twitter
    For Quick Alerts
    ALLOW NOTIFICATIONS  
    For Daily Alerts

    ಕೋವಿಡ್ ಹೊಡೆತಕ್ಕೆ ಮಂಗಳೂರಿನ ಜ್ಯೋತಿ ಚಿತ್ರಮಂದಿರ ಧರೆಗೆ

    By ಮಂಗಳೂರು ಪ್ರತಿನಿಧಿ
    |

    ಕೋವಿಡ್ ಲಾಕ್‌ಡೌನ್ ಹೊಡೆತಕ್ಕೆ ರಾಜ್ಯದ ಮತ್ತೊಂದು ಚಿತ್ರಮಂದಿರ ಕಾರ್ಯ ಸ್ಥಗಿತಗೊಳಿಸಿದೆ. ಕೋಸ್ಟಲ್‌ವುಡ್‌ನ 'ತುಳು ಸಿನಿಮಾ' ಎಂದ ತಕ್ಷಣ ನೆನಪಾಗುತ್ತಿದ್ದ ಮಂಗಳೂರಿನ 'ಜ್ಯೋತಿ' ಚಿತ್ರಮಂದಿರ ಇತಿಹಾಸದ ಪುಟ ಸೇರಿದೆ. ತುಳು ಚಿತ್ರಗಳ ತವರು ಮನೆಯಾಗಿದ್ದ ಜ್ಯೋತಿ ಚಿತ್ರಮಂದಿರವನ್ನು ನಷ್ಟದ ಕಾರಣದಿಂದ ಒಡೆದು ಹಾಕಲಾಗುತ್ತಿದ್ದು, ಸಿಂಗಲ್ ಥಿಯೇಟರ್‌ನ ಈ ಚಿತ್ರ ಮಂದಿರ ನೆನಪಿನಂಗಳದಲ್ಲಿ ಜಾರಿಹೋಗುತ್ತಿರೋದು ತುಳು ಚಿತ್ರರಂಗಕ್ಕೆ ದೊಡ್ಡ ಹೊಡೆತ ನೀಡಿದೆ.

    ಕಳೆದ 50 ವರ್ಷಗಳಿಂದ ಮಂಗಳೂರಿನ ಸಿನಿರಸಿಕರ‌ ಶುಕ್ರವಾರದ ಭೇಟಿಯ ಸ್ಥಳವಾಗಿದ್ದ, ನಾನಾ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸಿದ್ದ 'ಜ್ಯೋತಿ' ಚಿತ್ರಮಂದಿರ ಬಾಗಿಲು ಮುಚ್ಚಿದೆ. ಕೋಸ್ಟಲ್‌ವುಡ್‌ ಸಿನಿಮಾಗಳ ಹೆಬ್ಬಾಗಿಲಾಗಿದ್ದ ಜ್ಯೋತಿ ಚಿತ್ರಮಂದಿರದ ಬೆಳಕು ನಿಂತಿದೆ. ಕೋಸ್ಟಲ್‌ವುಡ್‌ನಲ್ಲಿ ಈವರೆಗೆ ಬಿಡುಗಡೆಯಾದ 120 ಚಿತ್ರಗಳಲ್ಲಿ ಶೇ 80ರಷ್ಟು ಚಿತ್ರಗಳು ಜ್ಯೋತಿ ಚಿತ್ರಮಂದಿರದಲ್ಲೇ ಬೆಳ್ಳಿಪರದೆ ಏರಿವೆ. ಆದರೆ, 2020ರ ಮಾರ್ಚ್‌ ತಿಂಗಳಿಂದ ಇಲ್ಲಿ ಯಾವುದೇ ಸಿನಿಮಾ ಪ್ರದರ್ಶನ ಕಂಡಿಲ್ಲ. ಬೇರೆ ಬೇರೆ ಚಿತ್ರಮಂದಿರಗಳಲ್ಲಿ ತುಳು ಸಿನಿಮಾಗಳು ಬಿಡುಗಡೆಯಾದರೂ ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಕೊರೊನಾದ ಹೊಡೆತದಿಂದ ಜ್ಯೋತಿ ಚಿತ್ರ ಮಂದಿರ ಶಾಶ್ವತವಾಗಿ ಬಾಗಿಲು ಹಾಕಿವೆ.

    ಮಂಗಳೂರಿನ ಪ್ರಮುಖ ಸರ್ಕಲ್​​ಗಳಲ್ಲಿ ಜ್ಯೋತಿ ಸರ್ಕಲ್ ಸಹ ಒಂದು. ಈ ಸರ್ಕಲ್​​ಗೆ ಜ್ಯೋತಿ ಎಂಬ ಹೆಸರು ಬರಲು ಕಾರಣವಾಗಿದ್ದೇ ಈ ಚಿತ್ರಮಂದಿರದಿಂದಾಗಿದೆ. ಈ ಕಾರಣದಿಂದಲೇ ಸರ್ಕಾರಿ‌ ದಾಖಲೆಗಳಲ್ಲಿ ಇರುವ ಡಾ.ಬಿ.ಆರ್​​. ಅಂಬೇಡ್ಕರ್ ವೃತ್ತವು ಜ್ಯೋತಿ ಸರ್ಕಲ್ ಅಂತಲೇ ಪ್ರಸಿದ್ಧವಾಗಿದೆ. ಇನ್ಮುಂದೆ ಈ ಜ್ಯೋತಿ ಚಿತ್ರಮಂದಿರ ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯಲಿದೆ.

    ಜ್ಯೋತಿ ಚಿತ್ರಮಂದಿರ ಕಳೆದ ಐದು ದಶಕಗಳಿಂದ ಚಿತ್ರ ಪ್ರೇಮಿಗಳಿಗೆ ನೆಚ್ಚಿನ ಟಾಕೀಸ್ ಆಗಿತ್ತು. ಕನ್ನಡ, ತುಳು ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ತುಳು ಸಿನಿಮಾ ಪ್ರದರ್ಶನಕ್ಕಂತೂ ಈ ಚಿತ್ರ ‌ಮಂದಿರವನ್ನೆ ಚಿತ್ರತಂಡ ಆಯ್ಕೆ ಮಾಡುತ್ತಿತ್ತು. ಆದರೆ ಕೊರೊನಾ ಆರಂಭದ ಬಳಿಕ ಈ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನವನ್ನು ನಿಲ್ಲಿಸಲಾಗಿತ್ತು. ಈ ಸಿನಿಮಾಮಂದಿರವನ್ನು ಕೆಡವಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ಹಲವು ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. ಮುಂಬೈನ ಬಿಲ್ಡರ್​​ರೊಬ್ಬರ ಸಹಭಾಗಿತ್ವದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಚಿತ್ರಮಂದಿರದ ಕಟ್ಟಡವನ್ನು ಕೆಡವಲಾಗುತ್ತಿದೆ. ಕಳೆದ ಐದು ದಶಕಗಳಿಂದ ಚಿತ್ರಪ್ರೇಮಿಗಳ ನೆಚ್ಚಿನ ತಾಣವಾಗಿದ್ದ ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರವಾಗಿದೆ.

    ಈಗ 10-12 ಚಿತ್ರಮಂದಿರಗಳಷ್ಟೆ ಇವೆ

    ಈಗ 10-12 ಚಿತ್ರಮಂದಿರಗಳಷ್ಟೆ ಇವೆ

    ದಶಕದ ಹಿಂದೆ ಕರಾವಳಿಯಲ್ಲಿ 30ಕ್ಕೂ ಅಧಿಕ ಒಂಟಿ ಪರದೆಯ ಚಿತ್ರಮಂದಿರಗಳು ತುಳು ಸಿನಿಮಾಕ್ಕೆ ಸಿಗುತ್ತಿದ್ದವು. ಪ್ರಸ್ತುತ 10ರಿಂದ 12 ಚಿತ್ರಮಂದಿರಗಳು ಮಾತ್ರ ಸಿಗುತ್ತಿವೆ. ಏಕ ಪರದೆಯ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಮಲ್ಟಿಫ್ಲೆಕ್ಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ.

    ರಮಾಕಾಂತಿ ಮತ್ತು ರೂಪವಾಣಿ ಟಾಕೀಸ್‌ಗಳಿವೆ

    ರಮಾಕಾಂತಿ ಮತ್ತು ರೂಪವಾಣಿ ಟಾಕೀಸ್‌ಗಳಿವೆ

    ಮಂಗಳೂರು ನಗರದಲ್ಲಿರುವ ರಮಾಕಾಂತಿ ಮತ್ತು ರೂಪವಾಣಿ ಟಾಕೀಸ್‌ಗಳು ತುಳು ಸಿನಿಮಾಗಳಿಗೆ ಸಿಗುತ್ತದೆಯಾದರೂ ಅಲ್ಲಿಗೆ ಬರಲು ಪ್ರೇಕ್ಷಕರು ಹಿಂದೇಟು ಹಾಕುತ್ತಾರೆ. ಆದರೆ, ತುಳು ಸಿನಿಮಾಗಳನ್ನು ಅಲ್ಲಿಯೇ ಬಿಡುಗಡೆ ಮಾಡದೆ ಅನ್ಯ ದಾರಿಯಿಲ್ಲ. ಹವಾನಿಯಂತ್ರಿತವಾಗಿ ನವೀಕರಣಗೊಂಡ ನಗರದ ಸುಚಿತ್ರ ಮತ್ತು ಪ್ರಭಾತ್‌ ಚಿತ್ರಮಂದಿರಗಳು ಹಲವು ತುಳು ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗಿದ್ದವು. ಆದರೆ, ಈ ಚಿತ್ರಮಂದಿರಗಳು ಪ್ರಸ್ತುತ ತುಳು ಚಿತ್ರಗಳಿಂದ ಅಂತರ ಕಾಯ್ದುಕೊಂಡಿವೆ.

    ಕೆಲ ಚಿತ್ರಮಂದಿರಗಳಷ್ಟೆ ಉಳಿದಿವೆ

    ಕೆಲ ಚಿತ್ರಮಂದಿರಗಳಷ್ಟೆ ಉಳಿದಿವೆ

    ಹೀಗಾಗಿ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಿರುವ ಸುರತ್ಕಲ್‌, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಿ.ಸಿ.ರೋಡ್‌, ಮೂಡುಬಿದಿರೆ, ಕಾರ್ಕಳ, ಉಡುಪಿ, ಕಾಸರಗೋಡು ಟಾಕೀಸ್‌ಗಳಲ್ಲಿ ಮಾತ್ರ ತುಳು ಚಿತ್ರಗಳಿಗೆ ಅವಕಾಶವಿದೆ. ಮಲ್ಟಿಫ್ಲೆಕ್ಸ್‌ಗಳಾಗಿರುವ ಹೊಂದಿರುವ ಮಂಗಳೂರಿನ ಬಿಗ್‌ ಸಿನಿಮಾಸ್‌, ಪಿವಿಆರ್‌, ಸಿನೆಪೊಲಿಸ್‌, ಮಣಿಪಾಲದ ಐನಾಕ್ಸ್‌, ಕುಂದಾಪುರ ಮತ್ತು ಮಣಿಪಾಲದ ಬಿಗ್ ಸಿನಿಮಾಸ್‌ನಲ್ಲಿ ತುಳು ಚಿತ್ರಕ್ಕೆ ಜಾಗವಿದೆ.

    20 ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಹಾಕಿವೆ

    20 ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಹಾಕಿವೆ

    ಕಡಬದ ಜಾನ್ಸನ್‌, ಉಪ್ಪಿನಂಗಡಿಯ ಪ್ರೀತಂ, ಪುತ್ತೂರಿನ ನವರಂಗ್‌, ಸಂಗೀತಾ, ಮಯೂರ, ಬೆಳ್ಳಾರೆಯ ಜುಪೀಟರ್‌, ಸುಳ್ಯದ ಪ್ರಕಾಶ್‌, ವಿಟ್ಲದ ಕವಿತಾ ಟಾಕೀಸ್‌ಗಳು ಮುಚ್ಚಿವೆ. ಅಲ್ಲದೆ, ಉಜಿರೆಯ ಸಂಧ್ಯಾ, ಬಂಟ್ವಾಳದ ವಿನಾಯಕ, ವಿಜಯಲಕ್ಷ್ಮಿ, ಕಲ್ಲಡ್ಕದ ಮಾರುತಿ, ಮೂಡುಬಿದಿರೆಯ ವಿಜಯ, ಕೈಕಂಬದ ಮಂಜುನಾಥ, ಕಾರ್ಕಳದ ಸನ್ಮಾನ, ಕಿನ್ನಿಗೋಳಿಯ ಅಶೋಕ, ಮೂಲ್ಕಿಯ ಭವಾನಿಶಂಕರ್‌, ಸುರತ್ಕಲ್‌ನ ನವರಂಗ್‌, ಪಡುಬಿದ್ರಿಯ ಗುರುದೇವ, ಕಾಪುವಿನ ವೆಂಕಟೇಶ್‌, ಬ್ರಹ್ಮಾವರದ ಜಯಭಾರತ್, ಸಾಸ್ತಾನದ ನಂದಾ, ತೊಕ್ಕೊಟ್ಟುನಲ್ಲಿ ಶ್ರೀಕೃಷ್ಣ, ಉಳ್ಳಾಲದ ಶಾಂತಿ, ಉಡುಪಿಯ ಗೀತಾಂಜಲಿ, ಕುಂದಾಪುರದ ಪೂರ್ಣಿಮಾ ಹೀಗೆ 20ಕ್ಕೂ ಅಧಿಕ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಕೆಲ ತುಳು ಚಿತ್ರಗಳ ಬಿಡುಗಡೆಗೆ ವೇದಿಕೆಯಾಗಿದ್ದ ಮಂಗಳೂರಿನ ಸೆಂಟ್ರಲ್‌ ಚಿತ್ರಮಂದಿರ ಬಾಗಿಲುಮುಚ್ಚಿ ಹಲವು ವರ್ಷಗಳೇ ಕಳೆದಿದೆ. ಅಲ್ಲದೆ, ನಗರದಲ್ಲಿದ್ದ ಅಮೃತ್‌, ಪ್ಲಾಟಿನಂ, ನ್ಯೂಚಿತ್ರ ಟಾಕೀಸ್‌ಗಳೂ ಮರೆಯಾಗಿವೆ.

    ರೂಪೇಶ್ ಶೆಟ್ಟಿ ಬೇಸರ

    ರೂಪೇಶ್ ಶೆಟ್ಟಿ ಬೇಸರ

    ಸಾವಿರಾರು ತುಳು ಚಿತ್ರರಂಗದ ಕಲಾವಿದರಿಗೆ ಆಶ್ರಯವಾಗಿದ್ದ ಜ್ಯೋತಿ ಚಿತ್ರಮಂದಿರ ಶಾಶ್ವತ ವಾಗಿ ಕಣ್ಮರೆಯಾಗಿರೋದಕ್ಕೆ ತುಳು ಸಿನಿಮಾ ನಟರು ಬೇಸರ ವ್ಯಕ್ತಪಡಿಸಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟ ರೂಪೇಶ್ ಶೆಟ್ಟಿ, "ತುಂಬಾ ನೋವಿನ ವಿಷಯ. ತುಳು ಸಿನಿಮಾಗಳಿಗೆ ಬಹುದೊಡ್ಡ ಆಸರೆಯಾಗಿದ್ದ ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರ.ಗಿರಿಗಿಟ್ ಚಿತ್ರ ಬಿಡುಗಡೆಯಾದಾಗ ಅಲ್ಲಿ ತುಂಬಿದ್ದ ಜನಸಾಗರ,ಆ ದಿನಗಳ ನೆನಪು ಎಂದಿಗೂ ಜೀವಂತ" ಅಂತಾ ಬರೆದುಕೊಂಡಿದ್ದಾರೆ.

    English summary
    Mangaluru's famous Jyothi theater vandalized due to losses. Land owner planing to build a multiplex in partnership with a Mumbai based businessman.
    Wednesday, February 2, 2022, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X