»   » ನಟ ರಘುವೀರ್ ಬಾಳಿಗೆ ಮುಳ್ಳಾದವರು ಯಾರು?

ನಟ ರಘುವೀರ್ ಬಾಳಿಗೆ ಮುಳ್ಳಾದವರು ಯಾರು?

By: ಉದಯರವಿ
Subscribe to Filmibeat Kannada

'ಚೈತ್ರದ ಪ್ರೇಮಾಂಜಲಿ'ಯ ಆ ಸುಮಧುರ ಹಾಡುಗಳನ್ನು ಬಹುಶಃ ಕನ್ನಡ ಚಿತ್ರರಸಿಕರು ಇನ್ನೂ ಮರೆತಿಲ್ಲ. ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಚಂದ್ರಿಕಾ ಅವರ ಕಂಠಸಿರಿಯಲ್ಲಿ ಮೂಡಿಬಂದ ಚೈತ್ರದ ಪ್ರೇಮಾಂಜಲಿಯ ಸುಮ ಘಮ, ಓ ಮಲೆನಾಡಿನ ಮೈಸಿರಿಯೇ ಹಾಗೂ ಹಾಡುಗಳನ್ನು ಕೇಳಿದರೆ ಕಾಲ ತೊಂಬತ್ತರ ದಶಕಕ್ಕೆ ಹೊರಳುತ್ತದೆ.

ಅದರಲ್ಲೂ ಅದೇ ಚಿತ್ರದ "ನನ್ನವರೇ ನನಗೆ ಕೊನೆಗೆ ಮುಳ್ಳಾದರೆ..." ಹಾಡಂತೂ ಅವರ ಜೀವನಕ್ಕೂ ಬಹಳ ಹತ್ತಿರವಾಗಿತ್ತು. ಚೈತ್ರದ ಪ್ರೇಮಾಂಜಲಿ ಚಿತ್ರ ಹಿಟ್ ಆಗಿದ್ದು ಅದರ ಸುಮಧುರವಾದ ಹಾಡುಗಳಿಂದ ಎಂಬುದು ಬೇರೆ ವಿಚಾರ. [ಹೃದಯಾಘಾತದಿಂದ ನಟ ರಘುವೀರ್ ವಿಧಿವಶ ]

ಈ ಮ್ಯೂಸಿಕಲ್ ಹಿಟ್ ಚಿತ್ರದ ಬಳಿಕ ರಘುವೀರ್ (46) ಅಭಿನಯದ ಯಾವ ಚಿತ್ರವೂ ಹಿಟ್ ಲಿಸ್ಟ್ ನಲ್ಲಿ ಸ್ಥಾನ ಪಡೆಯಲಿಲ್ಲ ಎಂಬುದು ಅಷ್ಟೇ ದುರಂತ. ಅವರ ಇತ್ತೀಚೆಗಿನ 'ಮುಗಿಲ ಚುಂಬನ' ಚಿತ್ರ ಬಾಕ್ಸ್ ಆಫೀಸಲ್ಲಿ ಭಗ್ನವಾಗಿತ್ತು. ಇಷ್ಟಕ್ಕೂ ಅವರ ಅಕಾಲಿಕ ಸಾವಿಗೆ ಕೊನೆಗೆ ಮುಳ್ಳಾದವರು ಯಾರು?

ವೈಯಕ್ತಿಕ ಸಮಸ್ಯೆಗಳೇ ಅವರ ಪಾಲಿಗೆ ಮುಳ್ಳಾದವೆ?

ಸಾಕಷ್ಟು ವ್ಯಕ್ತಿಗತ ಸಮಸ್ಯೆಗಳಿಂದ ಜರ್ಝರಿತರಾಗಿದ್ದ ರಘುವೀರ್ ಅವರನ್ನು ಅವರ ವೈಯಕ್ತಿಕ ಸಮಸ್ಯೆಗಳೇ ಅವರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದವು. ಸಾಂಸಾರಿಕ ಬಿರುಕು, ತಂದೆತಾಯಿಯಿಂದ ದೂರವಾದ ಘಟನೆಗಳು ಅವರನ್ನು ಮಾನಸಿಕವಾಗಿ ಘಾಸಿಗೊಳಿಸಿದ್ದವು.

ಮೊದಲ ಚಿತ್ರ ಅಜಯ್ ವಿಜಯ್ (1990)

ರಘುವೀರ್ ಅಭಿನಯಿಸಿದ ಮೊದಲ ಚಿತ್ರ 'ಚೈತ್ರದ ಪ್ರೇಮಾಂಜಲಿ' ಅಲ್ಲ. ಅದಕ್ಕೂ ಎರಡು ವರ್ಷಗಳ ಹಿಂದೆ 'ಅಜಯ್ ವಿಜಯ್' (1990) ಚಿತ್ರದಲ್ಲಿ ಅಭಿನಯಿಸಿದ್ದರು. ಆ ಚಿತ್ರದಲ್ಲಿ ಮುರಳಿ ಸಹ ರಘುವೀರ್ ಗೆ ಜೋಡಿಯಾಗಿದ್ದರು.

ಸಹನಟಿ ಸಿಂಧು ಅವರನ್ನು ವರಿಸಿದ ರಘುವೀರ್

ಚೈತ್ರದ ಪ್ರೇಮಾಂಜಲಿ ಚಿತ್ರದ ಬಳಿಕ ರಘುವೀರ್ ಮನೆಮಾತಾದರು. ಬಳಿಕ 'ಶೃಂಗಾರಕಾವ್ಯ' ಚಿತ್ರದಲ್ಲಿ ಅಭಿನಯಿಸಬೇಕಾದರೆ ಆ ಚಿತ್ರದ ಸಹನಟಿ ಸಿಂಧು ಅವರೊಂದಿಗೆ ಪ್ರೇಮಾಂಕುರವಾಯಿತು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಸಿಂಧು ಅವರನ್ನು ವರಿಸಿದರು ರಘುವೀರ್.

ಸಿಂಧು ದೂರಾದ ಮೇಲೆ ಇನ್ನಷ್ಟು ಕುಗ್ಗಿದ್ದರು

ಆದರೆ ಆ ಮದುವೆ ಬಹಳ ಕಾಲ ಉಳಿಯಲಿಲ್ಲ. ಸಿಂಧು ಅವರು ರಘು ಅವರನ್ನು ಬಿಟ್ಟು ತಮಿಳು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. 2005ರಲ್ಲಿ ಪ್ರವಾಹ ಪೀಡಿತರಿಗಾಗಿ ನಿಧಿ ಸಂಗ್ರಹಿಸುವ ವೇಳೆಯಲ್ಲಿ ಸೋಂಕಿಗೊಳಗಾಗಿ ಮೃತಪಟ್ಟ ದುರಂತದ ಸುದ್ದಿ ರಘು ಪಾಲಿಗೆ ಬರಸಿಡಿಲಿನಂತೆ ಎರಗಿತು.

ಜೀವನದಲ್ಲಿ ತೀವ್ರ ಜಿಗುಪ್ಸೆಗೊಂಡಿದ್ದ ರಘು

ಪ್ರೀತಿಸಿ ಮದುವೆಯಾದ ಹುಡುಗಿ ಕಥೆ ಇದಾದರೆ, ಇನ್ನು ತಂದೆತಾಯಿ ಕೂಡ ರಘು ಅವರನ್ನು ಮನೆಯಿಂದ ಹೊರಹಾಕಿದ್ದರು. ಜೀವನದಲ್ಲಿ ತೀವ್ರ ಜಿಗುಪ್ಸೆಗೊಂಡಿದ್ದ ರಘು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.

ಮುಗಿಲ ಚುಂಬನ ಚಿತ್ರ ನೆಲಕಚ್ಚಿದ ದುರಂತ

ಏತನ್ಮಧ್ಯೆ ಅವರ ಮುಗಿಲ ಚುಂಬನ ಚಿತ್ರ ತೆರೆಕಂಡಿತು. ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಕನಸು ಕಂಡಿದ್ದರು ರಘುವೀರ್. ಆದರೆ ಮುಗಿಲ ಚುಂಬನ ಚಿತ್ರ ಮಕಾಡೆ ಮಲಗುವ ಮೂಲಕ ಅವರ ಕನಸಿಗೆ ತಣ್ಣೀರೆರಚಿತು.

ಎರಡನೇ ಮದುವೆ ಮಾಡಿಕೊಂಡ ರಘುವೀರ್

ತನ್ನ ಮೊದಲ ಪತ್ನಿ ಸಿಂಧು ಮೃತಪಟ್ಟ ಮೇಲೆ ರಘುವೀರ್ ತಮ್ಮ ಸಂಬಂಧಿಕರಲ್ಲೇ ಇನ್ನೊಂದು ಮದುವೆಯಾದರು. ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣುಮಗು ಇದೆ. ಆಕಸ್ಮಿಕವಾಗಿ ಚಲನಚಿತ್ರ ರಂಗ ಪ್ರವೇಶಿಸಿ ಆರಂಭದಲ್ಲೇ ಯಶಸ್ಸು ಕಂಡ ರಘು ವೈಯುಕ್ತಿಕ ಬದುಕಿನಲ್ಲಿ ಘಟಿಸಿದ ಅವಘಡಗಳ ಕಾರಣದಿಂದ ದುರಂತ ನಾಯಕನಾಗಿ ಉಳಿದರು.

ದುರಂತ ನಾಯಕನಾಗಿ ಉಳಿದ ರಘುವೀರ್

ಇಷ್ಟೆಲ್ಲಾ ಜೀವನ ಸಂಘರ್ಷದಲ್ಲಿ ಇನ್ನೊಂದು ಘಟನೆ ಅವರನ್ನು ಹಿಂಡಿಹಿಪ್ಪೆ ಮಾಡಿತು. ಮೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಘಟನೆ ಅವರನ್ನು ಇನ್ನಷ್ಟು ಹೈರಾಣಾಗಿಸಿತು. ಎರಡು ದಿನಗಳ ಬಂಧನದ ನಂತರ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದರು.

English summary
Actor-director Raghuveer besides tragic hero in real life, who was admitted to a hospital in B T M Layout has expired on Thursday (8th May) night due to heart attack. He is survived by wife and a daughter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada