ಇನ್ನೊಂದು 'ಡಕೋಟ' ಚಿತ್ರ ಕೈಗೆತ್ತಿಕೊಂಡ ಓಂ ಪ್ರಕಾಶ್
ಈಗ ಬಿಡುಗಡೆಯಾಗಿರುವ 'ಡಕೋಟ ಪಿಕ್ಚರ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏತನ್ಮಧ್ಯೆಯೇ ಮತ್ತೊಂದು ಡಕೋಟ ಚಿತ್ರಕ್ಕೆ ಓಂ ಮುಹೂರ್ತ ಮಾಡಿ ಮುಗಿಸಿದ್ದಾರೆ. ಈ ಬಾರಿ ತಮ್ಮ ಚಿತ್ರಕ್ಕೆ 'ಡಕೋಟ ಫ್ಯಾಮಿಲಿ' ಎಂದು ಹೆಸರಿಟ್ಟಿದ್ದಾರೆ.
ಕನ್ನಡ ಚಿತ್ರಗಳ 'ಧೀರ' ರಾಕ್ ಲೈನ್ ವೆಂಕಟೇಶ್ ಹಲವರೊಂದಿಗೆ ಕೈಜೋಡಿಸಿ ನಿರ್ಮಿಸುತ್ತಿರುವ ಚಿತ್ರವಿದು. ಚಿತ್ರ ನಿರ್ಮಾಣದ ಜೊತೆಗೆ ಈ ಬಾರಿಯೂ ಅವರು ಓಂ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಡಿ.ಮನೋಹರ್ ಕಥೆ ಬರೆದಿರುವ ಈ ಚಿತ್ರಕ್ಕೆ ಎನ್.ಓಂಪ್ರಕಾಶ್ ರಾವ್ ಚಿತ್ರಕಥೆ ಹೆಣೆದಿದ್ದಾರೆ.
ಈ ಸಲ ಓಂ ಪಕ್ಕಾ ಟೀಂ ರೆಡಿ ಮಾಡಿಕೊಂಡಿದ್ದಾರೆ. ಸಂಗೀತ ಹಾಗೂ ಸಾಹಿತ್ಯದ ಜವಾಬ್ದಾರಿಯನ್ನು ಹಂಸಲೇಖ ಅವರು ಹೊತ್ತಿದ್ದರೆ ಸಂಭಾಷಣೆ 'ಮಠ' ಖ್ಯಾತಿಯ ಗುರುಪ್ರಸಾದ್ ಹೆಗಲಿಗಿದೆ. ಚಿತ್ರಕ್ಕೆ ವಾಲಿ ಅವರ ಛಾಯಾಗ್ರಹಣವಿದೆ. ಎಸ್.ಮನೋಹರ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕೆ.ಕೆ.ರಾಜು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಈ ತಿಂಗಳ ಒಂಭತ್ತರಿಂದ ಚಿತ್ರಕ್ಕೆ ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದ ಪಾತ್ರವರ್ಗದಲ್ಲಿ ಶ್ರೀನಿವಾಸಮೂರ್ತಿ, ತುಲಸಿ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್, ಮೈಕೋ ನಾಗರಾಜ್ ಸೇರಿದಂತೆ ಇನ್ನಿತರರಿದ್ದಾರೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್)


Click it and Unblock the Notifications












