»   » ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ ಬಾಂಬ್

ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ ಬಾಂಬ್

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನು ಅಗಲಿ ಐದು ವರ್ಷದ ಮೇಲಾದರೂ ಅವರ ಸಮಾಧಿ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗವಿಲ್ಲವೇ ಅಥವಾ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆಯೇ ಅಥವಾ ಇದ್ಯಾವುದೂ ಅಲ್ಲ ಅದಕ್ಕೆ ಬೇರೆನೇ ಎನಾದರೂ ಕಾರಣವಿರಬಹುದೇ ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಅಭಿಮಾನ್ ಸ್ಟುಡಿಯೋಕ್ಕೆ ಸಂಬಂಧ ಪಟ್ಟ ಜಾಗ ತಕರಾರಿನಲ್ಲಿದೆ, ಓಕೆ. ಆದರೆ ಭೂಗಳ್ಳರಿಗೆ, ರಿಯಲ್ ಎಸ್ಟೇಟ್ ಮಾಫಿಯಾದವರಿಗೆ, ರಾಜಕಾರಣಿಗಳಿಗೆ ಅನಾಯಾಸವಾಗಿ ಸಿಗುವ ಜಾಗ ಅಭಿನವ ಭಾರ್ಗವ ವಿಷ್ಣುವರ್ಧನ್ ಸಮಾಧಿಗೆ ಬೆಂಗಳೂರಿನಲ್ಲಿ ಎಲ್ಲೂ ಸಿಗುತ್ತಿಲ್ಲವೇ?

ಬೆಂಗಳೂರಿನಲ್ಲಿ ಸಮಾಧಿ ವಿಚಾರದಲ್ಲಿ ತಿರುಗಿ ತಿರುಗಿ ಸುಸ್ತಾಗಿ, ವಿಷ್ಣು ಸಮಾಧಿಗೆ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹತ್ತು ಎಕರೆ ಜಮೀನು ನೀಡಿ ಎಂದು ಭಾರತಿ ವಿಷ್ಣುವರ್ಧನ್ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. (ವಿಷ್ಣುವರ್ಧನ್ ಸ್ಮಾರಕ: ಸುದೀಪ್ ಹೇಳಿಕೆಯಲ್ಲಿ ತಪ್ಪೇನಿದೆ)

ವಿಷ್ಣು ಸಮಾಧಿಗೆ ಮೈಸೂರಿನಲ್ಲಿ ಜಾಗ ನೀಡಿ ಎನ್ನುವ ಅರ್ಜಿಗೆ ಸಂಬಂಧಿಸಿದಂತೆ ಬಿಸಿಬಿಸಿ ಚರ್ಚೆಯಾಗುತ್ತಿರುವ ವೇಳೆ, ವಸತಿ ಸಚಿವ ಅದಕ್ಕಿಂತ ಹೆಚ್ಚಾಗಿ ವಿಷ್ಣು ಕುಚುಕು ಗೆಳೆಯ ಅಂಬರೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.

ಅಂಬರೀಶ್ ಹೇಳಿದ್ದೇನು ಜೊತೆಗೆ ಎಲ್ಲರನ್ನೂ ಕಾಡುತ್ತಿರುವ ಕೆಲವೊಂದು ಪ್ರಶ್ನೆ, ಗೊಂದಲಗಳು. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕನ್ನಡ ಚಿತ್ರೋದ್ಯಮದವರು ಎಲ್ಲಿ?

ವಿಷ್ಣು ನಿಧನದ ನಂತರ ಅವರ ಹೆಸರನ್ನು ಬಳಸಿಕೊಂಡು ಚಿತ್ರ ನಿರ್ಮಿಸಿ ಕೋಟಿ ಕೋಟಿ ಲೆಕ್ಕದಲ್ಲಿ ಲಾಭ ಮಾಡಿಕೊಂಡ ಕನ್ನಡ ಚಿತ್ರೋದ್ಯಮದವರು ವಿಷ್ಣು ಸಮಾಧಿ ವಿಚಾರದಲ್ಲಿ ಯಾಕೆ ಸುಮ್ಮನಿದ್ದಾರೆ?

ಅನಿರುದ್ದ್ ನಿರುತ್ತರ

ವಿಷ್ಣು ಸಮಾಧಿ ವಿಚಾರದಲ್ಲಿ ಚಿತ್ರೋದ್ಯಮದಿಂದ ಬೆಂಬಲ ಸಿಗುತ್ತಿಲ್ಲವೇ ಎನ್ನುವ ಪಬ್ಲಿಕ್ ಟಿವಿಯಲ್ಲಿ ಕೇಳಲಾದ ಪ್ರಶ್ನೆಗೆ ವಿಷ್ಣು ಅಳಿಯ ಅನಿರುದ್ದ್ ಅವರದ್ದು ಮೌನವೇ ಉತ್ತರವಾಗಿತ್ತು. ಅಪ್ಪಾಜಿ (ವಿಷ್ಣು) ಬಯಸಿದಂತೆ ಆಗಲಿ ಎನ್ನುವುದು ಅನಿರುದ್ದ್ ನೋವಿನ ಮಾತಾಗಿತ್ತು.

ಭಾರತಿ ಶ್ರಮಕ್ಕೆ ಬೆಲೆಯಿಲ್ಲವೇ?

ಐದು ವರ್ಷದಿಂದ ಸಮಾಧಿ ನಿರ್ಮಾಣಕ್ಕಾಗಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ದ್ ಅಂದಿನ ಬಿಜೆಪಿ ಮತ್ತು ಇಂದಿನ ಕಾಂಗ್ರೆಸ್ ಸರಕಾರದ ಹಿಂದೆ ಸವೆಸಿದ ಪ್ರಯತ್ನಕ್ಕೆ ಬೆಲೆಯಿಲ್ಲವೇ? ಮೇರುನಟನ ಸಮಾಧಿಯ ಜಾಗಕ್ಕೆ ಸಿಗದಷ್ಟು ಬೆಂಗಳೂರು ವಿಶಾಲವಾಗಿಲ್ಲವೇ? ಅಭಿಮಾನಿಗಳ ಒತ್ತಾಯಕ್ಕೆ ಬೆಲೆಯಿಲ್ಲವೇ? ಹೀಗೆ ಪ್ರಶ್ನೆಗಳು ಹಲವಾರು, ಉತ್ತರ ಕೊಡುವವರು ಯಾರು?

ಅಥವಾ ವಿಷ್ಣು ಅದೇ ಬಯಸಿದ್ದರೆ?

ಮೈಸೂರಿನಲ್ಲಿ ಹುಟ್ಟಿ ಅಲ್ಲೇ ಕೊನೆಯುಸಿರೆಳೆದ ವಿಷ್ಣುವರ್ಧನ್ ಆತ್ಮ ಬಹುಷಃ ಅಲ್ಲೇ ಸಮಾಧಿಯಾಗಬೇಕೆಂದು ಬಯಸುತ್ತಿದೆಯೋ ಏನೋ? ಮೈಸೂರು ನಗರದ ಜೊತೆ ವಿಷ್ಣು ಒಡನಾಟ ಹೆಚ್ಚು. ಅನಿರುದ್ದ್ ಕೂಡಾ ಭಾವೋದ್ವೇಗಕ್ಕೆ ಒಳಗಾಗಿ ಹೇಳಿದ್ದು ಇದ್ದನ್ನೇ..

ಅಂಬಿ ಹೇಳಿದ್ದು

ಬದಕಿದ್ದಾಗಲೂ ಪಾಪ ಅವನಿಗೆ (ವಿಷ್ಣು) ಅನ್ಯಾಯವಾಗಿದೆ, ಸತ್ತ ಮೇಲೂ ಅದು ಮುಂದುವರಿದಿದೆ ಎನ್ನುತ್ತಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಅಂಬರೀಶ್ ಭಾವೋದ್ವೇಗಕ್ಕೊಳಗಾಗಿದ್ದಾರೆ.

ನನ್ನ ಪ್ರಯತ್ನ ಮುಂದುವರಿಸುವೆ

ಸ್ಮಾರಕ ವಿಚಾರದಲ್ಲಿ ಸಿಎಂ ಜೊತೆ ಮಾತನಾಡುತ್ತಲೇ ಇದ್ದೇನೆ. ಈ ಸಂಬಂಧ ನಡೆಯುವ ಎಲ್ಲಾ ಮೀಟಿಂಗ್ ನಲ್ಲಿ ಭಾಗವಹಿಸುತ್ತಿದ್ದೇನೆ, ಗ್ರಹಚಾರ ಇನ್ನೇನು ನಾನು ಮಾಡಲು ಸಾಧ್ಯ ಎಂದು ತನ್ನದೇ ಸರಕಾರದ ವಿರುದ್ದ ಅಂಬಿ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಭಾರತಿ ನಿರ್ಧಾರವೇ ಅಂತಿಮ

ವಿಷ್ಣು ಸಮಾಧಿ ವಿಚಾರದಲ್ಲಿ ಅವನ ಕುಟುಂಬದ ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತಿ ನಿರ್ಧಾರವೇ ಅಂತಿಮ. ಅವರು ಹೇಗೆ ಹೇಳುತ್ತಾರೋ ಹಾಗೆ ಎಂದು ಚೆಂಡನ್ನು ವಿಷ್ಣು ಕುಟುಂಬಕ್ಕೇ ಅಂಬಿ ಎಸೆದಿದ್ದಾರೆ. ಆದರೆ ವಿಷ್ಣುವಿಗೆ ಅನ್ಯಾಯ ಮಾಡಿದ್ದು ಯಾರು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದೇ ಅಡ್ಡಗೋಡೆಯ ಮೇಲೆ ದೀಪವಿಟ್ಟು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾರೆ.

English summary
Late Kannada film icon Dr. Vishnuvardhan memorial issue: His wife Bharathi Vishnuvardhan decision is final, said Rebel Star cum close friend of Vishnu, Ambarish.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada