»   » ನಟಿ ತಾರಾ ವಿರುದ್ಧ ಲಿಂಗದೇವರು ಫೇಸ್ ಬುಕ್ ಬಾಂಬ್

ನಟಿ ತಾರಾ ವಿರುದ್ಧ ಲಿಂಗದೇವರು ಫೇಸ್ ಬುಕ್ ಬಾಂಬ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಹೊಸದೇನಲ್ಲ. ಸಿನಿಮಾ ಸೆಟ್ಟೇರಲಿ, ರಿಲೀಸ್ ಗೆ ರೆಡಿಯಾಗಲಿ, ಪ್ರಶಸ್ತಿಗಳು ಪ್ರಕಟವಾಗಲಿ, ಏನೇ ಆದರೂ, ಒಂದಲ್ಲಾ ಒಂದು ಕಾಂಟ್ರವರ್ಸಿಯಿಂದ ಸ್ಯಾಂಡಲ್ ವುಡ್ ಸುದ್ದಿಯಾಗುತ್ತಲೇ ಇರುತ್ತದೆ.

ನಿನ್ನೆಯಷ್ಟೇ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಪ್ರತಿಭಾವಂತ ಹುಡುಗ ಸಂಚಾರಿ ವಿಜಯ್ ಗೆ 'ಅತ್ತ್ಯುತ್ತಮ ನಟ' ಪ್ರಶಸ್ತಿ ಒಲಿದು ಬಂದಿದೆ. ಇದರ ಬೆನ್ನಲ್ಲೇ ಹೊಸ ವಿವಾದ ಭುಗಿಲೆದ್ದಿದೆ.

ಸಂಚಾರಿ ವಿಜಯ್ ನಟಿಸಿರುವ 'ನಾನು ಅವನಲ್ಲ ಅವಳು' ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು, ನಟಿ ಹಾಗು ಎಂ.ಎಲ್.ಸಿ ತಾರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

''ನಟಿ ತಾರಾ ದುರುದ್ದೇಶದಿಂದ ಕನ್ನಡಕ್ಕೆ ಸಿಗಬೇಕಾದ ಪ್ರಶಸ್ತಿಗಳು ಕೈತಪ್ಪಿವೆ'' ಅಂತ ನಿರ್ದೇಶಕ ಲಿಂಗದೇವರು ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ....

ನಟಿ ತಾರಾ ವಿರುದ್ಧ ಲಿಂಗದೇವರು ಆರೋಪ

''ನಟಿ ತಾರಾ ವರ್ಚಸ್ಸು ಇರುವ ನಟಿ. ಹಾಗೇ ರಾಜಕಾರಣಿ ಕೂಡ. ಕನ್ನಡತಿ ಆಗಿರುವ ನಟಿ ತಾರಾ, ಕನ್ನಡ ಚಿತ್ರಗಳ ಬಗ್ಗೆ ದನಿಯೆತ್ತಬೇಕಿತ್ತು. ಅದು ಬಿಟ್ಟು, ತಾವು ನಟಿಸಿದ 'ಉಳಿದವರು ಕಂಡಂತೆ' ಚಿತ್ರದ ಪರ ಬ್ಯಾಟಿಂಗ್ ಮಾಡಿರುವ ತಾರಾ, ಇತರೆ ಚಿತ್ರಗಳಿಗೆ ಸಿಗಬೇಕಾದ ಪ್ರಶಸ್ತಿಯನ್ನ ಕೈತಪ್ಪಿಸಿದ್ದಾರೆ'' ಅಂತ ಖಾಸಗಿ ವಾಹಿನಿಗೆ 'ನಾನು ಅವನಲ್ಲ ಅವಳು' ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿಕೆ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಿರ್ಲ್ಯಕ್ಷಗೆ ತಾರಾ ಕಾರಣ

''ನಟಿ ಹಾಗು ಎಂ.ಎಲ್.ಸಿ ತಾರಾ ಡಿ.ಎಫ್.ಎಫ್ ಸೆಲೆಕ್ಷನ್ ಸಮಿತಿಯಲ್ಲಿದ್ದರು. ಕಾನೂನು ಪ್ರಕಾರ ಸೆಲೆಕ್ಷನ್ ಲಿಸ್ಟ್ ನಲ್ಲಿರುವ ಚಿತ್ರಗಳ ಪಟ್ಟಿಯಲ್ಲಿ ಜ್ಯೂರಿ ಮೆಂಬರ್ಸ್ ನಟಿಸಿರುವ ಚಿತ್ರಗಳು ಇರಬಾರದು. ತಾರಾ ನಟಿಸಿದ್ದ 'ಉಳಿದವರು ಕಂಡಂತೆ' ಚಿತ್ರ ಪ್ರಶಸ್ತಿಯ ರೇಸ್ ನಲ್ಲಿತ್ತು. ಇದು ಗೊತ್ತಿದ್ದರೂ, ಜ್ಯೂರಿಯಲ್ಲಿ ತಾರಾ ಇದ್ದಾರೆ. ಒಂದು ಚಿತ್ರಕ್ಕೆ ಪ್ರಶಸ್ತಿ ಕೊಡಿಸುವ ಸಲುವಾಗಿ ಇಡೀ ಸ್ಯಾಂಡಲ್ ವುಡ್ ನಿರ್ಲ್ಯಕ್ಷಕ್ಕೆ ತಾರಾ ಕಾರಣವಾಗಿದ್ದಾರೆ'' ಅಂತ ಆರೋಪಿಸಿದ್ದಾರೆ ಲಿಂಗದೇವರು.

ನಟಿ ತಾರಾಗೆ ದುರುದ್ದೇಶ..!

''ನಟಿ ತಾರಾ ಜ್ಯೂರಿಯಲ್ಲಿರುವುದರ ಹಿಂದೆ ದುರುದ್ದೇಶ ಇದೆ. ಯಾವುದೋ ಸಿನಿಮಾ ಪರ ಬ್ಯಾಟಿಂಗ್ ಮಾಡುವುದಕ್ಕೆ ತಾರಾ ಹೀಗೆ ಮಾಡಿದ್ದಾರೆ. ಫೈನಲ್ ರೌಂಡ್ ನಲ್ಲಿ ಡಿ.ಎಫ್.ಎಫ್ ಗೆ ಗೊತ್ತಾಗಿ ಸಮಿತಿಯಿಂದ ತಾರಾ ಅವರನ್ನ ಹೊರಹಾಕಿದೆ'' ಅಂತ ಹೇಳಿಕೆ ನೀಡಿದ್ದಾರೆ ಲಿಂಗದೇವರು.

'ಉಳಿದವರು ಕಂಡಂತೆ' ಸಿನಿಮಾಗೂ ಲಾಸ್..!

''ಜ್ಯೂರಿ ಮೆಂಬರ್ ತಾರಾ ನಟಿಸಿದ್ದ 'ಉಳಿದವರು ಕಂಡಂತೆ' ಪ್ರಶಸ್ತಿ ರೇಸ್ ನಲ್ಲಿದ್ದದ್ದು ತಡವಾಗಿ ಬೆಳಕಿಗೆ ಬಂದ ಕಾರಣ, ಇದನ್ನ ಮನಗಂಡು ಡಿ.ಎಫ್.ಎಫ್ ತಾರಾ ಅವರನ್ನ ಹೊರಹಾಕಿದೆ. ಇದರಿಂದ ಉತ್ತಮ ಚಿತ್ರವಾಗಿದ್ದ 'ಉಳಿದವರು ಕಂಡಂತೆ' ಚಿತ್ರಕ್ಕೂ ಪ್ರಶಸ್ತಿ ಬಂದಿಲ್ಲ. ಹಾಗೇ, ಇತರೆ ಕನ್ನಡ ಚಿತ್ರಗಳ ಪರ ದನಿಯೆತ್ತುವವರೂ ಇಲ್ಲದಂತಾದರೂ'' ಅಂತ ಲಿಂಗದೇವರು ಹೇಳಿದ್ದಾರೆ.

ಫೇಸ್ ಬುಕ್ ನಲ್ಲೂ ಲಿಂಗದೇವರು ವ್ಯಂಗ್ಯ

ಖಾಸಗಿ ವಾಹಿನಿಗಳಲ್ಲಿ ಹೇಳಿಕೆ ನೀಡುವುದಲ್ಲದೇ, ತಮ್ಮ ಫೇಸ್ ಬುಕ್ ನಲ್ಲೂ ನಟಿ ತಾರಾ ವಿರುದ್ಧ ನಿರ್ದೇಶಕ ಲಿಂಗದೇವರು ವ್ಯಂಗ್ಯವಾಡಿದ್ದಾರೆ. ಅವರ ಸ್ಟೇಟಸ್ ಲಿಂಕ್ ಇಲ್ಲಿದೆ.

ನಟಿ ತಾರಾ ಹೇಳುವುದೇನು?

''ನಾನು ಈಸ್ಟರ್ನ್ ಝೋನ್ ಸಮಿತಿಯಲ್ಲಿದ್ದದ್ದು. ದಕ್ಷಿಣ ಭಾರತದ ಚಿತ್ರಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಲಿಂಗದೇವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಅನಗತ್ಯವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಕನ್ನಡಕ್ಕೆ ಹೆಚ್ಚು ಪ್ರಶಸ್ತಿಗಳು ಸಿಗಬೇಕು ಅನ್ನೋದು ನನ್ನ ಆಸೆ ಕೂಡ. ಸೆಕೆಂಡ್ ರೌಂಡ್ ನಲ್ಲಿ ನಾನು ನಟಿಸಿದ್ದ ಚಿತ್ರವಿದ್ದ ಕಾರಣ, ನಾನು ಅನರ್ಹ ಆಗಿದ್ದರಿಂದ, ನಾನೇ ಮೇಲ್ ಮಾಡಿ ಸೆಲೆಕ್ಷನ್ ಕಮಿಟಿಯಿಂದ ಹೊರ ಬಂದೆ.'' ಅಂತ ಹೇಳ್ತಾ ತಮ್ಮ ಮೇಲೆ ಕೇಳಿಬಂದಿರುವ ಆರೋಪವನ್ನ ನಟಿ ತಾರಾ ತಳ್ಳಿಹಾಕಿದ್ದಾರೆ.

ಸಂಚಾರಿ ವಿಜಯ್ ಗೆ ಪ್ರಶಸ್ತಿ ಬಂದಿರುವುದಕ್ಕೆ ಖುಷಿ

''ಪ್ರಶಸ್ತಿ ಬಂದಿರುವ ಸಿನಿಮಾಗಳ ಬಗ್ಗೆ ಮತ್ತು ನಟರ ಬಗ್ಗೆ ನಾನು ಮಾತನಾಡುತ್ತಿಲ್ಲ. ನಮ್ಮವರೇ ಅವಕಾಶವನ್ನ ವಂಚಿಸುತ್ತಿರುವ ಬಗ್ಗೆ ನನ್ನ ಆರೋಪ ಅಷ್ಟೆ.'' ಅಂತ ಲಿಂಗದೇವರು ಹೇಳಿದ್ದಾರೆ. ಇಂದು ಭುಗಿಲೆದ್ದಿರುವ ಈ ವಿವಾದ ಮುಂದಕ್ಕೆ ಇನ್ಯಾವ ತಿರುವು ಪಡೆದುಕೊಳ್ಳುತ್ತೆ ಅಂತ ಕಾದು ನೋಡಬೇಕು.

English summary
Award winning director B.S.Lingadevaru has made a controversial statement on Actress cum MLC Tara, regarding 62nd National Film Awards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada