»   » ಪ್ರಿಯಾಂಕಾ ಜತೆ ಕ್ರೇಜಿಸ್ಟಾರ್ ರೊಮ್ಯಾಂಟಿಕ್ ಚಿತ್ರಗಳು

ಪ್ರಿಯಾಂಕಾ ಜತೆ ಕ್ರೇಜಿಸ್ಟಾರ್ ರೊಮ್ಯಾಂಟಿಕ್ ಚಿತ್ರಗಳು

Posted By:
Subscribe to Filmibeat Kannada

ಪ್ರೇಮಿಗಳ ಗಲ್ಲ ಚಿವುಟಲು ಮತ್ತೆ ಬರುತ್ತಿದೆ 'ಮಲ್ಲ' ಜೋಡಿ. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕಾ ಉಪೇಂದ್ರ ಜೋಡಿಯನ್ನು ಪ್ರೇಕ್ಷಕರು ತೆರೆಯ ಮೇಲೆ ಕಂಡು ಬಹಳ ದಿನಗಳಾಗಿತ್ತು. ಕ್ರೇಜಿಸ್ಟಾರ್ ಅಭಿಮಾನಿಗಳು ಕಾದುಕಾದು ತುಂಬಾ ಹಸಿದಿದ್ದಾರೆ. ಈಗ ಅವರ ಹಸಿವನ್ನು ನೀಗಿಸಲು 'ಕ್ರೇಜಿಸ್ಟಾರ್' ಚಿತ್ರ ಬಿಡುಗಡೆಯಾಗುತ್ತಿದೆ.

ಕ್ರೇಜಿಸ್ಟಾರ್ ಚಿತ್ರದ ಸ್ಟಿಲ್ಸ್ ಬಿಡುಗಡೆಯಾಗಿದ್ದು ಮತ್ತೆ 'ಪ್ರೇಮಲೋಕ'ವನ್ನು ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಹೂವು, ಹಣ್ಣು, ಹೆಣ್ಣು, ಕಣ್ಣುಗಳನ್ನು ರೊಮ್ಯಾಂಟಿಕ್ ಆಗಿ ತೋರಿಸುವ ಕಲೆ ರವಿಚಂದ್ರನ್ ಗೆ ಬಿಟ್ಟರೆ ಇನ್ಯಾರಿಗೆ ಗೊತ್ತು.

ಇದೇ ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಪ್ರಿಯಾಂಕಾ ಹಾಗೂ ರವಿಚಂದ್ರನ್ ಅಭಿನಯದ ಕ್ರೇಜಿಸ್ಟಾರ್ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರಕ್ಕೆ ರವಿಚಂದ್ರನ್ ಅವರು ಏಕಾಂಗಿಯಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನ, ಕಥೆ, ಚಿತ್ರಕಥೆ ಹಾಗೂ ನಿರ್ಮಾಣ ಮಾಡಿದ್ದಾರೆ.

ಈಶ್ವರಿ ಪ್ರೊಡಕ್ಷನ್ ಎಂದಿದ್ದ ತಮ್ಮ ನಿರ್ಮಾಣ ಸಂಸ್ಥೆಯ ಹೆಸರನ್ನು ಈಗ ಕ್ರೇಜಿಸ್ಟಾರ್ ಚಿತ್ರದ ಮೂಲಕ ಈಶ್ವರಿ ಡ್ರೀಮ್ಸ್ ಎಂದು ಬಲಾಯಿಸಿಕೊಂಡು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಪ್ರಕಾಶ್ ರೈ, ರಂಗಾಯಣ ರಘು, ಭಾವನಾ, ಶೋಭಾರಾಜ್, ರವಿಶಂಕರ್, ದಿಲೀಪ್ ರಾಜ್, ನವೀನ್ ಕೃಷ್ಣ ಮುಂತಾದವರಿದ್ದಾರೆ.

ನಾನಾ ಕೋನಗಳಲ್ಲಿ ಹೆಣೆದ ಕಥೆ ಕ್ರೇಜಿಸ್ಟಾರ್

ಒಂದು ಘಟನೆಗೆ ಸಂಬಂಧಿಸಿದಂತೆ ನಾನಾ ಕೋನಗಳಲ್ಲಿ ಹೆಣೆದ ಕಥೆಯೇ 'ಕ್ರೇಜಿಸ್ಟಾರ್' ಚಿತ್ರ. ಅದು ಕೇವಲ ಒಂದೇ ಒಂದು ದಿನದಲ್ಲಿ ನಡೆಯುವ ಕಥೆ. ಅದೇನು ಎಂಬುದು ಗೊತ್ತಾಗಬೇಕಾದರೆ ಫೆಬ್ರವರಿ 14ರ ತನಕ ಕಾಯಲೇಬೇಕು.

ಸೆನ್ಸಾರ್ ಮಂಡಳಿಯಲ್ಲಿ ಯು ಸರ್ಟಿಫಿಕೇಟ್

ಇತ್ತೀಚೆಗೆ ಈ ಚಿತ್ರ ಸೆನ್ಸಾರ್ ಮಂಡಳಿ ಮುಂದೆ ಬಂತು. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಿದೆ. ಅಲ್ಲಿಗೆ ಮನೆಮಂದಿಯಲ್ಲಾ ಚಿತ್ರವನ್ನು ಕೂತು ಹಾಯಾಗಿ ವೀಕ್ಷಿಸಬಹುದು ಎಂದಾಯಿತು.

ಪ್ರೇಕ್ಷಕರ ಎದೆಯಲ್ಲಿ ರವಿಚಂದ್ರನ್ ಕೈಗೆ ಗಿಟಾರ್

ಸಾಮಾನ್ಯವಾಗಿ ರವಿಚಂದ್ರನ್ ಚಿತ್ರಗಳೆಂದರೆ ಅದ್ದೂರಿತನಕ್ಕೆ ಕೊರತೆ ಇರಲ್ಲ. ಚಿತ್ರದ ಸ್ಟಿಲ್ಸ್ ಅದಕ್ಕೆ ತಕ್ಕಂತೆ ಇರುವುದನ್ನು ಕಾಣಬಹುದು. ರವಿಚಂದ್ರನ್ ಕೈಯಲ್ಲಿ ಗಿಟಾರು ಹಿಡಿದು ಮೀಟಿದ್ದಾರೆಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಗ್ಯಾರಂಟಿ.

ಹಂಸಲೇಖ ಸಂಗೀತ ಸ್ಪರ್ಶದ ಹಾಡುಗಳು

ರವಿಚಂದ್ರನ್ ಚಿತ್ರಗಳಿಗೆ ಹೊಸ ಬಲ ತುಂಬುವುದು ಹಾಡುಗಳು. ಈ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಹಂಸಲೇಖ ಅವರ ಸಂಗೀತ ಸ್ಪರ್ಶದಲ್ಲಿ ಹಾಡುಗಳು ಮೂಡಿಬಂದಿರುವುದು ಇನ್ನೊಂದು ವಿಶೇಷ.

ಪ್ರೇಮಿಗಳ ದಿನಕ್ಕೆ ಬರುತ್ತಿದೆ ಮಲ್ಲ ಜೋಡಿ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕ್ರೇಜಿಸ್ಟಾರ್ ಚಿತ್ರ ಜನವರಿ 14ಕ್ಕೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಫೆಬ್ರವರಿ 14ಕ್ಕೆ ಮುಂದೂಡಲ್ಪಟ್ಟಿದೆ. 2003ರಲ್ಲಿ ರವಿಚಂದ್ರನ್ ಹಾಗೂ ಪ್ರಿಯಾಂಕಾ ಮಲ್ಲ ಚಿತ್ರದಲ್ಲಿ ಅಭಿನಯಿಸಿದ್ದರು.

ಮಲಯಾಳಂ ಟ್ರಾಫಿಕ್ ಚಿತ್ರದ ರೀಮೇಕ್

ಅದಾದ ಹತ್ತು ವರ್ಷಗಳ ಬಳಿಕ ಮತ್ತೆ ಈ ರೊಮ್ಯಾಂಟಿಕ್ ಜೋಡಿ ತೆರೆಗೆ ಬರುತ್ತಿದೆ. ಮಲಯಾಳಂನ 'ಟ್ರಾಫಿಕ್' ಚಿತ್ರದ ರೀಮೇಕ್ ಇದು. ಆದರೆ ಮೂಲ ಚಿತ್ರಕ್ಕೆ ಹೋಲಿಸಿದರೆ ರವಿಚಂದ್ರನ್ ಅವರು ಕ್ರೇಜಿಸ್ಟಾರ್ ಚಿತ್ರದಲ್ಲಿ ತಮ್ಮದೇ ಟಚ್ ನೀಡಿದ್ದಾರೆ ಅನ್ನಿಸುತ್ತದೆ. ಅವರು ಎಷ್ಟೇ ಆಗಲಿ 'ಕಲಾವಿದ' ಅಲ್ಲವೆ?

ಪ್ರಿಯಾಂಕಾ ಅವರು ತಮ್ಮ ಪಾತ್ರದ ಬಗ್ಗೆ ಏನಂತಾರೆ?

"ನನಗೆ ಈ ಚಿತ್ರದಲ್ಲಿ ಒಂದು ಪ್ರಮುಖವಾದ ಪಾತ್ರವಿದೆ ಎಂದಿದ್ದಾರೆ ರವಿಚಂದ್ರನ್. ಅದು ಅವರ ಮಡದಿಯಾಗಿ ಪಾತ್ರ. ಅಷ್ಟೇ ಅಲ್ಲ, ಅದು ನನ್ನ ಈಗಿನ ವಯಸ್ಸು ಹಾಗೂ ಮನಸ್ಥಿತಿಗೆ ತಕ್ಕದಾದ ಪಾತ್ರ. ನಾನು ಈ ಬಗ್ಗೆ ನನ್ನ ಪತಿ ಉಪೇಂದ್ರ ಜೊತೆ ಚರ್ಚಿಸಿ ನಿರ್ಧರಿಸಿದ್ದೇನೆ. ಉಪ್ಪಿ ಈ ವಿಷಯದಲ್ಲಿ ತುಂಬಾ ಸಪೋರ್ಟಿವ್. ನನಗೆ ಚಿತ್ರದ ನಟನೆ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೂಡ ನೀಡಿದ್ದಾರೆ" ಎಂದಿದ್ದಾರೆ ಪ್ರಿಯಾಂಕ.

ಕಲಾವಿದನಿಗೆ ಕಲಾವಿದೆ ಜೋಡಿ

ಉಪೇಂದ್ರ ಮಡದಿ ಎಂಬ ಹಣೆಪಟ್ಟಿ ಕಿತ್ತೊಗೆಯಲು ನಾನು ನಿರ್ಧರಿಸಿದ್ದೇನೆ. ಜನರು ನನ್ನನ್ನು 'ಉಪೇಂದ್ರ ಪತ್ನಿ' ಎಂದು ಗುರುತಿಸುವುದಕ್ಕಿಂತ ನಾನೊಬ್ಬಳು 'ಕಲಾವಿದೆ' ಎಂದು ಗುರುತಿಸಬೇಕು. ಮಡದಿ ಪಟ್ಟಕ್ಕಿಂತ ಕಲಾವಿದೆಯ ಪಟ್ಟವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಮದುವೆಯಾಗಿ ಮಕ್ಕಳಾದ ಮೇಲೆ ನಟಿಸಿದ ಕನ್ನಡ ನಟಿಯರ ಅಪರೂಪದ ಸಾಧನೆಯ ಪಟ್ಟಿಗೆ ನಾನು ಸೇರಲು ಇಷ್ಟಪಡುತ್ತೇನೆ" ಎಂದಿದ್ದಾರೆ ಉಪೇಂದ್ರ ಮಡದಿ ಪ್ರಿಯಾಂಕ.

ವದಂತಿಗಳಿಗೆ ತೆರೆ ಎಳೆದಿದ್ದ ಪ್ರಿಯಾಂಕಾ ಉಪೇಂದ್ರ

ಮಲ್ಲ ಚಿತ್ರದಲ್ಲಿ ರವಿಚಂದ್ರನ್ ಜೊತೆ ಹಾಡಿನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು ಪ್ರಿಯಾಂಕ. ಅದರ ಬಗ್ಗೆ ಪ್ರೇಕ್ಷಕರು 'ಅತಿಯಾಯ್ತು, ರವಿಚಂದ್ರನ್ ಜೊತೆ ಪ್ರಿಯಾಂಕ ಇಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಾರದಿತ್ತು' ಎಂದು ಅಭಿಪ್ರಾಯಪಟ್ಟಿದ್ದರು. ರವಿಚಂದ್ರನ್ ಹಾಗೂ ಪ್ರಿಯಾಂಕ ಮಧ್ಯೆ 'ತೆರೆಯ ಮೇಲೆ ಹೊರತಾಗಿ ತೆರೆಮರೆಯಲ್ಲೂ ಏನೋ ಇದೆ' ಎಂಬಂತೆ ಮಾತನಾಡುತ್ತಿದ್ದರು. ಆದರೆ ಉಪೇಂದ್ರರನ್ನು ಮದುವೆಯಾಗುವ ಮೂಲಕ ಪ್ರಿಯಾಂಕಾ ಅವೆಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದದ್ದನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಬಹುದು.

English summary
After 10 years gap Ravichandran and Priyanka Upendra will be seen on the big screen together in the movie Krazy Star. The movie is finally looking at a February 14 release. Krazy Star is the remake of the Malayalam film Traffic.
Please Wait while comments are loading...