»   » 'ಅಮ್ಮ' ಜಯಲಲಿತಾ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗ

'ಅಮ್ಮ' ಜಯಲಲಿತಾ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗ

Posted By:
Subscribe to Filmibeat Kannada

ತಮಿಳು ಜನರಿಂದ 'ಅಮ್ಮ', 'ಪುರಚ್ಚಿ ತಲೈವಿ' ಅಂತೆಲ್ಲ ಕರೆಸಿಕೊಳ್ಳುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಪಾರ ಜನರ ಪಾಲಿನ ಆರಾಧ್ಯ ದೈವ. ಪ್ರಸಿದ್ದ ಚಲನಚಿತ್ರ ನಟಿಯಾಗಿದ್ದ ಜಯಲಲಿತಾ ಕ್ರಾಂತಿಕಾರಿ ರಾಜಕಾರಣಿಯಾಗಿ, ಇಡೀ ತಮಿಳುನಾಡನ್ನೇ ಆವರಿಸಿಕೊಂಡವರು.

ಹೀಗೆ, ತಮಿಳುನಾಡಿನ ಜನತೆಯ ಪ್ರೀತಿಯ 'ಅಮ್ಮ'ನಾಗಿರುವ ಜಯಲಲಿತಾ ಮೂಲತಃ ಕರ್ನಾಟಕದವರು. ಅದ್ರಲ್ಲೂ, ಜಯಲಲಿತಾ ಅವರನ್ನ ಬಣ್ಣದ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕೂಡ ಕನ್ನಡ ಚಿತ್ರರಂಗಕ್ಕೆ ಸಲ್ಲಬೇಕು. [ಜನರ ಪ್ರಾರ್ಥನೆ ಫಲಿಸಲಿಲ್ಲ, 'ಅಮ್ಮ' ಜಯಲಲಿತಾ ಇನ್ನಿಲ್ಲ]

ಹೌದು, ತಮಿಳುನಾಡಿನ ಸೂಪರ್ ಸ್ಟಾರ್ ನಟಿ ಆಗಿ ಗುರುತಿಸಿಕೊಂಡಿದ್ದ ಜಯಲಲಿತಾ ಹುಟ್ಟಿದ್ದು, ಚಿತ್ರರಂಗ ಪ್ರವೇಶ ಮಾಡಿದ್ದು, ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿದ್ದು ಕರ್ನಾಟಕದಲ್ಲಿ.!

ಜಯಲಲಿತಾ ಹುಟ್ಟಿದ್ದು...

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹುಟ್ಟಿದ್ದು, ಮಂಡ್ಯದ ಮೇಲುಕೋಟೆಯಲ್ಲಿ. ತಮಿಳಿನ ಐಯಂಗಾರ್ ಕುಟುಂಬದ ಜಯರಾಂ ಹಾಗೂ ವೇದವಲ್ಲಿ ದಂಪತಿಯ ಮುದ್ದಿನ ಮಗಳಾಗಿದ್ದ ಜಯಲಲಿತಾ ಅವರ ಮೊದಲ ಹೆಸರು ಕೋಮಲವಲ್ಲಿ.

ಸಂಗೀತ, ನೃತ್ಯದಲ್ಲಿ ಪ್ರವೀಣೆ

ತಂದೆ ಸಾವಿನ ಬಳಿಕ ಮೈಸೂರಿನಿಂದ ಚೆನ್ನೈಗೆ ತೆರಳಿ ವಾಸವಾಗಿದ್ದ ಜಯಲಲಿತಾ ಓದುವುದರಲ್ಲಿ ಸದಾ ಮುಂದು. ಬರೀ ಓದಿನಲ್ಲಿ ಮಾತ್ರವಲ್ಲದೇ ಸಂಗೀತ, ನೃತ್ಯದಲ್ಲೂ ಜಯಲಲಿತಾ ಪಂಡಿತೆ. ಭರತನಾಟ್ಯ, ಮಣಿಪುರಿ, ಕತಕ್ ನೃತ್ಯಗಳಲ್ಲಿ ಪಾಂಡಿತ್ಯ ಹೊಂದಿದ್ದ ಜಯಲಲಿತಾ ಕ್ಲಾಸಿಕಲ್ ಸಂಗೀತ, ಪಾಶ್ಚತ್ಯ ಸಂಗೀತ ಕೂಡ ಕಲಿತಿದ್ದರು.

ಭವಿಷ್ಯ ನುಡಿದಿದ್ದ ಶಿವಾಜಿ ಗಣೇಶನ್

ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ನೃತ್ಯ ಮಾಡಿದ ಜಯಲಲಿತಾ, ಶಿವಾಜಿ ಗಣೇಶನ್ ಅವರ ಕಣ್ಣಿಗೆ ಬಿದ್ದಿದ್ದರು. ಜಯಾ ಅವರ ನೃತ್ಯ ನೋಡಿದ ಶಿವಾಜಿ ಗಣೇಶನ್, ''ಈಕೆ ಭವಿಷ್ಯದಲ್ಲಿ ಸಿನಿಮಾ ತಾರೆ ಆಗುತ್ತಾರೆ'' ಎಂದು ಭವಿಷ್ಯ ನುಡಿದಿದ್ದರು. ಅವರ ಮಾತಿನಂತೆ ಜಯಲಲಿತಾ ಮುಂದೆ ಚಿತ್ರರಂಗ ಪ್ರವೇಶಿಸಿದರು.

ಕನ್ನಡದಲ್ಲಿ ಬಣ್ಣ ಹಚ್ಚಿದ ಜಯಾ

ಡಾ.ರಾಜ್ ಕುಮಾರ್ ಅಭಿನಯದ 'ಶ್ರೀಶೈಲ ಮಹಾತ್ಮೆ' ಚಿತ್ರದ ಮೂಲಕ ಜಯಲಲಿತಾ ಮೊದಲ ಬಾರಿಗೆ ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. 1961ರಲ್ಲಿ ತೆರೆಕಂಡಿದ್ದ ಈ ಚಿತ್ರದ ಹಾಡೊಂದರಲ್ಲಿ ಜಯಾ ಕಾಣಿಸಿಕೊಂಡಿದ್ದರು.

ಆಕಸ್ಮಿಕವಾಗಿ ಸಿಕ್ಕ ಅವಕಾಶ

ತಾಯಿಯ ಜೊತೆ ಚಿತ್ರೀಕರಣಕ್ಕೆ ಹೋಗಿದ್ದ ಜಯಾಗೆ 'ಶ್ರೀಶೈಲ ಮಹಾತ್ಮೆ' ಚಿತ್ರದಲ್ಲಿ ಪಾತ್ರ ಸಿಕ್ಕಿದ್ದು ಆಕಸ್ಮಿಕವಾಗಿ. ಡಾ.ರಾಜ್ ಕುಮಾರ್ ಅಭಿನಯದ 'ಶ್ರೀಶೈಲ ಮಹಾತ್ಮೆ' ಚಿತ್ರದ ಹಾಡೊಂದರಲ್ಲಿ ಒಂದು ಹುಡುಗಿ ನೃತ್ಯ ಮಾಡಬೇಕಿತ್ತು. ಆದ್ರೆ, ಆ ಪಾತ್ರ ನಿರ್ವಹಿಸುತ್ತಿದ್ದ ಹುಡುಗಿಯ ಅಭಿನಯ ನಿರ್ದೇಶಕರಿಗೆ ಸಮಾಧಾನವಿರಲಿಲ್ಲ. ಈ ವೇಳೆ ಕಣ್ಣಿಗೆ ಬಿದ್ದ ಜಯಲಲಿತಾ ಅವರ ಬಳಿ, ಈ ಪಾತ್ರವನ್ನ ಮಾಡಿಸುವಂತೆ ನಿರ್ದೇಶಕರು ಜಯಲಲಿತಾ ತಾಯಿಗೆ ಕೇಳಿಕೊಳ್ಳುತ್ತಾರೆ. ಆಗ ಜಯಾ ಕೂಡ ಒಪ್ಪಿ ಅಭಿನಯಿಸುತ್ತಾರೆ. ಟೇಕ್ ಓಕೆ ಆಗುತ್ತೆ.

ಚೊಚ್ಚಲ ಬಾರಿಗೆ ನಾಯಕಿಯಾಗಿದ್ದು ಕನ್ನಡದಲ್ಲೇ!

ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಜಯಲಲಿತಾ, ಬಿ ಆರ್ ಪಂತುಲು ನಿರ್ದೇಶನದ 'ಚಿನ್ನದ ಗೊಂಬೆ' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗುವ ಅವಕಾಶ ಪಡೆದರು. 1964ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಂದಿನ ಖ್ಯಾತ ನಟಿ ಎಂ.ವಿ.ರಾಜಮ್ಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಮುಖ್ಯ ಪಾತ್ರವನ್ನ ಜಯಲಲಿತಾ ನಿರ್ವಹಿಸಿದ್ದರು.

ನಾಯಕಿಯಾಗಿ ಪರಿಚಯಿಸಿದ ಕೀರ್ತಿ ಕನ್ನಡ ಚಿತ್ರರಂಗದ್ದು

'ಚಿನ್ನದ ಗೊಂಬೆ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದ ಜಯಲಲಿತಾ ಅವರನ್ನ ಪರಿಚಯಿಸಿದ ಖ್ಯಾತಿ ಕನ್ನಡ ಚಿತ್ರರಂಗಕ್ಕೆ ಸಲ್ಲುತ್ತದೆ. ಈ ಸಿನಿಮಾದಲ್ಲಿ ಅಭಿನಯಿಸುವುದಕ್ಕೂ ಮುಂಚೆ, ಹಿಂದಿಯ 'ಮಾನ್ ಮೌಜಿ' ಹಾಗೂ ಕನ್ನಡದ 'ಶ್ರೀ ಶೈಲ ಮಹಾತ್ಮೆ' ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.

ಕಲ್ಯಾಣ್ ಕುಮಾರ್ ಜತೆ 5 ಚಿತ್ರಗಳು

'ಚಿನ್ನದ ಗೊಂಬೆ' ಚಿತ್ರದ ಮೂಲಕ ಗಮನ ಸೆಳೆದ ಜಯಲಲಿತಾ, ಕಲ್ಯಾಣ್ ಕುಮಾರ್ ಜೊತೆ 'ಮನೆ ಅಳಿಯ', 'ಮಾವನ ಮಗಳು', 'ನನ್ನ ಕರ್ತವ್ಯ', 'ಬದುಕುವ ದಾರಿ' ಹಾಗೂ 'ಅಮರಶಿಲ್ಪಿ ಜಕಣಾಚಾರಿ' ಸೇರಿದಂತೆ ಒಟ್ಟು 5 ಸಿನಿಮಾಗಳಲ್ಲಿ ಮಿಂಚಿದರು.

ಜಯಲಲಿತಾ ಕನ್ನಡದಲ್ಲಿ ಮಾಡಿದ್ದು 7 ಸಿನಿಮಾ

ಬಾಲನಟಿಯಾಗಿ ಪರಿಚಯವಾದ ಜಯಲಲಿತಾ, ಕನ್ನಡದಲ್ಲಿ ಮಾಡಿದ್ದು ಕೇವಲ 7 ಸಿನಿಮಾ ಮಾತ್ರ. ಅದಾದ ನಂತರ ತಮಿಳು, ಹಾಗೂ ತೆಲುಗಿನಲ್ಲಿ ಹೆಚ್ಚು ತೊಡಗಿಸಿಕೊಂಡರು.

ತಮಿಳು, ತೆಲುಗಿನತ್ತ ಜಿಗಿದ ಜಯಲಲಿತಾ

ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿದ್ದ ಸಮಯದಲ್ಲೇ, ತಮಿಳು ಹಾಗೂ ತೆಲುಗಿನಲ್ಲೂ ಅವಕಾಶಗಳು ಬರತೊಡಗಿದವು. ಹೀಗಾಗಿ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಸಲು ಮುಂದಾದರು. ನಾಗೇಶ್ವರ್ ರಾವ್, ಎಂಜಿಆರ್, ಎನ್.ಟಿ.ಆರ್, ಶಿವಾಜಿ ಗಣೇಶನ್, ರವಿಚಂದ್ರನ್ ಅಂತಹ ದೊಡ್ಡ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಜಯಲಲಿತಾ ಅವರಿಗೆ ಒಲಿದು ಬಂತು.

ಮತ್ತೆ ಕನ್ನಡಕ್ಕೆ ಬರಲೇ ಇಲ್ಲ

1966 ರಲ್ಲಿ ತೆರೆಗೆ ಬಂದ 'ಬದುಕುವ ದಾರಿ' ಜಯಲಲಿತಾ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಚಿತ್ರ. ಅದಾದ ನಂತರ ಜಯಲಲಿತಾ ಮತ್ತೆ ಕನ್ನಡದಲ್ಲಿ ನಟಿಸಲೇ ಇಲ್ಲ. ಕಾಲಿವುಡ್ 'ಸೂಪರ್ ಸ್ಟಾರ್' ಆದ ಜಯಲಲಿತಾ ನಂತರ ರಾಜಕೀಯ ಪ್ರವೇಶ ಮಾಡಿ ತಮಿಳರ ಪಾಲಿಗೆ 'ಅಮ್ಮ' ಆಗಿದ್ದು ಈಗ ಇತಿಹಾಸ.

English summary
Tamil Nadu Chief Minister Jayalalithaa(68) passed away at the Apollo Hospital, Chennai on Monday (December 5th) after undergoing treatment for over 70 days. Here is the detailed report on Tamil Nadu CM Jayalalithaa's connection with Karnataka and Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada