»   » ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Posted By:
Subscribe to Filmibeat Kannada

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮಂಗಳವಾರ (ಡಿಸೆಂಬರ್ 30) ಶಂಕುಸ್ಥಾಪನೆ ಮಾಡಲಾಯಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದ ಕೆಲವೇ ಕ್ಷಣಗಳಲ್ಲಿ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ವಿಷ್ಣುವರ್ಧನ್ ಸ್ಮಾರಕ ಟ್ರಸ್ಟ್ ಗೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಿದ್ದ ಅದೇಶಕ್ಕೆ ತಡೆ ನೀಡಿದ್ದು, ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿದೆ. [ವಿಷ್ಣುವರ್ಧನ್ ಬಗ್ಗೆ ಆಪ್ತೇಷ್ಟರು ಹಂಚಿಕೊಂಡ ಸತ್ಯ ಸಂಗತಿ]

Dr Vishnuvardhan memorial1

ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಉಲ್ಲಂಘನೆ ಆರೋಪ ಮಾಡಲಾಗಿದ್ದು ಅಂತಿಮ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಪಾಡಿ. ಸರ್ಕಾರ ನೀಡಿರುವ ಭೂಮಿಯಲ್ಲಿ ಮರಗಿಡ ನಾಶ ಮಾಡಬಾರದು. ಆ ಜಾಗದಲ್ಲಿ ಯಾವುದೇ ಪ್ರಕ್ರಿಯೆ ಮಾಡದಂತೆ ಹೈಕೋರ್ಟ್ ತಾಕೀತು ಮಾಡಿದೆ.

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅರಣ್ಯಭೂಮಿ ನೀಡಿದ್ದಾರೆ, ಇದು ಅರಣ್ಯವಲಯದ ಬಫರ್ ಝೋನ್ ಗೆ ಒಳಪಡುತ್ತದೆ ಎಂದು ಆರೋಪಿಸಿ ಪರಿಸರವಾದಿ ಶರತ್ ಬಾಬು ಮತ್ತಿತರರು ಹೈಕೋರ್ಟ್ ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Dr Vishnuvardhan memorial2

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಎಲ್ಲಿ? ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮ (ಸರ್ವೆ ನಂ.22)ದಲ್ಲಿ 108 ಎಕರೆಗೂ ಅಧಿಕ ವಿಸ್ತೀರ್ಣದ ಜಾಗವಿದೆ. ಇಲ್ಲಿ ಸರಕಾರದ ಆದೇಶದಂತೆ 1935ರ ಡಿ.14ರಂದು ಸರಕಾರಿ ಮುಫತ್ ಕಾವಲಿಗೆ 78 ಎಕರೆ, 18 ಗುಂಟೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಉಳಿದ 29 ಎಕರೆ ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ. ಈ ಪೈಕಿ ಎರಡು ಎಕರೆ ಭೂಮಿಯನ್ನು ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ.

ವಿಷ್ಣು ಸ್ಮಾರಕ ಪ್ರದೇಶದಲ್ಲಿ ಸಭಾಂಗಣ, ಗ್ರಂಥಾಲಯ ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸ್ಮಾರಕ ನಿರ್ಮಾಣಕ್ಕೆ ಬಜೆಟ್‌ನಲ್ಲಿ ರು.11 ಕೋಟಿ ಅನುದಾನ ಮೀಸಲಿಡಲಾಗಿದೆ. ಸ್ಮಾರಕದ ನಿರ್ಮಾಣ ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.

Dr Vishnuvardhan memorial3

ವಿಷ್ಣುವರ್ಧನ್ ಕುರಿತು ಒಂದೆರಡು ಮಾತು: ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ. ಮೊಟ್ಟ ಮೊದಲು ಬಾಲನಟರಾಗಿ ವಂಶವೃಕ್ಷ ದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ನಂತರ ನಾಗರಹಾವು ಚಿತ್ರದ ಮೂಲಕ ನಾಯಕ ನಟರಾದರು. ಆಪ್ತರಕ್ಷಕ ಚಿತ್ರದವರೆಗೂ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ ಹಿರಿಮೆ ಇವರದು. ತಮ್ಮ ವಿಶಿಷ್ಟ ಪ್ರತಿಭೆ ಮತ್ತು ಮನೋಜ್ಞ ಅಭಿನಯದಿಂದಾಗಿ ರಾಜ್ಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವಕ್ಕೆ ಭಾಜನರಾಗಿದ್ದಾರೆ.

ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ ಹೆಗ್ಗಳಿಕೆ ಇವರದು. ಈ ಮಹಾನ್ ಕಲಾವಿದ ಕನ್ನಡ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಯ ಕುರುಹಾಗಿ ಕರ್ನಾಟಕ ಸರ್ಕಾರವು ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುತ್ತಿದೆ.

English summary
A divisional bench of Karnataka High Court has ordered an interim stay on Kannada veteran actor late Dr Vishnuvardhan's memorial. Environmentalist Sharath Babu and others filed PIL against Karnataka Governmet and Dr Vishnu memorial trust. After hearing the plea HC passed an interim stay order on 30th December, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada