»   » ಪೊಲೀಸ್ ಕ್ವಾರ್ಟರ್ಸ್ : ಎಲ್ಲೆಲ್ಲೂ ಸ್ವಮೇಕ್ ಸ್ವಾದ!

ಪೊಲೀಸ್ ಕ್ವಾರ್ಟರ್ಸ್ : ಎಲ್ಲೆಲ್ಲೂ ಸ್ವಮೇಕ್ ಸ್ವಾದ!

Posted By: * ವಿನಾಯಕರಾಮ್ ಕಲಗಾರು
Subscribe to Filmibeat Kannada

ನೈಜ ಘಟನೆ ಆಧರಿಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಒಂದು ಇಂಚು ಮಿಸ್ ಆದರೂ ಅಲ್ಲಿ ನಗೆಪಾಟಲು ಕಟ್ಟಿಟ್ಟ ಬುತ್ತಿ. ಆ ಮಟ್ಟಿಗೆ ಸೈನೈಡ್ ರಮೇಶ್ ಗೆದ್ದಿದ್ದಾರೆ. ಎಂದೋ ನಡೆದ ಗಲಾಟೆಯಲ್ಲಿ ಕಾಣೆಯಾದ ವ್ಯಕ್ತಿಯೊಬ್ಬನ ಹಿಂದೆ ಹೊರಟು, ಅವನ ಕತೆ ಎಂಬ ಕಂಬಕ್ಕೆ ಪ್ರೇಕ್ಷಕರನ್ನು ಕಟ್ಟಿಹಾಕುವ ಪರಿ ಅಚ್ಚರಿ ಮೂಡಿಸುತ್ತದೆ.

ರಸ್ತೆ ಮಧ್ಯೆ ಬಾಬ್ರಿ ಮಸೀದಿ ವಿಷಯಕ್ಕೆ ಗಲಾಟೆ ನಡೆಯುತ್ತಿರುತ್ತದೆ. ಅಲ್ಲಿ ಇಬ್ಬರು ಸಿಕ್ಕಿಬಿದ್ದಿರುತ್ತಾರೆ. ಯಮಹಾ ಬೈಕು. ಹಿಂದೆ ಸೋನು, ಮುಂದೆ ಅನೀಷ್. ಕೆಲವರು ತಿವಿಯುತ್ತಾರೆ. ಮತ್ತೆ ಕೆಲವರು ಬೆಂಕಿಯ ಉಂಡೆ ಬಿಸಾಡುತ್ತಾರೆ... ಹೀಗಿದ್ದೂ ಆತ ಆಕೆಯನ್ನು ಬಚಾವ್ ಮಾಡುತ್ತಾನೆ. ಜೀವದ ಹಂಗು ತೊರೆದು ಕಾಪಾಡುತ್ತಾನೆ. ರಕ್ತದ ಮಡಿಲಿನಿಂದ ಹೊರಬರುವ ಹೊತ್ತಿಗೆ ಪ್ರೇಕ್ಷಕನ ಉಸಿರು ಬಿಸಿ ಬಿಸಿ ಕಜ್ಜಾಯ. ಕೈಕೈ ಹಿಸುಕಿಕೊಳ್ಳಲು ಶುರುಮಾಡಿರುತ್ತಾನೆ. ಅಲ್ಲಿ 20 ವರ್ಷಗಳ ಹಿಂದಿನ ಲೋಕ ತೆರೆದುಕೊಳ್ಳುತ್ತದೆ...!

ಹೊಸ ಪರಿಚಯ ಅನೀಷ್ ಕತೆಯ ಭಾವಕ್ಕೆ ಹೊಂದಿಕೊಳ್ಳುತ್ತಾನೆ. ಇದು ಮೊದಲ ಚಿತ್ರ ಎಂದರೆ ನಂಬುವುದೇ ಕಷ್ಟ ಎನ್ನುವಂತೆ ನಟಿಸಿದ್ದಾನೆ. ಅವನಿಗೆ ಸಾಥ್ ನೀಡುತ್ತಾರೆ ದಿಲೀಪ್ ರಾಜ್. ಅವರ ಹಾಸ್ಯ ಮಿಶ್ರಿತ ಮಾತುಗಳು ಎಲ್ಲೋ ಒಂದು ಕಡೆ ಮನಸ್ಸಿಗೆ ಗಾಯ ಮಾಡುತ್ತದೆ. ನಾಯಕಿ ಸೋನು ನಟನೆಯಲ್ಲಿ ಕೊಂಚ ಸುಧಾರಿಸಿಕೊಳ್ಳಬೇಕು. ಮುದ್ದಾಗಿ ಕಾಣುವುದು ಬೇರೆ, ನಟಿಸುವುದು ಬೇರೆ. ಅವಿನಾಶ್, ಧರ್ಮ ನಟನೆ ಬಗ್ಗೆ ಮರು ಮಾತಿಲ್ಲ. ನಾಯಕನ ತಾಯಿಯಾಗಿ ಶರಣ್ಯ ಸಾವಿನ ದವಡೆಯಲ್ಲಿ ಒದ್ದಾಡುವಾಗ ಜೋಗಮ್ಮ' ಅರುಂಧತಿ ನಾಗ್ ನೆನಪಾಗುತ್ತಾರೆ.

ಕೆಲವು ಕಡೆ ಕಚಗುಳಿ ಇಡುವ ಸಂಭಾಷಣೆಯಿದೆ. ಚಿತ್ರಕತೆಯಲ್ಲಿ ಒಂದು ಸೈದ್ಧಾಂತಿಕ ಒಲವು/ನಿಲುವು/ಗೆಲುವು ಎದ್ದುಕಾಣುತ್ತದೆ. ಸೈನೈಡ್ ಚಿತ್ರಕ್ಕೆ ಕೆಲಸ ಮಾಡಿದ್ದ ಸಂಕಲನಕಾರ ಆಂಟೊನಿ ಇಲ್ಲಿಯೂ ಕೈ ಚಳಕ ತೋರಿದ್ದಾರೆ. ಸಂಗೀತದಲ್ಲಿ ಸ್ವದೇಸೀ ಸ್ವಾದವಿದೆ. ಅದಕ್ಕೆ ರಾಜೇಶ್ ಕೃಷ್ಣನ್ ಕಂಠ ಪ್ಲಸ್ ಪಾಯಿಂಟ್.

ವಾರಕ್ಕೆ ಮೂರರಂತೆ ಬರುವ ರಿಮೇಕ್, ಕಾಲೇಜ್ ಕತೆಗಳು, ಲಾಂಗ್' ಲವ್ ಸ್ಟೋರಿಗಿಂತ ಪೊಲೀಸ್ ಕ್ವಾರ್ಟರ್‍ಸ್ ಸಾವಿರ ಪಾಲು ಮೇಲು. ಸ್ವಮೇಕ್ ಚಿತ್ರಗಳಿಗೆ, ಅಲ್ಲಲ್ಲ... ಉತ್ತಮ ಸ್ವಮೇಕ್‌ಗೆ ಬೆಂಬಲಿಸದಿದ್ದರೆ ಮುಂದೊಂದು ದಿನ ರೀ-ಮೇಕ್, ಮಿಕ್ಸ್ ರಾಮಾಯಣ ನೋಡುವ ಪರಿಸ್ಥಿತಿ ಬಂದೀತು. ಇದು ಸತ್ಯ. ಅದನ್ನು ಸುಳ್ಳಾಗಿಸಲು ಹಲವು ಹಾದಿಗಳಿವೆ. ಅದರಲ್ಲಿ ಒಂದು ರಹ ದಾರಿ ಪೊಲೀಸ್ ಕ್ವಾರ್ಟರ್ಸ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada