twitter
    For Quick Alerts
    ALLOW NOTIFICATIONS  
    For Daily Alerts

    ಪ್ಯಾರಾಮೌಂಟ್ ಸಹಭಾಗಿತ್ವದಲ್ಲಿ ಹೆಸರುಘಟ್ಟ ಚಿತ್ರನಗರಿ

    By Rajendra
    |

    ಬೆಂಗಳೂರು ಹೊರವಲಯದ ಹೆಸರುಘಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಂ.ಜಿ.ಎಂ. ಸಂಸ್ಥೆ ಹಾಗೂ ಪ್ಯಾರಾಮೌಂಟ್ ಸ್ಟುಡಿಯೋ ಕಂಪನಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಚಿತ್ರನಗರಿ ನಿರ್ಮಾಣ ಮಾಡಲು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ತಿಳಿಸಿದರು.

    ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ತಾರಾ ಅನುರಾಧ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕಳೆದ 30 ವರ್ಷಗಳಿಂದಲೂ ಹೆಸರಘಟ್ಟದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. [ಚಿತ್ರೀಕರಣ ಅನುಮತಿಗೆ ಏಕಗವಾಕ್ಷಿ ಪದ್ಧತಿ ಚಿಂತನೆ]

    Information Minister R Roshan Baig
    ನಮ್ಮ ಸರ್ಕಾರ ಆಯವ್ಯಯದಲ್ಲಿ ಉಲ್ಲೇಖಿಸಿರುವಂತೆ ಚಿತ್ರನಗರಿಯ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಚಿತ್ರನಗರಿ ನಿರ್ಮಿಸಲು ಸದ್ಯದಲ್ಲಿಯೇ ಚಲನಚಿತ್ರರಂಗದ ಎಲ್ಲಾ ಸಂಘಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದೆಂದರು.

    ಚಿಕಾಗೋ, ಸ್ವಿಜರ್‌ಲ್ಯಾಂಡ್ ದೇಶಗಳಲ್ಲಿ ಚಿತ್ರೀಕರಣಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಅಲ್ಲಿಯ ಸರ್ಕಾರ ಸಿನಿಮಾ ರಂಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿ ನಮ್ಮ ದೇಶದಲ್ಲೂ ಏಕೆ ಆಗಬಾರದೆಂದು ಸಚಿವರು ಅಭಿಪ್ರಾಯಪಟ್ಟರು.

    ಚಲನಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ಪಡೆಯಲು ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಹಾಗೂ ಚಿತ್ರೀಕರಣಕ್ಕೆ ಪರವಾನಗಿ ನೀಡುವ ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗುವುದೆಂದು ಸಚಿವರು ತಿಳಿಸಿದರು.

    ಅಲ್ಲದೆ, ವಿಧಾನಸೌಧ ಮುಂಭಾಗ, ಹೈಕೋರ್ಟ್ ಮುಂಭಾಗ ಹಾಗೂ ಲಾಲ್‌ಬಾಗ್ ಪ್ರದೇಶಗಳಲ್ಲಿ ರಜಾದಿನಗಳಂದು ಸಿನಿಮಾ ಚಿತ್ರೀಕರಣ ಮಾಡಲು ಅವಕಾಶ ಕಲ್ಪಿಸುವ ಸಂಬಂಧ ಜೂ.17ನೇ ತಾರೀಖಿನಂದು ನಗರ ಪೊಲೀಸ್ ಆಯುಕ್ತರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದರು.

    ನಗರದಲ್ಲಿರುವ ಕಂಠೀರವ ಸ್ಟೂಡಿಯೋದಲ್ಲಿ ಚಿತ್ರೀಕರಣಕ್ಕೆ ಈಗಿರುವ ಸೌಲಭ್ಯಗಳು ಸಮರ್ಪಕವಾಗಿಲ್ಲದರುವುದರಿಂದ ನೊಯಿಡಾದಲ್ಲಿರುವ ಆಧುನಿಕ ಸಿನಿಮಾನಗರ ಮಾದರಿಯಲ್ಲೇ ಶ್ರೀ ಕಂಠೀರವ ಸ್ಟೂಡಿಯೋವನ್ನು ಉನ್ನತೀಕರಿಸಲಾಗುವುದು. ಈ ಸಂಬಂಧ ಅಧಿಕಾರಿಗಳೊಡನೆ ನೊಯಿಡಾಗೆ ತೆರಳಿ ಅಲ್ಲಿರುವ ಸಿನಿಮಾನಗರಿಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬ ಮಾಹಿತಿ ಪಡೆಯಲಾಗಿದೆ ಎಂದರು.

    ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಸುಮಾರು ರು.10 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಲು ಅನುಕೂಲವಾಗುವಂತೆ ಅಮೃತ ಮಹೋತ್ಸವ ಭವನ ನಿರ್ಮಾಣ ಹಂತದಲ್ಲಿದ್ದು, ಅಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಹಾಗೂ ಚಲನಚಿತ್ರ ರಂಗವನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯವನ್ನು ರು.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದೆಂದರು.

    ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ಚಿತ್ರಮಂದಿರಗಳನ್ನು ಪ್ರಾರಂಭಿಸಲು ಮುಂದೆ ಬರುವ ಆಸಕ್ತ ಉದ್ಯಮಿಗಳಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹಧನ ನೀಡಲಾಗುವುದು. ಇದರಿಂದ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಕೂಲವಾಗುವುದೆಂದು ಸಚಿವರು ತಿಳಿಸಿದರು.

    ಡಾ.ರಾಜ್‌ಕುಮಾರ್ ಸ್ಮಾರಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಕುಟುಂಬ ವರ್ಗದವರ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಹಾಗೆಯೇ, ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದವಾರ ಸಭೆ ನಡೆಸಲಾಗಿದ್ದು, ಸ್ಮಾರಕ ನಿರ್ಮಾಣಕ್ಕೆ ಸ್ಥಳ ಹುಡುಕಲಾಗುತ್ತಿದೆ. ಭೂಮಿ ಸಿಕ್ಕ ತಕ್ಷಣ ಸ್ಮಾರಕ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು. (ಒನ್ಇಂಡಿಯಾ ಕನ್ನಡ)

    English summary
    Hollywood studios Paramount Pictures Corporation, Universal Studios, Metro-Goldwyn-Mayer Picture — have expressed interest in developing the proposed Film City at Hesaraghatta on the outskirts of Bangalore, Information Minister R Roshan Baig said on 27th June, Friday.
    Saturday, June 28, 2014, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X