ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?

ಆದರೆ ರಮ್ಯಾ ತಮ್ಮ ಬುಲ್ ಬುಲ್ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಬುಲ್ ಬುಲ್ ಚಿತ್ರದ ನಿರ್ಮಾಪಕರಾದ ದಿನಕರ್ ತೂಗುದೀಪ್ 'ಒನ್ ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ. "ರಮ್ಯಾ ನಮ್ಮ ಬುಲ್ ಬುಲ್ ನಲ್ಲಿ ನಟಿಸುತ್ತಿಲ್ಲ. ನಮ್ಮ ಚಿತ್ರದಲ್ಲಿ ತುಂಬಾ ಮಂದಿ ಕಲಾವಿದರು ನಟಿಸುತ್ತಿರುವುದರಿಂದ ನಮಗೆ ಫ್ರೀ ಕಾಲ್ ಶೀಟ್ ಬೇಕಿತ್ತು.
ಆದರೆ ಬಹಳಷ್ಟು ಕಮಿಟ್ ಮೆಂಟ್ ಹೊಂದಿರುವ ರಮ್ಯಾ ಅವರಿಗೆ ನಮ್ಮ ಚಿತ್ರಕ್ಕೆ ಬೇಕಾದಂತೆ ಆಗಾಗ ಬಿಡುವು ಮಾಡಿಕೊಂಡು ಕಾಲ್ ಶೀಟ್ ಕೊಡುವುದು ಸಾಧ್ಯವಿರಲಿಲ್ಲ. ಹೀಗಾಗಿ ರಮ್ಯಾ ನಮ್ಮ ಚಿತ್ರಕ್ಕೆ ನಾಯಕಿ ಆಗುವ ಸಾಧ್ಯತೆ ಇಲ್ಲವಾಗಿದೆ. ಸದ್ಯಕ್ಕೆ ಬೇರೆ ನಾಯಕಿ ಆಯ್ಕೆ ಕೂಡ ಆಗಿಲ್ಲ, ಸದ್ಯದಲ್ಲೇ ಆಗಲಿದೆ" ಎಂದಿದ್ದಾರೆ.
ಈ ಬಗ್ಗೆ ರಮ್ಯಾ ತಮ್ಮ ಟ್ವಿಟ್ಟರಿನಲ್ಲಿ ಹೆಚ್ಚೇನೂ ಮಾಹಿತಿ ನೀಡಿಲ್ಲ. ಬದಲಿಗೆ "ಬುಲ್ ಬುಲ್'ನಲ್ಲಿ ನಾನು ನಟಿಸುತ್ತಿಲ್ಲ. ದರ್ಶನ್ ಜತೆ ಇನ್ನೊಮ್ಮೆ ಯಾವತ್ತಾದರೂ ನಟಿಸುವ ಅವಕಾಶ ಸಿಗಬಹುದು" ಎಂದಷ್ಟೇ ಟ್ವೀಟ್ ಮಾಡಿ ಆ ವಿಷಯಕ್ಕೆ ತೆರೆ ಎಳೆದಿದ್ದಾರೆ. ಸದ್ಯಕ್ಕೆ ರಮ್ಯಾ, ತೆಲುಗು ನಿರ್ದೇಶಕ ಕೋಡಿ ರಾಮಕೃಷ್ಣರ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿದ್ದಾರೆ. ಆ ಚಿತ್ರದ ನಾಯಕ ದಿಗಂತ್.
ಅಂದಹಾಗೆ, ದರ್ಶನ್ ನಾಯಕತ್ವ ಬುಲ್ ಬುಲ್ ಚಿತ್ರ ತೆಲುಗಿನ 'ಡಾರ್ಲಿಂಗ್' ರಿಮೇಕ್. ದಿನಕರ್ ತೂಗುದೀಪ ಅವರೊಂದಿಗೆ ಇನ್ನೂ 5 ಮಂದಿ ಈ ಚಿತ್ರಕ್ಕೆ ನಿರ್ಮಾಪಕರು. ಬುಲ್ ಬುಲ್ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ರೆಬೆಲ್ ಸ್ಟಾರ್ ಅಂಬರೀಷ್ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











