ಸುದೀಪ್ 'ವರದನಾಯಕ' ಕೆನಡಾದಲ್ಲಿ ರಿಲೀಸ್
'ವರದನಾಯಕ' ಚಿತ್ರ ರಾಜ್ಯದಾದ್ಯಂತ ತೆರೆಕಂಡು ಮೂರು ತಿಂಗಳಾಗುತ್ತಿದೆ. ಈಗ ವಿದೇಶದಲ್ಲಿ ಬಿಡುಗಡೆ ಮಾಡಲು ಕಾರಣ ಏನಿರಬಹುದು? ಇದಕ್ಕೆ ಚಿತ್ರದ ನಿರ್ಮಾಪಕರಾದ ಶಂಕರ್ ಗೌಡ ಅವರು ಕೊಡುವ ಉತ್ತರ ಹೀಗಿದೆ, "ಕನ್ನಡ ಚಿತ್ರಗಳು ಹೊರದೇಶಗಳಲ್ಲಿ ಬಿಡುಗಡೆಯಾಗುವುದಿಲ್ಲ, ಒಂದು ವೇಳೆ ಬಿಡುಗಡೆಯಾದರೂ ಜನ ನೋಡುವುದಿಲ್ಲ ಎಂಬ ಅಭಿಪ್ರಾಯ ಇದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು" ಎನ್ನುತ್ತಾರೆ.
ನಿರ್ಮಾಪಕ ಶಂಕರೇಗೌಡರು ಕನ್ನಡ ಚಿತ್ರವನ್ನು ಬಿಡುಗಡೆ ಮಾಡಲು ಉತ್ಸಾಹ ತೋರಿರುವುದು ಸಂತಸ ತಂದಿದೆ. ಇನ್ನು ಮುಂದೆ ಎಲ್ಲ ಕನ್ನಡ ಚಿತ್ರಗಳು ಕೆನಡಾದಲ್ಲಿ ಬಿಡುಗಡೆಯಾಗಲಿ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ ಟೊರೊಂಟೊ ಕನ್ನಡ ಸಂಘ ಅಧ್ಯಕ್ಷೆ ವೈಜಯಂತಿ.
'ವರದನಾಯಕ' ಚಿತ್ರವನ್ನು ಟೊರಾಂಟೊ ಕನ್ನಡ ಸಂಘ ಒಂದು ವಾರ ಕಾಲ ಪ್ರದರ್ಶಿಸಲಿದೆ. ಒಂದು ವಾರಕಾಲ ಏಳು ಪ್ರದರ್ಶನಗಳನ್ನು ಮಾಡಲಾಗುತ್ತಿದೆ ಎನ್ನುತ್ತವೆ ಮೂಲಗಳು. ಒಂದು ವೇಳೆ ವೀಸಾ ಸಿಕ್ಕರೆ ಚಿತ್ರತಂಡದ ಕೆಲವು ಸದಸ್ಯರು ಕೆನಡಾಗೆ ಭೇಟಿ ನೀಡುವ ಆಲೋಚನೆ ಇದೆ ಎನ್ನುತ್ತಾರೆ ನಿರ್ಮಾಪಕ ಶಂಕರ್ ಗೌಡ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಕ್ಕೆ ಭೇಟಿ ನೀಡಿ http://www.kstoronto.com/events.html
ಅಯ್ಯಪ್ಪ ಪಿ ಶರ್ಮಾ ನಿರ್ದೇಶನದ ವರದನಾಯಕ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಸಮೀರಾ ರೆಡ್ಡಿ, ನಿಕೇಶಾ ಪಟೇಲ್, ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್, ಶರತ್ ಲೋಹಿತಾಶ್ವ ಮುಂತಾದವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ರಾಕೇಶ್ ಛಾಯಾಗ್ರಹಣವಿದೆ. (ವರದನಾಯಕ ಚಿತ್ರ ವಿಮರ್ಶೆ ಓದಿ)
ಆರಂಭದಲ್ಲಿ ಒಳ್ಳೆಯ ಓಪನಿಂಗ್ ಪಡೆದ 'ವರದನಾಯಕ' ಚಿತ್ರ ಬಾಕ್ಸ್ ಆಫೀಸಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗೋಪಿಚಂದ್, ಜಗಪತಿ ಬಾಬು ಹಾಗೂ ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದ ತೆಲುಗಿನ 'ಲಕ್ಷ್ಯಂ' ಚಿತ್ರದ ರೀಮೇಕ್ 'ವರದನಾಯಕ'. (ಏಜೆನ್ಸೀಸ್)


Click it and Unblock the Notifications












