»   » ವೀರಪ್ಪನ್ 'ಅಟ್ಟಹಾಸ' ಚಿತ್ರಕ್ಕೆ ಮತ್ತೊಂದು ಕಂಟಕ

ವೀರಪ್ಪನ್ 'ಅಟ್ಟಹಾಸ' ಚಿತ್ರಕ್ಕೆ ಮತ್ತೊಂದು ಕಂಟಕ

Posted By:
Subscribe to Filmibeat Kannada
Attahasa movie still
ಇನ್ನೇನು ಬಿಡುಗಡೆ ಹಾದಿಯಲ್ಲಿರುವ ದಂತಚೋರ, ಕಾಡುಗಳ್ಳ, ನರಹಂತಕ ವೀರಪ್ಪನ್ ಜೀವನ ಕಥೆಯಾಧಾರಿತ 'ಅಟ್ಟಹಾಸ' ಚಿತ್ರ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಕೃತಿಚೌರ್ಯ ಆರೋಪಕ್ಕೆ ಎ.ಎಂ.ಆರ್ ರಮೇಶ್ ನಿರ್ದೆಶನದ 'ಅಟ್ಟಹಾಸ' ಚಿತ್ರ ಗುರಿಯಾಗಿದೆ.

ತಮ್ಮ 'ವೀರಪ್ಪನ್: ನರಹಂತಕನ ರುದ್ರ ನರ್ತನ' ಎಂಬ ಕೃತಿಯಿಂದ ಕತೆಕದ್ದು ಚಿತ್ರಕಥೆ ಮಾಡಿದ್ದಾರೆ ಎಂದು ಪತ್ರಕರ್ತ ಟಿ.ಗುರುರಾಜ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು 'ಅಟ್ಟಹಾಸ' ಚಿತ್ರದ ಕತೆಯ ಕದ್ದು ಚಿತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆಲ ವರ್ಷಗಳ ಹಿಂದೆ ರಮೇಶ್ ಅವರು ತಮ್ಮೊಂದಿಗೆ ಮಾತನಾಡುತ್ತಾ ನನ್ನ ಕೃತಿಯನ್ನು ಚಿತ್ರ ಮಾಡುವುದಾಗಿ ಹೇಳಿದ್ದರು. ಈಗ ಚಿತ್ರ ಮುಕ್ತಾಯ ಹಂತ ತಲುಪಿದೆ. ಸೌಜನ್ಯಕ್ಕೂ ಅವರು ತಮ್ಮ ಕೃತಿ ಬಳಸಿಕೊಂಡಿದಕ್ಕೆ ಕೃತಜ್ಞತೆಗಳನ್ನು ತಿಳಿಸಿಲ್ಲ. ರಮೇಶ್ ವಿರುದ್ಧ ನ್ಯಾಯಾಲಯದ ಬಾಗಿಲು ತಟ್ಟುವುದಾಗಿ ಗುರುರಾಜ್ ತಿಳಿಸಿದ್ದಾರೆ.

ಈ ಹಿಂದೆಯೇ ರಮೇಶ್ ಮಾಡಿರುವ ಕೃತಿಚೌರ್ಯದ ವಿರುದ್ಧ ನಿರ್ದೇಶನಕ ಸಂಘಕ್ಕೆ ತಿಳಿಸಿದ್ದೆ. ಅವರು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ರಮೇಶ್ ಅವರು ಇದುವರೆಗೂ ತಮ್ಮದೊಂದಿಗೆ ಸೌಜನ್ಯಕ್ಕೂ ಮಾತನಾಡಿಲ್ಲ.

ಚಿತ್ರದ ನಿರ್ದೇಶಕ ರಮೇಶ್ ಅವರು ತಮಗೆ ಗೌರವಧನ ನೀಡಬೇಕು. ಟೈಟಲ್ ಕಾರ್ಡ್‌ನಲ್ಲಿ ಚಿತ್ರಕತೆ ನನ್ನದು ಎಂದು ಉಲ್ಲೇಖಿಸಬೇಕು. ಇಲ್ಲದಿದ್ದದರೆ ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಅವರು ಎಚ್ಚರಿಸಿದ್ದಾರೆ. ಆದರೆ ಈ ಬಗ್ಗೆ ರಮೇಶ್ ಅವರ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.

ರಮೇಶ್ ಅವರ ಮಹತ್ವಾಕಾಂಕ್ಷಿ 'ಅಟ್ಟಹಾಸ' ಚಿತ್ರಕ್ಕೆ ಅದ್ಯಾಕೋ ಏನೋ ಒಂದರ ಹಿಂದೆ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಈ ಹಿಂದೆ ನಮ್ಮ ಅನುಮತಿ ಪಡೆಯದೆ ಚಿತ್ರವನ್ನು ಎ.ಎಂ.ಆರ್ ರಮೇಶ್ ತೆರೆಗೆ ತರುತ್ತಿದ್ದಾರೆ ಎಂದು 'ನಕ್ಕೀರನ್' ಪತ್ರಿಕೆಯ ಸಂಪಾದಕ ಆರ್ ಆರ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ 'ಅಟ್ಟಹಾಸ' ಚಿತ್ರ ಬಿಡುಗಡೆಗೆ ಕೋರ್ಟ್ ನಿರ್ಬಂಧ ಹೇರಿ ಬಳಿಕ ತೆರವುಗೊಳಿಸಿತ್ತು.

ವರನಟ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬರುವಲ್ಲಿ ಮಹತ್ತರ ಪಾತ್ರ ವಹಿಸಿದ ನಮ್ಮನ್ನು ಚಿತ್ರದ ನಿರ್ದೇಶಕರು ಒಮ್ಮೆಯೂ ಸಂರ್ಪಿಸಿಲ್ಲ ಎಂದು ಗೋಪಾಲ್ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಚಿತ್ರಪ್ರೇಮಿಗಳ ಕರಾಳ ನೆನಪುಗಳಲ್ಲಿ ಅಚ್ಚಳಿಯದೇ ಉಳಿದ ಪುಟಗಳು ವರನಟ ಡಾ.ರಾಜ್ ಅಪಹರಣ. ಈ ಸತ್ಯ ಘಟನೆಗಳ ಆಧಾರವಾಗಿ ಹೆಣೆದಿರುವ ಚಿತ್ರ 'ಅಟ್ಟಹಾಸ'. ಈ ಚಿತ್ರದ ವಿಶೇಷ ಪಾತ್ರದಲ್ಲಿ ಅರ್ಜುಜ್ ಸರ್ಜಾ ಅಭಿನಯಿಸಿದ್ದಾರೆ. ವೀರಪ್ಪನ್ ಆಗಿ ಕಿಶೋರ್ ಮೀಸೆ ತಿರುವಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಸುರೇಶ್ ಒಬೆರಾಯ್ ಪೋಷಿಸಿದ್ದು ಚಿತ್ರ ಅತೀವ ಕುತೂಹಲ ಕೆರಳಿಸಿದೆ.

ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು. (ಏಜೆನ್ಸೀಸ್)

English summary
A few days before its release, the AMR Ramesh directed Attahasa has already landed in troubled waters. It is said that, the movie is copied from journaslist T Gururaj's book 'Veerappan-Narahantakana Rudra Nartana'. The author decided to file a case against the director.
Please Wait while comments are loading...