ಮಕ್ಕಳಲ್ಲಿ ಅಕ್ಷರ ದಾಹ ಹುಟ್ಟಿಸುವ 'ಲಿಟ್ಲ್ ಮಾಸ್ಟರ್'
ಒಂದು ಹಳ್ಳಿಯ ಸರ್ಕಾರಿ ಶಾಲೆ. ಆದರೆ ಆ ಶಾಲೆಯಲ್ಲಿ ಹೆಚ್ಚು ಮಕ್ಕಳು ಕಲಿಯಲು ಬರುವುದಿಲ್ಲ. ಆಗ ಸರ್ಕಾರ ಆ ಶಾಲೆಯನ್ನು ಮುಚ್ಚಲು ಆದೇಶ ನೀಡುತ್ತದೆ. ಶಾಲೆಯ ಮೇಸ್ಟರಿಗೆ ಪಟ್ಟಣಕ್ಕೆ ವರ್ಗಾವಣೆ ಆಗುತ್ತದೆ. ಆದರೆ ವಿಶ್ವ ಎಂಬ ಪ್ರತಿಭಾವಂತ ಹುಡುಗನಿಗೆ ಶಾಲೆ ಮುಚ್ಚಿದ್ದರಿಂದ ನಿರಾಶೆಯಾಗುತ್ತದೆ.
ಆತನಿಗೆ ತನ್ನ ಅಚ್ಚುಮೆಚ್ಚಿನ ಮಾಸ್ಟರ್ ಜೊತೆಗೆ ಪಟ್ಟಣದ ಶಾಲೆಗೆ ಹೋಗಲು ಆಸೆಯಾಗುತ್ತದೆ. ಆತನ ಹಳ್ಳಿಯಲ್ಲಿ ಇಲ್ಲಿಯವರೆಗೆ ಯಾರೂ ಪಟ್ಟಣದ ಶಾಲೆಯಲ್ಲಿ ಓದಿರಲಿಲ್ಲ. ಮಕ್ಕಳನ್ನು ಪಟ್ಟಣದ ಶಾಲೆಗೆ ಕಳುಹಿಸಿ ಓದಿಸಲು ಪೋಷಕರಿಗೆ ಇಷ್ಟವಿರುವುದಿಲ್ಲ. ಆದರೆ ವಿಶ್ವನ ತಾಯಿ ಅವನಿಗೆ ಪ್ರೋತ್ಸಾಹ ಕೊಟ್ಟು ಅವನ ಹಿಂದೆ ನಿಲ್ಲುತ್ತಾರೆ.

ಒಮ್ಮೆ ಆಟಿಕೆ ವಸ್ತುಗಳನ್ನು ಮಾರುವವ ಆ ಮಕ್ಕಳಿಗೆ ಮೋಸ ಮಾಡುವುದನ್ನು ವಿಶ್ವ ನೋಡುತ್ತಾನೆ. ಅಂದಿನಿಂದ ಆತ ಮಕ್ಕಳಿಗೆ ವಿದ್ಯೆ ಕಲಿಯಿರಿ, ವಿದ್ಯೆ ಕಲಿತರೆ ಯಾರೂ ನಿಮಗೆ ಮೋಸ ಮಾಡಲಾರರು ಎಂದು ಹೇಳುತ್ತಾನೆ. ಅಲ್ಲದೇ ತಾನು ಪೇಟೆ ಶಾಲೆಯಲ್ಲಿ ಕಲಿತ ವಿದ್ಯೆಯನ್ನು ಶಾಲೆಗೆ ಬರದೆ ವಂಚಿತರಾದ ಮಕ್ಕಳಿಗೆ ಹೇಳಿಕೊಡುತ್ತಾನೆ.
ಅವನ ಸಹಾಯಕ್ಕೆ ಶಾಲೆ ಮಾಸ್ಟರುಗಳೂ ಅವನ ಪೋಷಕರೂ ನಿಲ್ಲುತ್ತಾರೆ. ಹಳ್ಳಿಯ ಕಟ್ಟೆಯು ಶಾಲೆಯಾಗಿ ಮಾರ್ಪಾಡಾಗುತ್ತದೆ. ವಿಶ್ವನ ಈ ಶಾಲೆಗೆ ನೂರಾರು ಮಕ್ಕಳು ವಿದ್ಯೆಕಲಿಯಲು ಬರುತ್ತಾರೆ. ಈ ವಿಷಯ ಸರ್ಕಾರದ ಗಮನಕ್ಕೂ ಬರುತ್ತದೆ. ಮಕ್ಕಳ ಕೊರತೆಯಿಂದ ಮುಚ್ಚಿಹೋದ ಶಾಲೆ ಮತ್ತೆ ಪ್ರಾರಂಭವಾಗುತ್ತದೆ.

ಎಲ್ಲರಿಗೂ ಶಿಕ್ಷಣದ ಆವಶ್ಯಕತೆ ಇದ್ದರೂ ಅದನ್ನು ಪಡೆಯುವುದು ಸುಲಭವಲ್ಲ. ಆದರೆ ಈ ಚಲನಚಿತ್ರ, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ, ಅನಿವಾರ್ಯತೆಯನ್ನು ಹೇಳುತ್ತ ಶಾಲೆಗೆ ಮಕ್ಕಳನ್ನು ತರುವುದರ ಕುರಿತು ಮಕ್ಕಳನ್ನು ಮತ್ತು ಪೋಷಕರನ್ನು ಹುರಿದುಂಬಿಸಲು ಪ್ರಯತ್ನಿಸುತ್ತದೆ.
ಅದಕ್ಕಿಂತ ಹೆಚ್ಚಾಗಿ ಮಕ್ಕಳು ಹೇಗೆ ಶಾಲೆಗೆ ಹೋಗದೆ ಅಕ್ಷರದಿಂದ ವಂಚಿತರಾಗಿ ಮೋಸ ಹೋಗುತ್ತಾರೆ ಮತ್ತು ಮೋಸ ಹೋಗಬಾರದು ಎಂಬ ಸಂದೇಶವನ್ನು ಒಟ್ಟಿಗೆ ಈ ಚಲನಚಿತ್ರ ಕೊಡುತ್ತದೆ. 'ಲಿಟ್ಲ್ ಮಾಸ್ಟರ್' ಚಲನಚಿತ್ರ ಮಕ್ಕಳಲ್ಲಿ ಅಕ್ಷರ ದಾಹವನ್ನು ಹುಟ್ಟಿಸುವ ಪ್ರಯತ್ನ ಮಾಡುತ್ತದೆ.

ಕೆ ಸುಮನ್ ಅರ್ಪಿಸುವ 'ಲಿಟ್ಲ್ ಮಾಸ್ಟರ್' ಚಲನಚಿತ್ರದ ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ಶಂಕರ ಅಶ್ವತ್, ಶಂಕರ್ ಪ್ರಕಾಶ್, ಅಪೂರ್ವ, ಮಾಲಾ, ಮಾಸ್ಟರ್ ಚಿರಿಂಜೀವಿ ಇನ್ನಿತರರಿದ್ದಾರೆ. ನಿರ್ಮಾಪಕರು ಲಕ್ಷ್ಮಣ್, ಕಥೆ ಮತ್ತು ನಿರ್ದೇಶನ ಕೆ ಶಿವರಾಂ ಕ್ರಿಸ್ತ, ಕ್ಯಾಮರಾ ಕೆ. ಎಮ್ ವಿಷ್ಣುವರ್ಧನ್, ಸಂಗೀತ ಗೋಪಿಕೃಷ್ಣ ಸಂಕಲನ ಎಸ್ ಮನೋಹರ್, ಸಂಭಾಷಣೆ ಜೆ ಎಮ್ ಪ್ರಹ್ಲಾದ್ , ತಾಂತ್ರಿಕ ನಿರ್ದೇಶನ ನಾಗೇಶ ಟಿ. ಎನ್. (ಒನ್ಇಂಡಿಯಾ ಕನ್ನಡ)


Click it and Unblock the Notifications











