For Quick Alerts
  ALLOW NOTIFICATIONS  
  For Daily Alerts

  ಸುದೀಪ್, ರಮ್ಯಾ 'ಜಸ್ಟ್ ಮಾತ್ ಮಾತಲ್ಲಿ' ವಿಮರ್ಶೆ

  By *ಶೇಖರ ಎಚ್ ಹೂಲಿ
  |

  ಒಂದು ಸಾಧಾರಣ ಲವ್ ಸ್ಟೋರಿ. ಅಲ್ಲಲ್ಲಿ ಹೊಸ ತಿರುವುಗಳು, ಫೈಟ್ ಅಥವಾ ಹಾಸ್ಯ ದೃಶ್ಯಗಳಿಲ್ಲದೆ ಸುದೀಪ್ ಒಂದು ಕುಟುಂಬ ಸಮೇತ ನೋಡುವ ಚಿತ್ರವನ್ನು ಕೊಟ್ಟಿದ್ದಾರೆ. ಹೆಚ್ಚು ಮಾತಿಲ್ಲದೆ ಬರೀ ಬಾಡಿಲಾಂಗ್ವೇಜ್ ಮೂಲಕ ಸುದೀಪ್ ನೀಡಿದ ಅಭಿನಯ ವಾರೆ ವ್ಹಾ ಎನ್ನುವಂತಿದೆ. ಇದೇ ಚಿತ್ರದ ಹೈಲೈಟ್. ಚಿತ್ರ ನೋಡಿ ಹೊರ ಬಂದ ನಿಮಗೆ ಎಲ್ಲೋ 'ಮುಂಗಾರು ಮಳೆ' ಫೀಲಿಂಗ್ಸ್ ಬಂದರೂ ಬರಬಹುದು.

  'ಮೈ ಆಟೋಗ್ರಾಫ್', 'ನಂ.73 ಶಾಂತಿ ನಿವಾಸ' ರೀಮೇಕ್ ಚಿತ್ರಗಳ ನಂತರ ಸುದೀಪ್ ನಿರ್ದೇಶಿಸಿ ನಟಿಸಿದ ಸ್ವಮೇಕ್ ಚಿತ್ರ 'ಜಸ್ಟ್ ಮಾತ್ ಮಾತಲ್ಲಿ'. ಬಿಡುಗಡೆಗೆ ಮುಂಚೆ ಭಾರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಇದೂ ಒಂದಾಗಿತ್ತು. ಪ್ರೇಕ್ಷಕರ ನಿರೀಕ್ಷೆಗಳನ್ನು ಸುದೀಪ್ ಎಲ್ಲೂ ಹುಸಿಗೊಳಿಸಿಲ್ಲ.ಚಿತ್ರಕ್ಕೆ ಕಥೆ ಸ್ವತಃ ಸುದೀಪ್ ಅವರದೇ ಎಂಬುದು ಗಮನಾರ್ಹ ಅಂಶ.

  ರಘು ದೀಕ್ಷಿತ್ ಸಂಗೀತ, ತಾಂತ್ರಿಕತೆ, ಕಣ್ಣಿಗೆ ಹಾಯೆನಿಸುವ ಲೋಕೇಶನ್, ಕಾಸ್ಟ್ಯೂಮ್, ಛಾಯಾಗ್ರಹಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಬಿಗಿ ನಿರೂಪಣೆ ಪ್ರೇಕ್ಷಕರನ್ನು ಸೀಟ್ ನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗುತ್ತದೆ. ಆದರೆ ಕಾಮಿಡಿ ಮತ್ತು ಸ್ಟಂಟ್ ಪ್ರಿಯರಿಗೆ ಸುದೀಪ್ ನಿರಾಸೆ ಮೂಡಿಸಿದ್ದಾರೆ.

  ಒಂದು ಅಪರೂಪದ ಕಥೆ, ಉತ್ತಮ ಚಿತ್ರ ಕಥೆ, ಮುಂದೇನಾಗುತ್ತದೆ ಎನ್ನುವ ಕುತೂಹಲ ಇದ್ದರೂ ಕೆಲವೊಂದು ಕಡೆ ಚಿತ್ರ ಪ್ರೇಕ್ಷಕರಿಗೆ ಬೋರ್ ಅಥವಾ ಬಬ್ಬಲ್ ಗಮ್ ತರಹ ಜಗ್ಗಾಡಿರುವ ಅನುಭವವಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ರಘು ದೀಕ್ಷಿತ್ ಸಂಗೀತ ಪ್ರೇಕ್ಷಕರ ಕುತೂಹಲವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರಕ್ಕೆ ಒಂಚೂರು ಹಾಸ್ಯರಸಾಯನವನ್ನೂ ಬೆರೆಸಿದ್ದರೆ ಚಿತ್ರ ಮತ್ತಷ್ಟು ಸೊಗಸಾಗಿರುತ್ತಿತ್ತು.

  ಚಿತ್ರದಲ್ಲಿ ಎಲ್ಲವೂ ಜಸ್ಟ್ ಮಾತ್ ಮಾತಲ್ಲೇ ನಡೆಯುತ್ತದೆ. ಚಿತ್ರದ ನಾಯಕ ಸಿದ್ ಅಲಿಯಾಸ್ ಸಿದ್ದಾರ್ಥ್ (ಸುದೀಪ್) ಒಬ್ಬ ಗಾಯಕ. ಸಿದ್ದಾರ್ಥ್ ಗೆ ಮಾತು ಬೆಳ್ಳಿ ಮೌನ ಬಂಗಾರ. ಆಕಸ್ಮಿಕವಾಗಿ ನಾಯಕಿ ತನೂ (ರಮ್ಯಾ) ಪರಿಚಯವಾಗುತ್ತದೆ. ಸಿದ್ದಾರ್ಥ್ ಗೆ ತನು ನಡತೆ, ಆಕೆಯ ಕುಟುಂಬ ಮೆಚ್ಚುಗೆಯಾಗುತ್ತದೆ. ತಮಾಷೆಗೆ ನಾಯಕಿ ನಾಯಕನ ಮೇಲೆ ಪ್ರೀತಿ ತೋಡಿಕೊಂಡಾಗ ನಾಯಕ ಅದಕ್ಕೆ ಸಮ್ಮತಿಸುತ್ತಾನೆ . ಆದರೆ ನಾಯಕ ಭಯದಿಂದ ತನೂ ಮತ್ತು ಆಕೆಯ ಕುಟುಂಬವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾನೆ. ಬಸ್ ಸ್ಟಾಪ್ ಬಳಿ ನಿಂತಾಗ ನಾಯಕಿ ಅಲ್ಲಿಗೆ ಬಂದು ತನ್ನ ಪ್ರೀತಿಯನ್ನು ಮತ್ತೊಮ್ಮೆ ತೊಡಿಕೊಳ್ಳುತ್ತಾಳೆ. ಆದರೆ ಸಿದ್ದಾರ್ಥ್ ಆಕೆಯ ಪ್ರೀತಿಯನ್ನು ನಿರಾಕರಿಸುತ್ತಾನೆ. ಅದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯಬೇಕಾದರೆ ಚಿತ್ರ ನೋಡಿಯೇ ತೀರಬೇಕು.

  ಗಂಭೀರವಾಗಿ ಹೆಚ್ಚು ಮಾತಿಲ್ಲದೆ ಸುದೀಪ್ ನಟನೆ ಮನೋಜ್ಞವಾಗಿದೆ. ಭಾವನಾತ್ಮಕ ಸನ್ನಿವೇಶದಲ್ಲಿ ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ನಾಯಕಿ ರಮ್ಯಾ ತುಂಬಾ ಹೊತ್ತು ಕಾಣಿಸಿ ಕೊಳ್ಳುವುದಿಲ್ಲ, ಆದರೆ ಆಕೆಯ ನಟನೆಯಲ್ಲಿ ಹೊಸತನವಿಲ್ಲದಿದ್ದರೂ ಉತ್ತಮವಾಗಿದೆ. ರಘು ದೀಕ್ಷಿತ್ ಅವರ ಸಂಗೀತ ಚಿತ್ರದ ಮತ್ತೊಬ್ಬ ನಾಯಕ ಎನ್ನಬಹುದು. ಚಿತ್ರದ ಆರು ಹಾಡುಗಳು ಕೇಳಲು ಇಂಪಾಗಿವೆ. ಜಸ್ಟ್ ಮಾತ್ ಮಾತಲ್ಲಿ...ಎಲ್ಲೋ ಜಿನುಗಿರುವ... ಮುಂಜಾನೆ ಮಂಜಲ್ಲಿ...ಹಾಡುಗಳು ಕಿವಿಗೆ ಇಂಪು ಕಣ್ಣಿಗೆ ತಂಪು.

  ರಾಜೇಶ್, ಅವಿನಾಶ್, ಪದ್ಮಜಾರಾವ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕೊಡಗು, ಸಕಲೇಶಪುರ, ಸಿಂಗಾಪುರದಲ್ಲಿನ ಹೊರಾಂಗಣ ಚಿತ್ರೀಕರಣ ಸೊಗಸಾಗಿದೆ. ಸುದೀಪ್ ಮತ್ತು ರೋಹಿತ್ ಬರೆದಿರುವ ಸಂಭಾಷಣೆ ಚಿತ್ರದ ಮತ್ತೊಂದು ಹೈಲೈಟ್. ಒಟ್ಟಿನಲ್ಲಿ 'ಜಸ್ಟ್ ಮಾತ್ ಮಾತಲ್ಲಿ' ಸುಂದರ ಸದಭಿರುಚಿಯ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ಅಡ್ಡಿ, ಅಳುಕಿಲ್ಲದೆ ಒಮ್ಮೆ ನೋಡಿ ಆನಂದಿಸಬಹುದು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X