»   » ರಾಧಿಕಾ ಪಂಡಿತ್-ದೀಪಕ್ '18ನೇ ಕ್ರಾಸ್' ಬಿಡುಗಡೆ

ರಾಧಿಕಾ ಪಂಡಿತ್-ದೀಪಕ್ '18ನೇ ಕ್ರಾಸ್' ಬಿಡುಗಡೆ

Posted By:
Subscribe to Filmibeat Kannada

ಬರೋಬ್ಬರಿ ಏಳು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಚಿತ್ರವೊಂದು ಇಂದು (03 ಆಗಸ್ಟ್ 2012) ತೆರೆಗೆ ಬರುತ್ತಿದೆ. ಹ್ಯಾಟ್ರಿಕ್ ನಟಿ ರಾಧಿಕಾ ಪಂಡಿತ್ ಹಾಗೂ ಶಿಷ್ಯ ಖ್ಯಾತಿಯ ದೀಪಕ್ ಜೋಡಿಯ '18ನೇ ಕ್ರಾಸ್' ಎಂಬ ಚಿತ್ರವಿದು. ಸೀರಿಯಲ್ ನಟಿಯಾಗಿದ್ದ ರಾಧಿಕಾ ಮೊದಲ ಸಿನಿಮಾ ಇದು. ಆದರೆ ಮೊಗ್ಗಿನ ಮನಸ್ಸು ಮೊದಲು ಬಿಡುಗಡೆಯಾಗಿ ರಾಧಿಕಾ ಆ ಚಿತ್ರದ ಮೂಲಕ ಪ್ರಸಿದ್ಧ ನಟಿಯಾಗಿ ಬೆಳೆದರು.

ದೀಪಕ್ ಹಾಗೂ ರಾಧಿಕಾ ಪಂಡಿತ್ ಜೋಡಿಯನ್ನು ನಾಯಕ-ನಾಯಕಿಯನ್ನಾಗಿಸಿ 2006ರಲ್ಲಿ ನಿರ್ಮಾಪಕ ಚಿಕ್ಕಣ್ಣ ಈ '18ನೇ ಕ್ರಾಸ್' ಚಿತ್ರವನ್ನು ಪ್ರಾರಂಭಿಸಿದರು. ಆರಂಭದಿಂದಲೂ ಕುಂಟುತ್ತಾ ಸಾಗಿದ್ದ ಈ ಚಿತ್ರಕ್ಕೆ ಚಿತ್ರೀಕರಣದ ನಡೆಯುತ್ತಿದ್ದ ಹಂತದಲ್ಲೇ ದುರದೃಷ್ಟವಶಾತ್ ಬಂದೆರಗಿದ ಚಿತ್ರದ ನಿರ್ಮಾಪಕ ಚಿಕ್ಕಣ್ಣ ಸಾವು ಬರಸಿಡಿಲೇ ಬಡಿದಂತಾಗಿತ್ತು. ಚಿಕ್ಕಣ್ಣ ತೀರಿಕೊಂಡ ಬಳಿಕ ಪ್ರೊಜೆಕ್ಟ್ ನಿಂತು ಹೋಗಿತ್ತು.

ನಂತರ ಚಿಕ್ಕಣ್ಣರ ಪತ್ನಿ ರತ್ನಾ ಚಿತ್ರ ಮುಂದುವರಿಸುವ ಜವಾಬ್ದಾರಿ ವಹಿಸಿಕೊಂಡು ಒಂದೆರಡು ವರ್ಷಗಳ ನಂತರ ಚಿತ್ರೀಕರಣ ಮುಗಿಸಿದರು. ಚಿತ್ರದ ಬಿಡುಗಡೆಗೆ ಕಳೆದೆರಡು ವರ್ಷಗಳಿಂದ ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಇಂದು, ಶುಕ್ರವಾರ ಅಂದರೆ ಆಗಸ್ಟ್ 3, 2012 ರಂದು '18ನೇ ಕ್ರಾಸ್' ತೆರೆ ಮೇಲೆ ಕಾಣಿಸಲಿದೆ.

ದಿವಂಗತ ಚಿಕ್ಕಣ್ಣ ಅವರ ಕೊನೆಯ ಮಗ ಹಾಗೂ ವಿತರಕ ಜಯಣ್ಣ '18ನೇ ಕ್ರಾಸ್' ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. "ಬಿಡುಗಡೆ ವಿಷಯ ತಿಳಿದು ತುಂಬಾ ಸಂತೋಷವಾಯ್ತು. ಚಿತ್ರ ಬಿಡುಗಡೆಯಾದರೆ ಆ ಕುಟುಂಬಕ್ಕೆ ಸಹಾಯವಾಗುತ್ತದೆ." ಎಂದು ಹೇಳಿ ಚಿತ್ರದ ನಾಯಕಿ ರಾಧಿಕಾ ಪಂಡಿತ್ ಬಿಡುಗಡೆಗೆ ಶುಭ ಕೋರಿದ್ದಾರೆ. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

18ನೇ ಕ್ರಾಸ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಕ್ರಮವಾಗಿ ಮೊದಲಾರ್ಧ ಹಾಗೂ ದ್ವಿತೀಯಾರ್ಧಕ್ಕೆ ಬಿ.ಎಲ್. ಬಾಬು ಹಾಗೂ ಪಿ.ಎಲ್. ರವಿ ಛಾಯಾಗ್ರಹಣ ಮಾಡಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಅಭಿನಯಿಸಿದ್ದಾರೆ. ಮುಖ್ಯ ಥೀಯೇಟರ್ ಆಗಿ ಕೆಜಿ ರಸ್ತೆಯ 'ಸಂತೋಷ್' ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ನಿರ್ಮಾಪಕಿ ರತ್ನಾ ಚಿಕ್ಕಣ್ಣ ಹಾಗೂ ಚಿತ್ರತಂಡದವರ ಮುಖದಲ್ಲಿ ಮಂದಹಾಸ ಮೂಡಿಸಿದೆ. (ಒನ್ ಇಂಡಿಯಾ ಕನ್ನಡ)

English summary
Today on 03 August 2012, Kannada Movie 18th Cross is releases. Radhika Pandit and 'Shishya' fame Deeepak are in lead role. Shankar directed this movie for Jayanna production. Facing lot of problems, it is releasing now after 7 years. 
Please Wait while comments are loading...