For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ನಿರ್ಮಾಣಕ್ಕೆ ಮರಳಿದ ಕುಮಾರಸ್ವಾಮಿ: ಹಳೆ ಗೆಳೆಯನ ಹೆಗಲ ಮೇಲೆ ಕೈ

  By ಫಿಲ್ಮಿಬೀಟ್ ಡೆಸ್ಕ್
  |

  ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಸೋಲು-ಗೆಲುವುಗಳನ್ನು ಸಮಾನವಾಗಿ ಅನುಭವಿಸಿದ್ದಾರೆ. ಆದರೆ ಸಿನಿಮಾ ರಂಗದಲ್ಲಿ ಎಚ್‌ಡಿ ಕುಮಾರಸ್ವಾಮಿ ಕಂಡಿರುವುದು ಬಹುತೇಕ ಗೆಲುವು ಅಷ್ಟೆ.

  Recommended Video

  ಸಿನಿಮಾ ಮಾಡೋಕೆ ಮತ್ತೆ ಹಳೇ ಗೆಳೆಯನ ಸಹವಾಸ ಮಾಡಿದ HDK

  ಸಿನಿಮಾ ವಿತರಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕುಮಾರಸ್ವಾಮಿ ನಿರ್ಮಾಪಕರಾಗಿ ಕೆಲವು ನೆನಪುಳಿಯುವಂಥಹಾ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ಸಿನಿಮಾ ರಂಗದಿಂದ ತುಸು ದೂರವೇ ಉಳಿದಿದ್ದರು.

  ಆದರೆ ಈಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೊಸದೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಹೊಸ ಸಿನಿಮಾಕ್ಕೆ ತಮ್ಮ ಹಳೆಯ ಗೆಳೆಯನ ಜೊತೆ ಸೇರಿದ್ದಾರೆ. ಅವರೇ ನಿರ್ದೇಶಕ ಎಸ್.ನಾರಾಯಣ್. ಎಚ್‌ಡಿ ಕುಮಾರಸ್ವಾಮಿ-ಎಸ್.ನಾರಾಯಣ್ ಜೋಡಿ ಕೆಲವು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದು ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ.

  'ಹೆಜ್ಜೆ' ಹೆಸರಿನ ಹೊಸ ಸಿನಿಮಾವನ್ನು ಎಚ್‌ಡಿ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿದ್ದು, ಸಿನಿಮಾವನ್ನು ಎಸ್.ನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾ ಕಾದಂಬರಿ ಆಧರಿತ ಸಿನಿಮಾ ಆಗಿದ್ದು, ಕನ್ನಡದ ಮಣ್ಣಿನ ಸೊಗಡನ್ನು ಸಿನಿಮಾದ ಮೂಲಕ ಕಟ್ಟಿಕೊಡುವ ಯತ್ನವನ್ನು ಕಲಾಸಾಮ್ರಾಟ್ ಎಸ್.ನಾರಾಯಣ್ ಮಾಡುತ್ತಿದ್ದಾರೆ.

  'ಹೆಜ್ಜೆ' ಕಾದಂಬರಿಯನ್ನು ಸಿನಿಮಾ ಮಾಡಲು ಯೋಜನೆ

  'ಹೆಜ್ಜೆ' ಕಾದಂಬರಿಯನ್ನು ಸಿನಿಮಾ ಮಾಡಲು ಯೋಜನೆ

  ''ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ್ ಬರೆದಿರುವ 'ಹೆಜ್ಜೆ' ಹೆಸರಿನ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಎಸ್.ನಾರಾಯಣ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಕುಮಾರಸ್ವಾಮಿ ಬಂಡವಾಳ ಹೂಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಚೆನ್ನಕಾಂಬ ಪ್ರೊಡಕ್ಷನ್ಸ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದು ಅದರ ಮೂಲಕ ಈಗಾಗಲೇ ಕೆಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  2005ರಲ್ಲಿಯೇ ಸಿನಿಮಾ ನಿರ್ಮಿಸಲು ಯೋಜನೆ

  2005ರಲ್ಲಿಯೇ ಸಿನಿಮಾ ನಿರ್ಮಿಸಲು ಯೋಜನೆ

  ವ್ಯಾಸರಾಯ ಬಲ್ಲಾಳ್‌ರ 'ಹೆಜ್ಜೆ' ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು 2005ರಲ್ಲಿಯೇ ಎಚ್‌ಡಿ ಕುಮಾರಸ್ವಾಮಿ, ಎಸ್ ನಾರಾಯಣ್ ನಿಶ್ಚಯಿಸಿದ್ದರು. ಕಾದಂಬರಿಯ ಹಕ್ಕುಗಳನ್ನು ಕುಮಾರಸ್ವಾಮಿ ಆಗಲೇ ಖರೀದಿಸಿದ್ದರು. ಆ ಸಿನಿಮಾಕ್ಕೆ ಕಮಲ್ ಹಾಸನ್ ಅನ್ನು ಕರೆತರಬೇಕು ಎಂದೂ ಅಂದುಕೊಂಡಿದ್ದರು. ಆದರೆ ಆ ನಂತರ ಎಚ್‌ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ಹೆಚ್ಚು ಬ್ಯುಸಿಯಾದ ಕಾರಣ ಆಗ 'ಹೆಜ್ಜೆ' ಸಿನಿಮಾ ಮಾಡಲಾಗಲಿಲ್ಲ. ಈಗ ಸಿನಿಮಾ ಮಾಡಲು ಇಬ್ಬರೂ ಒಂದಾಗಿದ್ದಾರೆ.

  ಎಚ್‌ಡಿ ಕುಮಾರಸ್ವಾಮಿ ನಿರ್ಮಾಣ ಮಾಡಿರುವ ಸಿನಿಮಾಗಳು

  ಎಚ್‌ಡಿ ಕುಮಾರಸ್ವಾಮಿ ನಿರ್ಮಾಣ ಮಾಡಿರುವ ಸಿನಿಮಾಗಳು

  ಎಸ್.ನಾರಾಯಣ್ ಹಾಗೂ ಎಚ್‌ಡಿ ಕುಮಾರಸ್ವಾಮಿ ಜೋಡಿ ಕನ್ನಡಕ್ಕೆ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿದೆ. ವಿಷ್ಣುವರ್ಧನ್ ನಟನೆಯ 'ಸೂರ್ಯವಂಶ' ಸೂಪರ್ ಹಿಟ್ ಆಗಿತ್ತು ಆ ನಂತರ 'ಚಂದ್ರ ಚಕೋರಿ', ಶಿವರಾಜ್ ಕುಮಾರ್ ನಟನೆಯ 'ಗಲಾಟೆ ಅಳಿಯಂದ್ರು' ಸಿನಿಮಾಗಳನ್ನು ಈ ಜೋಡಿ ನೀಡಿದೆ. ಆ ನಂತರ ಕುಮಾರಸ್ವಾಮಿ ತಮ್ಮ ಮಗನ ನಟನೆಯ ಮೊದಲ ಸಿನಿಮಾ 'ಜಾಗ್ವಾರ್'ಗೆ ಬಂಡವಾಳ ಹೂಡಿದರು. ನಂತರ 2019ರಲ್ಲಿ ನಿಖಿಲ್, ರಚಿತಾ ರಾಮ್ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾಕ್ಕೂ ಎಚ್‌ಡಿಕೆ ಬಂಡವಾಳ ಹೂಡಿದರು.

  ಹೊಸ ಸಿನಿಮಾದ ಬಗ್ಗೆ ಎಸ್.ನಾರಾಯಣ್ ಹೇಳಿದ್ದು ಹೀಗೆ

  ಹೊಸ ಸಿನಿಮಾದ ಬಗ್ಗೆ ಎಸ್.ನಾರಾಯಣ್ ಹೇಳಿದ್ದು ಹೀಗೆ

  ತಾವು ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಬಗ್ಗೆ ಮಾತನಾಡಿದ ಎಸ್.ನಾರಾಯಣ್, ''ಹೆಜ್ಜೆ' ಕಾದಂಬರಿಯನ್ನು ಚಿತ್ರವಾಗಿಸುವ ಯೋಗ ಈಗ ಕೂಡಿ ಬಂದಿದೆ. ಆಗಿನ ಕಾಲಕ್ಕಿಂತ ಈಗ ತಂತ್ರಜ್ಞಾನ ಮತ್ತಷ್ಟು ಮುಂದುವರೆದಿದೆ. ಈಗಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಥೆಯನ್ನು ನೈಜ ರೂಪದಲ್ಲಿ ತರಲು ಪ್ರಯತ್ನಿಸುತ್ತೇವೆ. ಹೆಜ್ಜೆ ಕಾದಂಬರಿಯಲ್ಲಿ ಉತ್ತಮ ಸಂದೇಶಗಳಿದ್ದು ಈಗಿನ ಕಾಲಮಾನಕ್ಕೂ ಒಗ್ಗುವಂತಿದೆ. ಇಂದು ಚಿತ್ರದ ಆರಂಭದ ಪ್ರಕ್ರಿಯೆ ಶುರುವಾಗಿದ್ದು ಸದ್ಯದಲ್ಲೇ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದೇವೆ ಎಂದಿರುವ ಅವರು, ''ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ಮಾಪಕರಾದ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಚಿತ್ರರಂಗಕ್ಕೆ ಮರಳಿರುವುದು ಸಂತಸದ ವಿಚಾರ. ನನಗೆ ಅವರ ನಿರ್ಮಾಣದಲ್ಲಿ ಸೂರ್ಯವಂಶ, ಗಲಾಟೆ ಅಳಿಯಂದ್ರು, ಚಂದ್ರಚಕೋರಿ ಎಂಬ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸುವ ಭಾಗ್ಯ ಸಿಕ್ಕಿತ್ತು. ಅದೇ ರೀತಿ ವ್ಯಾಸರಾಯ ಬಲ್ಲಾಳ್ ಅವರು ಬರೆದಿರುವ ಹೆಜ್ಜೆ ಕಾದಂಬರಿ ಯನ್ನು ಚಿತ್ರವಾಗಿಸಲು ಹೊರಟಿದ್ದೆವು, ಆದರೆ ಕುಮಾರಸ್ವಾಮಿ ಅವರು ರಾಜಕೀಯ ರಂಗದಲ್ಲಿ ಬ್ಯುಸಿ ಆಗಿದ್ದರಿಂದ ಸಾಧ್ಯವಾಗಿರಲಿಲ್ಲ'' ಎಂದಿದ್ದಾರೆ.

  English summary
  Former CM HD Kumaraswamy producing new Kannada movie. Director S Narayan directing that movie. movie named as Hejje.
  Wednesday, August 11, 2021, 17:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X