»   » ಅಮೆರಿಕಾದಲ್ಲಿ ಗೋಲ್ಡನ್ ಸ್ಟಾರ್ ರೋಮಿಯೋ

ಅಮೆರಿಕಾದಲ್ಲಿ ಗೋಲ್ಡನ್ ಸ್ಟಾರ್ ರೋಮಿಯೋ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ ಈಗ ವಿಘ್ನೇಶ್ವರನ ಕೃಪಾಕಟಾಕ್ಷ ಜೊತೆಗೆ ಸ್ಟಾರ್ ಗಳ ಹಣೆಬರಹ ಬರೆಯುವ ಅಭಿಮಾನಿ ಪ್ರೇಕ್ಷಕರ ಬೆಂಬಲ ಬೇಕೇಬೇಕಾಗಿದೆ. ಅವರ ಮತ್ತೊಂದು ಚಿತ್ರ 'ರೋಮಿಯೋ' ಇದೇ ಜುಲೈ 6ರಂದು ತೆರೆಗೆ ಅಪ್ಪಳಿಸುತ್ತಿದೆ. ಏತನ್ಮಧ್ಯೆ ಅವರು (ಸೋಮವಾರ, ಜು.2) ತಮ್ಮ 32ನೇ ಹುಟ್ಟುಹಬ್ಬವನ್ನೂ ಸಂಭ್ರಮ ಸಡಗರದಿಂದ ಆಚರಿಕೊಂಡರು.

'ರೋಮಿಯೋ' ಚಿತ್ರತಂಡದ ಜೊತೆಗೆ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದಕ್ಕೆ ಚಿತ್ರದ ವಿತರಕರಾದ ಕೆ.ಮಂಜು ಅವರು ಸಾಕ್ಷಿಯಾದರು. ವಿಶೇಷ ಎಂದರೆ 'ರೋಮಿಯೋ' ಚಿತ್ರ ನಿಯಮಿತ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಮಲ್ಲು ಬೆಡಗಿ ಭಾವನಾ ಚಿತ್ರದ ನಾಯಕಿ. ಹುಟ್ಟುಹಬ್ಬದ ನಿಮಿತ್ತ ಗಣೇಶ್ ಗೆ ನಿರ್ಮಾಪಕರು ಒಂದು ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ. 'ರೋಮಿಯೋ' ಚಿತ್ರ ಯುಎಸ್ಎನಲ್ಲೂ ಜು.6ರಂದು ಬಿಡುಗಡೆಯಾಗುತ್ತಿದೆ.

ಯುಎಸ್ಎನ ಎರಡು ಚಿತ್ರಮಂದಿರಗಳಲ್ಲಿ 'ರೋಮಿಯೋ' ಬಿಡುಗಡೆ ಮಾಡುತ್ತಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಸ್ಯಾನ್ ಜೋಶ್ ನ ಬಿಗ್ ಸಿನಿಮಾಸ್ ಹಾಗೂ ನೀಲ್ಸ್ ಇಲಿನಾಯ್ ನಲ್ಲಿ ಬಿಡುಗಡೆಯಾಗುತ್ತಿದೆ.

ತಮ್ಮ ಚಿತ್ರ ವಿದೇಶದಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಬಗ್ಗೆ ಗಣೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಗಣೇಶನಿಗೆ ಅಮೆರಿಕಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದು ಅವರೆಲ್ಲರನ್ನೂ ಈ ಬಾರಿ 'ರೋಮಿಯೋ' ಚಿತ್ರದ ಮೂಲಕ ತಲುಪುತ್ತಿದ್ದಾರೆ.

ಶೀಘ್ರದಲ್ಲೇ 'ರೋಮಿಯೋ' ಚಿತ್ರವನ್ನು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ದುಬೈನಲ್ಲಿ ಬಿಡುಗಡೆ ಮಾಡುವ ಭರವಸೆಯನ್ನು ನಿರ್ಮಾಪಕರು ನೀಡಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಈ ಚಿತ್ರವನ್ನು ನೀಡುತ್ತಿದ್ದೇನೆ ಎಂದಿದ್ದಾರೆ ಗಣೇಶ್.

ಇಂದು ಇಡೀ ದಿನ ಗಣೇಶ್ ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲವಂತೆ. ಸಂಪೂರ್ಣ ಸಮಯವನ್ನು ಅಭಿಮಾನಿಗಳು ಹಾಗೂ ಹಿತೈಷಿಗಳ ಜೊತೆ ಕಳೆಯುವುದಾಗಿ ತಿಳಿಸಿದ್ದಾರೆ. "ರಾಜ್ಯದ ನಾನಾ ಕಡೆಗಳಿಂದ ನನ್ನ ಅಭಿಮಾನಿಗಳು ನಮ್ಮ ಮನೆಗೆ ಬರುತ್ತಾರೆ. ಅವರನ್ನೆಲ್ಲಾ ನಿರಾಶೆಗೊಳಿಸಬಾರದು ಎಂಬ ಉದ್ದೇಶ ನನ್ನದು" ಎಂದಿದ್ದಾರೆ ಗಣೇಶ್.

ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್(ನಾಯಕ) ಹಾಗೂ ರಮೇಶ್ ಕುಮಾರ್ ನಿರ್ಮಿಸಿರುವ ಚಿತ್ರ 'ರೋಮಿಯೋ'. ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್, ರಂಗಾಯಣ ರಘು, ಸುಧಾ ಬೆಳವಾಡಿ, ಸಾಧುಕೋಕಿಲಾ, ರಮೇಶ್ ಭಟ್, ಮಿತ್ರ, ವಿಶ್ವ, ಗಿರೀಶ್, ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಪಿ.ಸಿ.ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣ, ಸರವಣನ್ ಸಂಕಲನ, ಬಾಬಾ ಭಾಸ್ಕರ್ ಹಾಗೂ ಲಕ್ಷ್ಮೀ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಗುಣ ಅವರ ಕಲಾ ವಿನ್ಯಾಸ ಈ ಚಿತ್ರಕ್ಕಿದೆ.

ಈಗಾಗಲೆ 'ರೋಮಿಯೋ' ಚಿತ್ರದ ಟ್ರೇಲರ್ ಗಳು ಬಹಳಷ್ಟು ಜನಪ್ರಿಯವಾಗಿವೆ. ಈ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಬಹುನಿರೀಕ್ಷಿತ 'ಕೂಲ್' ಹಾಗೂ 'ಮದುವೆ ಮನೆ' ಚಿತ್ರಗಳು ನಿರೀಕ್ಷಿಸಿದ ಗೆಲುವು ಸಾಧಿಸದೆ ಗಣೇಶ್ ಗ್ರಾಫ್ ಆರಕ್ಕೇರದೆ ಮೂರಕ್ಕಿಳಿದಿತ್ತು. 'ರೋಮಿಯೋ' ಚಿತ್ರ ಅವರ ನಿರೀಕ್ಷೆಯನ್ನು ನಿಜಮಾಡಲಿ. (ಏಜೆನ್ಸೀಸ್)

English summary
Kannada actor Golden Star Ganesh celebrates his 32nd birthday on 2nd July, 2012 in the presence of a large number of fans. Incidentally, Ganesh's Romeo in which he is paired with Bhavana, is set for release on 6th July all over Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada