»   » ಬಾಸಿಗೆ ತರ್ಕವಿಲ್ಲ , ಕಾಸಿಗೆ ಮೋಸವಿಲ್ಲ

ಬಾಸಿಗೆ ತರ್ಕವಿಲ್ಲ , ಕಾಸಿಗೆ ಮೋಸವಿಲ್ಲ

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಮಡಗೇನಹಳ್ಳಿ ಮಠದ ಭೋಗಾನಂದ ಜಗ್ಗೇಶ್‌ ಸ್ವಾಮಿಗಳು ಪ್ರವಚನ ಶುರುಮಾಡಿದರೆ ಏನಾಗುತ್ತೆ ? ಆಶ್ರಮದ ನಾರಿಮಣಿಗಳು ಡ್ಯೂಯೆಟ್‌ ಹಾಡಲು ಆರಂಭಿಸುತ್ತಾರೆ. ಸನ್ಯಾಸಿತನಕ್ಕೆ ಸಲಾಂ ಹೊಡೆದು ಸಂಸಾರಿಗಳಾಗಲು ತವಕಿಸುತ್ತಾರೆ. ಸ್ವಾಮೀಜಿಗಳು ಹೀಗೂ ಇರುತ್ತಾರಾ ಎನ್ನುವ ಪ್ರಶ್ನೆ ಬೇಡ. ಜಗ್ಗೇಶ್‌ ಸಿನಿಮಾದಲ್ಲಿ ಕಣ್ಣಿಗೆ ಕೇಳಿಸಿಕೊಳ್ಳುವುದು ಗೊತ್ತು. ಕಿವಿಗೆ ಕಾಣಿಸೋದು ಗೊತ್ತು. ಅದಕ್ಕೆ ಇವರ ಚಿತ್ರಗಳಲ್ಲಿ ತರ್ಕ ಗಿರ್ಕ ಹುಡುಕಲು ಹೊರಟರೆ ತಲೆ ಚಿಂದಿ ಚಿಂದಿ.

ಕಾಸು ಇದ್ದವನೇ ಬಾಸು. ಇದು ನಾಯಕನ ಥಿಯರಿ. ಅದಕ್ಕಾಗಿ ನಾನಾ ವೇಷ. ನಾನಾ ಟೈಪಿನ ಮೋಸ. ಅಂಥವರಿಗೆ ಆಶ್ರಮ ಸೇರಿದ ಕೋಟ್ಯಧಿಪತಿ ಮಗಳನ್ನು ಸಂಸಾರಿಯಾಗಿಸಬೇಕೆಂಬ ಪ್ರೊಜೆಕ್ಟ್‌ ಕೈಗೆ ಬರುತ್ತದೆ. ಅದರಲ್ಲಿ ಅವರು ಯಶಸ್ವಿಯೂ ಆಗುತ್ತಾರೆ. ಆದರೆ ಆ ಹುಡುಗಿ ನಿಜವಾದ ಅದೇ ಹುಡುಗಿಯಲ್ಲ ಅನ್ನುವುದು ಗೊತ್ತಾಗುತ್ತದೆ. ಅಷ್ಟರಲ್ಲಿ ಅವಳು ನಾಯಕನ ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾಳೆ. ಅವಳ ಹಿಂದೆ ರೌಡಿ ಪಡೆ ಬಿದ್ದಿರುತ್ತದೆ. ಅಲ್ಲೊಂದು ಚಿಕ್ಕ ಫ್ಯಾಷ್‌ಬ್ಯಾಕು. ಕೊನೆಗೆ ಎಲ್ಲವೂ ಸುಖಾಂತ್ಯ.

ಇದೊಂದು ಮಾಮೂಲಿ ಕತೆ. ಜನರಿಗೆ ಟೋಪಿ ಹಾಕುವ ಚಾಲಾಕಿತನ. ಹಾಕಿಸಿಕೊಳ್ಳುವವರ ಮುಠ್ಠಾಳತನ ತುಂಬಾ ಸಿನಿಮಾದಲ್ಲಿ ಬಂದು ಹೋಗಿವೆ. ಅದಕ್ಕೆ ಕೊಂಚ ಮಸಾಲೆ ಸೇರಿಸಿ ನಿರ್ದೇಶಕ ಎ.ಆರ್‌.ಬಾಬು ತಿನ್ನಿಸಲು ಬಂದಿದ್ದಾರೆ. ಕನಿಷ್ಠ ಒಂದು ಗಂಟೆಯಾದರೂ ನಗಬಹುದಾದಷ್ಟು ಸರಕನ್ನು ತುಂಬಿಸಿದ್ದಾರೆ. ಸಂಭಾಷಣೆಯಲ್ಲಿ ಅಶ್ಲೀಲತೆಯ ಒಗರು ಇಲ್ಲವೆನ್ನೋದು ಬಾಬುಗೆ ಸಿಕ್ಕುವ ಬೋನಸ್‌ ಕಾಸು. ಜಗ್ಗೇಶ್‌ ತಮ್ಮ ಮ್ಯಾನರಿಸಂನಿಂದ ಇಡೀ ಚಿತ್ರವನ್ನು ನೋಡುವಂತೆ ಮಾಡುತ್ತಾರೆ. ರಾಜ್‌ರನ್ನು ಅನುಕರಣೆ ಮಾಡುವುದು ಖಂಡಿತ ಇಷ್ಟವಾಗುತ್ತದೆ. ಆದರೆ ಮಾತಿನ ಬದಲು ಸನ್ನೆಯಿಂದಲೇ ದ್ವಂದ್ವಾರ್ಥ ಹುಟ್ಟಿಸಲು ಯತ್ನಿಸೋದು ಅವರಂಥ ನಗೆನಟನಿಗೆ ತಕ್ಕುದಲ್ಲ. ಕೋಮಲ್‌ ಕೂಡ ಜಗ್ಗೇಶ್‌ ಸರಿಸಮ ನಿಲ್ಲುವುದು ಪ್ರೇಕ್ಷಕರಿಗೆ ಸಿಕ್ಕುವ ಟಿಪ್ಸು. ನಾಯಕಿ ರಾಧಿಕಾ ಚೌಧುರಿ ಬಗ್ಗೆ ಹೇಳುವುದೇನೂ ಇಲ್ಲ. ದೊಡ್ಡಣ್ಣ ಮಾಮೂಲಿ. ವಿ.ಮನೋಹರ್‌ ಎರಡು ಹಾಡಿನಲ್ಲಿ ಮಿಂಚಿಂಗೋ ಮಿಂಚಿಂಗು. ಜಾನಪದ ಧಾಟಿಯ ಹಾಡೊಂದು ಅವರ ಕ್ರಿಯೆಟಿವಿಟಿಗೆ ಸಾಕ್ಷಿ. ಹಾಗೆಯೇ ಹಳೆಯ ಹಾಡುಗಳ ಒಂದೊಂದು ಸಾಲನ್ನು ಪೋಣಿಸಿ ಬರೆದ ಗೀತೆಯೂ...

ಯಾವುದೇ ಪೂರ್ವಾಗ್ರಹವಿಲ್ಲದೆ, ತಲೆಗೆ ಕೆಲಸ ಕೊಡದೆ ಮನಸ್ಸು ಬಿಚ್ಚಿ ನೋಡಿದರೆ ಕೊಟ್ಟ ಕಾಸಿಗೆ ಬಾಸು ತೀರಾ ಮೋಸವನ್ನೇನೂ ಮಾಡುವುದಿಲ್ಲ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada