»   » ಮಿಸ್ಟರಿಯಾಗಿ ಉಳಿಯಿತೇ ಸೌಂದರ್ಯ ವಿಲ್ ಕಥೆ?

ಮಿಸ್ಟರಿಯಾಗಿ ಉಳಿಯಿತೇ ಸೌಂದರ್ಯ ವಿಲ್ ಕಥೆ?

Posted By:
Subscribe to Filmibeat Kannada

ಬಿಜೆಪಿ ಚುನಾವಣಾ ಪ್ರಚಾರದ ವೇಳೆ ತನ್ನ ಸಹೋದರ ಅಮರ್ ನಾಥ್ ಜೊತೆ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ಬಹುಭಾಷಾ ತಾರೆ ಸೌಂದರ್ಯ ಚಿತ್ರರಸಿಕರನ್ನು ಅಗಲಿ ಒಂಬತ್ತು ವರ್ಷಗಳೇ ಕಳೆದು ಹೋಗಿವೆ. ಹಲವು ವರ್ಷಗಳ ಹಿಂದೆಯೇ ಸೌಂದರ್ಯ ಆಸ್ತಿಗಾಗಿ ಆಕೆಯ ಕುಟುಂಬಸ್ಥರು ಕೋರ್ಟ್ ಮೆಟ್ಟಲೇರಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ಸೌಂದರ್ಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯಿದೆ. ಈ ಆಸ್ತಿಯನ್ನು ಆಕೆಯ ಕುಟುಂಬಸ್ಥರು ಕೂತು ಮಾತುಕತೆ ನಡೆಸಿಕೊಂಡು ಸೌಹಾರ್ದಯುತವಾಗಿ ಬಗೆಹರಿಸಿ ಕೊಳ್ಳುವಲ್ಲಿ ವಿಫಲರಾಗಿದ್ದರಿಂದ ವಿವಾದ ಕೋರ್ಟ್ ಮೆಟ್ಟಲೇರಿತ್ತು.

ಸೌಂದರ್ಯ ಹೆಸರಿನಲ್ಲಿ ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ಒಟ್ಟು ಐದು ಬೆಲೆಬಾಳುವ ನಿವೇಶನಗಳಿವೆ. ಇದಲ್ಲದೇ ನಗದು, ಚಿನ್ನಾಭರಣಗಳು, ಶೇರುಗಳು ಇತ್ಯಾದಿ. ಸೌಂದರ್ಯ ಫೆಬ್ರವರಿ 2003ರಲ್ಲಿ ಬರೆದಿಟ್ಟದ್ದು ಎನ್ನಲಾದ ಉಯಿಲು ಪ್ರಕಾರ ನಿವೇಶನಗಳು ಮತ್ತು ಇತರ ಆಸ್ತಿಗಳನ್ನು ತನ್ನ ಕುಟುಂಬದ ನಾಲ್ಕು ಜನರು ಹಂಚಿಕೊಳ್ಳ ಬೇಕಾಗಿತ್ತು.

ಆದರೆ ವಿಲ್ ಪ್ರಕಾರ ಆಸ್ತಿಗಳನ್ನು ಹಂಚಿಕೊಳ್ಳಲು ಕುಟುಂಬದ ನಾಲ್ಕು ಸದಸ್ಯರು ವಿಫಲವಾಗಿದ್ದರಿಂದ ಆಸ್ತಿ ಹಂಚಿಕೆ 'ವಿವಾದ'ವಾಗಿ ಪರಿಣಮಿಸಿ ನ್ಯಾಯಾಲಯದ ಮೆಟ್ಟಲೇರಿತ್ತು.

ವಿಲ್ ನಲ್ಲಿ ಸೌಂದರ್ಯ ನಮೂದಿಸಿರುವ ನಾಲ್ಕು ಜನರು ಯಾರು?
ಸೌಂದರ್ಯ ತಾಯಿ - ಕೆ ಎಸ್ ಮಂಜುಳಾ
ಸೌಂದರ್ಯ ಪತಿ - ರಘು ಜಿ ಎಸ್
ಸೌಂದರ್ಯ ಸಹೋದರ ಅಮರ್ ನಾಥ್ ಪತ್ನಿ - ನಿರ್ಮಲ ಬಿ
ಸೌಂದರ್ಯ ಸಹೋದರ ಅಮರ್ ನಾಥ್ ಪುತ್ರ - ಸಾತ್ವಿಕ್

ಸೌಂದರ್ಯ ಚಿರಾಸ್ಥಿ ವಿವರ
ಬೆಂಗಳೂರು ಹನುಮಂತ ನಗರದಲ್ಲಿ ನಿವೇಶನ, ಎರಡು ಮನೆ, ಮೂರು ಅಂಗಡಿ
ಬೆಂಗಳೂರು RMV ಎರಡನೇ ಹಂತದಲ್ಲಿರುವ (28X15 ಮೀಟರ್) ನಿವೇಶನ
ಹೈದರಾಬಾದಿನ ಬಂಜಾರ ಹಿಲ್ಸ್ ನಲ್ಲಿರುವ 3770 ಚದರಡಿ ವಾಣಿಜ್ಯ ಸಂಕೀರ್ಣ
ಬೆಂಗಳೂರು HRBR ಬಡಾವಣೆಯಲ್ಲಿರುವ 28X15 ನಿವೇಶನ
ಭವಾನಿ ಹೌಸಿಂಗ್ ಸೊಸೈಟಿಯ ನಿವೇಶನ

ವಿವಾದ ಕೋರ್ಟ್ ಮೆಟ್ಟಲೇರಿ, ನಂತರ ಕುಟುಂಬ ಸದಸ್ಯರ ನಡುವೆ ಒಡಂಬಡಿಕೆ ಏನು? ಫುಲ್ ಡಿಟೈಲ್ಸ್ ಸ್ಲೈಡಿನಲ್ಲಿ....

ಆಪ್ತಮಿತ್ರ ಸೌಂದರ್ಯ

2009ರಲ್ಲಿ ಆಸ್ತಿಗೆ ಸಂಬಂಧ ಪಟ್ಟ ವಿವಾದಗಳು ಆರಂಭವಾದವು. ನಿರ್ಮಲ, ತನ್ನ ಅತ್ತೆ ಮಂಜುಳಾ ಮತ್ತು ಸೌಂದರ್ಯ ಪತಿ ರಘು ವಿಲ್ ಪ್ರಕಾರ ನಡೆದುಕೊಳ್ಳುತ್ತಿಲ್ಲ ಮತ್ತು ವಿಲ್ ವೇಲೇವಾರಿ ವಿಚಾರದಲ್ಲಿ ಕೌಟುಂಬಿಕ ಕಲಹ ನಡೆಯುತ್ತಿದೆ ಎಂದು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ನಿರ್ಮಲ ನೀಡಿದ ದೂರಿಗೆ ವಿರುದ್ದವಾಗಿ ಮಂಜುಳ ಮತ್ತು ರಘು, ಸೌಂದರ್ಯ ಹೆಸರಿನಲ್ಲಿ ನಿರ್ಮಲ ಬರೆದಿಟ್ಟ ಸುಳ್ಳಿನ ಕಂತೆಯೇ ಈ ವಿಲ್ ಎಂದು ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು.

ಸೌಂದರ್ಯ ವಿಲ್

ಇದಕ್ಕೆ ವಿರುದ್ದವಾಗಿ ನಿರ್ಮಲ ತನ್ನ ವಕೀಲ ಧನರಾಜ್ ಮೂಲಕ ಸೌಂದರ್ಯ ತಾಯಿ ಮತ್ತು ಪತ್ನಿಯ ಮೇಲೆ ಅಕ್ಟೋಬರ್ 2012ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿ ಕೊಂಡಿತ್ತು. ಇದಾದ ನಂತರ ಫೆಬ್ರವರಿ 2013ರಲ್ಲಿ ಎರಡೂ ಕಡೆಯವರು ತಮ್ಮೊಳಗಾದ ತಿಳುವಳಿಕೆ ಅಥವಾ ಒಮ್ಮತದ ಒಡಂಬಡಿಕೆ ಪತ್ರವನ್ನು ನಾಲ್ಕನೇ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಿದರು. ಈ ಪತ್ರದಲ್ಲಿ ಸೌಂದರ್ಯ ವಿಲ್ ನಲ್ಲಿ ನಮೂದಿಸಿದ್ದ ನಾಲ್ಕೂ ಜನರ ಸಹಿ ಇದ್ದವು.

ಕೋರ್ಟ್

ಕೋರ್ಟಿಗೆ ಸಲ್ಲಿಸಿದ ತಿಳುವಳಿಕೆ ಪತ್ರದ ಪ್ರಕಾರ ಬೆಂಗಳೂರು ಹನುಮಂತನಗರದಲ್ಲಿರುವ ಆಸ್ತಿ ಮತ್ತು 25 ಲಕ್ಷ ರೂಪಾಯಿ ನಗದು ಸಾತ್ವಿಕ್ ಹೆಸರಿನಲ್ಲಿ ಮತ್ತು ನಿರ್ಮಲಾಗೆ 1.25 ಕೋಟಿ ರೂಪಾಯಿ ನೀಡುವುದೆಂದಿತ್ತು. ಅಮರ್ ನಾಥ್ ಹೆಸರಿನಲ್ಲಿರುವ ನೀರಾವರಿ ಜಮೀನು ಮಂಜುಳ, ನಿರ್ಮಲ ಮತ್ತು ಸಾತ್ವಿಕ್ ಹೆಸರಿನಲ್ಲಿ. ನಿರ್ಮಲ ಜಂಟಿ ಒಡೆತನದಲ್ಲಿರುವ ಆಸ್ತಿ ಮಂಜುಳ ಹೆಸರಿಗೆ ಎನ್ನುವ ಹೊಂದಾಣಿಕೆಗೆ ಕುಟುಂಬ ಸದಸ್ಯರು ಬಂದ ಕೂಡ ಬಗ್ಗೆಯೂ ಬರೆಯಲಾಗಿತ್ತು. ಈ ಆಸ್ತಿ ಹೊಂದಾಣಿಕೆಗೆ ಎರಡೂ ಕಡೆಯವರೂ ಮುಂದಿನ ದಿನಗಳಲ್ಲಿ ಯಾವುದೇ ತಕರಾರು ಎತ್ತುವುದಿಲ್ಲ ಎನ್ನುವ ಒಮ್ಮತಕ್ಕೆ ಬಂದ ಬಗ್ಗೆ ಕೂಡಾ ಬರಲಾಗಿತ್ತು.

ದೂರು ಹಿಂದಕ್ಕೆ

ಇದಕ್ಕೆ ಪೂರಕ ಎನ್ನುವಂತೆ ಈಗ ಹತ್ತು ದಿನಗಳ ಕೆಳಗೆ ನಿರ್ಮಲ ತಾನು ಕೋರ್ಟಿಗೆ ಸಲ್ಲಿಸಿದ್ದ ದೂರನ್ನು ಬೇಷರತ್ತಾಗಿ ಹಿಂಪಡೆದಿದ್ದರು. ಆಸ್ತಿ ವಿಚಾರದಲ್ಲಿ ಕೌಟುಂಬಿಕ ಕಲಹದ ದೂರನ್ನು ನಿರ್ಮಲ ಹಿಂದಕ್ಕೆ ಪಡೆದಿದ್ದರು. ಆದರೆ ಮಂಜುಳ ಮತ್ತು ರಘು ವಿರುದ್ದ ನಿರ್ಮಲ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮಾತ್ರ ಹಿಂದಕ್ಕೆ ಪಡೆದಿರಲಿಲ್ಲ.

ಮಿಸ್ಟರಿ

ಇಡೀ ಆಸ್ತಿ ಹಂಚಿಕೆ ವಿವಾದದಲ್ಲಿ ಮಿಸ್ಟರಿಯಾಗಿಯೇ ಉಳಿದಿರುವುದೇನಂದರೆ ಸೌಂದರ್ಯ ವಿಲ್ ನಲ್ಲಿ ಬರೆದ ಐದು ನಿವೇಶನಗಳ ಪೈಕಿ ಹನುಮಂತನಗರದ ಆಸ್ತಿಯೊಂದರ ಬಗ್ಗೆ ಒಡಂಬಡಿಕೆ ಪತ್ರದಲ್ಲಿ ಮಾತ್ರ ಹೇಳಲಾಗಿದೆ. ಉಳಿದ ಚಿರಾಸ್ಥಿ ಮತ್ತು ಇತರ ಆಸ್ತಿಯ ಬಗ್ಗೆ ಏನೂ ಹೇಳದಿರುವುದು. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಸೌಂದರ್ಯ ಆಸ್ತಿ ವಿಚಾರದಲ್ಲಿ ಆಕೆಯ ಕುಟುಂಬದ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬರಲಿ ಎನ್ನುವುದು ಎಲ್ಲರ ಆಶಯ.

English summary
Late actress Soundarya's property sharing will issue still mystery.
Please Wait while comments are loading...