»   » ಕೇಂದ್ರ ಸೆನ್ಸಾರ್ ಬೋರ್ಡ್ ರಿಪೇರಿಗೆ ಬೆನಗಲ್ ನೇತೃತ್ವ

ಕೇಂದ್ರ ಸೆನ್ಸಾರ್ ಬೋರ್ಡ್ ರಿಪೇರಿಗೆ ಬೆನಗಲ್ ನೇತೃತ್ವ

Posted By:
Subscribe to Filmibeat Kannada

ವಿವಾದಗಳಿಂದ ಜರ್ಜರಿತವಾಗಿರುವ ಕೇಂದ್ರ ಸೆನ್ಸಾರ್ ಬೋರ್ಡನ್ನು ಅಮೂಲಾಗ್ರವಾಗಿ ರಿಪೇರಿ ಮಾಡುವ ಉದ್ದೇಶದಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ನೇತೃತ್ವದಲ್ಲಿ ತಂಡವನ್ನು ಮಾಹಿತಿ ಮತ್ತು ಪ್ರಸಾರ ಮಂತ್ರಾಲಯ ಶುಕ್ರವಾರ ರಚಿಸಿದೆ.

ಬೆನಗಲ್ ಅವರ ಜೊತೆ ನಿರ್ದೇಶಕರಾದ ರಂಗ್ ದೇ ಬಸಂತಿ ಖ್ಯಾತಿಯ ರಾಕೇಶ್ ಓಂಪ್ರಕಾಶ್ ಮೆಹ್ರಾ, ಪಿಯೂಷ್ ಪಾಂಡೆ, ಚಿತ್ರವಿಮರ್ಶಕ ಭಾವನಾ ಸೋಮಯ್ಯ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿಯ ನೀನಾ ಲಾತ್ ಗುಪ್ತಾ, ಜಂಟಿ ಕಾರ್ಯದರ್ಶಿ (ಚಲನಚಿತ್ರ) ಸಂಜಯ್ ಮೂರ್ತಿ ಅವರಿರುವ ತಂಡ, ಎರಡು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿಕೋನಕ್ಕನುಗುಣವಾಗಿ ಈ ತಂಡವನ್ನು ರಚಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವಾಗ ಸೆನ್ಸಾರ್ ಬೋರ್ಡ್ ನಿರ್ದಿಷ್ಟ ಚೌಕಟ್ಟಿನಲ್ಲಿ ಹೇಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಈ ತಂಡ ಶಿಫಾರಸು ಮಾಡಲಿದೆ.

Shyam Benegal to revamp Central Censor board

ಕೇಂದ್ರ ಸರಕಾರ ತನಗೆ ವಹಿಸಿರುವ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದೇನೆ. ಆದರೆ, ಈ ಸಮಿತಿಯ ಮುಂದೆ ಏನೇನು ಅಜೆಂಡಾ ಇದೆ ಎಂಬುದನ್ನು ನನಗೆ ಇನ್ನೂ ಪೂರ್ತಿಯಾಗಿ ತಿಳಿದಿಲ್ಲ ಎಂದು ಡಿಸೆಂಬರ್ 14ರಂದು 81 ವರ್ಷಕ್ಕೆ ಕಾಲಿಟ್ಟ ಶ್ಯಾಮ್ ಬೆನಗಲ್ ಅವರು ಮಾಧ್ಯಮಗಳಿಗೆ ತಿಳಿಸಿದರು.

ಕಳೆದ ವರ್ಷದ ಆರಂಭದಲ್ಲಿ ಪಹ್ಲಾಜ್ ನಿಹ್ಲಾನಿ ಅವರು ಸೆನ್ಸಾರ್ ಬೋರ್ಡ್ ನೇತೃತ್ವ ವಹಿಸಿಕೊಂಡ ನಂತರ ಹಲವಾರು ವಿವಾದಗಳನ್ನು ಹುಟ್ಟುಹಾಕಿತ್ತು. ಅವರು ಮಾಡಿದ್ದ ಕೆಟ್ಟಪದಗಳ ಪಟ್ಟಿ ಸೆನ್ಸಾರ್ ಮಂಡಳಿ ಸದಸ್ಯರಿಂದಲೇ ತೀವ್ರ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ನರೇಂದ್ರ ಮೋದಿ ಅವರ ಕುರಿತು ಪಹ್ಲಾಜ್ ನಿರ್ಮಿಸಿದ್ದ ಸಂಗೀತ ವಿಡಿಯೋ ಸಚಿವಾಲಯದ ಕೆಂಗಣ್ಣಿಗೆ ಗುರಿಯಾಗಿತ್ತು.

ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಅಂದು ಚೇರ್ಮನ್ ಆಗಿದ್ದ ಲೀಲಾ ಸ್ಯಾಮ್ಸನ್ ಅವರ ಜೊತೆ 13 ಸದಸ್ಯರು ಕಳೆದ ವರ್ಷಾರಂಭದಲ್ಲಿ ಸೆನ್ಸಾರ್ ಮಂಡಳಿ ತೊರೆದಿದ್ದರು. ಇಡೀ ಸೆನ್ಸಾರ್ ಮಂಡಳಿಯನ್ನು ಕಿತ್ತುಹಾಕಬೇಕೆಂದು ಶ್ಯಾಮ್ ಬೆನಗಲ್ ಅವರೇ ಶಿಫಾರಸು ಮಾಡಿದ್ದರು.

ಶ್ಯಾಮ್ ಬೆನಗಲ್ ಚಿತ್ರಗಳು : ಭಾರತ ಕಂಡ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಿರುವ ಶ್ಯಾಮ್ ಬೆನಗಲ್ ಗಳಿಸಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಹಲವಾರು. ಅಂಕುರ್, ನಿಶಾಂತ್, ಆರೋಹಣ್, ತ್ರಿಕಾಲ್, ಸೂರಜ್ ಕಾ ಸಾತ್ವಾ ಘೋಡಾ, ದಿ ಮೇಕಿಂಗ್ ಆಫ್ ಮಹಾತ್ಮ, ಜುಬೇದಾ ಇವು ಬೆನಗಲ್ ನಿರ್ದೇಶಿಸಿರುವ ಪ್ರಮುಖ ಚಿತ್ರಗಳು.

English summary
The information and broadcasting ministry on Friday constituted a panel under director, Dada Saheb Phalke awardee Shyam Benegal to give recommendations for restructuring of censor board, which has been mired in controversies in the recent past.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada