twitter
    For Quick Alerts
    ALLOW NOTIFICATIONS  
    For Daily Alerts

    ಎಸ್ ಪಿ ಬಾಲಸುಬ್ರಹ್ಮಣ್ಯಂ ಪುಣ್ಯಸ್ಮರಣೆ: 'ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು' ಎಸ್ಪಿಬಿ ಕೊನೆಯಾಸೆ

    By ರವೀಂದ್ರ ಕೊಟಕಿ
    |

    ಕಾಲ ಎಷ್ಟು ವೇಗವಾಗಿ ಓಡುತ್ತದೆ ಅಂತ ಗೊತ್ತಾಗಬೇಕಾದರೆ ಒಂದು ಕ್ಷಣ ಕಾಲದ ಬೆನ್ನಿಗೆ ಬೆನ್ನುಕೊಟ್ಟು ನೋಡಿದಾಗ ಆಗಲೇ ಎಷ್ಟು ಸಮಯ ನೋಡ ನೋಡಿದಂತೆ ಕಳೆದು ಹೋಗಿದೆ ಅಂತ ತಿಳಿಯುತ್ತದೆ. ಹೀಗೆ ಕಾಲದ ವಿಷಯ ಪ್ರಸ್ತಾಪ ಮಾಡಲು ಕಾರಣ ಗಾನಗಂಧರ್ವ ಎಸ್ .ಪಿ. ಬಾಲಸುಬ್ರಹ್ಮಣ್ಯಂ ಅವರು ಕಾಲದ ಕರೆಗೆ ಓಗೊಟ್ಟು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು.

    ಹೌದು ಎಸ್ಪಿಬಿ ಅವರು ಕಳೆದ ವರ್ಷದ ಇದೇ ದಿನ ಅಂದರೆ ಸೆಪ್ಟೆಂಬರ್ 25, 2020 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಸಂಗೀತ ಪ್ರಪಂಚದ ಧ್ರುವತಾರೆ , ಸ್ವರ ಸಾಮ್ರಾಟ್ ಶ್ರೀಪತಿ ಪಂಡಿತಾರಾಧ್ಯಲ ಬಾಲಸುಬ್ರಹ್ಮಣ್ಯಂ ಭೌತಿಕವಾಗಿ ಭಾರತೀಯ ಸಂಗೀತ ಪ್ರಪಂಚವನ್ನು ಶಾಶ್ವತವಾಗಿ ಇದೇ ದಿನ ತೊರೆದು ಹೋದರು.

    ಕಲಾ ಜಗತ್ತಿನ ಆಲ್-ರೌಂಡರ್

    ಕಲಾ ಜಗತ್ತಿನ ಆಲ್-ರೌಂಡರ್

    ಭಾರತೀಯ ಸಂಗೀತ ಪ್ರಪಂಚವನ್ನು ತೆಗೆದುಕೊಂಡರೆ ಅಲ್ಲಿ ನಮಗೆ ಮಹಮ್ಮದ್ ರಫಿ, ಕಿಶೋರ್ ಕುಮಾರ್, ಕೆ ಜೆ ಏಸುದಾಸ್, ಲತಾ ಮಂಗೇಶ್ಕರ್,

    ಆಶಾ ಭೋಂಸ್ಲೆ ಅಂತಹ ಮಹಾನ್ ಗಾಯಕ-ಗಾಯಕಿಯರು ಸಿಗುತ್ತಾರೆ. ಆದರೆ ಇವರೆಲ್ಲರಿಗಿಂತ ಎಸ್ಪಿಬಿ ವಿಶೇಷ. ಏಕೆಂದರೆ, ಎಸ್ಪಿಬಿ ಕೇವಲ ಗಾಯಕರು ಮಾತ್ರವಲ್ಲ, ಸಂಗೀತ ನಿರ್ದೇಶಕ, ನಟ-ನಿರ್ಮಾಪಕ ಡಬ್ಬಿಂಗ್ ಆರ್ಟಿಸ್ಟ್, ನಿರೂಪಕ ಇದೆಲ್ಲದಕ್ಕಿಂತ ಮಿಗಿಲಾಗಿ ಸಂಗೀತ ಸಾಧಕರಿಗೆ ಅವರೊಂದು ಸ್ಪೂರ್ತಿದಾಯಕ ವ್ಯಕ್ತಿತ್ವ. ಅದು ಕನ್ನಡದ 'ಎದೆ ತುಂಬಿ ಹಾಡುವೆನು' ಇರಬಹುದು ಅಥವಾ ತೆಲುಗಿನ 'ಪಾಡುತ ತೀಯಗಾ' ಆಗಬಹುದು ಅವರು ಕಾರ್ಯಕ್ರಮಗಳನ್ನು ನಿರೂಪಿಸಿದ್ದಲ್ಲ, ಬದಲಾಗಿ ಸಾವಿರಾರು ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ, ಅವರಲ್ಲಿರುವ ಭಯವನ್ನು ತೊಡೆದು ಹಾಕಿ, ಗುರುವಾಗಿ ಮಾರ್ಗದರ್ಶನ ಮಾಡಿ, ಇವರನ್ನೆಲ್ಲ ಭವಿಷ್ಯದ ಸಂಗೀತಗಾರನಾಗಿ ರೂಪಿಸಿದ ಮಹಾಶಕ್ತಿ. ಅದಕ್ಕೆ ಅವರು ಇಂದಿಗೂ ಕೂಡ ಸಂಗೀತ ಸಾಮ್ರಾಜ್ಯದ ಮಹಾರಾಜ. ಪ್ರತಿಭೆಗಳಿಗೆ ಸದಾ ಸ್ಪೂರ್ತಿದಾಯಕ.

    40000 ಹಾಡುಗಳ ಸರದಾರ

    40000 ಹಾಡುಗಳ ಸರದಾರ

    ದಕ್ಷಿಣ ಭಾರತದ ಯಾವುದೇ ಭಾಷೆಯ 10 ಸೂಪರ್ ಹಿಟ್ ಸಾಂಗ್ ಗಳನ್ನು ತೆಗೆದುಕೊಂಡರೆ ಅದರಲ್ಲಿ ಖಂಡಿತ 8 ಹಾಡುಗಳು ಎಸ್ಪಿಬಿ ಅವರದೇ ಆಗಿರುತ್ತದೆ.

    ಎಸ್ಪಿಬಿ ಒಟ್ಟು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ.ಇದು ಗಾಯಕನೊಬ್ಬ ಅತಿ ಹೆಚ್ಚು ಹಾಡುಗಳು ಹಾಡಿದ ಗಿನ್ನಿಸ್ ದಾಖಲೆ ಕೂಡ ಎಸ್ಪಿಬಿ ಅವರ ಹೆಸರಿನಲ್ಲಿ ದಾಖಲೆಯಾಗಿದೆ.

    ಮತ್ತೆ ಬರುವೆ ಅಂತ ಹೇಳಿದ್ದ ಎಸ್ಪಿಬಿ

    ಮತ್ತೆ ಬರುವೆ ಅಂತ ಹೇಳಿದ್ದ ಎಸ್ಪಿಬಿ

    ಆಗಸ್ಟ್ 5, 2020 ರಂದು ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಗೆ ದಾಖಲಾದ ನಂತರವೂ ಲವಲವಿಕೆಯಿಂದಲೇ 'ನಾನು ಸಂಪೂರ್ಣವಾಗಿ ಕೊರೊನಾದಿಂದ ಗುಣಮುಖನಾಗಿ ಶೀಘ್ರದಲ್ಲೇ ನಿಮ್ಮ ಮುಂದೆ ಬರುತ್ತೇನೆ. ಮತ್ತೆ ಒಟ್ಟಿಗೆ ಸೇರಿ ಎಲ್ಲರೂ ಹಾಡೋಣ' ಅಂತೇಳಿ ನನ್ನ ಸಹಪಾಠಿ ಸಂಗೀತಗಾರರಿಗೆ ಹಾಗೂ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕೂಡ ಮಾಡಿದ್ದರು. ಎಲ್ಲರೂ ಶೀಘ್ರದಲ್ಲೇ ಎಸ್ಪಿಬಿ ಚೇತರಿಸಿಕೊಂಡು ನಮ್ಮ ಜೊತೆ ಸೇರುತ್ತಾರೆ ಅಂತ ಭಾವಿಸಿದ್ದರು. ಆದರೆ ವಿಧಿಯ ನಿರ್ಣಯವೇ ಬೇರೆಯಾಗಿತ್ತು.

    ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ ಎಸ್ಪಿಬಿ

    ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ ಎಸ್ಪಿಬಿ

    ಶುಕ್ರವಾರ ಸೆಪ್ಟೆಂಬರ್ 25 , 2020ರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಎಸ್ಪಿಬಿ ಅವರು ನಿಧನರಾದ ಸುದ್ದಿಯನ್ನು ಎಂ ಜಿ ಎಂ ಹೆಲ್ತ್ ಕೇರ್ ಆಸ್ಪತ್ರೆ ಘೋಷಿಸಿದಾಗ ಹೃದಯಸ್ತಂಭನವಾಗಿದ್ದು ಸಂಗೀತ ಲೋಕಕ್ಕೆ. ಎಸ್ಪಿಬಿ ಇನ್ನಿಲ್ಲ ಎಂಬ ವಿಷಯ ಕೇಳಿದ ಅಭಿಮಾನಿಗಳು ಜೀರ್ಣಿಸಿಕೊಳ್ಳಲಾಗದೆ ಹೋದರು.

    ಮರುದಿನ ಅವರ ಅಂತ್ಯಕ್ರಿಯೆ ತೆಲುಗು ಸ್ಮಾರ್ತ ಬ್ರಾಹ್ಮಣರ ವಿಧಿವಿಧಾನಗಳ ಪ್ರಕಾರ ಅವರ ಮಗ ಚರಣ್, ಎಸ್ಪಿಬಿ ಅವರ ತೋಟದಲ್ಲಿಯೇ ನೆರವೇರಿಸಿದರು. ಸಂಗೀತ ಪ್ರಪಂಚವನ್ನು ಶೋಕಸಾಗರದಲ್ಲಿ ಮುಳುಗಿಸಿದ ಧ್ರುವತಾರೆಯೊಂದು ಜಗತ್ತನ್ನು ತೊರೆದು ಆಕಾಶವನ್ನು ಸೇರಿತು. ಎಸ್ಪಿಬಿ ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ ಆದರೂ ಅವರು ಬಿಟ್ಟುಹೋಗಿರುವ ಆ 40000 ಹಾಡುಗಳು ಮಹಾ ಸಂಪತ್ತು ನಮ್ಮೊಂದಿಗೆ ಶಾಶ್ವತವಾಗಿ ಇದೆ.

    ಎಸ್ಪಿಬಿ ಅವರ ಕೊನೆಯಾಸೆ!

    ಎಸ್ಪಿಬಿ ಅವರ ಕೊನೆಯಾಸೆ!

    ಎಸ್ಪಿಬಿ ಅವರಿಗೆ ಕನ್ನಡ ಭಾಷೆ ಮತ್ತು ಜನರೆಂದರೆ ಅತೀವವಾದ ಪ್ರೀತಿ. ಅವರೇ ಅನೇಕ ಸಂದರ್ಭಗಳಲ್ಲಿ, ಅನೇಕ ವೇದಿಕೆಗಳಲ್ಲಿ ಹೇಳಿದ ಮಾತು 'ನನ್ನನ್ನು ಎಲ್ಲಾ ಭಾಷೆಯ ಜನರು ನಮ್ಮ ಬಾಲು ಅಂತ ಪ್ರೀತಿಸುತ್ತಾರೆ. ಆದರೆ ಕನ್ನಡಿಗರು ಮಾತ್ರ ನನ್ನನ್ನು ಹುಚ್ಚುಹುಚ್ಚಾಗಿ ಅಭಿಮಾನಿಸುತ್ತಾರೆ. ಅವರ ಆ ಪ್ರೀತಿಗೆ ಬೆಲೆಕಟ್ಟಲಾಗದು. ಮುಂದಿನ ಜನ್ಮ ಅಂತ ನನಗೆ ಒಂದಿದ್ದರೆ, ನಾನು ಮತ್ತೆ ಗಾಯಕನಾಗಿ ಹುಟ್ಟಬೇಕು. ಅದು ಕೂಡ ಕನ್ನಡದ ಮಣ್ಣಿನಲ್ಲಿಯೇ' ಅಂತ ನಿರ್ವಿವಾದವಾಗಿ ಅವರೇ ಹೇಳಿದ್ದಾರೆ.

    ಕನ್ನಡ ನಾಡಲ್ಲಿ ಹುಟ್ಟಬೇಕು

    ಕನ್ನಡ ನಾಡಲ್ಲಿ ಹುಟ್ಟಬೇಕು

    ಹೌದು ಎಸ್ಪಿಬಿ ಅವರ ಕೊನೆಯಾಸೆ ತಾನು ಮತ್ತೆ ಗಾಯಕನಾಗಿ ಹುಟ್ಟುವುದು, ಅದು ಕೂಡ ಕನ್ನಡದ ಮಣ್ಣಿನಲ್ಲಿ! ಹೌದು ಕನ್ನಡಿಗರು ಎಸ್ಪಿಬಿ ಅವರನ್ನು ಪ್ರೀತಿಸಿದಷ್ಟು, ಆರಾಧಿಸಿದಷ್ಟು ಮತ್ತೆ ಯಾವ ಭಾಷೆಯವರು ಪ್ರೀತಿಸಿರಲು ಸಾಧ್ಯವಿಲ್ಲ.ಹೀಗಾಗಿಯೇ ಎಸ್ಪಿಬಿ ಅವರು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ಶಾಶ್ವತರು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಎಸ್ಪಿಬಿ ಅವರ ಮಹದಾಸೆ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಮತ್ತೆ ಹುಟ್ಟಿ ಬರುವುದರೊಂದಿಗೆ ಪೂರ್ಣವಾಗಲಿ ಎಂಬುದು ಪ್ರತಿ ಕನ್ನಡಿಗನ ಮಹದಾಸೆಯಾಗಿದೆ.

    English summary
    SP Balasubrahmanyam first death anniversary: Interesting facts about SP balasubrahmanyam.
    Saturday, September 25, 2021, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X