»   » ಹಾವಿನ ದ್ವೇಷ 12 ವರುಷ, ಅಭಿಮಾನಿಗಳ ದ್ವೇಷ ಎಷ್ಟು ವರ್ಷ?

ಹಾವಿನ ದ್ವೇಷ 12 ವರುಷ, ಅಭಿಮಾನಿಗಳ ದ್ವೇಷ ಎಷ್ಟು ವರ್ಷ?

By: ಬಾಲರಾಜ್ ತಂತ್ರಿ
Subscribe to Filmibeat Kannada

"ಏನ್ ರೇಂಜ್ ಸಾಹೇಬ್ರೇ.. ಹಾವಿನ ದ್ವೇಷ ಹನ್ನೆರಡು ವರುಷವಾದ್ರೆ, ಈ ವೆಂಕಟಪ್ಪನ ದ್ವೇಷ 24 ವರ್ಷ, ಕುಮಾರ್.. ನಿನ್ನ ತಾಯಿಯ ಜೀವ ಉಳಿಬೇಕಾದ್ರೆ ಆ ಬಂದೂಕ ಬಿಸಾಕು, ನಿನಗೆ ಬೇಕಾದನ್ನು ನಾನು ಕೊಡ್ತೀನಿ, ಒಂದೇ ತಾಯಿಯ ಮಕ್ಕಳಂತೆ ಬದುಕೋಣ..."

ಇದು 1973ರಲ್ಲಿ ಬಿಡುಗಡೆಯಾದ ನಟಸಾರ್ವಭೌಮ ರಾಜಕುಮಾರ್ ಅವರ 150ನೇ ಮತ್ತು ಸ್ಯಾಂಡಲ್ ವುಡ್ ಇತಿಹಾಸದಲ್ಲಿ ರಾಜ್ ಮತ್ತು ವಿಷ್ಣು ಜೊತೆಯಾಗಿ ನಟಿಸಿದ ಏಕಮೇವ 'ಗಂಧದಗುಡಿ' ಚಿತ್ರದ ಜನಪ್ರಿಯ ಡೈಲಾಗುಗಳು.ಆ ಚಿತ್ರದ ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ನಲ್ಲಿ ಅಚಾನಕ್ ಆಗಿ ಬಂದೂಕಿನಿಂದ ಗುಂಡು ಸಿಡಿದ ಘಟನೆ ನಡೆಯಿತು.

ದಶಕಗಳ ಹಿಂದೆ ಆಕಸ್ಮಿಕವಾಗಿ ಹಾರಿದ ಬುಲೆಟ್ ಘಟನೆಯ ನಂತರ ಈ ಇಬ್ಬರು ಮೇರುನಟರು ತಮ್ಮ ಜೀವಿತಾವಧಿಯಲ್ಲಿ ಮತ್ತೆ ಜೊತೆಯಾಗಿ ನಟಿಸಲೇ ಇಲ್ಲ. ಆದರೂ, ರಾಜ್ ಮತ್ತು ವಿಷ್ಣು ಅಭಿಮಾನಿಗಳ ಮುಂದೆ ಸಹೋದರರಂತೆ ಬದುಕಿ ಚಿತ್ರೋದ್ಯಮಕ್ಕೆ ದಾರಿದೀಪವಾದರು. (ರನ್ನನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು)

ಬಟ್, ಅಂದು ಹರಿದ ಬುಲೆಟ್ಟಿನ ಸದ್ದು ಇಬ್ಬರು ಮಹಾನ್ ನಾಯಕರ ಅಭಿಮಾನಿಗಳ ಬಳಗದಲ್ಲಿ ಭಾರೀ ಕಂದಕವನ್ನೇ ಸೃಷ್ಟಿಮಾಡಿತು. ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡರೂ ಅಭಿಮಾನಿ ಬಳಗ ಮಾತ್ರ ಒಂದಾಗಲೇ ಇಲ್ಲ. ಇತ್ತಂಡಗಳ ವೈಷಮ್ಯದ ಘಟನೆಗಳು ಬಹಳಷ್ಟು ಬಾರಿ ನಡೆದು ಹೋದವು.

ಈ ಘಟನೆ ಯಾಕೀಗ ಪ್ರಸ್ತುತ, ಮುಂದೆ ಓದಿ..

ರಣವಿಕ್ರಮ ಚಿತ್ರದ ಓಪನಿಂಗ್ ಡೇ

ಸಂತೋಷ್ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದ ಫಸ್ಟ್ ಡೇ ಫಸ್ಟ್ ಶೋನಲ್ಲಿ ನಡೆದ ಘಟನೆ ಚಿತ್ರೋದ್ಯಮಕ್ಕೆ ಕಪ್ಪುಚುಕ್ಕೆ. ಚಿತ್ರದ ಇಂಟರ್ವಲ್ ವೇಳೆ ಸುದೀಪ್ ಅಭಿನಯದ ರನ್ನ ಚಿತ್ರದ ಟ್ರೇಲರ್ ಪ್ರದರ್ಶಿಸಿದಾಗ ಪುನೀತ್ ಅಭಿಮಾನಿಗಳು ಆಕ್ರೋಶಗೊಂಡು ಥಿಯೇಟರಿಗೆ ನಷ್ಟ ಮಾಡಿದ್ದು.

ರಾಜ್ ಕಪ್ ನಿಂದ ಶುರುವಾದ ಸ್ಟಾರ್ ವಾರ್

2011ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದ (ಶಿವಣ್ಣ ಮತ್ತು ಸುದೀಪ್ ತಂಡದ ನಡುವಿನ ಫೈನಲ್ ಪಂದ್ಯ) ಅಹಿತಕರ ಘಟನೆ ಸ್ಯಾಂಡಲ್ ವುಡ್ ನಲ್ಲಿ ನಾಯಕರ ನಡುವೆ ಮಗುದೊಮ್ಮೆ ಭಿನ್ನಾಭಿಪ್ರಾಯ ಶುರುವಾಗಲು ಮೂಲ ವೇದಿಕೆಯಾಯಿತು.

ಅಭಿಮಾನಿಗಳು ತುಪ್ಪ ಸುರಿದರು

ರಾಜ್ ಕಪ್ ನಂತರದ ಘಟನೆಗಳಿಗೆ ಅವರವರ ಅಭಿಮಾನಿ ಬಳಗ, ಅಕ್ಕಪಕ್ಕದವರು ಯಥೇಚ್ಛವಾಗಿ ನೀರೆರೆಯುವ ಕೆಲಸ ನಡೆಯುತ್ತಿರುವುದೇ ಸ್ಯಾಂಡಲ್ ವುಡ್ ಬಿಕ್ಕಟ್ಟು ಇಂದು ಬೃಹದಾಕಾರವಾಗಿ ಬೆಳೆಯಲು ಕಾರಣ. ದಿನದಿಂದ ದಿನಕ್ಕೆ ಚಿತ್ರೋದ್ಯಮದಲ್ಲಿ ಗುಂಪುಗಾರಿಕೆ ಮತ್ತು ಶೀತಲ ಸಮರ ಹೆಚ್ಚುತ್ತಲೇ ಬರುತ್ತಿರುವುದು ಯಾರಿಗೂ ಒಳ್ಳೆಯದಲ್ಲ.

ಶೀತಲ ಸಮರಕ್ಕೆ ತುಪ್ಪ ಸುರಿದ ಅಭಿಮಾನಿಗಳು

ರಣವಿಕ್ರಮ ಚಿತ್ರದ ವೇಳೆ ರನ್ನ ಟ್ರೇಲರ್ ಪ್ರದರ್ಶಿಸಿದ ನಂತರ ಸಂತೋಷ್ ಚಿತ್ರಮಂದಿರದಲ್ಲಿ ನಡೆದ ಘಟನೆ ಚಿತ್ರೋದ್ಯಮದ ಹಿತದೃಷ್ಟಿಯಲ್ಲಿ ಒಳ್ಳೆ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಘಟನೆಯ ಹಿಂದಿನ ಅಭಿಮಾನಿಗಳ ಹುಚ್ಚುತನದ ಪರಮಾವಧಿಗೂ ನಟರಿಗೂ ನೇರ ಸಂಬಂಧವಿಲ್ಲದಿದ್ದರೂ, ಸುದೀಪ್, ದರ್ಶನ್ / ರಾಜ್ ಕುಟುಂಬದ ನಡುವೆ ನಡೆಯುತ್ತಿದೆ ಎನ್ನಲಾಗುತ್ತಿರುವ ಶೀತಲ ಸಮರಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ ಎನ್ನುವುದು ಈ ಅಭಿಮಾನಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ?

ರನ್ನ ಟ್ರೇಲರ್, ಉತ್ತಮ ನಡೆ

ಪುನೀತ್ ಚಿತ್ರದ ವೇಳೆ 'ರನ್ನ' ಚಿತ್ರದ ಟ್ರೇಲರ್ ಪ್ರದರ್ಶನಕ್ಕೆ ಮುಂದಾಗಿದ್ದು ಉತ್ತಮ ಬೆಳವಣಿಗೆ. ರಣವಿಕ್ರಮ ಚಿತ್ರದ ವೇಳೆ ರನ್ನ, ರನ್ನ ಚಿತ್ರದ ವೇಳೆ ವಜ್ರಕಾಯ ಚಿತ್ರದ ಟ್ರೈಲರ್ ತೋರಿಸಿದ್ದರೆ/ ತೋರಿಸಿದರೆ ನಮ್ಮ ಚಿತ್ರೋದ್ಯಮದ ಹಿತದೃಷ್ಟಿಯಿಂದ ಆಶಾದಾಯಕ ಲಕ್ಷಣವಾಗಬಹುದಾಗಿತ್ತು.

ಯಶ್ ಕೂಡಾ ಹೇಳಿದ್ದರು

ರಾಕಿಂಗ್ ಸ್ಟಾರ್ ಯಶ್ ಕೂಡಾ ಇತ್ತೀಚೆಗೆ, ನಾವೆಲ್ಲಾ ಒಂದೇ, ನಮ್ಮ ನಮ್ಮಲ್ಲಿ ತಂದಿಡುವ ಪ್ರಯತ್ನಕ್ಕೆ ಯಾರೂ ಮುಂದಾಗಬೇಡಿ. ಇಲ್ಲಿ ಯಾರೂ ದೊಡ್ಡವರಿಲ್ಲ, ಸಣ್ಣವರಿಲ್ಲ ಎಲ್ಲಾ ಒಂದೇ, ನಾವೆಲ್ಲರೂ ಕನ್ನಡ ಚಿತ್ರೋದ್ಯಮದವರು ಎಂದು ಸಾರಿ ಸಾರಿ ಹೇಳಿದ್ದರೂ, ಅಭಿಮಾನಿಗಳ ಅತಿರೇಕ ಮುಂದುವರಿಯುತ್ತಲೇ ಇದೆ.

ಅಭಿಮಾನಿಗಳಿಗೆ ಬುದ್ದಿ ಹೇಳಬೇಕಾದವರು ನಟರು

ನಮ್ಮ ಬಾಸ್ ಸಿನಿಮಾದಲ್ಲಿ ಅವನ ಸಿನಿಮಾದ ಟ್ರೇಲರ್ ಯಾಕೆ ತೋರಿಸುತ್ತೀರಾ ಎನ್ನುವ ಇಂತಹ ಅಂಧ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಾದವರು, ದೂರ ಇಡಬೇಕಾದವರು ಖುದ್ದು ನಟರು. ಜೊತೆಗೆ ಇದರಿಂದ ಲಾಭ ಪಡೆದುಕೊಳ್ಳುವವರ ಜೊತೆ ಅಂತರ ಕಾಪಾಡಿಕೊಳ್ಳಬೇಕಾದವರೂ ನಟರೇ.

ಚಿತ್ರೋದ್ಯಮಕ್ಕೆ ಒಳ್ಳೆದಾಗಲೆಂದು ಹಾರೈಸುತ್ತಲೇ ಇದ್ದೇವೆ

ಗಂಧದಗುಡಿ, ರಾಜ್ ಕಪ್ ನಂತಹ ಘಟನೆಗಳು ಮತ್ತೆ ಮರುಕಳಿಸಿದರಲಿ, ನಟರ ಮಧ್ಯೆ ಇನ್ನಷ್ಟು ಕಂದಕ ಮೂಡದಿರಲಿ, ನಮ್ಮ ಚಿತ್ರೋದ್ಯಮಕ್ಕೆ ಒಳ್ಳೆದಾಗಲಿ ಎನ್ನುವುದೇ ಎಲ್ಲರ ಆಶಯ. ಏನೇ ಬರಲಿ ಒಗ್ಗಟ್ಟಿರಲಿ, ವಿಕೃತ ಅಭಿಮಾನಕ್ಕೆ ಧಿಕ್ಕಾರವಿರಲಿ. ನೀವೇನಂತೀರಿ ಓದುಗ ದೇವರುಗಳೇ?

English summary
Sandalwood actors differences between each and other continuing day by day. It proved again when Ranavikrama first day first show screening at Santosh theater, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada