ಹಿರಿಯ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ!
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ವಿದ್ಯಾಸಾಗರ್ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿದ್ಯಾಸಾಗರ್ ಕೆಲವು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜನವರಿಯಲ್ಲಿ ಇಡೀ ಕುಟುಂಬ ಕೋವಿಡ್ 19 ಸೋಂಕಿಗೆ ಒಳಗಾಗಿತ್ತು. ಈ ವೇಳೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡಿದ್ದರೂ ವಿದ್ಯಾಸಾಗರ್ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು.
ಆದರೆ ಮತ್ತೆ ಕೆಲವು ದಿನಗಳ ಹಿಂದೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಕೆಲವು ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗಲಿಲ್ಲ ಎಂದು ತಿಳಿದುಬಂದಿದೆ.

ವೈದ್ಯರು ಔಷಧಿಗಳ ಮೂಲಕ ಪರಿಸ್ಥಿತಿಯನ್ನು ಗುಣಪಡಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗದೇ ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕ ಮಂದಿ ಸಂತಾಪ ಸೂಚಿಸುತ್ತಿದ್ದಾರೆ. ತಮಿಳು ನಟ ಶರತ್ ಕುಮಾರ್ ಈ ದು:ಖದ ವಿಷಯವನ್ನು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ನಟಿ ಮೀನಾ ಬೆಂಗಳೂರು ಮೂಲದ ವಿದ್ಯಾಸಾಗರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ವಿದ್ಯಾ ಸಾಗರ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮದುವೆಯ ನಂತರ ಈ ಜೋಡಿ ಚೆನ್ನೈನಲ್ಲಿ ನೆಲೆಸಿತ್ತು.


Click it and Unblock the Notifications











