»   » ಡಾ.ರಾಜ್‌ ಕುಮಾರ್ ಸ್ಮಾರಕ ಲೋಕಾರ್ಪಣೆ

ಡಾ.ರಾಜ್‌ ಕುಮಾರ್ ಸ್ಮಾರಕ ಲೋಕಾರ್ಪಣೆ

Posted By:
Subscribe to Filmibeat Kannada

ಕನ್ನಡದ ವರನಟ ಡಾ.ರಾಜ್‌ ಕುಮಾರ್ ಸ್ಮಾರಕ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ ಕಂಠೀರವ ಸ್ಟುಡಿಯೋ ಶನಿವಾರ ಸಾಕ್ಷಿಯಾಯಿತು. ಸ್ಟುಡಿಯೋ ಆವರಣದಲ್ಲಿರುವ ರಾಜ್‌ ಕುಮಾರ್ ಸಮಾಧಿ ಸ್ಥಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ್ ಸ್ಮಾರಕ ಲೋಕಾರ್ಪಣೆಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು 'ನೇತ್ರದಾನ ಮಾಡಿ ರಾಜ್ ಕನ್ನಡಿಗರಿಗೆ ಮಾದರಿಯಾಗಿದ್ದಾರೆ. ಎಲ್ಲರೂ ನೇತ್ರದಾನ ಮಾಡಿ ರಾಜ್‌ಗೆ ಗೌರವ ಸಲ್ಲಿಸಿ ಎಂದು ಕರೆ ನೀಡಿದ ಸಿಎಂ ಸಿದ್ದರಾಮಯ್ಯ, ಮರಣ ನಂತರ ತಾವು ನೇತ್ರದಾನ ಮಾಡುವುದಾಗಿ ಘೋಷಿದರು. ಇದು ರಾಜ್‌ಗೆ ಸಲ್ಲಿಸುತ್ತಿರುವ ಸೇವೆ ಎಂದು ಅವರು ಹೇಳಿದರು. [ರಾಜ್ ಸ್ಮಾರಕ ಲೋಕಾರ್ಪಣೆ, ಕಾರ್ಯಕ್ರಮದ ವಿವರ]

Rajkumar

ಕಂಠೀರವ ಸ್ಟುಡಿಯೋ ಬಳಿಯ ರಾಜ್ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ಮುಕ್ತಾಯಗೊಂಡಿದ್ದು, ಸಂಜೆ 6ರಿಂದ ರಾತ್ರಿ 10ರವರೆಗೆ ಅರಮನೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, 25 ಸಾವಿರ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

Rajinikanth

ಸಮಯ 12.40 : ಡಾ.ರಾಜ್ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ಮುಕ್ತಾಯಗೊಂಡಿದ್ದು ಸಂಜೆ ಅರಮನೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.

ಸಮಯ 12.30 : ಮರಣದ ನಂತರ ನೇತ್ರದಾನ ಮಾಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆ ಕುರಿತ ಪತ್ರಕ್ಕೆ ಸಹಿ ಹಾಕಿದರು. ನೇತ್ರದಾನ ಮಾಡುವ ಮೂಲಕ ನಾನು ರಾಜ್‌ಗೆ ಗೌರವ ಸಲ್ಲಿಸುವೆ ಎಂದು ತಿಳಿಸಿದರು.

ಸಮಯ 12.27 : 'ಎಲ್ಲರೂ ನೇತ್ರದಾನ, ಕಣ್ಣಿಲ್ಲದಿದ್ದವರಿಗೆ ಬೆಳಕು ನೀಡಿ, ಆ ಸಂತೋಷವನ್ನು ಹಂಚಿಕೊಳ್ಳಿ' ಎಂದು ಕರೆ ನೀಡಿದ ಸಿಎಂ, ನೇತ್ರದಾನ ಮಾಡುವುದು ನಾವು ರಾಜ್ ಕುಮಾರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಸಮಯ 12.22 : ಡಾ.ರಾಜ್ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವಿತ್ತು. ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಸಿಎಂ ಹೇಳಿದರು.

ಸಮಯ 12.20 : ರಾಜ್ ಕುಮಾರ್ ಅವರಿಗೆ ಅವರೇ ಸಾಟಿ, ಎಲ್ಲಾ ಪಾತ್ರಗಳಿಗೂ ಜೀವ ತುಂಬಿದವರು. ರಾಜ್ ಅವರು ತಮ್ಮ ನಟನೆ ಮೂಲಕ ಜನರನ್ನು ತಲುಪುವುದರ ಜೊತೆ ತಮ್ಮ ಸರಳತೆ ಮೂಲಕ ಜನರಿಗೆ ಹತ್ತಿರವಾದರು, ಅವರಿಗಿದ್ದ ವಿನಯ ಎಲ್ಲರಿಗೂ ಮಾದರಿಯಾಗಬೇಕು ಎಂದು ಸಿಎಂ ಕರೆ ನೀಡಿದರು.

ನಮ್ಮ ಕಾಡಿನವರು : 'ನಾವು ಡಾ.ರಾಜ್ ಅವರನ್ನು ಭೇಟಿ ಮಾಡಿದರೆ ಬನ್ನಿ..ಬನ್ನಿ ನಮ್ಮ ಕಾಡಿನವರು ಬಂದಿದ್ದೀರಿ' ಎಂದು ಪ್ರೀತಿಯಿಂದ ಹೇಳುತ್ತಿದ್ದರು. ರಾಜ್‌ಗೆ ಅವರ ಊರಿನವರೆಂದರೆ ಬಹಳ ಪ್ರೀತಿ ಇತ್ತು. ಮೈಸೂರಿನವರನ್ನು ನಮ್ಮ ಕಾಡಿನವರು ಎಂದು ಹೇಳುತ್ತಿದ್ದರು ಎಂದು ಸಿದ್ದರಾಮಯ್ಯ ಅವರು ಹಳೆಯ ನೆನಪನ್ನು ಹಂಚಿಕೊಂಡರು.

stidiyo

ಸಮಯ 12 .15 : 'ಡಾ. ರಾಜ್ ಸ್ಮಾರಕ ಲೋಕಾರ್ಪಣೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ' ಎಂದು ಹೇಳಿದ ಸಿಎಂ ಸಿದ್ದರಾಮಯ್ಯ. ರಾಜ್ ಬಗ್ಗೆ ನನಗೆ ಬಹಳ ಹೆಮ್ಮೆ, ಅಭಿಮಾನ ಮತ್ತು ಗೌರವಿದೆ. ರಾಜ್ ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಈಗ ಮಾತ್ರ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಗೆ ಸೇರಿದೆ ಎಂದರು.

ಸಮಯ 12.01 : ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು 'ಇಂದು ಕರ್ನಾಟಕದ ಮಟ್ಟಿಗೆ ನಿಜವಾದ ರಾಜ್ಯೋತ್ಸವ' ಎಂದರು.

ಸಮಯ 11.56 : ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿನ ಎರಡು ದಿನಗಳ ಹಿಂದೆ ಅಪ್ಪಾಜಿ ಹೇಳಿದ್ದರು ಎಂದು ಹೇಳಿದ ರಾಘವೇಂದ್ರ ರಾಜ್ ಕುಮಾರ್, ಸಿಎಂ ಸಿದ್ದರಾಮಯ್ಯ ಅವರು ರಾಜ್ ನಮ್ಮ ಕಾಲದವರು ಎಂದು ಯಾವಾಗಲೂ ಹೇಳುತ್ತಿದ್ದರು. ಅವರು ಸಿಎಂ ಆಗಿದ್ದಾಗಲೇ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಸಂತೋಷವಾಗುತ್ತಿದೆ ಎಂದರು.

ಸಮಯ 11.51 : 'ನನ್ನಂತಹ ಹಲವರಿಗೆ ರಾಜ್ ಸ್ಫೂರ್ತಿಯಾಗಿದ್ದಾರೆ' ಎಂದು ಹೇಳಿದ ಚಿರಂಜೀವಿ, ಇಂತಹ ಸ್ಮಾರಕಗಳಿಂದ ಅವರು ಯಾವಾಗಲೂ ಕರ್ನಾಟಕದ ನೆಲದಲ್ಲಿ ಹಸಿರಾಗಿ ಉಳಿದಿರುತ್ತಾರೆ ಎಂದರು.

ಸಮಯ 11.47 : ಸರಳ ವ್ಯಕ್ತಿತ್ವಕ್ಕೆ ಉತ್ತಮ ಉದಾಹರಣೆ ಎಂದರೆ ರಾಜ್ ಕುಮಾರ್. 'ನಮಸ್ಕಾರ ಎಂದರೆ, ಚೆನ್ನಾಗಿದ್ದೀರಾ?' ಎಂದು ಕೇಳುತ್ತಿದ್ದ ಸಹೃದಯ ಅವರದ್ದು, ನನ್ನ ಜೊತೆ ತೆಲುಗಿನಲ್ಲಿ ಮಾತನಾಡುತ್ತಿದ್ದರು ಎಂದು ಮೆಗಾಸ್ಟಾರ್ ಚಿರಂಜೀವಿ ನೆನಪು ಮಾಡಿಕೊಂಡರು. ಸ್ಮಾರಕ ನಿರ್ಮಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಸಮಯ 11.38 : 'ನಾನು ಆಟೋಗ್ರಾಫ್ ತೆಗೆದುಕೊಂಡ ಏಕೈಕ ನಟ ರಾಜ್ ಕುಮಾರ್' ಎಂದು ಹೇಳಿದ ರಜನಿಕಾಂತ್, ರಾಜ್ ಜೊತೆ ತೆರಳಿದಾಗ ಜನರು ರಾಜ್‌ಗೆ ನಮಸ್ಕರಿಸುವುದನ್ನು ನೋಡಿದೆ. 'ರಾಜ್ ಅವರು ನನ್ನಲ್ಲಿರುವ ಸರಸ್ವತಿಗೆ ಜನರು ನಮಿಸುತ್ತಾರೆ. ನನಗಲ್ಲ ಎಂದು ಹೇಳಿದ್ದರು ಎಂದು ರಜನಿ ರಾಜ್ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.

ಕರ್ನಾಟಕದಲ್ಲಿರುವ ರಾಜ್ ಸ್ಮಾರಕ ದೇವರ ಗುಡಿಇದ್ದಂತೆ, ಇಲ್ಲಿ ಬಂದು ಗಲಾಟೆ ಮಾಡಬೇಡಿ, ಶಾಂತಿಯಿಂದ ಬಂದು ಅವರ ಆಶೀರ್ವಾದ ಪಡೆದು ಹೋಗಿ ಎಂದು ರಜನಿಕಾಂತ್ ಕರೆ ನೀಡಿದರು.

ಸಮಯ 11.33 : 'ಕನ್ನಡಿಗರಿಗೆ ನನ್ನ ಮೊದಲ ಪ್ರಣಾಮಗಳು' ಎಂದು ಭಾಷಣ ಆರಂಭಿಸಿದ ರಜನಿಕಾಂತ್. ಬೇಡರ ಕಣ್ಣಪ್ಪದಿಂದ ರಾಜ್ ನಾಗಲೋಟ ಆರಂಭವಾಯಿತು. ಸಂತ, ಜೇಮ್ಸ್ ಬಾಂಡ್, ಮಹಿಷಾಸುರ ಮುಂತಾದ ಪಾತ್ರಗಳಿಗೆ ರಾಜ್ ಜೀವ ತುಂಬಿದರು. ರಾಜ್ ಅವರ ಮೇಲೆ ವನದೇವಿಗೂ ಅಪಾರವಾದ ಪ್ರೀತಿ ಇತ್ತು. ಆದ್ದರಿಂದ 108 ದಿನಗಳು ರಾಜ್ ಅವರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದ್ದಳು ಎಂದರು.

ಸಮಯ 11.30 : ಡಾ.ರಾಜ್ ನಡೆದು ಬಂದ ಹಾದಿಯ ಚಿತ್ರ ಸಂಪುಟ ಪುಸ್ತಕವನ್ನು ಬಿಡುಗಡೆ ಮಾಡಿದ ಸೂಪರ್‍ ಸ್ಟಾರ್ ರಜನಿಕಾಂತ್. ರಾಜ್‍ಕುಮಾರ್ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ಮೆಗಾಸ್ಟಾರ್ ಚಿರಂಜೀವಿ

ಸಮಯ 11.20 : ವೇದಿಕೆ ಮೇಲಿರುವ ಗಣ್ಯರು : ಸಿಎಂ ಸಿದ್ದರಾಮಯ್ಯ, ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು, ರಜನಿಕಾಂತ್, ಚಿರಂಜೀವಿ, ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಬಿ.ಸರೋಜಾದೇವಿ, ರಾಜೇಂದ್ರ ಸಿಂಗ್ ಬಾಬು, ಜಯಮಾಲಾ, ಅಂಬರೀಶ್, ಗಂಗರಾಜು ಮುಂತಾದವರು.

ಸಮಯ 11.08 : ಪಾವರ್ತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಹಿರಿಯ ನಟಿ ಬಿ.ಸರೋಜಾ ದೇವಿ, ಚಲನಚಿತ್ರ ವಾಣಿಣ್ಯ ಮಂಡಳಿ ಅಧ್ಯಕ್ಷ ಗಂಗರಾಜು ಮುಂತಾದವರು ವೇದಿಕೆಯಲ್ಲಿದ್ದಾರೆ.

Kanteerava Studio

ಸಮಯ 11 ಗಂಟೆ : ವೇದಿಕೆ ಕಾರ್ಯಕ್ರಮ ಆರಂಭ, ಡಾ.ರಾಜ್ ಸ್ಮಾರಕ ಲೋಕಾರ್ಪಣೆ

ಸಮಯ 10.44 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂಠೀರಣ ಸ್ಟುಡಿಯೋದಲ್ಲಿರುವ ಗಣ್ಯರಿಂದ ರಾಜ್ ಸ್ಮಾರಕಕ್ಕೆ ಪೂಜೆ. ನಮನ ಸಲ್ಲಿಸಿದ ಚಿರಂಜೀವಿ, ರಜನಿಕಾಂತ್ ಮುಂತಾದವರು.

Raj

ಸಮಯ 10.37 : ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸಚಿವ ಉಮಾಶ್ರೀ, ರೋಷನ್ ಬೇಗ್ ಸಿಎಂ ಜೊತೆಗಿದ್ದಾರೆ.

ಸಮಯ 10.35 : ವಸತಿ ಸಚಿವ ಅಂಬರೀಶ್, ಗೃಹ ಸಚಿವ ಕೆ.ಜೆ.ಜಾರ್ಜ್, ನಟ ರವಿಚಂದ್ರನ್, ವಿಧಾನಪರಿಷತ್ ಸದಸ್ಯೆ ತಾರಾ ಮುಂತಾದವರು ಸ್ಟುಡಿಯೋಕ್ಕೆ ಆಗಮಿಸಿದ್ದಾರೆ.

ಸಮಯ 10.30 : ರಾಜ್ ಸಮಾಧಿಗೆ ರಜನಿಕಾಂತ್, ಚಿರಂಜೀವಿಯಿಂದ ನಮನ ಸಲ್ಲಿಕೆ.

Dr Rajkumar

ಸಮಯ 10.26 : ಮೆಗಾಸ್ಟಾರ್ ಚಿರಂಜೀವಿ, ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ್ದಾರೆ.

ಸಮಯ 10.20 : ಸದಾಶಿವನಗರದ ಡಾ.ರಾಜ್ ಮನೆಯಿಂದ ರಾಜರಥ ಕಂಠೀರವ ಸ್ಟುಡಿಯೋದತ್ತ ಹೊರಟಿದೆ. ನೂರಾರು ಯುವಕರು, ರಾಜ್ ಅಭಿಮಾನಿಗಳು ರಥದೊಂದಿಗೆ ಸ್ಟುಡಿಯೋಕ್ಕೆ ತೆರಳುತ್ತಿದ್ದಾರೆ.

ಸಮಯ 10.15 : ಸೂಪರ್ ಸ್ಟಾರ್ ರಜನಿಕಾಂತ್, ನಿರ್ಮಾಪಕ ಮುನಿರತ್ನ ಮತ್ತು ರಾಕ್ ಲೈನ್ ವೆಂಕಟೇಶ್ ಜೊತೆ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ್ದಾರೆ.

English summary
Kannada matinee idol, superstar Dr. Rajkumar ( 1929 – 2006) memorial ( in Kanteerava Studios, Bengaluru) dedicated to the nation today. Host of dignitaries from Sandalwood, Tollywood, Kollywood graced the event. The memorial is a dream come true for millions of Rajkumar fans, all over the world.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada