»   » ನಟಸಾರ್ವಭೌಮ ರಾಜ್ ಬಗ್ಗೆ ರಜನಿ ಹೀಗಂದಿದ್ಯಾಕೆ?

ನಟಸಾರ್ವಭೌಮ ರಾಜ್ ಬಗ್ಗೆ ರಜನಿ ಹೀಗಂದಿದ್ಯಾಕೆ?

Posted By:
Subscribe to Filmibeat Kannada

ಕಡೆಗೂ ನಟಸಾರ್ವಭೌಮ ಡಾ.ರಾಜಣ್ಣನ ಅಭಿಮಾನಿಗಳ ಕನವರಿಕೆ ಈಡೇರಿದೆ. ಕೋಟ್ಯಾಂತರ ಕನ್ನಡಿಗರು ಕಾಯುತ್ತಿದ್ದ ಅಪೂರ್ವ ಕ್ಷಣಕ್ಕೆ ಇಂದು (ನ.29) ಕಂಠೀರವ ಸ್ಟುಡಿಯೋ ಆವರಣ ಸಾಕ್ಷಿಯಾಯ್ತು. [ಅಣ್ಣಾವ್ರ ಜೀವನ ಪುಟದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ]

ವರನಟ, ಕನ್ನಡಿಗರ ರತ್ನ ಡಾ.ರಾಜ್ ಕುಮಾರ್ ಸ್ಮಾರಕ ಲೋಕಾರ್ಪಣೆ ಲಕ್ಷಾಂತರ ಅಭಿಮಾನಿ ದೇವರುಗಳ ಸಮ್ಮುಖದಲ್ಲಿ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸಚಿವ ರೋಷನ್ ಬೇಗ್, ಉಮಾಶ್ರೀ, ಜಯಮಾಲ, ಸರೋಜಾ ದೇವಿಯಂತಹ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಡಾ.ರಾಜ್ ಸ್ಮಾರಕ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು. [ವೇದಿಕೆಯಲ್ಲಿ ಚಿರಂಜೀವಿ 'ಅನುರಾಗ ಅರಳಿದಾಗ']

ಡಾ.ರಾಜ್ ಕುಮಾರ್ ಚಿತ್ರಸಂಪುಟವನ್ನು ಬಿಡುಗಡೆಗೊಳಿಸಿದ ಸೂಪರ್ ಸ್ಟಾರ್ ರಜನಿಕಾಂತ್, ಡಾ.ರಾಜ್ ಬಗ್ಗೆ ಆಡಿದ ಮಾತುಗಳು ಅವರ್ಣನೀಯ. ರಾಜಣ್ಣನನ್ನು ಅಶ್ವಕ್ಕೆ ಹೋಲಿಸಿದ ಸ್ಟೈಲ್ ಕಿಂಗ್ ರಜನಿಕಾಂತ್ ಕಾವ್ಯಾತ್ಮಕವಾಗಿ ಆಡಿದ ನುಡಿ'ಮುತ್ತು'ಗಳು ಮನಮುಟ್ಟುವಂತಿವೆ. ಅದೆಲ್ಲಾ ಇಲ್ಲಿವೆ ನೋಡಿ, ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.

ಕನ್ನಡ ಕುಲಕೋಟಿಗೆ ನುಡಿ'ಮುತ್ತು'ನಮನ

''ವರನಟನ ಸ್ಮಾರಕ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನನ್ನ ಕರ್ತವ್ಯ'', ಅಂತ ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್, ಈ ಅವಿಸ್ಮರಣೀಯ ಗಳಿಗೆಗೆ ಸಾಕ್ಷಿಯಾಗಿದಕ್ಕೆ ಸಂತಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಿಯ ಮಿತ್ರ ಅಂಬರೀಶ್, ಚಿರಂಜೀವಿಗೆ ಪ್ರಣಾಮಗಳನ್ನು ಸಲ್ಲಿಸಿದ ರಜನಿಕಾಂತ್, ಕನ್ನಡ ಕುಲಕೋಟಿ ಅಭಿಮಾನಿಗಳಿಗೆ ಅನಂತ ಅನಂತ ವಂದನೆಗಳನ್ನು ಅಚ್ಚ ಕನ್ನಡದಲ್ಲಿ ಸಲ್ಲಿಸಿದರು.

ಕರುನಾಡಲ್ಲಿ ಬಿದ್ದ ಅಪೂರ್ವ 'ಹನಿ'

ರಜನಿಕಾಂತ್ ತೆರೆಮೇಲೆ ಮಾತ್ರ ಸ್ಟೈಲ್ ಕಿಂಗ್ ಅಲ್ಲ. ಮಾತಲ್ಲೂ ರಜನಿ 'ಮುತ್ತು' ಅನ್ನುವುದಕ್ಕೆ ಅವರು ಆಡಿರುವ ಮಾತುಗಳೇ ಸಾಕ್ಷಿ. ''1927ರಲ್ಲಿ ದೇವರು ಬ್ರಹ್ಮ ಅಪೂರ್ವ ಪ್ರತಿಭೆಯಿರುವ ಮಳೆಯ 'ಹನಿ'ಯನ್ನು ತಯಾರು ಮಾಡಿ ಮೋಡದಲ್ಲಿ ತೇಲಿ ಬಿಟ್ಟ. ಕಲಾ ಸರಸ್ವತಿಯ ಪೂರ್ಣ ಆಶೀರ್ವಾದ ಹೊಂದಿದ್ದ ಆ 'ಹನಿ' ಎಲ್ಲಿ ಬೀಳುತ್ತದೋ ಅನ್ನುವಾಗ ಭಾರತಕ್ಕೆ ಬಂತು. ಯಾವ ಮಣ್ಣಲ್ಲಿ ಆ 'ಹನಿ' ಬೀಳುತ್ತದೋ ಅನ್ನುವಾಗ ಕರುನಾಡಲ್ಲಿ ಬಿತ್ತು. ಆ ಕಲಾಪ್ರತಿಭೆಯ 'ಹನಿ'ಯೇ ಡಾ.ರಾಜ್ ಕುಮಾರ್'' ಅಂದರು ರಜನಿಕಾಂತ್.

ಗಾಜನೂರಿನಿಂದ ನಾಗಲೋಟ ಶುರುಮಾಡಿದ 'ಅಶ್ವ'!

''ಆ 'ಹನಿ' ಗಾಜನೂರಿನಲ್ಲಿ 'ಅಶ್ವ'ರೂಪತಾಳಿ 1954 ರಲ್ಲಿ ಚಿತ್ರರಂಗಕ್ಕೆ ಪಾದಸ್ಪರ್ಶ ಮಾಡಿತು. ಆ 'ಅಶ್ವ'ದ ಮೇಲೆ ಮೊದಲು ಸವಾರಿ ಮಾಡಿದ್ದು ಸಂತರು. ಬೇಡರ ಕಣ್ಣಪ್ಪನ ಕೃಪೆಯಿಂದ ಶುರುವಾದ 'ಆಶ್ವ'ದ ನಾಗಲೋಟ ಭರ್ಜರಿಯಾಗಿತ್ತು. 54 ವರ್ಷಗಳ ಕಾಲ ಇದ್ದ ಆ 'ಅಶ್ವ'ದ ನಾಗಲೋಟಕ್ಕೆ ಯಾರೂ ಸರಿಸಾಟಿಯಿಲ್ಲ'' ಅಂತ ರಾಜ್ ಕುಮಾರ್ ರವರ ಚಿತ್ರಜೀವನವನ್ನ ರಜನಿ 'ಅಶ್ವ'ಕ್ಕೆ ಹೋಲಿಸಿ ಮಾತನಾಡಿದ ರೀತಿಯೇ ಅದ್ಭುತ.

ಅಶ್ವದ ಮೇಲೆ ಸಂತರು, ರಾಕ್ಷಸರ ಸವಾರಿ!

''ಪುರಂದರದಾಸ, ಕನಕದಾಸ, ಕಾಳಿದಾಸ, ಗುರು ರಾಘವೇಂದ್ರ ಸೇರಿದಂತೆ ಅನೇಕ ಸಂತರೇ ಆ 'ಅಶ್ವ'ದ ಮೇಲೆ ಸವಾರಿ ಮಾಡಿದರು. ಸಂತರ ಜೊತೆ ರಾಕ್ಷಸರಿಗೂ 'ಅಶ್ವ'ದ ಮೇಲೆ ಮನಸ್ಸಾಗಿ ರಾವಣ, ಹಿರಣ್ಯಕಶಿಪು, ಮಹಿಶಾಸುರ ಮೇಲೆರಗಿದರು. ಇವರ ಮಧ್ಯೆ ಬಾಂಡ್ ಕೂಡ 'ಅಶ್ವ' ಸವಾರಿ ಮಾಡಿದ್ದು ವಿಶೇಷ. ಇಂತ 'ಅಶ್ವ'ವನ್ನು ಯಾರಿಂದಲೂ ಹಿಂದಿಕ್ಕುವುದಕ್ಕೆ ಸಾಧ್ಯವಿಲ್ಲ. ನನನ್ನೂ ಸೇರಿಸಿ'', ಅಂತ ರಜನಿಕಾಂತ್ ಹೇಳಿದರು.

'ವನದೇವಿ'ಯ ಮಡಿಲಿಗೆ ಸೇರಿದ 'ಅಶ್ವ'

ರಾಜ್ ಜೀವನದ ಅನೇಕ ವಿಷ್ಯಗಳನ್ನ ಪ್ರಸ್ತಾಪಿಸಿದ ರಜನಿಕಾಂತ್, ರಾಜಣ್ಣನ ಕೊನೆಯ ದಿನಗಳನ್ನ ಮೆಲುಕು ಹಾಕಿದ್ದು ಹೀಗೆ- ''ಆ 'ಅಶ್ವ'ಕ್ಕೆ ಓಡಿ ಓಡಿ ಸಾಕ್ಹಾಗಿ, ಹೆತ್ತ ತಂದೆ-ತಾಯಿಯ ಹತ್ತಿರ ಹೋಗಬೇಕು ಅನಿಸಿದಾಗ, ವನದೇವಿ 'ಅಶ್ವ'ವನ್ನು ನೋಡುವುದಕ್ಕೆ ಮನಸ್ಸು ಮಾಡಿದಳು. 108 ದಿವಸ ವನದೇವತೆ 'ಅಶ್ವ'ವನ್ನು ಇಟ್ಟುಕೊಂಡಿದ್ದಳು. ಅವರಿಗೆ 'ಭಕ್ತ ಅಂಬರೀಶ' ಆಗಬೇಕು ಅನ್ನುವ ಆಸೆ ಇತ್ತು. ಆದರೆ ಅದು ಈಡರಲೇ ಇಲ್ಲ.''

ನಾನು ಆಟೋಗ್ರಾಫ್ ತಗೊಂಡ ಏಕೈಕ ನಟ ರಾಜ್!

''ನಾನು ಪ್ರೈಮರಿ ಸ್ಕೂಲ್ ನಲ್ಲಿ ಓದ್ತಿದ್ದೆ. ಆಗ ನನ್ನ ಸ್ಕೂಲ್ ಹತ್ತಿರ ರಾಜ್ ಕುಮಾರ್ ಅವರದ್ದು ಶೂಟಿಂಗ್ ನಡಿತಾಯಿತ್ತು. ಅಲ್ಲಿಗೆ ಹೋಗಿ ನಾನು ಅವರ ಆಟೋಗ್ರಾಫ್ ತಗೊಂಡಿದ್ದೆ. ಅವರದ್ದೊಂದೇ ಆಟೋಗ್ರಾಫ್ ನಾನು ಇಲ್ಲಿಯವರೆಗೂ ತಗೊಂಡಿರೋದು. ಅವರನ್ನ ಬಿಟ್ಟು ನಾನು ಇಲ್ಲಿಯವರೆಗೂ ಯಾರ ಬಳಿಯೂ ಆಟೋಗ್ರಾಫ್ ಕೂಡ ತೆಗೆದುಕೊಂಡಿಲ್ಲ'' ಅಂತ ರಜನಿಕಾಂತ್ ಹೆಮ್ಮೆಯಿಂದ ಆಡಿರುವ ಮಾತುಗಳಿವು.

'ಸರಸ್ವತಿ'ಗೆ ನಮನ ಸಲ್ಲಬೇಕು!

''ನಾನು ಮತ್ತು ರಾಜ್ ಕುಮಾರ್ ಒಂದೇ ಕಾರ್ ನಲ್ಲಿ ಟಾಟಾ ಇನ್ಸ್ ಟಿಟ್ಯೂಟ್ ಗೆ ತೆರಳಿದ್ದೆವು. ಆಗ ಆಟೋ ಡ್ರೈವರ್ ಇಂದ ಹಿಡಿದು, ಹೆಂಗಸರು, ಮಕ್ಕಳು, ಬಸ್ ಡ್ರೈವರ್ ಗಳು, ಎಲ್ಲರೂ ರಾಜ್ ಗೆ ನಮಸ್ಕಾರ ಮಾಡ್ತಿದ್ರು. ಆಗ ಅವರು ಹೇಳಿದ್ರು-''ಇದು ನನ್ನಲ್ಲಿರುವ ಕಲಾಸರಸ್ವತಿಗೆ ಸಿಗುತ್ತಿರುವ ಮರ್ಯಾದೆ.'' ಅವರು ನಿಜಕ್ಕೂ ಬಂಗಾರದ ಮನುಷ್ಯ. ಅಭಿಮಾನಿಗಳಿಗೆ ಒಳ್ಳೆಯ ಕಲಾವಿದ. ಯಾವ ಪದವಿಗೂ ಆಸೆ ಪಡದೆ, ರಾಜಕೀಯಕ್ಕೆ ಬಾರದೆ ಜನರಿಗೆ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ ರಾಜ್ ಕುಮಾರ್'' ಅಂತ ರಜನಿಕಾಂತ್ ಕೊಂಡಾಡಿದರು.

''ಸ್ಮಾರಕ'' ಅಲ್ಲ ''ದೇವಸ್ಥಾನ''..!

''ಇಂದು ಅನಾವರಣಗೊಳ್ಳುತ್ತಿರುವ ರಾಜಣ್ಣನವರ ಈ ಸ್ಮಾರಕ ಬರೀ ಸ್ಮಾರಕ ಅಲ್ಲ. ಇಲ್ಲಿ ನೆಲೆಸಿರುವುದು ಋಷಿ. ಬರುವ ದಿನಗಳಲ್ಲಿ ಇದು ಗುಡಿಯಾಗುತ್ತದೆ. ದೇವಾಲಯ ಆಗುತ್ತದೆ. ಪವಾಡ ನಡೆಯುವ ಜಾಗವಾಗುತ್ತದೆ. ಇದು ಸತ್ಯ'' ಅಂತ ಅಣ್ಣಾವ್ರ ಅಭಿಮಾನಿಗಳಲ್ಲಿ ಒಬ್ಬರಾಗಿ ರಜನಿಕಾಂತ್ ಹೇಳಿದರು.

English summary
Dr.Rajkumar memorial inauguration happened today (November 29) in a grandeur manner. Rajinikanth spoke about Dr.Rajkumar. The highlights of Rajinikanth's speech is here.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more