»   » ಶಿವಣ್ಣ, ಕಿಚ್ಚ ನಡುವೆ ತಂದಿಟ್ಟ ವಿಘ್ನ ಸಂತೋಷಿಗಳಾರು?

ಶಿವಣ್ಣ, ಕಿಚ್ಚ ನಡುವೆ ತಂದಿಟ್ಟ ವಿಘ್ನ ಸಂತೋಷಿಗಳಾರು?

Posted By:
Subscribe to Filmibeat Kannada

ಒಂದು ಕಾಲದಲ್ಲಿ ಪರಮಾಪ್ತರಂತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಈಗ ನಾನೊಂದು ತೀರ, ನೀನೊಂದು ತೀರ. ಈ ಇಬ್ಬರು ನಟರು ನಡುವೆ ಯಾವುದೇ ಭಿನ್ನಾಭಿಪ್ರಾಯ ಅಧಿಕೃತವಾಗಿ ತೋರ ಬರದಿದ್ದರೂ ಇಬ್ಬರ ನಡುವಿನ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವುದಂತೂ ನಿಜ.

2011ರಲ್ಲಿ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗಿನ ಮೊದಲ ಆವೃತ್ತಿಯಲ್ಲಿ ಸುದೀಪ್ ನಾಯಕತ್ವದಡಿಯಲಿ ಶಿವಣ್ಣ ಆಡಿದ್ದರು. ಇಬ್ಬರೂ ಜೊತೆಗಿದ್ದರು, ಪಂದ್ಯ ಜಯಿಸಿದ ಮೇಲೆ ಒಬ್ಬರೊನ್ನಬ್ಬರು ಆಲಂಗಿಸಿಕೊಂಡಿದ್ದರು. (ಆರ್ಯನ್ ಚಿತ್ರದಲ್ಲಿ ಒಂದಾದ ಶಿವಣ್ಣ, ಕಿಚ್ಚ ಸುದೀಪ್)

ಇದಾದ ಮೇಲೆ ನವೆಂಬರ್ 2011ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿಯಲ್ಲೂ ಇಬ್ಬರೂ ಬೇರೆ ಬೇರೆ ತಂಡವನ್ನು ಪ್ರತಿನಿಧಿಸಿ ಮೈದಾನಕ್ಕಿಳಿದಿದ್ದರು. ಆದರೆ ಫೈನಲ್ ಪಂದ್ಯದ ವೇಳೆ ನಡೆದ ಘಟನೆ ಇಬ್ಬರು ನಟರ ನಡುವೆ ಬಿರುಕಿಗೆ ಮೂಲ ಕಾರಣವಾಯಿತು.

ಫೈನಲ್ ಪಂದ್ಯದ ವೇಳೆ ಶಿವಣ್ಣ ಮತ್ತು ಸುದೀಪ್ ತಂಡಗಳ ಆಟಗಾರರ ನಡುವೆ ನಡೆದ ಘರ್ಷಣೆ ಇಬ್ಬರ ನಡುವಿನ ಸಂಘರ್ಷಕ್ಕೆ ದಾರಿಯಾಯಿತು. ಅಂದು ಮೈದಾನದಲ್ಲಿ ಶಿವಣ್ಣ ಅವರ ಅಕ್ಕಪಕ್ಕವಿದ್ದ ಕೆಲವು ಚಿತ್ರರಂಗದ ಸದಸ್ಯರೇ ಕಿಚ್ಚ ಮತ್ತು ಅವರ ತಂಡದವರ ಮೇಲೆ ಕೈಮಾಡಿದ್ದರು ಎನ್ನುವುದು ಸುದೀಪ್ ಆರೋಪವಾಗಿತ್ತು. (ಸುದೀಪ್ ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ)

ಬೇಸರದಿಂದ ಮೈದಾನದಲ್ಲೇ ಮೈಕ್ ಹಿಡಿದು ಮಾತನಾಡಿದ್ದ ಕಿಚ್ಚ, " ಶಿವಣ್ಣ, ರಾಘಣ್ಣ, ನಿಮ್ಮನ್ನು ತುಂಬಾ ಪ್ರೀತಿಸ್ತೀನಿ. ನಿಜವಾಗ್ಲೂ ಪ್ರೀತಿಸ್ತೀವಿ. ಆದ್ರೆ ನಿಮ್ಮ ಅಕ್ಕ-ಪಕ್ಕ ಇರೋರಿಗೆ ಸ್ವಲ್ಪ ಹೇಳಿ, ನಮ್ಮ ಮೇಲೆ ಕೈಮಾಡೋದನ್ನ ನಿಲ್ಸೋಕೆ. ನಮಗೂ ಕೈ ಇದೆ" ಎಂದಿದ್ದರು.

ಅದಾದ ನಂತರ ಇಬ್ಬರು ನಟರು ಜೊತೆಯಾಗಿ ಕಾಣಿಸಿಕೊಂಡಿದ್ದು ಎಲ್ಲೋ ಅಪರೂಪ. ಇಬ್ಬರ ನಡುವೆ ಸರಿಯಿಲ್ಲ ಎನ್ನುವುದಕ್ಕೆ ಅದಾದ ನಂತರ ಹಲವು ಘಟನೆಗಳು ಸಾಕ್ಷಿಯಾದವು.

ಅಂದು ಹುಳಿ ಹಿಂಡಿ ವಿಕೃತ ಆನಂದ ಪಟ್ಟವರು ಇಬ್ಬರ ನಡುವಿನ ಸಂಬಂಧ ಸುಧಾರಿಸಲು ಪ್ರಯತ್ನಿಸಿದರೋ ಗೊತ್ತಿಲ್ಲ. ಕನ್ನಡ ಚಿತ್ರರಂಗದ ಯಾವುದೇ ಹಿರಿಯರು ರಾಜಿ ಸಂಧಾನಕ್ಕೆ ಮುಂದಾದ ಉದಾಹರಣೆಗಳೂ ಅಭಿಮಾನಿ ಬಳಗಕ್ಕೆ ತಿಳಿದಿಲ್ಲ. ಮುಂದೆ ಓದಿ..

ಡಬ್ಬಿಂಗ್ ಚಳುವಳಿಯಲ್ಲಿನ ಘಟನೆಗಳು

ಇದಾದ ನಂತರ ನಡೆದ ಒಂದೊಂದು ಘಟನೆಗಳೂ ಇಬ್ಬರ ನಡುವೆ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುತ್ತಲೇ ಬಂತು. ಡಬ್ಬಿಂಗ್ ವಿಚಾರದಲ್ಲಿ ಶಿವಣ್ಣ ನೇತೃತ್ವದಲ್ಲಿ ಇಡೀ ಚಿತ್ರರಂಗ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದಾಗ ಅತಿಥಿ ಕಲಾವಿದರಂತೆ ಸುದೀಪ್ ಮತ್ತು ದರ್ಶನ್ ಹೀಗೆ ಬಂದು ಹಾಗೆ ಹೋಗಿದ್ದರು. ಅಂದಿನ ಪ್ರತಿಭಟನಾ ಸಭಯಲ್ಲಿ ಇನ್ನಷ್ಟು ಜನ ಸೇರಿಸಬಹುದಿತ್ತು ಎಂದು ಸುದೀಪ್ ವೇದಿಕೆಯಲ್ಲೇ ಶಿವಣ್ಣಗೆ ಟಾಂಗ್ ನೀಡಿದ್ದರು. ಐದು ಜನ ಸೇರಿದರೂ, ಐವತ್ತು ಸಾವಿರ ಜನ ಸೇರಿದರೂ ಪ್ರತಿಭಟನೆಯೇ ಎಂದು ಶಿವಣ್ಣ, ಸುದೀಪ್ ಗೆ ಅಲ್ಲೇ ಪ್ರತ್ಯುತ್ತರ ನೀಡಿದ್ದರು.

ಸಿಸಿಎಲ್ ಸನ್ಮಾನ

ಸಿಸಿಎಲ್ ಮೊದಲ ಆವೃತ್ತಿಯ ನಂತರ ಶಿವಣ್ಣ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಮತ್ತೆ ಪಾಲ್ಗೊಳ್ಳಲಿಲ್ಲ ಅಥವಾ ಅವಕಾಶ ಸಿಗಲಿಲ್ಲ. ಮೊದಲ ಆವೃತ್ತಿಯಲ್ಲಿ ಕನ್ನಡ ಚಿತ್ರರಂಗ ತೋರಿದ ಆಸಕ್ತಿ ನಂತರದ ಟೂರ್ನಿಗಳಲ್ಲಿ ತೋರಿಸಲೂ ಇಲ್ಲ. ಸಿಸಿಎಲ್ ಪ್ರಶಸ್ತಿಯನ್ನು 2013ರಲ್ಲಿ ಮೊದಲ ಬಾರಿಗೆ ಗೆದ್ದಾಗ ಚಿತ್ರರಂಗ ನಮಗೆ ಸನ್ಮಾನಿಸಲಿಲ್ಲ ಎಂದು ಸುದೀಪ್ ಬಹಿರಂಗವಾಗಿ ನೋವೂ ತೋಡಿದ್ದುಂಟು.

ಬಿಗ್ ಬಾಸ್ ಕಾರ್ಯಕ್ರಮ

ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ವಾರಾಂತ್ಯದ ಕಾರ್ಯಕ್ರಮಗಳಲ್ಲಿ, ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾದ ಚಿತ್ರತಂಡ ಭಾಗವಹಿಸುವ ಪರಿಪಾಠವಿತ್ತು. ಅದರಂತೆ ಒಂದು ವಾರಾಂತ್ಯದ ಕಾರ್ಯಕ್ರಮದಲ್ಲಿ ಶಿವಣ್ಣ ಅಭಿನಯದ 'ಕಡ್ಡಿಪುಡಿ' ಚಿತ್ರತಂಡವೂ ಭಾಗವಹಿಸಬೇಕಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ನಿರ್ದೇಶಕ ಸೂರಿ ಮತ್ತು ಯೋಗರಾಜ್ ಭಟ್ ಮಾತ್ರ ಭಾಗವಹಿಸಿದ್ದರು.

ಆರ್ಯನ್ ವಾಯ್ಸ್ ಓವರ್

ಶಿವಣ್ಣ, ರಮ್ಯಾ ಅಭಿನಯದ 'ಆರ್ಯನ್' ಚಿತ್ರದ ಇಂಟ್ರೋ ಸುದೀಪ್ ಕಂಠಸಿರಿಯಲ್ಲಿ ಮೂಡಿಬಂದಿತ್ತು. ಇದರಿಂದ ಇಬ್ಬರು ನಟರ ಅಭಿಮಾನಿ ಬಳಗ ಖುಷಿಪಟ್ಟಿತ್ತು, ನಾನು ಇಂಟ್ರೋ ನೀಡಿದ್ದು ದಿವಂಗತ ರಾಜೇಂದ್ರ ಬಾಬು ಅವರಿಗೆ ಗೌರವ ಸೂಚಿಸಲು, ಬೇರೇನೂ ಅಲ್ಲ ಎಂದು ಸುದೀಪ್ ಟ್ವೀಟ್ ಸಂದೇಶ ಮಾಡಿದ್ದರು. ಇದರಿಂದ ಶಿವಣ್ಣನ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಬೇಸರ ವ್ಯಕ್ತ ಪಡಿಸಿದ್ದರು.

ಹಾಸನದಲ್ಲಿ ರಾಜ್ ಕಪ್

ಈಗ ಹಾಸನದಲ್ಲಿ ನಡೆಯುತ್ತಿರುವ ಮತ್ತು ಫೈನಲ್ ಹಂತದ ವರೆಗೆ ಬಂದಿರುವ ಡಾ. ರಾಜ್ ಟೂರ್ನಿಯಲ್ಲಿ ಸುದೀಪ್ ಮತ್ತೆ ಭಾಗವಹಿಸಲಿಲ್ಲ. ಈ ಟೂರ್ನಿಯಲ್ಲಿ ಭಾಗವಹಿಸುವಂತೆ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕೆಲವರು ಚೆನ್ನೈಗೆ ಪ್ರಯಾಣಿಸಿ ಸುದೀಪ್ ಮನವೊಲಿಸಲು ಹೋಗಿದ್ದರು ಎನ್ನುವ ಸುದ್ದಿಯಿತ್ತು. ಒಟ್ಟಿನಲ್ಲಿ ಸುದೀಪ್ 2014ರ ರಾಜ್ ಟೂರ್ನಿಯಲ್ಲಿ ಭಾಗವಹಿಸಲಿಲ್ಲ.

ಅಣ್ಣಾವ್ರ ಪ್ರತಿಮೆ ಅನಾವರಣ

ಈಗ ಕೊನೆಯದಾಗಿ ಇಡೀ ನಾಡೇ ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ಪ್ರತಿಮೆ ಅನಾವರಣಕ್ಕೆ ಸಜ್ಜಾಗಿದೆ. ಇಡೀ ಕನ್ನಡ ಚಿತ್ರೋದ್ಯಮಕ್ಕೆ ನವೆಂಬರ್ 29 ಮತ್ತು 30ರಂದು ರಜೆ ಘೋಷಿಸಲಾಗಿದೆ. ಸರಕಾರ ಆಯೋಜಿಸುತ್ತಿರುವ ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಪ್ರಮುಖರು ಬರುವುದು ಹೆಚ್ಚುಕಮ್ಮಿ ಖಾತ್ರಿಯಾಗಿದೆ.

ಕಿಚ್ಚು ಹಚ್ಚಿದವರು ಯಾರೋ?

ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗವಹಿಸುತ್ತಾರಾ, ಅಥವಾ ಅವರಿಗೆ ಆಮಂತ್ರಣ ಹೋಗಿದಿಯೋ ಸದ್ಯಕ್ಕೆ ತಿಳಿದುಬಂದಿಲ್ಲ. ಯಾಕೆಂದರೆ ಇದು ಸರಕಾರ ಆಯೋಜಿಸುತ್ತಿರುವ ಕಾರ್ಯಕ್ರಮ. ಒಟ್ಟಿನಲ್ಲಿ ಅಂದು ಇಬ್ಬರ ನಡುವೆ ತಂದಿಟ್ಟವರು ಈಗ ಎಲ್ಲಿ ಇದ್ದಾರೋ? ಒಟ್ಟಿನಲ್ಲಿ ಕನ್ನಡದ ಇಬ್ಬರು ಪ್ರಮುಖ ನಟರು ಒಂದೊಂದು ಕಡೆ ಮುಖ ಮಾಡಿಕೊಂಡಿರುವುದು ಮಾತ್ರ ಅವರವರ ಅಭಿಮಾನಿ ಬಳಗದಲ್ಲಿ ನೋವು ಇದ್ದೇ ಇದೆ.

English summary
Cold war between Hatrick Hero Shivaraj Kumar and Kichcha Sudeep.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more