For Quick Alerts
  ALLOW NOTIFICATIONS  
  For Daily Alerts

  ದಿಗಂತ್ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರವಿಮರ್ಶೆ

  By * ಶ್ರೀರಾಮ್ ಭಟ್
  |

  ಇಂದ್ರಜಿತ್ ಲಂಕೇಶ್ ನಿರ್ದೇಶನ ಹಾಗೂ ದಿಗಂತ್ ಚಾರ್ಮಿ ಅಭಿನಯದ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರವು ಸಾಕಷ್ಟು ವಿವಾದದ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಪ್ರದರ್ಶನ ಕಾಣುತ್ತಿರುವ ಇದು ಸಾಕಷ್ಟು ಮೊದಲೇ ಬಿಡುಗಡೆ ದಿನಾಂಕ ಘೋಷಿಸಿದ್ದರೂ ಶೀರ್ಷಿಕೆ ಹಾಗೂ ಪೋಸ್ಟರಿನಲ್ಲಿ ದಿಗಂತ್ ಪ್ಯಾಂಟ್ ಬಿಚ್ಚಿ ನಿಂತು ಕೊಟ್ಟಿರುವ ಫೋಸ್ ಗೆ ಸಂಬಂಧಿಸಿ ಒಕ್ಕಲಿಗರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅವೆಲ್ಲಾ ಬಗೆಹರಿದು ನಿಗದಿಯಾದ ದಿನಾಂಕದಂದೇ (06 ಏಪ್ರಿಲ್ 2012) ತೆರೆಕಂಡಿರುವ ದೇವ್ ಸನ್ ಆಫ್ ಮುದ್ದೇಗೌಡ, ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನಬಹುದು.

  ಇಂದ್ರಜಿತ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಹೊಂದಿರುವ ಈ ಚಿತ್ರ, ಬಿ ಎ ಮಧು ಹಾಗೂ ಮಂಜು ಮಾಂಡವ್ಯ ಸಂಭಾಷಣೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ನಾಯಕ ದಿಗಂತ್ ಪಾತ್ರವೇ ಸಿನಿಮಾ ನಟನಾಗುವ ಕನಸುಹೊತ್ತು ಸಾಗುವ ಹುಡುಗನೊಬ್ಬನದು. ಅಪ್ಪನ ಕನಸಿಗೆ ವಿರುದ್ಧವಾಗಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಹೊರಡುವ ನಾಯಕ, ಅಪ್ಪನ ಸಕಲೈಶ್ವರ್ಯಗಳನ್ನೂ ತೊರೆದು ಸ್ವತಂತ್ರವಾಗಿ ಬದುಕಿ ತನ್ನ ಗುರಿ ಈಡೇರಿಸಿಕೊಳ್ಳಲು ಹಾತೊರೆಯುವ ಕಥೆ ಈ ಚಿತ್ರದ್ದು. ಅದರಲ್ಲಿ ನಾಯಕ ನಡೆಯುವ ದಾರಿ ಎಂಥದ್ದು ಹಾಗೂ ಆತ ತನ್ನ ಗುರಿ ಮುಟ್ಟುವಲ್ಲಿ ಸಫಲನಾಗುತ್ತಾನಾ ಎಂಬುದನ್ನು ತೆರೆಯ ಮೇಲೆ ನೋಡಿ.

  ನಿರ್ದೇಶಕ ಇಂದ್ರಜಿತ್ ಲಂಕೇಶ್, ಸ್ವತಃ ತಮ್ಮ ನಟನಾಗುವ ಕನಸನ್ನೇ ಕಥೆ, ಚಿತ್ರಕಥೆ ಮಾಡಿ ಸಿನಿಮಾ ಸುತ್ತಿದಂತಿದೆ. ಅದಕ್ಕೆ ಸಾಕ್ಷಿಯೆಂಬಂತೆ, ಗೆಸ್ಟ್ ರೋಲ್ ನಲ್ಲಿ ಆಗಾಗ ಪ್ರತ್ಯಕ್ಷವಾಗುವ ಅವರು ತಾವೊಬ್ಬ ಸೌಂದರ್ಯ ಪ್ರೇಮಿ ಹಾಗೂ ಕನಸುಗಾರ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ. ಈಗಿನ ಜನರೇಶನ್ ಪ್ರತಿನಿಧಿಸುವ ಕಥೆಯೊಂದನ್ನು ಸಿನಿಮಾಗೆ ಬೇಕಾದಷ್ಟು ಎಳೆದು ಚಿತ್ರಕಥೆ, ನಿರ್ದೇಶನ ಮಾಡಿ ತೆರೆಗೆ ತಂದಿರುವ ಇಂದ್ರಜಿತ್ ಅದನ್ನು 'ಹೊಸತನ' ಎಂಬ ಹೆಸರಿನಿಂದ ಕರೆದಿದ್ದಾರೆ ಅಷ್ಟೇ! ಇನ್ನೊಂದು ವಿಷಯವೆಂದರೆ ಇಡೀ ಚಿತ್ರದಲ್ಲಿ ಎಲ್ಲೂ ಮುದ್ದೆ ತೋರಿಸಿಲ್ಲ ಜೊತೆಗೆ ಒಕ್ಕಲಿಗರ ಬಗ್ಗೆ ಅವಮಾನವನ್ನೂ ಮಾಡಿಲ್ಲ.

  ಚಿತ್ರದ ನಿರೂಪಣೆಯನ್ನು ಹೊಸತನ, ವಿಭಿನ್ನ ಎನ್ನಬಹುದೇ ಹೊರತೂ 'ಚೆನ್ನಾಗಿದೆ' ಎಂಬ ಶಬ್ಧ ಬಳಸಲು ಸಾಧ್ಯವಾಗುವುದಿಲ್ಲ. ಚಿತ್ರದ ಪ್ರತಿ ದೃಶ್ಯವೂ ಶ್ರೀಮಂತವಾಗಿದ್ದು ಬರೋಬ್ಬರಿ 5 ಕೋಟಿ ರು. ಪ್ರೇಕ್ಷಕರ ಕಣ್ಣು ಕುಕ್ಕುವಂತೆ ಮಾಡಿದೆ. ಚೆಂದದ ಲೊಕೇಶನ, ಸೆಟ್ ಗಳು, ಕಲರ್ ಫುಲ್ ಛಾಯಾಗ್ರಹಣ, ಹಾಡು, ಕುಣಿತ ಎಲ್ಲದರ ರಂಗೋಲಿ ಪ್ರೇಕ್ಷಕರ ಮನಸ್ಸನ್ನು ಕಥೆಯ ರೂಪದಲ್ಲಿ ಕಟ್ಟಿಕೊಡಲು ವಿಫಲವಾಗಿರುವುದು ಈ ಚಿತ್ರದ ಮೈನಸ್ ಪಾಯಿಂಟ್. ಕೇವಲ ಚೆಂದದ ದೃಶ್ಯಗಳ ಸರಮಾಲೆಯನ್ನೇ ಸಿನಿಮಾ ಎನ್ನಲಾಗುವುದಿಲ್ಲ.

  ನಿರ್ದೇಶನದ ಜೊತೆಗೆ ಗೆಸ್ಟ್ ರೋಲ್ ನಲ್ಲಿಯೂ ಕಾಣಿಸಿಕೊಂಡಿರುವ ಇಂದ್ರಜಿತ್ ನಟನೆ ಲೆಕ್ಕಕ್ಕೆ ಸಿಗುವುದಿಲ್ಲ. ನಾಯಕ ದಿಗಂತ್ ತಮಗೊಪ್ಪುವ ಪಾತ್ರದಲ್ಲಿ ಲೀಲಾಜಾಲತೆ ಮೆರೆದು ನ್ಯಾಯ ಸಲ್ಲಿಸಿದ್ದಾರೆ. ಚಾರ್ಮಿಯ ನಟನೆಯೂ ಓಕೆ. ಪ್ರತಿ ದೃಶ್ಯದಲ್ಲೂ ಮುದ್ದುಮುದ್ದಾಗಿ ಕಾಣಿಸುವ ದಿಗಂತ್-ಚಾರ್ಮಿ ಜೋಡಿ ದೇವಲೋಕದ ಮನ್ಮಥ-ಅಪ್ಸರೆ ಪ್ರತಿರೂಪದಂತೆ ಗೋಚರಿಸಿ ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗಿದ್ದಾರೆ. ನಾಯಕನ ಗೆಳೆಯನ ಪಾತ್ರದಲ್ಲಿ ಶರಣ್ ಹಾಗೂ ಅವರ ಸಂಗಾತಿ ಪಾತ್ರದಲ್ಲಿ ತನಿಷಾ ಅಭಿನಯ ಚೆನ್ನಾಗಿದೆ. ಅನಂತ್ ನಾಗ್ ಪಾತ್ರ ಹಾಗೂ ಅಭಿನಯ ಎಂದಿನಂತೆ ಪ್ರಬುದ್ಧ, ಸೂಪರ್.

  ತಬಲಾ ನಾಣಿ, ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಬ್ಯಾಂಕ್ ಜನಾರ್ಧನ್, ಹಾಗೂ ಉಳಿದ ಪೋಷಕವರ್ಗವೆಲ್ಲರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ಧರ್ಮ ಹಿನ್ನಲೆ ಸಂಗೀತ, ಜೆಸ್ಸಿ ಗಿಫ್ಟ್ ಹಾಡುಗಳು, ಸಂಗೀತ ಎಲ್ಲವೂ ಚಿತ್ರಕ್ಕೆ ನ್ಯಾಯ ಸಲ್ಲಿಸಿವೆ. ಸ್ಯಾಂಡಿ ಛಾಯಾಗ್ರಹಣ ಸೂಪರ್, ಕೆ ಎಂ ಪ್ರಕಾಶ್ ಸಂಕಲನ ಓಕೆ. ಒಟ್ಟಿನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ವತಃ ಹೇಳಿಕೊಂಡಂತೆ ಇದನ್ನೊಂದು ಹೊಸ ಪ್ರಯತ್ನ ಎನ್ನಬಹುದು. ಆದರೆ ಚಿತ್ರ ಸೂಪರ್ ಎನ್ನಲಾಗುವುದಿಲ್ಲ. ಪ್ರೇಕ್ಷಕರು ಕೈಹಿಡಿದರೆ ಮಾಡಿದ ಖರ್ಚಿಗೆ ಮೋಸವಾಗಲಾರದು, ಅಷ್ಟೇ.

  English summary
  Dev Son of Muddegowda Review. Diganth Chrami acted in Lead Role. Indrajith Lankesh Directed this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X