»   » ಕಾರ್ಮಿಕರ ಕರುಳಿನ ಕೂಗಿಗೆ ಕಡೆಗೂ ಒಲಿದ ಜಯ

ಕಾರ್ಮಿಕರ ಕರುಳಿನ ಕೂಗಿಗೆ ಕಡೆಗೂ ಒಲಿದ ಜಯ

By: ಉದಯರವಿ
Subscribe to Filmibeat Kannada

ಕಳೆದ ಕೆಲದಿನಗಳಿಂದ ನಡೆಯುತ್ತಿರುವ ಚಲನಚಿತ್ರ ಕಾರ್ಮಿಕರು ಮತ್ತು ನಿರ್ಮಾಪಕರ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಗೂ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಸಮಸ್ಯೆ ಬಿಗಡಾಯಿಸಿ ಹಲವಾರು ಸಿನಿಮಾಗಳ ಚಿತ್ರೀಕರಣಕ್ಕೆ ಭಾರಿ ಹೊಡೆತಬಿದ್ದಿತ್ತು. ಇದೀಗ ಅವರ ಸಮಸ್ಯೆ ಬಗೆಹರಿದಿದ್ದು ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೊಸ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದ ಕಾರ್ಮಿಕರ ಒಕ್ಕೂಟ ಈಗ ಪಟ್ಟು ಸಡಿಲಿಸಿ ಚಿತ್ರೀಕರಣಕ್ಕೆ ಸಹಕರಿಸುವುದಾಗಿ ಹೇಳಿದೆ. ಈ ಮೂಲಕ ಹಲವು ದಿನಗಳ ಬಿಕ್ಕಟ್ಟಿಗೆ ತೆರೆಬಿದ್ದಿದ್ದು ಸೋಮವಾರದಿಂದ (ಮಾ.2) ಎಂದಿನಂತೆ ಚಿತ್ರೀಕರಣ ನಡೆಯಲಿದೆ.

ಈ ಬಗ್ಗೆ ಭಾನುವಾರ (ಮಾ.1) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಎಂಟು ಮಂದಿಯ ಸಮಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ಅಧ್ಯಕ್ಷತೆಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ವಹಿಸಿಕೊಂಡಿದ್ದು ಶಿವರಾಜ್ ಕುಮಾರ್, ಜಯಣ್ಣ, ರಾಮು, ತುರುವೇಕೆರೆ ಕೃಷ್ಣೇಗೌಡ, ಅಶೋಕ್, ರವೀಂದ್ರನಾಥ್ ಹಾಗೂ ಶಿವರಾಂ ಅವರು ಇದ್ದಾರೆ.

karnataka-film-workers-back-on-sets

ಈ ಸಮಿತಿಯು ವರದಿಯೊಂದನ್ನು ತಯಾರಿಸಿ ಅದರ ಆಧಾರದ ಮೇಲೆ ಕಾರ್ಮಿಕರ ಹೊಸ ವೇತನವನ್ನು ನಿಗದಿಪಡಿಸಲಿದೆ. ಇದಕ್ಕಾಗಿ ಏಪ್ರಿಲ್ 17ರವರೆಗೆ ಕಾಲಾವಕಾಶ ಕೋರಿದ್ದು, ಅಂದು ಸಲ್ಲಿಸುವ ವೇತನ ಪರಿಷ್ಕರಣೆ ವರದಿಯೇ ಅಂತಿಮವಾಗಲಿದೆ. ಇದನ್ನು ನಿರ್ಮಾಪಕರು ಮತ್ತು ಕಾರ್ಮಿಕರ ಸಂಘಗಳು ಅಂಗೀಕರಿಸಲು ಒಪ್ಪಿವೆ.

ಏಪ್ರಿಲ್ 17ರ ತನಕ ಹಳೆಯ ವೇತನದಲ್ಲೇ ಕಾರ್ಮಿಕರು ಕೆಲಸ ಮಾಡಲು ಒಪ್ಪಿದ್ದಾರೆ. ಕಳೆದ ಮೂರು ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ. ಹೊಸ ವೇತನ ಪರಿಷ್ಕರಣೆ ಆಗುವವರೆಗೂ ಶೇ.10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ನಿರ್ಮಾಪಕರ ಸಂಘ ಹೇಳಿಕೊಂಡಿತ್ತು. ಆದರೆ ಒಕ್ಕೂಟ ಅದನ್ನು ಒಪ್ಪದೆ ಹಳೆಯ ವೇತನದಲ್ಲೇ ಕೆಲಸ ಮಾಡಿಕೊಂಡು ಬಂದಿತ್ತು.

ಪ್ರತಿ ಮೂರು ವರ್ಷಗಳಿಗೊಮ್ಮೆ ಹೊಸ ವೇತನ ಪರಿಷ್ಕರಣೆಯಾಗಬೇಕು. ಈ ಬಗ್ಗೆ ಸಮಿತಿಯು ತೀರ್ಮಾನ ಕೈಗೊಳ್ಳಲಿದೆ. ಅದನ್ನು ಇನ್ನು ಮುಂದೆ ಎಲ್ಲರೂ ಪಾಲಿಸಬೇಕು. ಈ ರೀತಿಯ ಗೊಂದಲ, ಸಮಸ್ಯೆಗಳು ಇನ್ನು ಮುಂದೆ ಉದ್ಭವಿಸುವುದಿಲ್ಲ ಎಂದು ರವಿಚಂದ್ರನ್ ಅವರು ಭರವಸೆ ನೀಡಿದ್ದಾರೆ.

ಈ ಸಭೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ಪದಾಧಿಕಾರಿಗಳಾದ ಭಾ.ಮ. ಹರೀಶ್, ಬಿ.ಆರ್. ಕೇಶವ್, ಟೆ.ಶಿ. ವೆಂಕಟೇಶ್ ಸೇರಿದಂತೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಸೂರಪ್ಪಬಾಬು, ಕೆ. ಮಂಜು, ಅಶೋಕ್, ರವೀಂದ್ರನಾಥ್ ನಟರಾದ ವಿಜಯ್ ರಾಘವೇಂದ್ರ, ನಿರ್ಮಾಪಕರಾದ ಜಯಣ್ಣ, ಸಂದೇಶ್ ನಾಗರಾಜ್, ಪ್ರಮೀಳಾ ಜೋಷಾಯ್ ಉಪಸ್ಥಿತರಿದ್ದರು.

English summary
Karnataka Film Workers Federation agreed to work for the old wages for the next one and half month. “The newly formed eight member committe headed by Ravichandran has promised to sort out the issue between the producers and workers by 17th April, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada