For Quick Alerts
  ALLOW NOTIFICATIONS  
  For Daily Alerts

  ಮುಳ್ಳಿನ ಹಾದಿಯಲ್ಲೇ ಪಯಣಿಸಿ 'ಭಜರಂಗಿ 2' ತಲುಪಿದ ಲೋಕಿ

  |

  ತೆರೆಯ ಮೇಲೆ ನಟ-ನಟಿಯರ ಲುಕ್‌, ಅವರ ಮೈಕಟ್ಟು ನೋಡಿ ಪ್ರೇಕ್ಷಕರು ಅಬ್ಬಾ ಎಂದುಕೊಳ್ಳುತ್ತಾರೆ. ಸಿನಿಮಾ ಪರದೆಯ ಮೇಲೆ ನಟರ ಸಿಕ್ಸ್‌ ಪ್ಯಾಕ್ಸ್, ಉಬ್ಬಿದ ಎದೆ, ತೋಳುಗಳಷ್ಟೆ ಕಾಣುತ್ತವೆ ಆದರೆ ಅದರ ಹಿಂದಿನ ಶ್ರಮದ ಅರಿವು ನಮಗಿರುವುದಿಲ್ಲ.

  ಅತ್ಯುತ್ತಮ ದೇಹದಾರ್ಢ್ಯ ಹೊಂದಿರುವ ಕನ್ನಡದ ನಟರಲ್ಲಿ ಸೌರವ್ ಲೋಕಿ ಅಲಿಯಾಸ್ ಭಜರಂಗಿ ಲೋಕಿ ಸಹ ಒಬ್ಬರು. ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿರುವ 'ಭಜರಂಗಿ 2' ಸಿನಿಮಾದಲ್ಲಿಯೂ ಲೋಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಭಜರಂಗಿ 2' ಸಿನಿಮಾದಲ್ಲಿ ಲೋಕಿಯ ಅಂಗಸೌಷ್ಟವ ಮೊದಲ 'ಭಜರಂಗಿ' ಸಿನಿಮಾಕ್ಕಿಂತಲೂ ಹುರಿಗಟ್ಟಿದಂತೆ ಕಾಣುತ್ತಿದೆ.

  ಆದರೆ 'ಭಜರಂಗಿ 2' ಸಿನಿಮಾದ ಪಯಣ ಲೋಕಿಗೆ ಸುಲಭವಾಗಿರಲಿಲ್ಲ. ಬರೀ ಮುಳ್ಳೇ ತುಂಬಿದ್ದ ಹಾದಿ ಅದು. ಸೌರವ್ ಲೋಕಿ 'ಭಜರಂಗಿ 2' ಸಿನಿಮಾದ 'ಸುಧೀಂದ್ರ' ಆಗಲು ಬಹಳ ಕಷ್ಟಪಟ್ಟಿದ್ದಾರೆ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಹ. ಅವರ ಈ ಕಷ್ಟದ ಹಾದಿಯ ಬಗ್ಗೆ ಅವರೇ ಮಾತನಾಡಿದ್ದಾರೆ, ತಾವು ಎದುರಿಸಿದ ಸಮಸ್ಯೆಗಳು, ಅವನ್ನು ದಾಟಿದ ಪರಿ ಹೇಗೆಂದು ವಿವರಿಸುವ ವಿಡಿಯೋ ಒಂದನ್ನು ಪ್ರಸ್ತುತಿ ಪಡಿಸಿದ್ದಾರೆ.

  'ಭಜರಂಗಿ' ಸಿನಿಮಾದಲ್ಲಿ ಲೋಕಿ ಮಾಡಿದ್ದ ಪಾತ್ರ ಬಹಳ ಹಿಟ್ ಆಗಿತ್ತಾದರೂ 'ಭಜರಂಗಿ 2' ಸಿನಿಮಾದಲ್ಲಿ ಅವರಿಗಾಗಿ ಯಾವ ಪಾತ್ರವೂ ಇರಲಿಲ್ಲ. ಆ ನಂತರ ನಿರ್ದೇಶಕ ಹರ್ಷ ಪಾತ್ರವೊಂದಕ್ಕೆ ಸೌರವ್ ಲೋಕಿಯನ್ನು ಗೊತ್ತುಮಾಡಿ, ಆ ಪಾತ್ರಕ್ಕೆ ಕೆಲವು ವ್ಯಕ್ತಿತ್ವಗಳನ್ನು ತುಂಬಿದರು. 'ಭಜರಂಗಿ 2' ಸಿನಿಮಾದಲ್ಲಿ 'ಸುಧೀಂದ್ರ' ಪಾತ್ರಕ್ಕೆ ಇಂಥಹಾ ಮೈಕಟ್ಟು ಬೇಕೆಂದು ಹರ್ಷಾ ಹೇಳಿದಾಗ ಲೋಕಿಗೆ ಮನಸ್ಸಿನಾಳದಲ್ಲಿ ಭಯವೊಂದು ಹುಟ್ಟಿತಂತೆ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಶ್ರಮ ಬೇಡುವ ಪಾತ್ರ ಅದಾಗಿತ್ತು ಎಂಬುದೇ ಲೋಕಿಯ ಭಯಕ್ಕೆ ಕಾರಣ.

  ನಟನಾ ಕಾರ್ಯಾಗಾರ ಸೇರಿಕೊಂಡ ಲೋಕಿ

  ನಟನಾ ಕಾರ್ಯಾಗಾರ ಸೇರಿಕೊಂಡ ಲೋಕಿ

  ಪಾತ್ರ ನಿಶ್ಚಯ ಆಗುತ್ತಿದ್ದಂತೆ ನಟನೆಯ ವರ್ಕ್‌ಶಾಪ್‌ ಒಂದಕ್ಕೆ ಸೇರಿಕೊಂಡರು ಲೋಕಿ, ಅಲ್ಲಿ ಇತರ ಕೆಲವು ವಿದ್ಯಾರ್ಥಿಗಳ ಜೊತೆ ಸೇರಿ ನಟನೆಯನ್ನು ಮತ್ತೊಮ್ಮೆ ಕಲಿಯುವ ಯತ್ನ ಮಾಡಿದರು. ನವರಸಗಳನ್ನು ಹೊಮ್ಮಿಸುವುದನ್ನು ಕಲಿಯಲು ಆರಂಭಿಸಿದರು. ಇದರ ಜೊತೆಗೆ ಜಿಮ್ ಸಹ ಸೇರಿಕೊಂಡರು. ದೇಹವನ್ನು ಸಾಮಾನ್ಯ ಸ್ಥಿತಿಯಿಂದ ಹುರಿಗಟ್ಟಿಸಿಕೊಳ್ಳಲು ಆರಂಭಿಸಿದರು. ಆದರೆ ವಿಧಿ ಅವರಿಗೆ ವಿರುದ್ಧವಾಗಿ ನಿಂತಿತ್ತು. ಜಿಮ್ ವರ್ಕೌಟ್‌ ಆರಂಭಿಸಿ ಇನ್ನೇನು ದೇಹದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದೆ ಎಂದಾಗಲೇ ಭುಜದಲ್ಲಿ ಗಾಯವುಂಟಾಯಿತು.

  ಬೆನ್ನುತಟ್ಟಿದ ನಿರ್ದೇಶಕ ಹರ್ಷ

  ಬೆನ್ನುತಟ್ಟಿದ ನಿರ್ದೇಶಕ ಹರ್ಷ

  ಅತಿಯಾದ ಭಾರ ಎತ್ತುವಿಕೆಯಿಂದಾಗಿ ಭುಜದ ಮೂಳೆ ಊತ ಬಂದುಬಿಟ್ಟಿತ್ತು. ಹಾಗಾಗಿ ಲೋಕಿಗೆ ಜಿಮ್ ಮಾಡುವುದು ಅಸಾಧ್ಯವಾಯಿತು. ಕೊನೆಗೆ ನಿಶ್ಚಯ ಮಾಡಿ, ತಾವು ಪಾತ್ರ ಮಾಡುವುದಿಲ್ಲವೆಂದು ಹೇಳಲು ಹರ್ಷ ಅವರ ಕಚೇರಿಗೆ ಹೋದರೆ ಅಲ್ಲಿಯೂ ಅದೇ ಚರ್ಚೆ. ತಮಗೆ ಭುಜದ ಸಮಸ್ಯೆ ಆಗಿದೆ, ತಾವು ನಟಿಸಲು ಸಾಧ್ಯವಿಲ್ಲವೆಂದು ಲೋಕಿ ಹೇಳಿದರಾದರೂ ಹರ್ಷ ಬಿಡಲಿಲ್ಲ. ''ನಿನಗೆ ಇನ್ನೊಂದಿಷ್ಟು ಸಮಯವಿದೆ, ಪ್ರಯತ್ನ ಬಿಡಬೇಡ, ಆಮೇಲೆ ಬಂದಿದ್ದು ನೋಡುವ'' ಎಂದರು. ಹರ್ಷ ಇಟ್ಟಿದ್ದ ನಂಬಿಕೆ ಲೋಕಿಯನ್ನು ಮತ್ತೆ ವ್ಯಾಯಾಮದಲ್ಲಿ ತೊಡಗಿಕೊಳ್ಳುವಂತೆ ಮಾಡಿತು, ಪಾತ್ರ ಮಾಡಿಯೇ ತೀರಬೇಕೆನ್ನುವ ಆಸೆಯನ್ನು ಇನ್ನಷ್ಟು ಗಟ್ಟಿ ಮಾಡಿತು.

  ಗಾಯದ ಬಳಿಕ ಬಹಳ ಶ್ರಮಪಟ್ಟ ಲೋಕಿ

  ಗಾಯದ ಬಳಿಕ ಬಹಳ ಶ್ರಮಪಟ್ಟ ಲೋಕಿ

  ಮತ್ತೆ ಜಿಮ್‌ ಹಾಗೂ ನಟನೆ ಕಾರ್ಯಾಗಾರಕ್ಕೆ ಬಂದ ಲೋಕಿ ಜಿಮ್‌ನಲ್ಲಿ ತೀರ ಕಡಿಮೆ ಭಾರಗಳನ್ನು ಎತ್ತುತ್ತಾ ನಿಧಾನಕ್ಕೆ ವರ್ಕೌಟ್ ಆರಂಭಿಸಿದರು. ವೈದ್ಯರ, ಜಿಮ್ ಟ್ರೈನರ್‌ನ ಮಾರ್ಗದರ್ಶನದಲ್ಲಿ ಭುಜದ ಗಾಯವನ್ನು ಹೋಗಲಾಡಿಸಿಕೊಂಡು ನಿಧಾನಕ್ಕೆ ವರ್ಕೌಟ್ ಪ್ರಾರಂಭ ಮಾಡಿ ಹಂತ-ಹಂತವಾಗಿ ಮತ್ತೆ ಹಳೆಯ ರೀತಿಯಲ್ಲಿ ವರ್ಕೌಟ್ ಪ್ರಾರಂಭ ಮಾಡಿದರು. ಸಿನಿಮಾದಲ್ಲಿನ ತಮ್ಮ ಪಾತ್ರದ ಚಿತ್ರೀಕರಣಕ್ಕೆ ಇನ್ನೈದು ದಿನ ಇದೆ ಎನ್ನುವಾಗಾಗಲೇ ಸೌರವ್ ಲೋಕಿ, 'ಭಜರಂಗಿ 2' ನ 'ಸುಧೀಂದ್ರ'ನ ಲುಕ್‌ಗೆ ಬಂದಾಗಿತ್ತು. ಆದರೆ ಇಲ್ಲಿ ಮತ್ತೊಮ್ಮೆ ವಿಧಿ, ಲೋಕಿಯ ವೇಗಕ್ಕೆ ಅಡ್ಡಗಾಲು ಹಾಕಿತು. ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಯಿತು.

  ಮನೆಯಲ್ಲೇ ಸಿಗುವ ವಸ್ತುಗಳಿಂದ ಜಿಮ್!

  ಮನೆಯಲ್ಲೇ ಸಿಗುವ ವಸ್ತುಗಳಿಂದ ಜಿಮ್!

  ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ರದ್ದಾಯಿತು. ಬಹಳ ಕಷ್ಟಪಟ್ಟು ದೇಹವನ್ನು ಹುರಿಗಟ್ಟಿಸಿದ್ದ ಲೋಕಿಗೆ ದಿಕ್ಕೇ ತೋಚದಂತಾಯಿತು. ಜಿಮ್‌ಗಳು ತೆರೆದಿಲ್ಲವಾದ್ದರಿಂದ ಹುರಿಗಟ್ಟಿಸಿದ ದೇಹವನ್ನು ಹಾಗೆಯೇ ಉಳಿಸಿಕೊಳ್ಳುವುದು ಲೋಕಿಗೆ ಬಹಳ ದೊಡ್ಡ ಸಮಸ್ಯೆಯಾಯಿತು. ಆದರೆ ಲೋಕಿ ಸುಮ್ಮನೆ ಕೂರಲಿಲ್ಲ, ಅವರು ಇತರರಂತೆ ಮೈಮರೆತು ಲಾಕ್‌ಡೌನ್ ಕೊಟ್ಟ ರಜೆಯನ್ನು ಎಂಜಾಯ್ ಮಾಡುವುದರಲ್ಲಿ ನಿರತರಾಗಿದ್ದಿದ್ದರೆ ಶ್ರಮವೆಲ್ಲ ವ್ಯರ್ಥವಾಗುತ್ತಿತ್ತು. ಹಾಗಾಗಿ ತಮ್ಮ ಮನೆಯ ತಾರಸಿ ಮೇಲೆಯೇ ತಾವೇ ಒಂದು ಜಿಮ್‌ ಮಾಡಿಕೊಂಡರು, ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಭಾರ ಎತ್ತುವ, ಇನ್ನಿತರೆ ಜಿಮ್‌ ವರ್ಕೌಟ್ ಮಾಡಲು ಆರಂಭಿಸಿದರು. ಪ್ರತಿದಿನ ಜಾಗಿಂಗ್ ತಪ್ಪಿಸಲಿಲ್ಲ. ಸೀಮಿತ ಸಂಪನ್ಮೂಲಗಳನ್ನೇ ಬಳಸಿ ತಮ್ಮ ಅಂಗಸೌಷ್ಟವವನ್ನು ಕಾದಿಟ್ಟುಕೊಂಡರು ಲೋಕಿ. ಉಬ್ಬಿದ ತೋಳುಗಳನ್ನು ಕರಗಲು ಬಿಡಲಿಲ್ಲ.

  ಸುಮ್ಮನೆ ಕುಳಿತಿದ್ದಿದ್ದರೆ ಸಾಧ್ಯವಾಗುತ್ತಿರಲಿಲ್ಲ

  ಸುಮ್ಮನೆ ಕುಳಿತಿದ್ದಿದ್ದರೆ ಸಾಧ್ಯವಾಗುತ್ತಿರಲಿಲ್ಲ

  ಕೊನೆಗೆ ಚಿತ್ರೀಕರಣಕ್ಕೆ ಇನ್ನಿಪ್ಪತ್ತು ದಿನ ಇರುವಾಗ ಮತ್ತೆ ಜಿಮ್‌ ತೆರೆದವು. ಮತ್ತೆ ಜಿಮ್‌ಗೆ ಆಗಮಿಸಿದ ಸೌರವ್ ಲೋಕಿ ಸಂಪೂರ್ಣ ವರ್ಕೌಟ್ ಮೂಲಕ ದೇಹವನ್ನು ಇನ್ನಷ್ಟು ಹುರಿಗೊಳಿಸಿಕೊಂಡರು. ಒಂದೊಮ್ಮೆ ಲೋಕಿ, ಲಾಕ್‌ಡೌನ್ ಅವಧಿಯಲ್ಲಿ ಎಲ್ಲರಂತೆ ಮನೆಯಲ್ಲಿ ಸುಮ್ಮನೆ ಕೂತಿದ್ದಿದ್ದರೆ ಕೇವಲ ಇಪ್ಪತ್ತು ದಿನದಲ್ಲಿ ದೇಹವನ್ನು ಹುರಿಗೊಳಿಸಿ ಪಾತ್ರ ಬೇಡುವ ಅಂಗಸೌಷ್ಟವ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಲೋಕಿ ಅವರ ಶ್ರಮಕ್ಕೆ ತಕ್ಕ ಫಲವೇ ಸಿಕ್ಕಿದ್ದು, ತೆರೆಯ ಮೇಲೆ ಲೋಕಿಯವರ ದೇಹ ಅದ್ಭುತವಾಗಿ ಕಾಣುತ್ತದೆ. ಲೋಕಿಯವರ ದೇಹ ಬದಲಾವಣೆಯನ್ನು ನಿರ್ದೇಶಕ ಹರ್ಷಾ, ನಟ ಶಿವರಾಜ್ ಕುಮಾರ್ ಸಹ ಮೆಚ್ಚಿಕೊಂಡಿದ್ದಾರೆ. ತಮ್ಮ 'ಭಜರಂಗಿ 2' ಜರ್ನಿಯ ಬಗ್ಗೆ ಮಾತನಾಡಿರುವ ಲೋಕಿ, ಇದರಿಂದ ನಾನು ಕಲಿತ ಪಾಠವೆಂದರೂ 'ಎಂದಿಗೂ ನಿಲ್ಲದಿರು, ಶ್ರಮವನೆಂದೂ ನಿಲ್ಲಿಸದಿರು' ಎಂಬುದು ಎಂದಿದ್ದಾರೆ. ಜೊತೆಗೆ ತಮ್ಮ ನಾಟಕವೊಂದನ್ನು ನೋಡಿ 'ಭಜರಂಗಿ' ಸಿನಿಮಾದಲ್ಲಿ ಪಾತ್ರ ನೀಡಿದ ನಿರ್ದೇಶಕ ಹರ್ಷ ಅವರಿಗೂ, ಹೊಸಬನಾಗಿದ್ದರು ತಮ್ಮನ್ನು ಸ್ವೀಕರಿಸಿದ ನಟ ಶಿವರಾಜ್ ಕುಮಾರ್ ಅವರಿಗೆ ಹಾಗೂ ತಮ್ಮ ಈ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಲೋಕಿ.

  English summary
  Actor Saurav Loki faces many challenges to act in Bhajarangi 2. He encounter injuries, lock down set back and many more but he crossed all hurdles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X