»   » ರಾಜ್ ಚಿತ್ರದಲ್ಲಿ ಪಿಬಿಎಸ್ ಹಾಡು ನಿಂತಿದ್ದು ಯಾಕೆ: ಕಾರಣ ಇಲ್ಲಿದೆ

ರಾಜ್ ಚಿತ್ರದಲ್ಲಿ ಪಿಬಿಎಸ್ ಹಾಡು ನಿಂತಿದ್ದು ಯಾಕೆ: ಕಾರಣ ಇಲ್ಲಿದೆ

Posted By:
Subscribe to Filmibeat Kannada

'ನಮ್ಮದು ಶರೀರ, ನಿಮ್ಮದು ಶಾರೀರ' ಇದು ಪಿ ಬಿ ಶ್ರೀನಿವಾಸ್ ಬಗ್ಗೆ ವರನಟ ರಾಜ್ ಹೇಳುತ್ತಿದ್ದ ಮಾತು. ರಾಜ್ ಚಿತ್ರಕ್ಕೆ ಖಾಯಂ ಗಾಯಕರಾಗಿದ್ದ ಪಿಬಿಎಸ್ ಅವರ ಕಂಠ ರಾಜಕುಮಾರ್ ಅವರಿಗೆ ಬಹಳವಾಗಿ ಹೊಂದುತ್ತಿತ್ತು.

ರಾಜಕುಮಾರ್ ಚಿತ್ರಗಳ ಯಶಸ್ಸು ಪಡೆಯುತ್ತಿದ್ದದ್ದು ಒಂದೆಡೆಯಾದರೆ, ಅವರ ಚಿತ್ರದ ಹಾಡುಗಳು ಪಿಬಿಎಸ್ ಕಂಠದ ಮೂಲಕ ನಾಡಿನ ಮೂಲೆ ಮೂಲೆ ಮುಟ್ಟಿದ್ದವು. ಹಾಗಿತ್ತು ರಾಜ್ ಮತ್ತು ಪಿಬಿಎಸ್ ಅವರ ಜೋಡಿ. (ಆಡಿಸಿ ನೋಡು ಬೀಳಿಸಿ ನೋಡು ಮರೆತು ಹೋಗದು)

ಜಾತಕಫಲ ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಟೋಪಿವಾಲ ಎಂದೇ ಆ ಸಮಯದಲ್ಲಿ ಖ್ಯಾತರಾಗಿದ್ದ ಪಿಬಿಎಸ್, ರಾಜ್ ಚಿತ್ರದ ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು.

ರಾಜಕುಮಾರ್ ತನ್ನ ಚಿತ್ರಕ್ಕೆ ತಾನೇ ಹಾಡಲು ಆರಂಭಿಸಿದ ನಂತರ ಪಿ ಬಿ ಶ್ರೀನಿವಾಸ್, ರಾಜ್ ಕ್ಯಾಂಪಿನ ಚಿತ್ರದಲ್ಲಿ ಹೆಚ್ಚಾಗಿ ಕಾಣಿಸಕೊಳ್ಳಲಿಲ್ಲ.

1974ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರ ರಾಜ್ ಫುಲ್ ಟೈಂ ನಾಯಕ ಕಮ್ ಗಾಯಕನಾಗಿ ಕಾಣಿಸಿಕೊಂಡ ಸಿನಿಮಾ. ಯಾರೇ ಕೂಗಾಡಲಿ , ಊರೇ ಹೋರಾಡಲಿ ಹಾಡು ಈ ಚಿತ್ರದ ರಾಜ್ ಕಂಠದಿಂದ ಮೂಡಿಬಂದ ಜನಪ್ರಿಯ ಗೀತೆ.

ರಾಜ್ ಚಿತ್ರಕ್ಕೆ ಪಿಬಿ ಶ್ರೀನಿವಾಸ್ ಹಾಡುವುದು ನಿಂತಿದ್ದಕ್ಕೆ ಕಾರಣ ಏನು, ಈ ಬಗ್ಗೆ ರಾಘವೇಂದ್ರ ರಾಜಕುಮಾರ್ ಏನು ಹೇಳುತ್ತಾರೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸಂಪತ್ತಿಗೆ ಸವಾಲ್ ಚಿತ್ರ

ನಿರ್ಮಾಪಕರನ್ನು ಅನ್ನದಾತ ಎಂದು ಹೇಳುತ್ತಿದ್ದವರು ಅಪ್ಪಾಜಿ. ಸಂಪತ್ತಿಗೆ ಸವಾಲ್ ಚಿತ್ರವನ್ನು ಎ ಎನ್ ಮೂರ್ತಿ ನಿರ್ಮಿಸಿದ್ದರು. ಹಿಂದೆ ಕೆಲವು ಬಾರಿ ಹಾಡು ಹಾಡಿದ್ದರೂ, ಅಪ್ಪಾಜಿ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಗಾಯಕರಾದರು. ಈ ಚಿತ್ರದ ನಿರ್ಮಾಪಕರು ತಂದೆಯ ಬಳಿ ಬಂದು ಹಾಡಬೇಕೆಂದು ಕೇಳಿ ಕೊಂಡರು. ನಿರ್ಮಾಪಕರಿಗೆ ಲಾಭ ಆಗುತ್ತೆ ಅನ್ನುವುದಕ್ಕೋಸ್ಕರ ತಂದೆ ಹಾಡಲಾರಂಭಿಸಿದರು.

ಯಾರ ಹೊಟ್ಟೆ ಹೊಡೆಯುವ ಉದ್ದೇಶವಿಲ್ಲ

ಗಾಯಕನಾಗ ಬೇಕು ಎನ್ನುವ ಉದ್ದೇಶ ತಂದೆಗಿರಲಿಲ್ಲ. ಅದು ಬೇರೆಯೊಬ್ಬರ ಕಸುಬು, ನನ್ನದು ನಟನೆಯ ಕಸುಬು. ನನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದು ನನಗಿಷ್ಟವಿಲ್ಲ. ಅದರಿಂದ ಅವರಿಗೆ ಬರುವ ವರಮಾನಕ್ಕೆ ಅಡ್ಡಿಮಾಡಬಾರದೆಂದು ಮೊದ ಮೊದಲು ಅಪ್ಪಾಜಿ ಹಾಡು ಹಾಡಲು ನಿರಾಕರಿಸಿದ್ದರು ಎಂದು ರಾಘಣ್ಣ, ಪಬ್ಲಿಕ್ ಮ್ಯೂಸಿಕ್ ಟಿವಿಯಲ್ಲಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಗಾಯಕರಾಗಲು ಒತ್ತಡವಿತ್ತು

ಸಂಪತ್ತಿಗೆ ಸವಾಲ್ ಚಿತ್ರದ ನಂತರವೂ ತನ್ನ ಚಿತ್ರದಲ್ಲಿ ಹಾಡು ಹೇಳಲು ಅಪ್ಪಾಜಿ ಒಪ್ಪಿರಲಿಲ್ಲ. ನಿರ್ಮಾಪಕರ ಮತ್ತು ನಿರ್ದೇಶಕರ ಒತ್ತಡದಿಂದ ಗಾಯಕರೂ ಆಗುವ ನಿರ್ಧಾರಕ್ಕೆ ಅಪ್ಪಾಜಿ ಬಂದರು. ಅಪ್ಪಾಜಿ ಹಾಡಲು ಶುರು ಮಾಡಿದ ನಂತರ, ಅದೇ ಮುಂದಿನ ದಿನಗಳಲ್ಲಿ ಪ್ರಾಕ್ಟೀಸ್ ಆಯಿತು. ಹಾಗಾಗಿ, ಅಪ್ಪಾಜಿ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್ ಹಾಡು ಕಮ್ಮಿಯಾಗಲಾರಂಭಿಸಿತು. ನಿರ್ಮಾಪಕರ ಒತ್ತಾಯದ ಮೇರೆಗೆ ಅಪ್ಪಾಜಿ ಈ ನಿರ್ಧಾರ ತೆಗೆದುಕೊಂಡರೇ ಹೊರತು, ಯಾರ ವರಮಾನಕ್ಕೂ ಕಲ್ಲು ಹಾಕುವ ಉದ್ದೇಶ ಅಪ್ಪಾಜಿಗಿರಲಿಲ್ಲ.

ಇದರ ಸಂಭಾವನೆ ನಾವು ಬಳಸಬಾರದು

ಆದರೆ ಗಾಯಕನಾಗಿ ಬರುವ ಸಂಭಾವನೆಯನ್ನು ಮನೆಯಲ್ಲಿ ಯಾವ ಕಾರಣಕ್ಕೂ ಬಳಸಿಕೊಳ್ಳಬಾರದು ಎಂದು ಅಪ್ಪಾಜಿ ಸೂಚಿಸಿದ್ದರು. ಕೊನೆಯವರೆಗೂ ಅವರ ಹಾಡಿನ ಮೂಲಕ ಬಂದ ಸಂಭಾವನೆ ಟ್ರಸ್ಟಿಗೆ ಹೋಗುತ್ತಿತ್ತು.

ತಂದೆ, ತಾಯಿಯ ಬಗ್ಗೆ ರಾಘಣ್ಣ

ನನ್ನ ತಂದೆ, ತಾಯಿ ಶಿವ ಪಾರ್ವತಿಯಂತೆ. ಶಿವನಿಗೆ ಪಾರ್ವತಿ, ಪಾರ್ವತಿಗೆ ಶಿವ ಎಷ್ಟು ಮುಖ್ಯನೋ ಹಾಗೆ ನಮ್ಮ ತಂದೆಯಾಯಿಯದ್ದು ಆದರ್ಶ ಜೀವನ.

ನನ್ನ ಹೆಂಡತಿ, ಅಪ್ಪಾಜಿ ಬಗ್ಗೆ

ನನ್ನ ಹೆಂಡತಿ ಎಷ್ಟೋ ಬಾರಿ ನನ್ನಲ್ಲಿ ಹೇಳಿದ್ದಳು. ರಾಜಕುಮಾರ್ ಮಗ ಎಂದು ನಿಮ್ಮನ್ನು ಮದುವೆಯಾದೆ, ನಿಮ್ಮನ್ನು ಮದುವೆಯಾದರೆ ಅಪ್ಪಾಜಿಯವರನ್ನು ಹತ್ತಿರದಿಂದ ನೋಡಬಹುದಲ್ಲಾ ಎಂದು ಹಲವು ಬಾರಿ ನನ್ನ ಪತ್ನಿ ನನ್ನಲ್ಲಿ ಹೇಳಿದ್ದಳು ಎಂದು ರಾಘಣ್ಣ ಸಂದರ್ಶನದಲ್ಲಿ ಹೇಳಿದ್ದಾರೆ.

ಅಪ್ಪಾಜಿ ಮೊಮ್ಮಗನನ್ನು ನೋಡಲು ಹೋದಾಗ

ನನ್ನ ಎರಡನೇ ಮಗು ಗುರು ಹುಟ್ಟಿದ ಸಮಯ. ಅಪ್ಪಾಜಿ ಆಸ್ಪತ್ರೆಗೆ ಬಂದಿದ್ದರು, ಅವನು ಹುಟ್ಟಿದ್ದು ಏಪ್ರಿಲ್ 23ಕ್ಕೆ, ಅಪ್ಪಾಜಿ ಹುಟ್ಟಿದ್ದು ಏಪ್ರಿಲ್ 24ಕ್ಕೆ. ಮೊಮ್ಮಗನನ್ನು ಮುದ್ದಿಸುತ್ತಾ ಯಾಕೋ ಕಂದಾ ನನಗಿಂತ ಒಂದು ದಿನ ಮುಂಚಿತವಾಗಿ ಭೂಮಿಗೆ ಬಂದೆ. ನಿನಗೇನು ಬರಲು ಅವಸರವಿತ್ತು, ತಾಯಿಯ ಮಡಿಲಲ್ಲಿ ಇನ್ನೆರಡು ದಿನ ಹಾಯಾಗಿರ ಬಹುದಾಗಿತ್ತಲ್ಲಾ, ಎಂದು ಅಪ್ಪಾಜಿ ಹೇಳಿದ್ದನ್ನು ರಾಘಣ್ಣ ಸ್ಮರಿಸಿಕೊಳ್ಳುತ್ತಾರೆ.

English summary
Why legend singer P B Sreenivas stopped singing for Dr Rajkumar movies, Raghavendra Rajkumar explanation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada