥವಾದರೆ ಸಾಕು ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಣ್ಣ ಅವರ ಮಾತಿನ ಮರ್ಮ ದೊಡ್ಡ ಚರ್ಚೆ ಹುಟ್ಟು ಹಾಕಿದೆ.

  ಡಾ. ರಾಜ್‌ಕುಮಾರ್ ಸೇನೆ ವತಿಯಿಂದ ಸದಾಶಿವನಗರ ಪೊಲೀಸ್ ಠಾಣೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿಗೆ ಡಾ. ರಮಣರಾವ್ ಅವರ ನಿರ್ಲಕ್ಷ್ಯವೇ ಕಾರಣ. ಅ. 29 ರಂದು ಪುನೀತ್ ರಾಜ್‌ಕುಮಾರ್ ಅವರು ರಮಣರಾವ್ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಡಾ. ರಮಣರಾವ್ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ತಪಾಸಣೆ ವೇಳೆ ಯಾವುದೇ ಚಿಕಿತ್ಸೆಯನ್ನೂ ನೀಡಿಲ್ಲ. ಪರಿಸ್ಥಿತಿ ಗಂಭೀರತೆ ಅರಿತು ಸಮೀಪದ ಆಸ್ಪತ್ರೆಗೆ ದಾಖಲಿಸದೇ ತಮ್ಮ ಮಗ ಕೆಲಸ ಮಾಡುವ ವಿಕ್ರಂ ಆಸ್ಪತ್ರೆಗೆ ರವಾನಿಸಿದ್ದಾರೆ. ಕೂಡಲೇ ರಮಣರಾವ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಡಾ. ರಾಜ್‌ಕುಮಾರ್ ಸೇನೆ ಅಧ್ಯಕ್ಷ ತ್ಯಾಗರಾಜ್ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಶಿವಣ್ಣ ಮಾತಿನ ಮರ್ಮ

  ಶಿವಣ್ಣ ಮಾತಿನ ಮರ್ಮ

  "ನನ್ನ ಸಹೋದರನೇ ಇಲ್ಲ. ಇನ್ನು ಯಾರು ಮೇಲೆ ಯಾರು ದೂರು ಕೊಟ್ಟು ಏನು ಪ್ರಯೋಜನ. ಆ ಕ್ಷಣದಲ್ಲಿ ದಿಕ್ಕು ತೋಚಿಲ್ಲ. ವಿಧಿ ಹತ್ತು ನಿಮಿಷ ಕಾಲವಕಾಶ ಕೊಡಬೇಕಿತ್ತು. ನನ್ನ ತಮ್ಮನೇ ಇಲ್ಲ. ಅದು ಅವರವರ ಹೃದಯಕ್ಕೆ ಅರ್ಥವಾಗುತ್ತದೆ ಬಿಡಿ'' ಎಂದು ನಟ ಶಿವರಾಜ್ ಕುಮಾರ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
  ಅವರ ಹೃದಯಗಳಿಗೆ ಅರ್ಥವಾದರೆ ಸಾಕು ಎಂಬ ಶಿವಣ್ಣ ಅವರ ಮಾತಿನ ಮರ್ಮ ಚರ್ಚೆಗೆ ನಾಂದಿ ಹಾಡಿದೆ. ಸಹೋದರನೇ ಇಲ್ಲದ ಮೇಲೆ ಮತ್ತೆ ದೂರು ಕೊಟ್ಟು ವಿವಾದ ಮಾಡುವುದರಲ್ಲಿ ಅರ್ಥವೇನಿದೆ? ಮತ್ತೆ ಪುನೀತ್ ಹುಟ್ಟಿ ಬರುವನೇ ಎಂಬ ಶಿವಣ್ಣ ವಾಸ್ತವ ಅರಿತು ಈ ಹೇಳಿಕೆ ನೀಡಿದ್ದಾರೆ.

  ನಟ ಸೂರ್ಯ ಭಾವುಕ ಮಾತು

  ನಟ ಸೂರ್ಯ ಭಾವುಕ ಮಾತು

  ತಮಿಳು ನಟ ಸೂರ್ಯ ಶುಕ್ರವಾರ ಪುನೀತ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಕಣ್ಣೀರು ಹಾಕಿದರು. ಪುನೀತ್ ನಗುವಿನ ಬಗ್ಗೆ ಸದಾ ನನ್ನ ತಾಯಿ ಹೇಳುತ್ತಿದ್ದರು. ಪುನೀತ್ ಮೂರು ತಿಂಗಳು ದೊಡ್ಡವನು. ಆತ ನಮ್ಮೊಂದಿಗೆ ಇಲ್ಲ ಎಂಬ ಮಾತು ಅರಗಿಸಿಳ್ಳಲು ಆಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಪುನೀತ್ ಸಮಾಧಿಗೆ ಮಾಲಾರ್ಪಣೆ ಮಾಡಿದ ಸೂರ್ಯ ಬಿಕ್ಕಿ - ಬಿಕ್ಕಿ ಅತ್ತರು.

  ರಾಜೇಂದ್ರ ಪ್ರಸಾದ್ ನುಡಿ ನಮನ

  ರಾಜೇಂದ್ರ ಪ್ರಸಾದ್ ನುಡಿ ನಮನ

  ತೆಲಗು ಹಾಸ್ಯ ನಟ ರಾಜೇಂದ್ರ ಪ್ರಸಾದ್ ಕೂಡ ಅಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ದರ್ಶನ ಪಡೆದರು. ಪುನೀತ್ ಸಾವು ಅರಗಿಸಿಕೊಳ್ಳಲಾಗದ ಘಟನೆ. ಅಂತಹ ಒಳ್ಳೆಯ ವ್ಯಕ್ತಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದು ನೋಡಲಾಗದು. ನನ್ನ ಸಹೋದರ ಪುನೀತ್ ಅವರ ತಂದೆ ಬಳಿ ಅತಿ ಬೇಗ ಹೊರಟು ಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲಾ ಸವಾಲು ಮೆಟ್ಟಿ ನಿಲ್ಲುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಕಂಬನಿ ಮಿಡಿದರು.

  ರಾಜಕಾರಣಿಗಳ ಭೇಟಿ

  ರಾಜಕಾರಣಿಗಳ ಭೇಟಿ

  ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ರಾಜಕೀಯ ಗಣ್ಯರು ಸಹ ಪುನೀತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ದಕ್ಷಿಣ ಭಾರತದ ನಟ- ನಟಿಯರ ಜತೆಗೆ ಜನ ಪ್ರತಿನಿಧಿಗಳು ಹಾಗೂ ಅಭಿಮಾನಿಗಳ ಜನ ಸಾಗರವೇ ಹರಿದು ಬರುತ್ತಿದೆ. ಪುನೀತ್ ಓದಿಸುತ್ತಿರುವ 1800 ಮಕ್ಕಳ ವಿದ್ಯಾಭ್ಯಾಸವನ್ನು ತಾನು ವಹಿಸಿಕೊಳ್ಳುವುದಾಗಿ ತಮಿಳು ನಟ ವಿಶಾಲ್ ಘೋಷಣೆ ಮಾಡಿದ್ದರು. ಇವತ್ತು ನಟ ವಿಶಾಲ್ ಸಹ ಬೆಂಗಳೂರಿಗೆ ಬಂದು ಪುನೀತ್ ಸಮಾಧಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ತಮಿಳು ಮತ್ತೊಬ್ಬ ನಟ ದಳಪತಿ ವಿಜಯ್ ಕೂಡ ಆಗಮಿಸಲಿದ್ದಾರೆ. ಅಪ್ಪು ನಿಧನರಾಗಿ ಏಳು ದಿನ ಕಳೆದರೂ ಅಭಿಮಾನಿಗಳ ಸಾಗರ ಹರಿದು ಬರುತ್ತಲೇ ಇದೆ.

  English summary
  Actor Shivarajkumar Reaction about Puneeth Death enquiry : Another complaint, demand for an inquiry into the death of actor Puneet Raj Kumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X