For Quick Alerts
  ALLOW NOTIFICATIONS  
  For Daily Alerts

  ಎಸ್.ಟಿ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ: ನಟ ಶಶಿಕುಮಾರ್ ಹೇಳಿಕೆ

  By ಚಿತ್ರದುರ್ಗ ಪ್ರತಿನಿಧಿ
  |

  ನಟ ಶಶಿಕುಮಾರ್ ಪುತ್ರ ಸಿನಿಮಾ ರಂಗ ಪ್ರವೇಶಿಸಿ ಒಂದೊಂದೆ ಪುಟ್ಟ-ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದ್ದಾರೆ. ಈ ನಡುವೆ ಶಶಿಕುಮಾರ್ ರಾಜಕೀಯದತ್ತ ಗಮನ ಹರಿಸಲು ನಿರ್ಧರಿಸಿದ್ದು, ಮಂಕಾಗಿರುವ ರಾಜಕೀಯದ ಗುರುತನ್ನು ಮತ್ತೆ ಹೊಳೆಯುವಂತೆ ಮಾಡುವ ಪ್ರಯತ್ನದಲ್ಲಿದ್ದಾರೆ.

  2023ರ ವಿಧಾನಸಭಾ ಚುನಾವಣೆ ಸುಮಾರು ಹದಿನೈದು ತಿಂಗಳು ಬಾಕಿ ಇರುವಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆಯ ಸಿದ್ಧತೆ ಜೋರಾಗಿದೆ. ಜಿಲ್ಲೆಯ ಎಸ್.ಟಿ. ಮೀಸಲು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಂಸದ ಹಾಗೂ ನಟ ಶಶಿಕುಮಾರ್ ತಿಳಿಸಿದರು.

  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಪ್ರಕಾಶ್ ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕ್ಷೇತ್ರ ಅಂತಿಮವಾಗಿಲ್ಲ, ಈ ಕುರಿತು ಶೀಘ್ರವೇ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ತಿಳಿಸಲಾಗುವುದು ಎಂದರು.

  ಕಳೆದ ಬಾರಿ ಯಾಕೆ ಸ್ಪರ್ಧಿಸಲಿಲ್ಲ ಎನ್ನುವ ಪ್ರಶ್ನೆಗೆ ಟಿಕೆಟ್ ಸಿಗದ ಕಾರಣ ಹೊಸದುರ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ, ಈ ಬಾರಿ ಚುನಾವಣೆಗೆ ಜಿಲ್ಲೆಯ ಎಸ್.ಟಿ ಮೀಸಲು ಕ್ಷೇತ್ರದಿಂದಲೇ ನನ್ನ ಸ್ಪರ್ಧೆ ಎಂದು ಹೇಳಿದರು. ನಾನು ಸಂಸದನಾಗಿದ್ದಾಗ ಕೇವಲ 2 ಕೋಟಿ ಮಾತ್ರ ಅನುದಾನ ಬರುತ್ತಿತ್ತು ಅದರಲ್ಲಿ ಜನರು ಗುರುತಿಸುವ ಕೆಲಸಗಳನ್ನು ಮಾಡಿದ್ದೇನೆ. ಬಂದ ಅನುದಾನದಲ್ಲಿ ಕ್ಷೇತ್ರದ ಜನರು ಹೇಳಿದ ಹಾಗೆ ಕೆಲಸ ಮಾಡಲಾಗಿದೆ ಎಂದು ನಟ ಶಶಿಕುಮಾರ್ ಹೇಳಿದರು. ಈಗ ಶ್ರೀ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿ ಹೊರಟರು.

  1999 (1999-2004) ರಲ್ಲಿ ನಡೆದ ಚಿತ್ರದುರ್ಗ ಲೋಕಸಭಾ ಚುನಾವಣೆ ಕ್ಷೇತ್ರದ ಸಂಯುಕ್ತ ಜನತಾದಳದ ಬಾಣದ ಗುರುತಿನಿಂದ ಸ್ಪರ್ಧಿಸಿ, ಹಳ್ಳಿ ಹಳ್ಳಿಗಳಲ್ಲಿ ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿ ಮತದಾರರನ್ನು ರಂಜಿಸಿ ಮತಪಡೆದು ಅಮೋಘ ಗೆಲುವು ಸಾಧಿಸಿದ್ದರು. ಅದೇ ಹುರುಪಿನಲ್ಲಿಯೂ ಕೆಲಸವನ್ನು ಮಾಡಿದ್ದರು, ಒಂದು ಹಂತದಲ್ಲಿ ತಾನು ಹುಟ್ಟಿ ಬೆಳೆದ ಚಿತ್ರದುರ್ಗದಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮೇಲೆ ಮತದಾರರ ನಿರೀಕ್ಷೆಯಂತೆ ಕೆಲಸ ಮಾಡಲು ಬರುವ ಎರಡು ಕೋಟಿ‌ ಅನುದಾನದಲ್ಲಿ ಸಾಧ್ಯವಾಗದೇ ಹೋದರು ಸಾಕಷ್ಟು ಅಂದರೆ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ನಗರಸಭೆಗೆ ನೀಡಿದ್ದರು, ನಗರಗಳಲ್ಲಿ ಬೀದಿ ದೀಪಗಳನ್ನು ನೀಡುವ ಸಲುವಾಗಿ ಸೋಡಿಯಂ ಲೈಟ್ ಗಳ ವಿತರಿಸಿದ್ದರು, ಲೋಕಸಭಾ ಕ್ಷೇತ್ರದ ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳಲ್ಲಿ ಭದ್ರವಾದ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದರು.

  ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ವಿದ್ಯುತ್ ಕಂಬಗಳಲ್ಲಿ ಮಾಕ್ಯೂರಿ ಲೈಟ್ ಅಳವಡಿಸಲು ಅನುದಾನ ಖರ್ಚು ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಶಶಿಕುಮಾರ್ ಬಸ್ ನಿಲ್ದಾಣ ಎಂದು ಕರೆಯುವಷ್ಟು ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ್ದರು. ಆದರೆ ಅವರ ಅವಧಿ ಮುಗಿದ ಮೇಲೆ ಮತ್ತೆ ಅವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

  ತದನಂತರ 2008 ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಚಿವ ತಿಪ್ಪೇಸ್ವಾಮಿ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು. ಆಗಲೂ ಕೂಡ ಕ್ಷೇತ್ರದಲ್ಲಿ ಜನರ ಜೊತೆ ನಿರಂತರ ಸಂಪರ್ಕವನ್ನಾಗಲಿ ಕ್ಷೇತ್ರದ ಜೊತೆಗೆ ಒಡನಾಟ ವನ್ನಾಗಲಿ ಇಟ್ಟುಕೊಳ್ಳಲಿಲ್ಲ. ಈ ಕಾರಣದಿಂದ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ, ಇದರಿಂದ ಅವರು ದೂರದ ಬೆಂಗಳೂರಿನಲ್ಲಿಯೇ ಉಳಿದು ಕ್ಷೇತ್ರವನ್ನು ಸಂಪೂರ್ಣವಾಗಿಯೇ ಮರೆತು ಹೋಗಿದ್ದರು ಎನ್ನಬಹುದು.

  ನಂತರದ ಚುನಾವಣೆಯಲ್ಲಿ ಟಿಕೆಟ್ ದೊರೆಯಲಿಲ್ಲ. 2018 ರಲ್ಲಿ ಮತ್ತೆ ಚಳ್ಳಕೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಟಿಕೆಟ್ ದೊರೆಯದ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷ ಸೇರಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಪ್ರಚಾರ ನಡಸದೇ ಸುಮಾರು 1500 ಹೆಚ್ಚು ಮತಗಳನ್ನು ಪಡೆದು ಹೀನಾಯ ಸೋತಿದ್ದರು. ಹೀಗೆ ತನ್ನ ರಾಜಕೀಯ ಜೀವನಕ್ಕೆ ಜೀವ ನೀಡಿದ್ದ ಕೋಟೆ ನಾಡನ್ನು ಕಡೆಗಣಿಸಿ ಚುನಾವಣೆ ಬಂದಾಗ ಮಾತ್ರ ಬರುವುದು ಪ್ರಚಾರ ಮಾಡುವುದು ಮಾಡಿದರೂ ಕೂಡ ಜನರ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಆದರೆ ಆ ಪ್ರೀತಿ ಮತಗಳಾಗಿ ಪರಿವರ್ತನೆಯಾಗಲೇ ಇಲ್ಲ.

  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಶಿಕುಮಾರ್ ಜೆಡಿಎಸ್ ಪಕ್ಷ ಸೇರಿರುವುದರಿಂದ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಾರೋ ಅಥವಾ ಬೇರೊಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೋ ತಿಳಿದು ಬಂದಿಲ್ಲ. ಒಂದು ವೇಳೆ ಚಳ್ಳಕೆರೆ ಮೀಸಲು ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕು ಎಂದರೇ ಈಗಾಗಲೇ ಜೆಡಿಎಸ್ ಸಂಭವನೀಯ ಅಭ್ಯರ್ಥಿಯಾಗಿ ರವೀಶ್ ಅವರನ್ನು ಗುರುತಿಸಲಾಗಿದೆ. ಇಲ್ಲವಾದರೆ ಮೊಳಕಾಲ್ಮೂರು ಕ್ಷೇತ್ರದ ಕಡೆ ಗಮನ ಹರಿಸಬೇಕಾಗುತ್ತದೆ.

  ಜಿಲ್ಲೆಯ ಎಸ್.ಟಿ. ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳಲಾಗಿದೆ ಆದರೆ ಯಾವ ಮೀಸಲು ಕ್ಷೇತ್ರ ಎಂದು ನಿಖರವಾಗಿ ತಿಳಿಸಿಲ್ಲ. ಜಿಲ್ಲೆಯಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಎರಡು ಎಸ್.ಟಿ. ಮೀಸಲು ಕ್ಷೇತ್ರಗಳಾಗಿವೆ. ಈ ಎರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೋ ಕಾದು ನೋಡಬೇಕು.

  English summary
  Actor Shashikumar said he will contest 2023 assembly election from ST reserve constituency of Chitradurga. There is two ST reserved constituency in Chitradurga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X