For Quick Alerts
  ALLOW NOTIFICATIONS  
  For Daily Alerts

  ನಮ್ 'ಆಪ್ತಮಿತ್ರ' ಯಜಮಾನ್ರು

  By Super
  |

  Navya Nair and Vishnuvardhan in Nam Yejamanru
  ಟಿ.ಎಸ್.ನಾಗಾಭರಣ ನಿರ್ದೇಶನದ 'ನಂ ಯಜಮಾನ್ರು' ಚಿತ್ರವನ್ನು ದ್ವಾರಕೀಶ್ ನಿರ್ಮಾಣದ, ವಾಸು ನಿರ್ದೇಶನದ 'ಆಪ್ತಮಿತ್ರ' ಚಿತ್ರದೊಡನೆ ಹೋಲಿಸದೆ ಬೇರೆ ವಿಧಿಯೇ ಇಲ್ಲ. ಈ ಚಿತ್ರವನ್ನು ಆಪ್ತಮಿತ್ರ ಭಾಗ 2 ಅಂತ ಕರೆದರೂ ಪರವಾಗಿಲ್ಲ. ಆದರೆ, ನಂ ಯಜಮಾನ್ರನ್ನು ಆಪ್ತಮಿತ್ರ ರಿಮೇಕ್ ಅಂತ ಕರೆದರೆ ಮಾತ್ರ ಸ್ವಲ್ಪ ತಪ್ಪಾದೀತು.

  * ಪ್ರಸಾದ ನಾಯಿಕ

  ದ್ವಿವ್ಯಕ್ತಿತ್ವ ಹೊಂದಿದ ವ್ಯಕ್ತಿಯ ದ್ವಂದ್ವದ ಕಥೆ, ಒಂದು ಪಾತ್ರದಿಂದ ಇನ್ನೊಂದರಲ್ಲಿ ಪರಕಾಯ ಪ್ರವೇಶ, ಇದರಿಂದಾಗಿ ತೊಂದರೆಗೆ ಸಿಲುಕುವ ನಾಯಕ, ಇದನ್ನು ಪರಿಹರಿಸಲು ಬರುವ ಮನೋರೋಗ ತಜ್ಞ, ಆ ರೋಗವನ್ನು ಗುಣಪಡಿಸುವ ರೀತಿ ಮತ್ತು ಅದೇ ವಿಷ್ಣುವರ್ಧನ್! ಆಪ್ತಮಿತ್ರಕ್ಕಿಂತ ಕಥನ ಶೈಲಿಯಲ್ಲಿ ವೈವಿಧ್ಯತೆ, ಪಾತ್ರ ಪೋಷಣೆಯಲ್ಲಿ ನಾವೀನ್ಯತೆ, ಕಥೆಗೆ ವೈಜ್ಞಾನಿಕ ಚೌಕಟ್ಟು ನೀಡಿರುವುದು ಭಿನ್ನವಾಗಿದ್ದರೂ 'ನಂ ಯಜಮಾನ್ರ'ನ್ನು ಆಪ್ತಮಿತ್ರದಿಂದ ಹೊರತುಪಡಿಸಿ ನೋಡಲು ಸಾಧ್ಯವೇ ಇಲ್ಲ. ಆಪ್ತಮಿತ್ರದ ಇನ್ನೊಂದು ಭಾಗವೇನಾದರೂ ಮುಂದೆ ಬಂದರೆ ಅದನ್ನು ಆಪ್ತಮಿತ್ರ ಭಾಗ 3 ಅಂತ ಕರೆಯಬೇಕಾದೀತು.

  ಕಥೆಯ ವಸ್ತು ಮಾತ್ರವಲ್ಲ ಪಾತ್ರ ಪೋಷಣೆ, ನಿರೂಪಣೆ ಮತ್ತು ಚಿತ್ರಸಂಗೀತಗಳು ಕೂಡ ಇನ್ನೊಂದು ಮತ್ತೊಂದು ಚಿತ್ರವನ್ನು ನೆನಪಿಸಿಕೊಟ್ಟರೆ ಆಶ್ಚರ್ಯವಿಲ್ಲ. ಇದು ಉದ್ದೇಶ ಪೂರ್ವಕವೋ, ಕಾಕತಾಳೀಯವೋ ನಿರ್ದೇಶಕರೇ ಉತ್ತರಿಸಬೇಕು.

  ಯಜಮಾನ್ರಾಗಿ ವಿಷ್ಣುವರ್ಧನ್ ಪರಕಾರ ಪ್ರವೇಶ ಮಾಡಿದ್ದಾರೆ. ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವ ಹಾವಭಾವಗಳು ಪಿಚ್ಚರ್ ಪರ್ಫೆಕ್ಟ್. ಕ್ಲೈಮ್ಯಾಕ್ಸಲ್ಲಿ ಆಸ್ಪತ್ರೆಯಲ್ಲಿ ಮಲಗಿದ ನವ್ಯಾ ನಾಯರಳನ್ನು ಬೇಡಿಕೊಳ್ಳುವಾಗಲಂತೂ ಮಗುವನ್ನು ಬದುಕಿಸೆಂದು ದೇವರನ್ನು ಬೇಡಿಕೊಳ್ಳುವಾಗಿನ ಬಂಧನದ ಡಾಕ್ಟರ್ ಕಾಣಿಸುತ್ತಾರೆ. ಶೀರ್ಷಿಕೆ ಗೀತೆ ಮತ್ತು ಎರಡನೇ ನಾಯಕ ವಿಜಯ್ ರಾಘವೇಂದ್ರ ತನ್ನ ಪ್ರಿಯತಮೆ ಸಿಗದೆ ತಪ್ಪಿಸಿಕೊಂಡು ಪರಿತಪಿಸುವಾಗ ಹಂಸಲೇಖ ನೀಡಿರುವ ಸಂಗೀತದಲ್ಲಿ ಪ್ರೇಮಲೋಕದ ಎರಡು ಹಾಡುಗಳು ನೆನಪಿಗೆ ಬರುತ್ತವೆ. ದ್ವಿವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿ ಅಭಿನಯಿಸಿರುವ ನವ್ಯಾ ನಾಯರ್ ನಟನೆಯಲ್ಲಿ ಆಪ್ತಮಿತ್ರದ ನಾಗವಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಆದರೆ, ಕಾಣಸಿಗದಿರುವುದು ನಮ್ಮ 'ಓರೀಜಿನಲ್' ನಿರ್ದೇಶಕ ನಾಗಾಭರಣ ಮಾತ್ರ. ಹಾಗಂತ ನಿರೂಪಣೆಯಲ್ಲಿ, ಚಿತ್ರವನ್ನು ಸಹ್ಯವಾಗಿಸುವಲ್ಲಿ ಭರಣ ಎಲ್ಲಿಯೂ ಎಡವಿಲ್ಲ.

  ಆದರೆ! ಇದಕ್ಕಿಂತಲೂ ವಿಭಿನ್ನವಾದ ಕಥೆ ನಾಗಾಭರಣರಿಗೆ ಸಿಗಲಿಲ್ಲವೆ? ಕಥೆಯ ಆಯ್ಕೆಯಲ್ಲಿ ಕಥೆ ಮತ್ತು ಚಿತ್ರಕಥೆ ಬರೆದಿರುವ ನಾಗಾಭರಣ ಖಂಡಿತ ಎಡವಿದ್ದಾರೆ. ಕಥೆಗೆ ನಾವೀನ್ಯತೆ ನೀಡುವ ನಿಟ್ಟಿನಲ್ಲಿ ಅನವಶ್ಯಕ ದೃಶ್ಯಗಳನ್ನೂ ತುರುಕಿದ್ದಾರೆ. ನಾಯಕ ಜನುಮದಜೋಡಿ.ಕಾಂ ವೈವಾಹಿಕ ಅಂತರ್ಜಾಲ ತಾಣದ ಮ್ಯಾನೇಜಿಂಗ್ ಡೈರೆಕ್ಟರ್. ಆತ, ನೈತಿಕತೆ ಮೀರುವವರನ್ನು ಮಟ್ಟ ಹಾಕುತ್ತಾನೆ, ಫೈಟಿಂಗ್ ಆಡುತ್ತಾನೆ. ಇಂಥ ಅಸಹಜ ದೃಶ್ಯಗಳನ್ನು ಕಲ್ಪಿಸಿಕೊಳ್ಳಲು ಭರಣರಿಗೆ ಹೇಗೆ ಸಾಧ್ಯವಾಯಿತು? ಹಂಸಲೇಖ ನಿರ್ದೇಶನದಲ್ಲಿ ಗೊಂಬೆಮರಿ ಮತ್ತು ಮೌನ ಮಾನಸಗಂಗಾ ಹಾಡುಗಳು ಸುಶ್ರಾವ್ಯವಾಗಿವೆ.

  ಡಿಸೋಸಿಯೆಟೀವ್ ಐಡೆಂಟಿಟಿ ಡಿಸಾರ್ಡರ್ ರೋಗದಿಂದ ಬಳಲುವ ಪಾತ್ರದಲ್ಲಿ ನವ್ಯಾ ನಾಯರ್ ಬೆರಗಾಗಿಸುವ ಅಭಿನಯ ನೀಡಿದ್ದಾರೆ. ನಂ ಯಜಮಾನ್ರಿಗೆ ಸರಿಸಾಟಿಯಾಗಿ ಪಕ್ವ ನಟನೆ ನೀಡಿದ್ದಾರೆ. ಒಂದು ಕೈ ಮೇಲೆಂದರೂ ಪರವಾಗಿಲ್ಲ. ವಿಷ್ಣುವರ್ಧನ್ ಪತ್ನಿಯಾಗಿ, ಎರಡನೇ ನಾಯಕಿಯಾಗಿರುವ ಲಕ್ಷ್ಮಿ ಗೋಪಾಲಸ್ವಾಮಿ ನರ್ತಿಸುವಾಗ ಮಾತ್ರ ಅವರು ನಾಟ್ಯರಾಣಿ ಶಾಂತಲೆಯೇ. ಅಭಿನಯದಲ್ಲಿ ಹೆಚ್ಚು ಅವಕಾಶವಿಲ್ಲ. ನವ್ಯಾ ಪ್ರಿಯತಮನಾಗಿ ವಿಜಯ ರಾಘವೇಂದ್ರ ಫಸ್ಟ್ ಕ್ಲಾಸ್. ಸೈಕಿಯಾಟ್ರಿಸ್ಟ್ ಆಗಿ ಶರತ್ ಬಾಬು ಅವರ ಕಂಚಿನ ಕಂಠ, ಡಿಟೆಕ್ಟಿವ್ ಆಗಿ ಅನಂತನಾಗ್ ಸಂಯಮದ ನಟನೆ ಗಮನ ಸೆಳೆಯುತ್ತದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X