»   » ಒನ್ಇಂಡಿಯಾ: ನಟ ರಜನಿಕಾಂತ್ ಆಪ್ತಮಿತ್ರರ ಸಮಾಗಮ

ಒನ್ಇಂಡಿಯಾ: ನಟ ರಜನಿಕಾಂತ್ ಆಪ್ತಮಿತ್ರರ ಸಮಾಗಮ

Posted By:
Subscribe to Filmibeat Kannada

ಬೆಂಗಳೂರು, ಜುಲೈ25: ದಕ್ಷಿಣ ಭಾರತದ ಸೂಪರ್ ಸ್ಟಾರ್, ಕನ್ನಡಿಗ ರಜನಿಕಾಂತ್ ಅವರ ಇಬ್ಬರು ಅತ್ಯಾಪ್ತ ಮಿತ್ರರು ಇಂದು ಗುರುವಾರ ನಮ್ಮ ಒನ್ಇಂಡಿಯಾ ಕಚೇರಿಗೆ ಆಗಮಿಸಿದ್ದರು.

ಯಾರಪ್ಪ ಅವರು ಅಂದರೆ... ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಬಿಟಿಎಸ್ ಡ್ರೈವರ್ ಗೆಳೆಯ ರಾಜ್ ಬಹಾದ್ದೂರ್ ಮತ್ತು ಗೋಪಿನಾಥ್ ರಾವ್. ಗೋಪಿನಾಥ್ ಅವರು ನಟ ರಜನಿಕಾಂತ್ ಅವರಿಗೆ ಸಂಬಂಧಿಯೂ ಹೌದು.

ಈ ಇಬ್ಬರೂ ಆಪ್ತಮಿತ್ರರು ನಮಗೆ ಮೇರು ನಟ ಎನಿಸಿರುವ/ ಅವರಿಗೆ ಅತ್ಯಾಪ್ತ ಗೆಳೆಯರು ಎನಿಸಿರುವ ರಜನಿಕಾಂತ್ ಬಗ್ಗೆ ಸುಮಾರು ಗಂಟೆಗಳ ಕಾಲ ನಮ್ಮ ಜತೆ ಮಾತನಾಡಿದ್ದಾರೆ. ಜತೆಗೆ ಅಪರೂಪದ ಹಳೆಯ ಫೋಟೋಗಳನ್ನು (ಸುಮಾರು 50) ನೀಡಿದ್ದಾರೆ. ಇಲ್ಲೊಂದು ಪ್ರಶ್ನೆ- ಚಿತ್ರರಂಗದ ದಂತಕಥೆ ರಜನಿಕಾಂತ್ ರಾಜಕೀಯ ಆರಂಗೇಟ್ರಂ ಯಾವಾಗ? (ಉತ್ತರ ಮುಂದಿನ ಸಂಚಿಕೆಯಲ್ಲಿ )

ಶಿವಾಜಿಗೆ ಇವರು ಬಹಾದ್ದೂರ್ ಮಿತ್ರರು:

ರಜನಿಕಾಂತ್ ಇಂದು ಮೇರು ನಟರಾಗಿದ್ದರೆ ಈ ಆಪ್ತಮಿತ್ರರು ಗೆಳೆತನ ಅಂದರೆ ಹೀಗಿರಬೇಕು ಎಂಬುದಕ್ಕೆ ಮಾದರಿಯಾಗಿ ಉನ್ನತ ಸ್ಥರದಲ್ಲಿ ನಿಲ್ಲುವವರು. ಈ ಬಗ್ಗೆ ಮುಂದೆ ನಾಲ್ಕಾರು ಲೇಖನಗಳು ಮೂಡಿಬರಲಿದೆ. ಈ ಮಧ್ಯೆ, ಒಂದೆರಡು ಘಟನೆಗಳನ್ನು ಮೆಲುಕು ಹಾಕುವುದಾದರೆ ರಜನಿಕಾಂತ್ ಅವರನ್ನು ಅವನು/ಇವನು ಎಂದು ಮಾತನಾಡಿಸುವ ಹಕ್ಕು (ಆತ್ಮೀಯತೆ) ಇವರಿಬ್ಬರಿಗಷ್ಟೇ ಸೀಮಿತ. ಇವರಿಬ್ಬರೂ ಅವರನ್ನು ಕರೆಯುವುದು ರಜನಿ/ಶಿವಾಜಿರಾವ್ ಗಾಯಕ್ವಾಡಾ ಅಂತಲ್ಲ. ಬದಲಿಗೆ ''ಶಿವಾಜಿ'' ಅಂತಲೇ!

ಜಯಲಲಿತಾಗೇ ಇಲ್ಲದ ಅವಕಾಶ ಆಪ್ತಮಿತ್ರರಿಗೆ

ರಜನಿ ಅವರನ್ನು ಇತ್ತೀಚೆಗೆ ಅನಾರೋಗ್ಯ ಕಾಡಿದಾಗ ಚೆನ್ನೈ ಆಸ್ಪತ್ರೆಯಲ್ಲಿ ಇವರಿಬ್ಬರಿಗೂ ಅವರನ್ನು ಕಾಣಲು ಅವಕಾಶ ನೀಡಲಾಗಿತ್ತು. ತಾನೂ ರಜನಿಯನ್ನು ಭೇಟಿಯಾಗಬೇಕೆಂದು ಮುಖ್ಯಮಂತ್ರಿ ಜಯಲಲಿತಾ ಮನವಿ ಮಾಡಿದ್ದರೂ ಅವರಿಗೆ ಅವಕಾಶ ನೀಡಿರಲಿಲ್ಲ. ಆದರೆ ಈ ಗೆಳೆಯರಿಬ್ಬರು ಇನ್ನಿಲ್ಲದಂತೆ ರಜನಿಯನ್ನು ಭೇಟಿಯಾಗಿ ಅವರ ಅಪಾರ ಅಭಿಮಾನಿಗಳ ಪರವಾಗಿ ಶೀಘ್ರ ಚೇತರಿಕೆಯಾಗುವಂತೆ ಹಾರೈಸಿದ್ದರು.
ಮತ್ತೆ, ಸಿಂಗಾಪುರದಿಂದ ಆರೋಗ್ಯವಂತರಾಗಿ ರಜನಿ ವಾಪಸಾದಾಗ ಇದೇ ಆಪ್ತಮಿತ್ರರನ್ನು ಚೆನ್ನೈನಲ್ಲಿ ಮನೆಗೆ ಬರಮಾಡಿಕೊಂಡು, ನೋಡ್ರೋ ಹೇಗಿದ್ದೀನಿ ಎಂದು ಪೋಸ್ ಕೊಟ್ಟರಂತೆ!

ರಾಜ್ ಬಹಾದ್ದೂರ್ ಫ್ಲಾಷ್ ಬ್ಯಾಕ್:

ಕಂಡಕ್ಟರ್ ಆಗಿ ರಜನಿ ಮತ್ತು ಡ್ರೈವರ್ ಆಗಿ ರಾಜ್ ಬಹಾದ್ದೂರ್ 1970ರಲ್ಲಿ ಬಿಟಿಎಸ್ ಬಸ್ ಹತ್ತಿದವರು. ಮುಂದೆ ಮೂರು ವರ್ಷ ಕಾಲ ರಜನಿ ಕಂಡಕ್ಟರ್ ಆಗಿದ್ದರು. ಆ ವೇಳೆ ಆತ ತಲೆ ಬಾಚುವುದು/ ಸಿಗರೇಟ್ ಸೇದುವುದು ಮುಂತಾದ ವಿಚಿತ್ರ ಮ್ಯಾನರಿಸಂಗಳನ್ನು ಡ್ರೈವರ್ ಸೀಟಿನಲ್ಲಿ ಕುಳಿತು ಹಿಂಬದಿ ಕನ್ನಡಿಯಲ್ಲಿ ನೋಡುತ್ತಿದ್ದಾಗ ಡ್ರೈವರ್ ರಾಜ್ ಬಹಾದ್ದೂರ್ ಗೆ ಕಂಡಿದ್ದು ಚಿಗುರು ನಟ ರಜನಿ. ಅಲ್ಲಿಂದಾಚೆಗೆ ರಜನಿಯಲ್ಲಿದ್ದ ನಟನಾ ಕೌಶಲ್ಯವನ್ನು ಡ್ರೈವರ್ ರಾಜ್ ಬಹಾದ್ದೂರ್ ಪೊರೆದಿದ್ದು ಹೇಗೆ ಎಂಬುದು ಮುಂದಿನ ಸರಣಿಗಳಲ್ಲಿ ಮೂಡಿಬರಲಿದೆ.

ಮರೆತ ಮಾತು:

ಅದಕ್ಕೂ ಮುನ್ನ, ಡ್ರೈವರ್ ರಾಜ್ ಬಹಾದ್ದೂರ್ 10 ವರ್ಷಗಳ ಹಿಂದೆ ಅದೇ ಬಿಟಿಎಸ್ ಡ್ರೈವರ್ ಆಗಿ ಪೂರ್ಣಾವಧಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು. ಅಂದಹಾಗೆ ರಾಜ್ ಬಹಾದ್ದೂರ್ ಅವರಿಗೆ ಈಗ 68 ವರ್ಷ. ರಜನಿಗೆ 62 ವರ್ಷ. ಡ್ರೈವರ್ ಕೆಲಸ ಬಿಟ್ಟು ನನ್ನ ಜತೆ ಬಂದುಬಿಡು ಎಂದು ರಜನಿ, ತನ್ನ ಕೊರಳ ಗೆಳೆಯನಿಗೆ ಅದೆಷ್ಟೋ ಬಾರಿ ಹೇಳಿದರು.

ರಾಜ್ ಬಹಾದ್ದೂರ್ ಮನೆಗೇ ಬರುತ್ತಾರೆ ಮೇರುನಟ

ಅದನ್ನು ಕೇಳಿದಾಗ ಬೇರೆಯವರಿಗಾಗಿದ್ದರೆ ತಲೆ ಗಿರ್ ಗಿರ್ರನೆ ತಿರುಗಿ, ಸ್ವತಃ ತಾನೇ ರಜನಿ ಎಂಬಂತೆ ಮೆರೆಯುತ್ತಿದ್ದರು. ಆದರೆ ರಾಜ್ ಬಹಾದ್ದೂರ್ ಮಾತ್ರ ತಲೆ ಅಡ್ಡಡ್ಡ ತಿರುಗಿಸಿದ್ದಾರೆ. ಅದಕ್ಕೇ ಇಂದಿಗೂ ಚಾಮರಾಜ ಪೇಟೆಯಲ್ಲಿ ಸಣ್ಣ ಮನೆಯೊಂದರಲ್ಲಿ ನೆಲೆಸಿರುವ ರಾಜ್ ಬಹಾದ್ದೂರ್ ಮನೆಗೇ ಆ ಮೇರು ನಟ ನಡೆದು ಬರುತ್ತಾರೆ... ಬೆಂಗಳೂರಿಗೆ ಬಂದಾಗಲೆಲ್ಲ ಚಿಕ್ಕಮಕ್ಕಳಂತೆ ರಾಜ್ ಜತೆಗೂಡಿ ಆತ್ಮೀಯರೊಂದಿಗೆ ಸೇರಿ ಮಂತ್ರಾಲಯ, ಧರ್ಮಸ್ಥಳ, ಯಾವುದೂ ಇಲ್ಲಾಂದ್ರೆ ಸುಮ್ಮನೇ ಹಾಗೇ ಚಿಕ್ಕ ಚಿಕ್ಕ ಪ್ರವಾಸಗಳಿಗೆ ಹೊರಟುಬಿಡುತ್ತಾರೆ.

English summary
Matinee idol, Super star, Kannadiga to the core Mr. Rajinikanth's close friend Mr Raj Bahadur and a close relative of Rajinikanth Mr. Gopinath Rao visited Oneindia office in Bangalore on July 25. A close chit chat with the duo is here. Also, 50 rare photos of Rajinikanth will be carried in these columns shortly. Pls stay with us. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada