'ಸಖತ್' ಸುದ್ದಿ: ಮತ್ತೆ ಒಂದಾದ ಗಣೇಶ್, ಧರ್ಮಣ್ಣ
ಹಾಸ್ಯ ನಟ ಧರ್ಮಣ್ಣ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಅವರಿಗೆ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದೆ. ಗಣೇಶ್ ನಟನೆಯ ಚಿತ್ರದಲ್ಲಿ ಮತ್ತೆ ಧರ್ಮಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ 'ಮುಗುಳುನಗೆ' ಸಿನಿಮಾದಲ್ಲಿ ಗಣೇಶ್ ರೊಂದಿಗೆ ಧರ್ಮಣ್ಣ ಕಾಣಿಸಿಕೊಂಡಿದ್ದರು. ಗಣೇಶ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. 'ರಾಮಾ ರಾಮಾ ರೇ' ನಂತರ ಈ ಅವಕಾಶ ಸಿಕ್ಕಿದ್ದು, ಅದನ್ನು ತುಂಬ ಚೆನ್ನಾಗಿ ಬಳಸಿಕೊಂಡಿದ್ದರು.
'ಚಮಕ್' ನಂತರ ಮತ್ತೆ ಗಣೇಶ್‌ಗೆ ನಿರ್ದೇಶಕ ಸುನಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇತ್ತೀಚಿಗಷ್ಟೆ ಟೈಟಲ್ ನಿಗದಿಯಾಗಿದ್ದು, 'ಸಖತ್' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಧರ್ಮಣ್ಣ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಸುನಿ ನಿರ್ದೇಶನದಲ್ಲಿ ಧರ್ಮಣ್ಣ ಅಭಿನಯಿಸುತ್ತಿದ್ದಾರೆ.

'ಸಖತ್' ಸಿನಿಮಾದಲ್ಲಿ ಸುರಭಿ ನಾಯಕಿಯಾಗಿದ್ದಾರೆ. ಸುಪ್ರೀತ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರು ಆಗಿದ್ದು, ಕಂಠೀರವ ಸ್ಟೂಡಿಯೊದಲ್ಲಿ ನಡೆಯುತ್ತಿದೆ.
ಧರ್ಮಣ್ಣ ಈ ಸಿನಿಮಾದ ಜೊತೆಗೆ 'ಇನ್ಸಪೆಕ್ಟರ್ ವಿಕ್ರಂ', 'ರಾಬರ್ಟ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











