»   » ನಮ್ರತಾ ತುಳು ಚಿತ್ರದ ಶೀರ್ಷಿಕೆ ವಿವಾದಕ್ಕೆ ಫುಲ್ ಸ್ಟಾಪ್

ನಮ್ರತಾ ತುಳು ಚಿತ್ರದ ಶೀರ್ಷಿಕೆ ವಿವಾದಕ್ಕೆ ಫುಲ್ ಸ್ಟಾಪ್

Posted By:
Subscribe to Filmibeat Kannada
Namrata Hegde
ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದ 'ಶೀರ್ಷಿಕೆ' ವಿವಾದ ಇದೀಗ ತುಳು ಚಿತ್ರರಂಗಕ್ಕೂ ಹಬ್ಬಿದೆ. ಕನ್ನಡದಲ್ಲಿ ಹಾಸ್ಯಕ್ಕೆ 'ಗುಂಡ' ಪದ ಮೀಸಲಿರುವಂತೆ, ತುಳು ಭಾಷೆಯಲ್ಲಿ 'ರಾಂಪ' ಎಂಬ ಹೆಸರು ಪ್ರಖ್ಯಾತಿ ಪಡೆದಿದೆ. ಆದರೆ ತುಳು ಭಾಷೆಯ ರಾಂಪ ಎಂಬ ಪದ ಕೇವಲ ಕಾಲ್ಪನಿಕವಾದದ್ದಲ್ಲ, ಅದಕ್ಕೊಂದು ಇತಿಹಾಸ ಇದೆ. ಹೀಗಾಗಿ 'ರಾಂಪ' ಹೆಸರಿನ ತುಳು ಚಿತ್ರದ ಹೆಸರನ್ನು ಬದಲಾಯಿಸಲೇ ಬೇಕು ಎಂಬ ಪ್ರತಿಭಟನೆ ನಡೆದಿತ್ತು.

ಕೊನೆಗೂ ಪ್ರತಿಭಟನಾಕಾರರಿಗೆ ಜಯ ದೊರಕಿದೆ. 'ರಾಂಪ' ಹೆಸರಿನ ಚಿತ್ರವೀಗ ಟೈಟಲ್ ಬದಲಿಸಿಕೊಂಡು 'ಸೋಂಪ' ಆಗಿದೆ. ಈ ಮೂಲಕ ಎದ್ದಿದ್ದ ಗಲಾಟೆಗೆ ಮುಕ್ತಿ ಸಿಕ್ಕಿ ತಣ್ಣಗಾಗಿದೆ. ಹಿನ್ನೆಲೆ ಪ್ರಕಾರ, ರಾಂಪ ಅಲಿಯಾಸ್ ರಾಂಪಣ್ಣ ಎಂದರೆ ರಾಮಪ್ಪ ಪೂಜಾರಿ. ಈ ರಾಮಪ್ಪ ಪೂಜಾರಿ ಎಂದರೆ ಮಂಗಳೂರಿನ ಕಡೆ ಭಾರಿ ಜನಪ್ರಿಯ. ಈ ರಾಮಪ್ಪ ಪೂಜಾರಿ (ರಾಂಪಣ್ಣ) ದೊಡ್ಡ ಹೊಟೇಲ್ ಉದ್ಯಮಿ ಹಾಗೂ 'ಕಂಬಳ' ಪ್ರೇಮಿಯಾಗಿ ಸಾಕಷ್ಟು ಹೆಸರುವಾಸಿ.

ಇಂಥ ರಾಂಪಣ್ಣ ಸಾಮಾನ್ಯ ಮನುಷ್ಯರೇನಲ್ಲ. ಹೊಟೇಲ್ ಉದ್ಯಮದ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿ ಮೆರೆದು ಅಲ್ಲಿಯೂ ಬಹಳಷ್ಟು ಸಾಧನೆ ಮಾಡಿದವರು. ಅವರಿಂದು ಬದುಕಿಲ್ಲವಾದರೂ ಅವರ ಕುಟುಂಬಸ್ಥರು ಈಗಲೂ ಇದ್ದಾರೆ. ಅವರ ಹೆಸರಿನ ಹೊಟೇಲ್ ಈಗಲೂ ಜನಪ್ರಿಯವಾಗಿದೆ.

ಬದಲಾವಣೆಗೆ ತಗಲುವ ವೆಚ್ಚವನ್ನು ತಾವೇ ಭರಿಸಿ ಹೆಸರನ್ನು ಬದಲಾಯಿಸಲು ನೇರವಾಗಿ ಕಾರಣರಾಗಿದ್ದು ಅದೇ ರಾಂಪಣ್ಣ ಕುಟುಂಬಸ್ಥರು. "ಹಾಸ್ಯ ಚಿತ್ರದ ಈ ಹೆಸರಿನ ಮೂಲಕ ತಮ್ಮ ಕುಟುಂಬದ ಹೆಸರೂ ಹಾಸ್ಯಾಸ್ಪದಕ್ಕೆ ಎಡೆಯಾಗುತ್ತದೆ. ನಾವು ಅನಾವಶ್ಯಕ ಮುಜುಗರ ಅನುಭವಿಸಲು ಸಿದ್ಧರಿಲ್ಲ" ಎಂಬ ರಾಂಪಣ್ಣ ಕುಟುಂಬಸ್ಥರ ಹೇಳಿಕೆಗೆ ತಲೆಬಾಗಿ ಈಗ ಹೆಸರು ಬದಲಾಯಿಸಿ 'ಸೋಂಪ' ಮಾಡಲಾಗಿದೆ.

ಬಾಲಿವುಡ್‌‌ನ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಸಹೋದರ ಇಕ್ಬಾಲ್ ದರ್ಬಾರ್ ಸಂಗೀತ ಈ ಚಿತ್ರಕ್ಕಿದೆ. ಬಾಲಿವುಡ್ ಪ್ರೇಕ್ಷಕರನ್ನು ಸೆಳೆಯಲು ಇದರಲ್ಲಿ ಒಂದು ಹಿಂದಿ ಹಾಡು ಸೇರಿಸಿರುವುದು ವಿಶೇಷ ಎನ್ನಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಸೋಂಪ' ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಂತರ ಮುಂಬೈ ಹಾಗೂ ವಿದೇಶಗಳಲ್ಲೂ ಬಿಡುಗಡೆ ಮಾಡುವುದಾಗಿ ನಟಿ, ನಿರ್ಮಾಪಕಿ ನಮ್ರತಾ ಹೆಗಡೆ ಹೇಳಿದ್ದಾರೆ.

ಸೋಂಪ ಚಿತ್ರವನ್ನು ನಿರ್ಮಿಸಿ, ಜೊತೆಗೆ ನಾಯಕಿಯೂ ಆಗಿ ನಟಿಸಿದ್ದಾರೆ ನಮ್ರತಾ ಹೆಗ್ಡೆ. ರಾಜನ್ ಲೈಲಾಪುರಿ ನಿರ್ದೇಶನದ ಈ ಚಿತ್ರದಲ್ಲಿ ತುಳು ರಂಗಭೂಮಿಯ ಜನಪ್ರಿಯ ನಟ ಅರವಿಂದ ಬೋಳಾರರು 'ಸೋಂಪನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ, ರವಿ ಸುರತ್ಕಲ್, ಸದಾಶಿವ ಅಮರಪುರ್ಕಾರ್, ಪ್ರಭಾಕರ ಶೆಟ್ಟಿ, ಚಂದ್ರಾವತಿ, ಶಶಿರಾಜ್ ಕಾವೂರು, ಶೋಭಾ ಶೆಟ್ಟಿ ಮುಂತಾದವರಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Namratha Hegde produced upcoming Tulu Movie titled 'Rampa' changed to 'Sompa'. She not only acted as Heroine in this, also produced the film. This Sompa Tulu movie is directed by Rajan Lyallpuri. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada