»   » ಕನ್ನಡ ಚಿತ್ರರಂಗದ ಹೊಸ ದಾರಿ 'ಪರಾರಿ': ಚೈತನ್ಯ

ಕನ್ನಡ ಚಿತ್ರರಂಗದ ಹೊಸ ದಾರಿ 'ಪರಾರಿ': ಚೈತನ್ಯ

By: ಪ್ರಕಾಶ್ ಉಪಾಧ್ಯಾಯ
Subscribe to Filmibeat Kannada

ಕನ್ನಡ ಸಿನಿಮಾ ನಿರ್ದೇಶಕ ಕೆ.ಎಂ.ಚೈತನ್ಯ ಅವರು ತಮ್ಮ ವೃತ್ತಿ ಬದುಕಿನಲ್ಲಿ ಎರಡು ತುದಿಗಳನ್ನು ಮುಟ್ಟಿ ಬಂದಿದ್ದಾರೆ. ಒಂದು ಚಿತ್ರದಲ್ಲಿ ಗೆದ್ದಿದ್ದರೆ. ಇನ್ನೊಂದರಲ್ಲಿ ಸೋತಿದ್ದಾರೆ. 'ಆ ದಿನಗಳು' ಚಿತ್ರ ಅವರಿಗೆ ಒಳ್ಳೆಯ ಹೆಸರು, ಕೀರ್ತಿ ತಂದುಕೊಟ್ಟಿತು. ಆದರೆ 'ಸೂರ್ಯಕಾಂತಿ' ಚಿತ್ರ ನಿರೀಕ್ಷಿಸಿದ ಯಶಸ್ಸು ನೀಡಲಿಲ್ಲ.

ಈಗವರು ಮತ್ತೊಂದು ವಿಭಿನ್ನ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.  ಈ ಬಾರಿ ಅವರ ಸಬ್ಜೆಕ್ಟ್ ಕಾಮಿಡಿ. ದೊಡ್ಡ ಸ್ಟಾರ್ ಗಳಿಲ್ಲದ 'ಪರಾರಿ' ಚಿತ್ರದ ಮೂಲಕ ಅವರು ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗಿದ್ದಾರೆ. ತಮ್ಮ 'ಪರಾರಿ' ಚಿತ್ರದ ಅನುಭವಗಳನ್ನು ಅವರು ಒನ್ಇಂಡಿಯಾ ಜೊತೆ ಹಂಚಿಕೊಂಡರು.

ಸೂರ್ಯಕಾಂತಿ ಬಳಿಕ ಇಷ್ಟೊಂದು ವಿಳಂಬ ಯಾಕೆ?
ಒಂದು ಚಿತ್ರ ಮಾಡಿದ ಬಳಿಕ ತುಂಬಾ ಗ್ಯಾಪ್ ತೆಗೆದುಕೊಳ್ಳುವುದು ನನಗೊಂದು ಕೆಟ್ಟ ಅಭ್ಯಾಸವಾಗಿಬಿಟ್ಟಿದೆ. ಆ ದಿನಗಳು (2007) ಚಿತ್ರದ ಬಳಿಕ ಮೂರು ವರ್ಷ ಗ್ಯಾಪ್ ತೆಗೆದುಕೊಂಡು ಸೂರ್ಯಕಾಂತಿ ಮಾಡಿದೆ. ಈಗ ಪರಾರಿ ಚಿತ್ರವೂ ಅಷ್ಟೇ ಮೂರು ವರ್ಷಗಳ ಗ್ಯಾಪ್ ಬಳಿಕ ಬರುತ್ತಿದೆ. ಇನ್ನು ಮುಂದೆ ಈ ರೀತಿ ಆಗಲು ಬಿಡಲ್ಲ.

ಆದರೆ ಗ್ಯಾಪ್ ನಲ್ಲಿ ನಾನೇನು ಸುಮ್ಮನೆ ಕುಳಿತಿರಲಿಲ್ಲ. ಯುನೆಸ್ಕೋಗಾಗಿ ಡಾಕ್ಯುಮೆಂಟರಿ ಒಂದನ್ನು ಮಾಡಿಕೊಟ್ಟೆ. ಟೆಲಿ ಸೀರಿಯಲ್ ಒಂದರಲ್ಲಿ ಬಿಜಿಯಾದೆ. ಒಂದೂವರೆ ವರ್ಷ ಇದಕ್ಕಾಗಿಯೇ ಕಳೆದುಹೋಯಿತು. ಇದರ ಜೊತೆಗೆ ಒಂದಷ್ಟು ಆಡ್ ಫಿಲಂಸ್ ನಲ್ಲೂ ಬಿಜಿಯಾಗಿದ್ದೆ. ಇವೆಲ್ಲಾ ಕಾರಣಗಳಿಂದ ಚಿತ್ರಗಳು ವಿಳಂಬವಾದವು.

ಚಿತ್ರ ನಿರ್ದೇಶನ ಎನ್ನುವುದು ಶೇ.100ರಷ್ಟು ಗಮನ ಕೇಂದ್ರೀಕರಿಸಿ ಮಾಡಬೇಕಾದ ಕೆಲಸ. ತಾವು ಬೇರೆ ಕೆಲಸಗಳಲ್ಲಿ ತೊಡಗಿಕೊಂಡ ಕಾರಣ ತಮ್ಮ ಚಿತ್ರಗಳು ವಿಳಂಬವಾದವು. ಇದಲ್ಲದೆ ಸೂರ್ಯಕಾಂತಿ ಚಿತ್ರದ ಸೋಲು ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು. ಏತನ್ಮಧ್ಯೆ ತೆಲುಗು ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡೆ. ಕಾರಣಾಂತರಗಳಿಂದ ಅದು ಸ್ವಲ್ಪ ತಡವಾಯಿತು. ಹಾಗಾಗಿ 'ಪರಾರಿ' ಚಿತ್ರದ ಕಡೆಗೆ ಗಮನ ಕೊಟ್ಟೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಸಬ್ಜೆಕ್ಟ್ ಸಿಗಬೇಕಲ್ಲವೆ?

ನೈಜ ಕಥೆಯಿಂದ ಕಾಮಿಡಿಗೆ ಹೊರಳಿದ್ದೀರಿ ಏನು ವಿಶೇಷ?

ಇದು ನನಗೇನು ಹೊಸದಲ್ಲ. ಈ ಹಿಂದೆ ಸಾಕಷ್ಟು ಕಾಮಿಡಿ ನಾಟಕಗಳನ್ನು ನಿರ್ದೇಶಿಸಿ ಗೆದ್ದಿದ್ದೇನೆ. ಒಂದೇ ಪ್ರಕಾರಕ್ಕೆ ಸೀಮಿತವಾವುದು ನನಗಿಷ್ಟವಿಲ್ಲ. ಎಲ್ಲ ಬಗೆಯ ಚಿತ್ರಗಳನ್ನು ಮಾಡಬೇಕೆಂಬುದು ನನ್ನ ಆಸೆ. ಈ ರೀತಿಯ ವಿವಿಧ ಪ್ರಕಾರದ ಚಿತ್ರಗಳನ್ನು ಮಾಡಿದ್ದಕ್ಕೆ ಕಮಲ್ ಹಾಸನ್ ಗೆದ್ದಿದ್ದು. ಗೋವಿಂದಾಯ ನಮಃ ಮತ್ತು ರ್‍ಯಾಂಬೋ ಚಿತ್ರಗಳ ಯಶಸ್ಸಿನಿಂದ ತಾವು ಕಾಮಿಡಿ ಚಿತ್ರ ಮಾಡಲು ಹೋಗಿಲ್ಲ.

ಬೇರೆ ಕಾಮಿಡಿ ಚಿತ್ರಗಳಿಗೆ ಹೋಲಿಸಿದರೆ ಪರಾರಿ ಚಿತ್ರ ಹೇಗೆ ಭಿನ್ನ?

ನಮ್ಮ ಚಿತ್ರೋದ್ಯಮದಲ್ಲಿ ಒಂದು ಬಲವಾದ ನಂಬಿಕೆ ಇದೆ. ಅತಿಯಾದ ಹಿಂಸೆ ಇಲ್ಲದೆ ಆಕ್ಷನ್ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದು. ಆದರೆ ಆ ದಿನಗಳು ಚಿತ್ರ ಅವರ ನಂಬಿಕೆಯನ್ನು ಹುಸಿಗೊಳಿಸಿತು. ಅದೇ ರೀತಿ ಕಾಮಿಡಿ ಚಿತ್ರಗಳ ಯಶಸ್ಸು ಡೈಲಾಗ್ ಗಳ ಮೇಲೆ ನಿಂತಿದೆ ಎಂಬುದು ಇನ್ನೊಂದು ನಂಬಿಕೆ.

ಈ ನಂಬಿಕೆಯನ್ನೂ ಪರಾರಿ ಚಿತ್ರ ಬುಡಮೇಲು ಮಾಡಲಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲಿದೆ. 2007ರಿಂದ ಈ ಸಬ್ಜೆಕ್ಟ್ ನನ್ನ ಮನಸ್ಸಿನಲ್ಲಿತ್ತು. ಈಗ ಅದು ತೆರೆಯ ಮೇಲೆ ಬರುತ್ತಿದೆ. ಗೆಳೆಯನೊಬ್ಬ ಹೇಳಿದ ಕಥೆಯನ್ನು ತೆರೆಗೆ ತರುತ್ತಿದ್ದೇನೆ. ಇದಕ್ಕಾಗಿ ಹಾಸ್ಯ ನಟ, ನಿರ್ದೇಶಕ ಹಾಗೂ ನನ್ನ ಗೆಳೆಯನೂ ಆಗಿರುವ ಮೋಹನ್ ಅವರೊಂದಿಗೂ ಮಾತನಾಡಿ ಚರ್ಚಿಸಿದ್ದೇನೆ. ಕಥೆ, ಚಿತ್ರಕಥೆ ಬರೆದುಕೊಡಲು ಹೇಳಿದ್ದೆ. ನಾವಿಬ್ಬರೂ ಕಾಲೇಜು ದಿನಗಳಿಂದಲೂ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು.

ಚಿತ್ರದ ತಾರಾಗಣದ ಬಗ್ಗೆ ಏನು ಹೇಳುತ್ತೀರಿ?

ಚಿತ್ರಕಥೆಗೆ ಪೂರಕವಾಗುವಂತಹ ನಟರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿನ ಅವರ ಪಾತ್ರಕ್ಕೆ ಪ್ರತಿಯೊಬ್ಬರು ಒಪ್ಪುವಂತಿದ್ದಾರೆ. ಬುಲೆಟ್ ಪ್ರಕಾಶ್ ಅವರನ್ನು ಹೊರತುಪಡಿಸಿದರೆ ಉಳಿದ ಕಲಾವಿದರೆಲ್ಲರೂ ಚಿಕ್ಕ ವಯೋಮಾನದವರು. ಆದರೆ ಚಿತ್ರದಲ್ಲಿ ಪ್ರಕಾಶ್ ಅವರು ಎಲ್ಲೂ ವಯಸ್ಸಾದಂತೆ ಕಾಣಿಸುವುದಿಲ್ಲ.

ನಟನಾಗಿ ಬುಲೆಟ್ ಪ್ರಕಾಶ್ ಅವರನ್ನು ಇಷ್ಟಪಡುವವರಲ್ಲಿ ನಾನೂ ಒಬ್ಬ. ಅವರ ಬಾಡಿ ಲಾಂಗ್ವೇಜ್, ಅವರ ಮುಖ ಭಾವ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇನ್ನು ಶುಭಾ ಪೂಂಜಾ ಅವರ 'ಸ್ಲಂ ಬಾಲ' ಚಿತ್ರವನ್ನು ನೋಡಿ ಇಂಪ್ರೆಸ್ ಆದೆ. ಜಾಹ್ನವಿ ಕಾಮತ್ ಅವರು ತಮ್ಮ ಟೆಲಿ ಸೀರಿಯಲ್ 'ಮುಗಿಲು'ನಲ್ಲಿ ಅಭಿನಯಿಸಿದ್ದಾರೆ. ಶ್ರವಂತ್ ರಾವ್ ಹೊಸಬರು. ಅವರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡೆವು.

ಪರಾರಿ ಚಿತ್ರ ಹೊರ ರಾಜ್ಯಗಳಲ್ಲೂ ಬಿಡುಗಡೆಯಾಗುತ್ತಿದೆಯೆ?

ಹೌದು. ಹೊರ ರಾಜ್ಯಗಳಲ್ಲಷ್ಟೇ ಅಲ್ಲ. ಹೊರ ದೇಶಗಳಲ್ಲೂ ಬಿಡುಗಡೆ ಮಾಡಬೇಕೆಂದಿದ್ದೇವೆ. ಆ ದಿನಗಳು ಚಿತ್ರ ಮುಂಬೈ ಮತ್ತು ದೆಹಲಿಯಲ್ಲಿ ಬಿಡುಗಡೆಯಾಗಿತ್ತು.

ಕನ್ನಡ ಚಿತ್ರರಂಗ ಮತ್ತೆ ಮೂಲ ರೂಪಕ್ಕೆ ಬರುತ್ತಿದೆ ಅನ್ನಿಸುತ್ತಿದೆಯೇ?

ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಾರೆ. ಹೊಸ ಹೊಸ ಪ್ರಯೋಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ಒಳ್ಳೆಯ ಬೆಳವಣಿಗೆ. ದೊಡ್ಡ ಸ್ಟಾರ್ ಗಳಿಲ್ಲದ ಚಿತ್ರಗಳು ಗೆಲುವು ಸಾಧಿಸುತ್ತಿವೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಚಾರ್ ಮಿನಾರ್, ಮೈನಾ ಚಿತ್ರಗಳೇ ಇದಕ್ಕೆ ಉದಾಹರಣೆ. ಹೊಸಬಗೆಯ ತಂತ್ರಜ್ಞರು ಹಾಗೂ ನಿರ್ದೇಶಕರ ಪ್ರಯತ್ನದಿಂದಲೇ ಚಿತ್ರಗಳ ಗೆಲುವು ಸಾಧ್ಯವಾಗಿದೆ. ಹೊಸ ಹೊಸ ಆಲೋಚನೆಗಳಿಂದ ಬರುವಂತಹ ನಿರ್ದೇಶಕರೇ ಹೆಚ್ಚು ಗೆಲ್ಲುತ್ತಿದ್ದಾರೆ.

ಸ್ಟಾರ್ ನಟರೆಲ್ಲಾ ರೀಮೇಕ್ ಚಿತ್ರಗಳ ಕಡೆಗೆ ಹೊರಳುತ್ತಿರುವುದು ಬೇಸರದ ಸಂಗತಿ. ಹೊಸತನ್ನು ಮಾಡಲು ಸಾಧ್ಯವಾಗದವರಿಗೆ ಸುಲಭವಾಗಿ ಕಾಣುತ್ತಿರುವ ಮಾರ್ಗ ರೀಮೇಕ್ ಚಿತ್ರಗಳು. ಹೊಸತನದಿಂದ ಕೂಡಿದ ಚಿತ್ರಗಳನ್ನು ಕೊಟ್ಟಿದ್ದಕ್ಕೆ ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರು ಟ್ರೆಂಡ್ ಸೆಟ್ ನಿರ್ದೇಶಕರಾದರು.

English summary
An exclusive interview with Kannada films popular director KM Chaitanya of Aa Dinagalu fame. The director is back with Parari, is a non stop rib-tickling, action and fun roller coaster. Parari is a film for everyone who is young at heart.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada