»   » ರೇಖಾಗೆ ಮಹಾರಾಣಿ ಕಾಲೇಜು ಕ್ಯಾಂಪಸ್ಸು ಬೇಕಾಗಿದೆ

ರೇಖಾಗೆ ಮಹಾರಾಣಿ ಕಾಲೇಜು ಕ್ಯಾಂಪಸ್ಸು ಬೇಕಾಗಿದೆ

Posted By: Staff
Subscribe to Filmibeat Kannada

ಮಾತಿನ ಬದಲಾವಣೆಗೆ ಕ್ಷಣ ಸಾಕು. ಹೀಗಿರುವಾಗ ಒಬ್ಬ ನಟಿ ಒಂದು ವರ್ಷದಲ್ಲಿ ಹೊಸ ಜಗತ್ತನ್ನು ಹತ್ತಿರದಿಂದ ಮುಟ್ಟಿ ನೋಡಿದ ಮೇಲೆ ತೀರ್ಮಾನ ಬದಲಿಸುವುದು ಸರಿಯೇ. ಇದು ಜಿಂಕೆ ಕಣ್ಣಿನ 'ಸ್ಪರ್ಶ' ಸುಂದರಿ ರೇಖಾ ಅವರ ವಿಚಾರ. ಓದಿಗೆ ಹಾಯ್‌, ಸಿನಿಮಾಗೆ ಟಾಟಾ ಬೈ ಬೈ.

ಹೌದು, ರೇಖಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಷ್ಟೇ ಬೇಗ ನಿರ್ಗಮನದ ಇರಾದೆಯನ್ನೂ ಹೊರಹಾಕಿದ್ದಾರೆ. ಕ್ಯಾಂಪಸ್ಸಿನ ಸುಂದರ ದಿನಗಳನ್ನು ಮಿಸ್‌ ಮಾಡಿಕೊಳ್ಳುವುದು ತರವಲ್ಲ. ಸಿನಿಮಾದಲ್ಲಿ ಅಂಥಾದ್ದೇನೂ ಇಲ್ಲ ಎಂಬ ತೀರ್ಮಾನಕ್ಕೆ ಅವರು ಬರಲು ಸಾಕಷ್ಟು ಕಾರಣಗಳಿವೆ. 'ಸ್ಶ' ನಂತರ ರೇಖಾ ಅವರನ್ನು ಕಂಡಾಪಟ್ಟೆ ಅವಕಾಶಗಳೇನೂ ಹುಡುಕಿಕೊಂಡು ಬರಲಿಲ್ಲ. ಎಸ್‌.ನಾರಾಯಣ್‌ರ 'ಬಾನಲ್ಲು ನೀನೆ ಭುವಿಯಲ್ಲು ನೀನೆ', ದೇಸಾಯಿಯ 'ಪರ್ವ' ಹಾಗೂ 'ಮೆಜೆಸ್ಟಿಕ್‌' ಎಂಬಲ್ಲಿಗೆ ರೇಖಾ ನಟನಾವಕಾಶ ಮುಗಿದು ಹೋಗುತ್ತದೆ. ಜೊತೆಗೆ ಸ್ಪರ್ಶದ ಸಂಭಾವನೆ (ಬಲ್ಲವರ ಪ್ರಕಾರ ಕೇವಲ 25 ಸಾವಿರ ರುಪಾಯಿ) ಇನ್ನೂ ಬಂದಿಲ್ಲ.

ಸ್ಪರ್ಶದ 'ಗಿಲ್ಟಿ ಶುಡ್‌ ಬಿ ಪನಿಶ್ಡ್‌' ಧೋರಣೆಯ ಪಾತ್ರದಲ್ಲಿ ಮಿಂಚಿದ್ದ ರೇಖಾ 'ಬಾನಲ್ಲು ನೀನೇ..'ಯಲ್ಲಿ ನಾರಾಯಣ್‌ ಜೊತೆ ಹೆಜ್ಜೆ ಹಾಕುವಾಗ ಡಲ್ಲಾಗಿ ಕಾಣುತ್ತಾರೆ. ಪರ್ವದಲ್ಲಿ ಎಂಥಾ ಪಾತ್ರ ಅಂತಲೇ ಇವರಿಗೆ ಗೊತ್ತಿಲ್ಲವಂತೆ. ಇದು ದೇಸಾಯಿ ವರಸೆಯೋ ಅಥವಾ ರೇಖಾ ದೌರ್ಭಾಗ್ಯವೋ ಗೊತ್ತಿಲ್ಲ.

'ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ. ಕಾಲೇಜಿಲ್ಲದೆ ಮನ ವಿಭ್ರಾಂತ' -ಒನ್‌ ಫೈನ್‌ ಟೈಂ ರೇಖಾ ಮನಸ್ಸನ್ನು ತಟ್ಟಿತಂತೆ. ಮಹಾರಾಣಿ ಕಾಲೇಜು, ಬಿಬಿಎಂ ಓದು, ಮೌಂಟನೇರಿಂಗ್‌, ರೋವಿಂಗ್‌, ಈಜಾಟ, ಪುಂಡಾಟ ಎಲ್ಲಾ ಕಳೆದುಕೊಳ್ಳುತ್ತಿದ್ದೇನೆ ಎಂದು ಗಂಭೀರವಾಗಿ ಯೋಚಿಸಿದ ರೇಖಾ ಕೊನೆಗೆ ಸಿನಿಮಾಗೇ ಟಾಟಾ ಹೇಳಲು ನಿರ್ಧರಿಸಿದರು. ಇದೇನೂ ಶಾಶ್ವತವಲ್ಲ. ಓದು ಮುಗಿಯಲಿ. ಸಿನಿಮಾ ಎಲ್ಲಿ ಹೋಗುತ್ತದೆ ಅನ್ನುತ್ತಾರವರು.

ರೇಖಾ ಈ ನಿರ್ಧಾರ ಕೈಗೊಳ್ಳಲು ಬಾನಲ್ಲು ನೀನೇ...ಯ ಇನ್ನೊಬ್ಬ ನಾಯಕಿ ದಿವ್ಯ ಉನ್ನಿ ಕುಮ್ಮಕ್ಕೂ ಇದ್ದಿರಬಹುದು. ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಹೊತ್ತಲ್ಲೂ ದಿವ್ಯ ಕಾಲೇಜು ಅಟೆಂಡೆನ್ಸ್‌ ಶಾರ್ಟೇಜ್‌ ಇರಲಿಲ್ಲ. ಕೇರಳದಲ್ಲಿ ಕಲಾ ಪದವಿ ಮಾಡುತ್ತಿರುವ ದಿವ್ಯ ಒಡನಾಟ ಬೆಂಗಳೂರ ಜಿಂಕೆ ರೇಖಾ ಮನಸ್ಸನ್ನೂ ಪರಿವರ್ತಿಸಿರಬಹುದು.

ಸಿನಿಮಾ ಬಿಡುತ್ತಿದ್ದೀರಿ. ಮುಂದೆ ಬೇಜಾರಾಗುವುದಿಲ್ಲವೇ ಎಂಬ ಪ್ರಶ್ನೆಗೆ ರೇಖಾ ನಗುತ್ತಾರೆ. ಆಟ, ಪಾಠ, ನೋಟ, ಓಟ ಎಲ್ಲಾ ಇರುವಾಗ ಮತ್ಯಾಕೆ ಬೇಸರ, ನಮಗೇ ಪ್ರಶ್ನೆ ಎಸೆಯುತ್ತಾರೆ.

ಕೊನೆಮಾತು : ರೇಖಾ ಸಿನಿಮಾಗೆ ಮರಳುವ ಸಾಧ್ಯತೆಗಳೇನೂ ಇಲ್ಲದಿಲ್ಲ. ಯಾಕೆಂದರೆ, ಡಾಕ್ಟರ್‌ ಚಾಂದಿನಿ ಇನ್ನಷ್ಟು ಓದಲು ವಿದೇಶಕ್ಕೆ ಹೋಗಿ ಮರಳಿದ ನಂತರ ಸರಸೂ ಚಾಂದಿನಿ ಆಗಿ ರಿಎಂಟ್ರಿ ಕೊಡುತ್ತಿರುವ ಉದಾಹರಣೆ ನಮ್ಮ ಬಳಿ ಇದೆ. ಏನಾದರು ಸರಿಯೇ ಮೊದಲು ವಿದ್ಯಾರ್ಥಿನಿಯಾಗು ಎಂಬ ಈ ಇಬ್ಬರ ಧೋರಣೆ ವಿಭಿನ್ನ. ಸ್ಯಾಂಡಲ್‌ವುಡ್‌ನ ಕೆಲವರು ಹೇಳುವಂತೆ ನಟನೆಗೆ ಮರಳಿದರೆ ಇನ್ನೂ ಚೆನ್ನ.

Read more about: kannada, karnataka, sandalwood, cinema
English summary
Raising Kannada actress Rekha says goodbye to cinema to concentrate on her studies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada