For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅನುಭವಿಸಿದ ಕಷ್ಟಗಳ ಬಗ್ಗೆ ದರ್ಶನ್ ಗುರುಗಳ ಮಾತು

  |

  ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಗೆ ನಟನೆಯ ರಕ್ತದಲ್ಲಿಯೇ ಬಂದ ಬಳುವಳಿ. ಆದರೆ ಹಾಗೆ ಹುಟ್ಟುತ್ತಲೇ ಬಂದ ನಟನೆಯನ್ನು ತಿದ್ದಿ-ತೀಡಿ ಎಳವೆಯಲ್ಲೇ ದರ್ಶನ್ ರ ಪ್ರತಿಭೆ ಗುರುತಿಸಿದ್ದು ನಟ ಮಂಡ್ಯ ರಮೇಶ್.

  Darshan ಕಷ್ಟದ ದಿನಗಳ ಬಗ್ಗೆ ಹೇಳಿದ Mandya Ramesh | Filmibeat Kannada

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಸ್ವತಃ ದರ್ಶನ್ 'ಮಂಡ್ಯ ರಮೇಶ್ ನನಗೆ ಬಣ್ಣ ಹಚ್ಚಿದ ಗುರುಗಳು' ಎಂದು ಹೇಳಿಕೊಂಡಿದ್ದರು. ಇಂದು ತನ್ನ ಪ್ರೀತಿಯ ಶಿಷ್ಯನ ಪ್ರಗತಿ ನೋಡಿ ಬಹು ಹೆಮ್ಮೆಪಡುತ್ತಿದ್ದಾರೆ ನಟ ಮಂಡ್ಯ ರಮೇಶ್.

  ದರ್ಶನ್ ತಂದೆ ಹೆಸರಿನಲ್ಲಿ 'ದೊನ್ನೆ ಬಿರಿಯಾನಿ' ಹೋಟೆಲ್ ತೆರೆದ ಅಭಿಮಾನಿ

  ಖಾಸಗಿ ವಾಹಿನಿಯೊಂದರ ಜೊತೆ ದರ್ಶನ್ ಬಗ್ಗೆ ಮಾತನಾಡಿರುವ, ಮಂಡ್ಯ ರಮೇಶ್, ದರ್ಶನ್ ಕುರಿತು ಕೆಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ದರ್ಶನ್ ಬಣ್ಣ ಹಚ್ಚಿದ್ದಕ್ಕೆ ತಂದೆ ತೂಗದೀಪ ಶ್ರೀನಿವಾಸರ ಪ್ರತಿಕ್ರಿಯೆ, ದರ್ಶನ್ ಅನುಭವಿಸಿದ ಕಷ್ಟಗಳು, ದರ್ಶನ್‌ಗಿದ್ದ ಆಸಕ್ತಿ, ಹಂಬಲ, ಛಲ ಎಲ್ಲದರ ಬಗ್ಗೆ ಮಾತನಾಡಿದ್ದಾರೆ ಮಂಡ್ಯ ರಮೇಶ್.

  'ಮಂಡ್ಯ ರಮೇಶ್ ಪೊನ್ನಂಪೇಟೆಯಲ್ಲಿ ನಾಟಕ ಶಿಬಿರದಲ್ಲಿ 'ರಾಬಿನ್ ಗುಡ್ ಫೆಲೊ' ಮತ್ತು 'ಸಂಕ್ರಾಂತಿ' ನಾಟಕ ಮಾಡಿಸುತ್ತಿದ್ದಾಗ, ಶ್ರೀನಿವಾಸ ನಾಯ್ಡು ಎಂಬಾತ ದರ್ಶನ್ ಹಾಗೂ ದಿನಕರ್ ಅನ್ನು ಶಿಬಿರಕ್ಕೆ ಕರೆತಂದು, ನಾಟಕಕ್ಕೆ ಸೇರಿಸಿಕೊಳ್ಳಿ ಎಂದಿದ್ದರಂತೆ. ದರ್ಶನ್‌ ಆಗ ಎಂಟನೇ ತರಗಿ, ದಿನಕರ್‌ಗೆ ಆರನೇ ತರಗತಿ. ಆಗಲೇ ಎತ್ತರವಿದ್ದ ದರ್ಶನ್‌ಗೆ 'ರಾಬಿನ್‌ಹುಡ್ ಗುಡ್‌ ಫೆಲೊ' ನಾಟಕದಲ್ಲಿ ನಾಯಕನ ಪಾತ್ರವನ್ನು ಕೊಟ್ಟಿದ್ದರಂತೆ. ದರ್ಶನ್ ಹಾಗೂ ದಿನಕರ್ ಇಬ್ಬರು ಬಹಳ ಮುದ್ದಾಗಿ ಹಾಗೂ ಮುಗ್ಧವಾಗಿದ್ದರು' ಎಂದು ನೆನಪುಮಾಡಿಕೊಂಡಿದ್ದಾರೆ ಮಂಡ್ಯ ರಮೇಶ್.

  ಬೈದುಬಿಟ್ಟಿದ್ದರಂತೆ ತೂಗುದೀಪ್ ಶ್ರೀನಿವಾಸ್

  ಬೈದುಬಿಟ್ಟಿದ್ದರಂತೆ ತೂಗುದೀಪ್ ಶ್ರೀನಿವಾಸ್

  ದರ್ಶನ್ ಹಾಗೂ ದಿನಕರ್ ನಾಟಕ ಮಾಡುವಾಗ ಅಲ್ಲಿಗೆ ಬಂದಿದ್ದ ಶ್ರೀನಿವಾಸ್ ತೂಗುದೀಪ್, ಮಂಡ್ಯ ರಮೇಶ್ ಮೇಲೆ ರೇಗಿಬಿಟ್ಟಿದ್ದರಂತೆ, 'ಇವರಿಗೆ ಏಕೆ ಬಣ್ಣ ಹಚ್ಚಿಸಿದೆ. ನಾವು ನಟರಾಗಿ ಅನುಭವಿಸುತ್ತಿರುವುದು ಸಾಲದೆ' ಎಂದೆಲ್ಲಾ ಪ್ರಶ್ನೆ ಮಾಡಿ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಹೋಗಿಬಿಟ್ಟರಂತೆ. ಆದರೆ ದರ್ಶನ್ ತಾಯಿ ಮೀನಾ ತೂಗುದೀಪ್, ಇಬ್ಬರೂ ಮಕ್ಕಳನ್ನು ಮತ್ತೆ ಶಿಬಿರಕ್ಕೆ ಸೇರಿಸಿ, ಅವರು ನಟನೆ ಕಲಿಯುವಂತೆ ಮಾಡಿದರಂತೆ. ದರ್ಶನ್ ಹಾಗೂ ದಿನಕರ್ ಇಬ್ಬರೂ ಅವರ ತಾಯಿಗೆ ಋಣವಾಗಿರಬೇಕು ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದಾರೆ ಮಂಡ್ಯ ರಮೇಶ್.

  ನೀನಾಸಂ ನಲ್ಲಿರುವಾಗ ದರ್ಶನ್ ತಂದೆ ತೀರಿಕೊಂಡರು

  ನೀನಾಸಂ ನಲ್ಲಿರುವಾಗ ದರ್ಶನ್ ತಂದೆ ತೀರಿಕೊಂಡರು

  ಆ ನಂತರ ಕೆಲ ವರ್ಷಗಳ ಬಳಿಕ, ದರ್ಶನ್, ನೀನಾಸಂ ಗೆ ಸೇರುವಾಗ ಮಂಡ್ಯ ರಮೇಶ್ ಅರ್ಜಿಗೆ ಸಹಿ ಹಾಕಿ ಹರಸಿದ್ದನ್ನು ನೆನಪಿಸಿಕೊಂಡ ಮಂಡ್ಯ ರಮೇಶ್, ನೀನಾಸಂ ನಲ್ಲಿ ಇರುವಾಗಲೇ ತೂಗುದೀಪ ಶ್ರೀನಿವಾಸ್ ತೀರಿಕೊಂಡರು. ಆನಂತರ ದರ್ಶನ್ ಹಲವಾರು ಕಷ್ಟಗಳನ್ನು ಎದುರಿಸಿದರು. ಆದರೆ ಎಲ್ಲವನ್ನೂ ಮೆಟ್ಟಿನಿಂತು, ಶ್ರಮ, ಛಲದಿಂದ ಮೇಲೆದ್ದು ಬಂದರು ಎಂದು ಹೊಗಳಿದ್ದಾರೆ.

  ಜನುಮದ ಜೋಡಿ ಸಿನಿಮಾದಲ್ಲಿ ಲೈಟ್ ಬಾಯ್

  ಜನುಮದ ಜೋಡಿ ಸಿನಿಮಾದಲ್ಲಿ ಲೈಟ್ ಬಾಯ್

  'ಜನುಮದ ಜೋಡಿ ಸಿನಿಮಾಕ್ಕೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದರು ದರ್ಶನ್, ಅದು ನನ್ನ ಮೊದಲ ಸಿನಿಮಾವೂ ಹೌದು. ಆ ನಂತರ ನನ್ನ ಮೂರನೇ ಸಿನಿಮಾ 'ಮಹಾಭಾರತ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದರು. ಎಸ್ ನಾರಾಯಣ್ ನಿರ್ದೇಶನದ ಆ ಸಿನಿಮಾದಲ್ಲಿ ದರ್ಶನ್, ವಿಲನ್‌ಗಳ ಗುಂಪಿನಲ್ಲಿ ಒಬ್ಬ ವ್ಯಕ್ತಿಯ ಪಾತ್ರ. ಫೈಟ್ ದೃಶ್ಯವೊಂದರಲ್ಲಿ ದರ್ಶನ್ ಕೈಗೆ ಬಲವಾದ ಪೆಟ್ಟು ಬಿದ್ದು, ರಕ್ತ ಬರುತ್ತಿತ್ತು, ಆದರೆ ಅದಾವುದನ್ನೂ ತೋರ್ಗೊಡದೆ, ಸಿನಿಮಾ ಚಿತ್ರೀಕರಣದಲ್ಲಿ ದರ್ಶನ್ ಭಾಗವಹಿಸಿದ್ದರು' ಎಂದು ದರ್ಶನ್‌ಗಿದ್ದ ಕಮಿಂಟ್‌ಮೆಂಟ್ ಬಗ್ಗೆ ಉದಾಹರಣೆ ನೀಡಿದ್ದಾರೆ ಮಂಡ್ಯ ರಮೇಶ್.

  ದರ್ಶನ್‌ಗೆ 160 ರೂಪಾಯಿ ಕೊಟ್ಟಿದ್ದೆ: ಮಂಡ್ಯ ರಮೇಶ್

  ದರ್ಶನ್‌ಗೆ 160 ರೂಪಾಯಿ ಕೊಟ್ಟಿದ್ದೆ: ಮಂಡ್ಯ ರಮೇಶ್

  'ಕೈಗೆ ಏಟು ಬಿದ್ದಿದ್ದಾಗ ಬಹಳ ರಕ್ತ ಸುರಿದಿತ್ತು, ರಾತ್ರಿಯೆಲ್ಲಾ ಜ್ವರದಿಂದ ಒದ್ದಾಡಿದ್ದ, ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ಸಹ ಕಷ್ಟವಿದ್ದ ದಿನಗಳು ಅವು. ಆಗ ನಾನು 160 ರೂ ಹಣ ಕೊಟ್ಟಿದ್ದೆ. ನಾನು ದರ್ಶನ್ ಬಹಳ ಆತ್ಮೀಯರಾಗಿದ್ದೆವು. ಹೋಟೆಲ್ ಹೈಲೆಂಡ್ಸ್‌ನಲ್ಲಿ ಸತತ ಒಂದು ತಿಂಗಳ ಕಾಲ ಇಬ್ಬರೂ ಒಟ್ಟಿಗೆ ಇದ್ದೆವು. ಆ ಸಮಯದಲ್ಲಿ ಬಹಳ ಕಷ್ಟಪಟ್ಟಿದ್ದ ದರ್ಶನ್, ಎಸ್‌.ನಾರಾಯಣ್ ನಿರ್ದೇಶನದ ಧಾರಾವಾಹಿಯಲ್ಲಿ ನಟಿಸಿದ. ತಮಿಳಿನ ಒಂದು ಸಿನಿಮಾದಲ್ಲಿ ನಟಿಸಿದ, ಅವಕಾಶಗಳನ್ನು ಕೇಳಿಕೊಂಡು ಹಲವೆಡೆ ಹೋಗುತ್ತಿದ್ದ. ಆದರೆ ಕೊನೆಗೆ ಒಂದು ದಿನ ಮೆಜೆಸ್ಟಿಕ್ ಸಿನಿಮಾ ಘೋಷಣೆ ಆಯಿತು. ಆ ನಂತರ ದರ್ಶನ್ ಬೆಳೆದ ರೀತಿ ಅತ್ಯದ್ಭುತ' ಎಂದಿದ್ದಾರೆ ಮಂಡ್ಯ ರಮೇಶ್.

  ಮಂಡ್ಯ ರಮೇಶ್ ನನ್ನ ಗುರುಗಳು ಎಂದಿದ್ದ ದರ್ಶನ್

  ಮಂಡ್ಯ ರಮೇಶ್ ನನ್ನ ಗುರುಗಳು ಎಂದಿದ್ದ ದರ್ಶನ್

  'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ಸ್ವತಃ ದರ್ಶನ್, 'ಮಂಡ್ಯ ರಮೇಶ್ ನನ್ನ ಗುರುಗಳು' ಎಂದು ಹೇಳಿದಾಗ ನಿಜಕ್ಕೂ ನನಗೆ ಆಶ್ಚರ್ಯ, ಸಂತೋಷ, ಮುಜುಗರ ಎಲ್ಲವೂ ಆಯಿತು. ಎಷ್ಟು ದೊಡ್ಡ ಸ್ಟಾರ್ ಆದರು ಎಲ್ಲವನ್ನೂ ನೆನಪಿಟ್ಟಿಕೊಂಡಿದ್ದಾನಲ್ಲ ಎಂದು. ದರ್ಶನ್ ಇಂದು ರಾಜ್ಯದ ಅತ್ಯಂತ ಬ್ಯುಸಿಯಾಗಿರುವ ಅತಿ ಹೆಚ್ಚು ಸಂಭಾವನೆ ಪಡೆವ ನಟ, ಆತನ ಬೆಳವಣಿಗೆ ಹಿಂದೆ ಶ್ರಮ, ಶ್ರದ್ಧೆ, ತ್ಯಾಗ ಎಲ್ಲವೂ ಇದೆ ಎಂದಿದ್ದಾರೆ ಮಂಡ್ಯ ರಮೇಶ್.

  English summary
  Mandya Ramesh talks about Darshan's life journey and his struggles. Mandya Ramesh is the first acting teacher of Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X