Don't Miss!
- News
Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಮ್ಮ ವಜ್ರಮುನಿ, ನೆನೆದವರ ಮನದಲ್ಲಿ ಮಾತ್ರ !
'ಎಲಾ ಕುನ್ನಿ, ಅದೆಷ್ಟು ಸೊಕ್ಕು ನಿನಗೆ, ನನ್ನ ಪ್ರತೀಕಾರದ ಜ್ವಾಲೆಯಲ್ಲಿ ನೀನು ಸುಟ್ಟು ಭಸ್ಮವಾಗ್ತೀಯಾ' ಎಂದು ತೆರೆ ಮೇಲೆ ವಜ್ರಮುನಿ ಅಬ್ಬರಿಸುತ್ತಿದ್ದರೆ ಚಿತ್ರಮಂದಿರದಲ್ಲಿ ಸಣ್ಣ ಮಕ್ಕಳು ಸೂ..ಸೂ ಮಾಡಿದ ಉದಾಹರಣೆಗಳು ಸಾಕಷ್ಟು.
ಇಂದು (ಮೇ 10) ಕನ್ನಡ ಕಲಾಜಗತ್ತು ಕಂಡ ಮಹಾನ್ ಕಲಾವಿದ ವಜ್ರಮುನಿಯವರ 77ನೇ ಹುಟ್ಟಿದ ಹಬ್ಬ. ಕಣ್ಣಲ್ಲೇ ಕೆಂಡಕಾರುತ್ತಾ ಖಳನಟನ ಪಾತ್ರಕ್ಕೆ 'ನಭೂತೋ ನ ಭವಿಷ್ಯತಿಃ' ಎನ್ನುವಂತಿದ್ದ ವಜ್ರಮನಿಯವರನ್ನು ನೆನೆಸುತ್ತಾ...
ವಜ್ರಮುನಿ ಜೀವನದಲ್ಲಿ ಮಾಡಿದ ಒಂದು ತಪ್ಪೆಂದರೆ ಸ್ವಂತ ನಿರ್ಮಾಣದ ಚಿತ್ರ ನಿರ್ಮಿಸಿದ್ದು. ಅವರ ಜೀವನದ ಕೊನೆ ಕ್ಷಣಗಳಲ್ಲಿ ಆಸ್ಪತ್ರೆ ಬಿಲ್ ಪಾವತಿಸಲು ಪರದಾಡುವಂತೆ ಮಾಡಿದ್ದು ಅವರ ನಿರ್ಮಾಣದ ಗಂಢಬೇರುಂಢ ಚಿತ್ರದ ವೈಫಲ್ಯ.
ಕಿಡ್ನಿ ವೈಫಲ್ಯದಿಂದ ವಜ್ರಮುನಿ ಆಸ್ಪತ್ರೆಯಲ್ಲಿದ್ದಾಗ, ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಲು ಆಸ್ಪತ್ರೆಯ ಖರ್ಚುವೆಚ್ಚಕ್ಕೆ ಪರದಾಡುತ್ತಿದ್ದರು. ಆಗ ನಮ್ಮ ಸರಕಾರ ಮತ್ತು ಫಿಲಂ ಚೇಂಬರ್ ಗಾಢ ನಿದ್ರೆಯಲ್ಲಿತ್ತು. (ವಜ್ರಮುನಿ ನೆನಪು, ಚಿತ್ರ ನಮನ)
ವಜ್ರಮುನಿ ಅನುಭವಿಸುತ್ತಿದ್ದ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರನ್ನಾಗಲಿ ಅಥವಾ ಅವರ ಕುಟುಂಬದವರನ್ನಾಗಲಿ ಭೇಟಿಯಾಗಿ ಆರ್ಥಿಕ ಸಹಾಯ ಕೇಳುವುದು ಹಾಗಿರಲಿ, ಕನಿಷ್ಠ ಅವರ ಆರೋಗ್ಯ ವಿಚಾರಿಸಿ ನೈತಿಕ ಸ್ಥೈರ್ಯ ತುಂಬುವ ಮಾನವೀಯತೆಯನ್ನೂ ಸರಕಾರ ಅಥವಾ ಚೇಂಬರ್ ತೋರಲಿಲ್ಲ.
ಸರಕಾರದ ಸಹಾಯವನ್ನು ವಜ್ರಮುನಿ ಬಯಸಲೇ ಇಲ್ಲ ಎನ್ನುವುದು ಬೇರೆ ಮಾತು. ಆಸ್ತಿ ಮಾರಾಟ ಮಾಡಿ ತನ್ನ ಆರೋಗ್ಯಕ್ಕೆ ಹಣ ಹೊಂದಿಸುತ್ತಿದ್ದರೇ ಹೊರತು ವಜ್ರಮುನಿ ಸರಕಾರಕ್ಕೆ ಭಾರವಾಗಲಿಲ್ಲ. ಆದರೂ, ನಮ್ಮ ಸರಕಾರ ಮತ್ತು ಫಿಲಂ ಚೇಂಬರ್ ಮಹಾನ್ ಕಲಾವಿದನಿಗೆ ಕೊಟ್ಟಿದ್ದು ಈ ರೀತಿಯ ಗೌರವ.
ಕನ್ನಡ ಚಿತ್ರೋದ್ಯಮದಲ್ಲಿ ವಜ್ರಮುನಿಯವರಿಗೆ ಪರಮಾಪ್ತರಾಗಿದ್ದವರೆಂದರೆ ರಾಜ್ ಮತ್ತು ಪ್ರಣಯರಾಜ ಶ್ರೀನಾಥ್. ಕನ್ನಡ ಚಿತ್ರರಂಗದ ದೊಡ್ದಮನೆಯ ಕುಟುಂಬದಿಂದಲೂ ಸಹಾಯಹಸ್ತ ಬಯಸದ ವಜ್ರಮುನಿ, ತನ್ನ ಅಂದಿನ ಪರಿಸ್ಥಿತಿಯ ನಡುವೆಯೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಟೈಗರ್ ಪ್ರಭಾಕರ್ ಮತ್ತು ರಾಜಾನಂದ್ ಅವರಿಗೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದಿದ್ದರು.
ವಜ್ರಮುನಿಯವರ ಅಪ್ರತಿಮ ಪ್ರತಿಭೆಗೆ ಶಿವಾಜಿ ಗಣೇಶನ್ ಮಾರು ಹೋಗಿ ತಮಿಳು ಚಿತ್ರದಲ್ಲಿ ನಟಿಸುವತೆ ಆಹ್ವಾನಿಸಿದ್ದರು. ಆದರೆ ಅಣ್ಣಾವ್ರ ರೀತಿಯಲ್ಲಿ ವಜ್ರಮುನಿ ಕೂಡಾ ಕನ್ನಡ ಚಿತ್ರ ಹೊರತಾಗಿ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲಿಲ್ಲ ಎನ್ನುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಲೇಬೇಕು.
90ರ ದಶಕದಲ್ಲಿ ರಾಜಕೀಯ ರಂಗದಲ್ಲೂ ವಜ್ರಮನಿ ಒಂದು ಕೈ ನೋಡಿದರು. ಕಾಂಗ್ರೆಸ್ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಿದ್ದ ವಜ್ರಮುನಿಗೆ ಗೆಲುವು ಮರೀಚಿಕೆಯಾಯಿತು. ಬಹುಶಃ ಅವರು ನಟನಾಗಿಯೇ ಕನ್ನಡ ಚಿತ್ರರಸಿಕರ ಮನಗೆಲ್ಲಬೇಕಾಗಿತ್ತು ಏನೋ? ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಂಡ ವಜ್ರಮುನಿ ಅವರು ಜನವರಿ 5, 2006ರಂದು ನಿಧನರಾದಾಗ ಅವರಿಗೆ ಇನ್ನೂ 62ರ ಪ್ರಾಯ.
ಕೆಂಡಗಣ್ಣಿನ ಮುಖದ ಕ್ರೂರ ನೋಟದಿಂದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ವಜ್ರಮುನಿಗೆ ಸರಕಾರ ಲೇಟಾದರೂ ಲೇಟೆಸ್ಟ್ ಆಗಿ ಗೌರವ ಸಲ್ಲಿಸುವ ಕೆಲಸ ಆಗಬೇಕಿದೆ. ವರನಟ ರಾಜಕುಮಾರ್ ನಟಿಸಿದ್ದ ಹೆಚ್ಚಿನ ಚಿತ್ರಗಳಲ್ಲಿ ಖಳನಟನಾಗಿ ಘರ್ಜಿಸಿದ್ದು ನಟ ಭಯಂಕರ ವಜ್ರಮುನಿ ಅನ್ನೋದನ್ನೂ ನಾವು ಮರೆಯಬಾರದು.

Atleast ಅವರ ಹುಟ್ಟುಹಬ್ಬದ ದಿನವಾದ ಇಂದು ಸರಕಾರದ ಮತ್ತು ಫಿಲಂ ಚೇಂಬರ್ ಪ್ರತಿನಿಧಿಗಳು, ಅವರ ಸಮಾಧಿಗೆ ಕನಿಷ್ಠ ಒಂದು ಗುಲಾಬಿ ಹೂವನ್ನು ಇಟ್ಟು ಗೌರವ ತೋರಿಸುವ ಒಳ್ಳೆಯ ಕೆಲಸವನ್ನು ಮಾಡಲಿ.