ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿದೆ. 72ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಾಧಕರಿಗೆ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.
ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಕಟ ಮಾಡಲಾಗಿದೆ. ಎಸ್‌ಪಿಬಿಗೆ ಕೇಂದ್ರ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಜೊತೆಗೆ ಜಪಾನ್ ದೇಶ ಮಾಜಿ ಪ್ರಧಾನಿ ಶಿಂಜೋ ಅಬೆ, ಡಾ.ಬೆಳ್ಳೆ ಮೋನಪ್ಪ ಹೆಗ್ಡೆ (ವೈದ್ಯಕೀಯ) ಮರಳು ಶಿಲ್ಪಿ ಸುದರ್ಶನ್ ಸಾಹೋ, ವಾಸ್ತುಶಿಲ್ಪಿ ಬಿಬಿ ಲಾಲ್, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನರೀಂದರ್ ಸಿಂಗ್ ಕಪನಿ (ಮರಣೋತ್ತರ), ಆಧಾತ್ಮ ಕ್ಷೇತ್ರದಲ್ಲಿ ಮೌಲಾನಾ ವಹಿದುದ್ದೀನ್ ಖಾನ್ ಅವರಿಗೂ ಪದ್ಮವಿಭೂಷಣ ನೀಡಲಾಗುತ್ತಿದೆ.

ವಿವಿಧ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು
ಪದ್ಮವಿಭೂಷಣ: ಡಾ. ಬಿ. ಎಂ ಹೆಗ್ಡೆ (ವೈದ್ಯಕೀಯ)
ಪದ್ಮ ಭೂಷಣ: ಡಾ. ಚಂದ್ರಶೇಖರ ಕಂಬಾರ (ಸಾಹಿತ್ಯ ಮತ್ತು ಶಿಕ್ಷಣ)
ಪದ್ಮಶ್ರೀ: ಮಾತಾ ಬಿ ಮಂಜಮ್ಮ ಜೋಗತಿ (ಕಲೆ)
ಪದ್ಮಶ್ರೀ: ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ)
ಪದ್ಮಶ್ರೀ: ಕೆವೈ ವೆಂಕಟೇಶ್ (ಕ್ರೀಡೆ)
ಅಂದ್ಹಾಗೆ, ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಸುಮಾರು 50 ವರ್ಷಗಳ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅತ್ಯುತ್ತಮ ಗಾಯನಕ್ಕಾಗಿ ಆರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಹಾಗೂ ಪದ್ಮ ಭೂಷಣ ಗೌರವಕ್ಕೆ ಸಹ ಪಾತ್ರರಾಗಿದ್ದರು.
ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು 2020 ಸೆಪ್ಟೆಂಬರ್ 25 ರಂದು ಚೆನ್ನೈ ಎಂಜಿಎಂ ಹೆಲ್ತ್ ಕೇರ್‌ನಲ್ಲಿ ನಿಧನರಾದರು. ಕೊರೊನಾ ವೈರಸ್ ತಗುಲಿದ ಕಾರಣ ಆಸ್ಪತ್ರೆಗೆ ದಾಖಲಾದ ಎಸ್‌ಪಿಬಿ ಸುಮಾರು 50 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಂತಿಮವಾಗಿ ಗುಣಮುಖರಾಗದೇ ವಿಧಿವಶರಾದರು.


Click it and Unblock the Notifications











