»   »  ಹೈ ಬಜೆಟ್ ಚಿತ್ರ, ಹವಾ ಇಲ್ಲದ ಯುವ !

ಹೈ ಬಜೆಟ್ ಚಿತ್ರ, ಹವಾ ಇಲ್ಲದ ಯುವ !

Posted By:
Subscribe to Filmibeat Kannada
Karthik and Madhu sharma
ಇಲ್ಲಿ ಖರ್ಚಿಗೆ ಲೆಕ್ಕವಿಲ್ಲ. ಅದ್ಧೂರಿತನಕ್ಕೆ ಮೋಸವಿಲ್ಲ. ಮಾತಿಗೆ ಬೆಲೆಯಿಲ್ಲ. ಹೊಡೆದಾಟಕ್ಕೆ ಮಿತಿಯಿಲ್ಲ. ಹಾಡಿಗೆ ಕೊನೆಯಿಲ್ಲ. ಹೆಜ್ಜೆಗೆ ಮಿತಿ ಇಲ್ಲ, ಹಾವಭಾವದಲ್ಲಿ ಹಿಡಿತವಿಲ್ಲ. ಕತೆಯಲ್ಲಿ ಸೆಳೆತವಿಲ್ಲ... ಯುವಕರೇ ಇಲ್ಲಿ ಕೇಳಿ... ಇದು ಯುವ ಚಿತ್ರದ ಚಿತ್ರಾನ್ನ. ನಿರ್ದೇಶಕ ನರೇಂದ್ರಬಾಬು ಹೈ ಬಜೆಟ್ ಹೆಸರಲ್ಲಿ ಕೊಟ್ಟ ಪರಮಾನ್ನ. ಇಲ್ಲಿ ಚಿತ್ರಕತೆ ಚಿಂತಾಜನಕ. ನಿರೂಪಣೆಗೆ ಬೇಕಿತ್ತು ಇನ್ನಷ್ಟು ಆಮ್ಲಜನಕ. ಇಡೀ ಚಿತ್ರದಲ್ಲಿ ಹೊಡೆದಾಟದ ಹಾದಿ ಮಾತ್ರ ನಿರ್ವಿಘ್ನಂ ಕುರುಮೇದೇವ... ಆರಂಭದಲ್ಲೇ ರಾಮನಗರದ ಬೆಟ್ಟಕ್ಕೆ ಕರೆದೊಯ್ಯುತ್ತಾರೆ.

*ವಿನಾಯಕರಾಮ್ ಕಲಗಾರು

ಅಲ್ಲಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸೇರಿ ಗೆಲುವು ನನ್ನದೇ ಎಂದು ಹೊಡೆದಾಡುತ್ತಾರೆ. ಆದರೆ ಇಲ್ಲಿ ಮಚ್ಚಿನ ಮಳೆ ಇಲ್ಲ. ಲಾಂಗ್‌ನ ಲಲಿತ ಕಲಾಸಂಘವಿಲ್ಲ. ಮುಖಕ್ಕೆ ಹೊಡೆದರೆ ಮೂರು ಮೈಲಿ ದೂರ ಹೋಗಿ ಬೀಳುತ್ತಾನೆ ಎಂದು ಪ್ರೇಕ್ಷಕರನ್ನು ರೈಲು ಹತ್ತಿಸುವುದಿಲ್ಲ. ಇಲ್ಲಿರುವುದು ಮಾರ್ಷಲ್ ಆರ್ಟ್ ಎಂಬ ಹೊಸ ಮಾಂತ್ರಿಕತೆ. ನಿರ್ದೇಶಕರು ಆ ಮಟ್ಟಿಗೆ ಗೆದ್ದಿದ್ದಾರೆ. ಶುರುವಾದ ಹತ್ತು ನಿಮಿಷ ಇಡೀ ಚಿತ್ರಮಂದಿರ ಗಡಗಡಗಡ... ಅಲ್ಲಿನ ಕ್ಯಾಮೆರಾ ಕೈಚಳಕ, ಸಾಹಸ ನಿರ್ದೇಶಕರ ತಂತ್ರಗಾರಿಕೆ ನಿಜಕ್ಕೂ ಮೆಚ್ಚುವಂತದ್ದು. ಪ್ರೇಕ್ಷ ಕರಿಗೆ ಹತ್ತು ನಿಮಿಷ ಹಾಲಿವುಡ್ ಸಿನಿಮಾ ನೋಡಿದ ಅನುಭವ. ಅದೇ ಭಾವದಲ್ಲಿ ಕುಳಿತು ನೋಡುತ್ತಾರೆ, ನೋಡುತ್ತಲೇ ಇರುತ್ತಾರೆ... ಹತ್ತೇ ಹತ್ತು ನಿಮಿಷ ಅಷ್ಟೇ... ಅಲ್ಲಿಂದ ಶುರು ನೋಡಿ... ಕತೆಯ ಕಾಗುಣಿತ ತಪ್ಪುತ್ತದೆ. ದಿಕ್ಕು, ದಿಕ್ಸೂಚಿ ಎಲ್ಲಾ ಬದಲಾಗುತ್ತದೆ.

ಚಿತ್ರಕತೆ ಜೊಳ್ಳು ಜೊಳ್ಳು ಎನಿಸಲು ಶುರುವಾಗುತ್ತದೆ. ಎಲ್ಲೋ ಮೂಲೆಯಲ್ಲಿ ಯಾರೋ ಕುಳಿತು ತಲೆಗೆ ಮೊಳೆ ಹೊಡೆದ ಅನುಭವ. ಒಂದಕ್ಕೊಂದು ದೃಶ್ಯಕ್ಕೆ ಸಂಬಂಧವಿಲ್ಲ. ಹಾಡು ಇದ್ದಕ್ಕಿದ್ದಂತೇ ಹಾಜರ್. ನಾಯಕ ನಾಲಾಯಕ್ಕಾ? ಹಾಗೆಂದುಕೊಳ್ಳುವಷ್ಟರಲ್ಲಿ ನಾಯಕಿ ಲುಕ್ಕು ಕೊಡುತ್ತಾ ಬರುತ್ತಾಳೆ. ಅದೇ ಹೊತ್ತಿಗೆ ಮುವತ್ತೈದು ವರ್ಷದ ಹಳೇ ಸೆಂಟಿಮೆಂಟ್- ತಾಯಿ ಮಗ ತಂಗಿ ಗೊಳಗೊಳಗೊಳ ಅಳಲು ಶುರುಮಾ ಡುತ್ತಾರೆ. ಇದೇನಪ್ಪಾ ಹಿಂಗೆ ಎಂದುಕೊಂಡರೆ ಗುರುಕಿರಣ್ ಮ್ಯೂಸಿಕ್ ಡಬ್ಬಿ ಹಿಡಿದು ಧೀಂಧಿಂತನ ಎನ್ನುತ್ತಾ ಹಾಡಿಗೆ ಕರೆದೊಯ್ಯುತಾರೆ. ಅದು ನೋಡಲು ಮತ್ತು ಕೇಳಲು ಮಧುರ ಅನಿಸಿದರೂ ಎಲ್ಲೋ ಕೇಳಿದಂತೆ ಭಾಸ. ಗುರುಕಿರಣ್ ಮಟ್ಟಿಗೆ ಮೆಚ್ಚಲೇಬೇಕಾದ ಅಂಶ ಎಂದರೆ ಅವರು ಬೇರೆ ಚಿತ್ರಗಳ ರಾಗಗಳನ್ನು ಭಟ್ಟಿ ಇಳಿಸುವುದಿಲ್ಲ. ಬದಲಾಗಿ ನನ್ನ ಹಾಡು ನನ್ನದು, ನನ್ನ ರಾಗ ನನ್ನದು, ಕೇಳೋ ಕರ್ಮ ನಿಮ್ಮದು... ಸರೋಜ್ ಖಾನ್ ನೃತ್ಯ ಸಂಯೋಜನೆ ಮಟ್ಟಿಗೆ ನಯಾಪೈಸೆ ಕಾಮೆಂಟ್ ಇಲ್ಲ. ಹಾಡುಗಳನ್ನು ಬಾಲಿವುಡ್ ಲೆವೆಲ್ಲಿಗೆ ಕಟ್ಟಿಕೊಡುವಲ್ಲಿ ಖಾನ್ ಗೆದ್ದಿದ್ದಾರೆ.

ಹೆಜ್ಜೆಗೆ ತಕ್ಕ ಗೆಜ್ಜೆ, ಗೆಜ್ಜೆಗೆ ತಕ್ಕ ನಾಯಕಿಯ ಲಜ್ಜೆ... ಹಾಂ... ನಾಯಕಿ ಮಧು ಶರ್ಮಾ ಬಗ್ಗೆ ಒಂದಿಷ್ಟು ಮಾತು. ನಿರ್ದೇಶಕರು ಈಕೆಯನ್ನು ಮುಂಬಯಿಯಿಂದ ಕರೆತಂದಿದ್ದಾರೆ. ಹಾಗೆ ಕರೆಸಿದ್ದು ಖಂಡಿತ ನಷ್ಟವಾಗಿಲ್ಲ. ನವಿರಾದ ನಟನೆ, ನಟನೆಗೆ ತಕ್ಕ ನಾಟ್ಯ, ನಾಟ್ಯಕ್ಕೆ ತಕ್ಕ ಭಾವಲಹರಿ... ಜಯಂತ್ ಕಾಯ್ಕಿಣಿ ಬರೆದ ಮಧುರ ಪಿಸುಮಾತಿಗೆ ಹಾಡಿನಷ್ಟೇ ಮುದ್ದಾಗಿದೆ ಮಧು ಮುದ್ದು ಅಭಿನಯ! ನಾಯಕ ಕಾರ್ತಿಕ್ ಹೊಡೆದಾಡುವ ಕಾಮನಬಿಲ್ಲು. ಕಟ್ಟುಮಸ್ತಾದ ದೇಹವೇನೋ ಇದೆ. ಆದರೆ ಅಲ್ಲಿ ನಟನೆಗೆ ಇನ್ನೊಂದಿಷ್ಟು ಶ್ರಮದ ಅಗತ್ಯ ಬೇಕಿತ್ತು, ತಾಲೀಮು ಕಲಿಯಬೇಕಿತ್ತು.

ಕಾರ್ತಿಕ್ ಮಾಡೆಲಿಂಗ್ ಲೋಕಕ್ಕೆ ಹೇಳಿಮಾಡಿಸಿದ ವ್ಯಕ್ತಿ. ಆದರೆ ಸಿನಿಮಾದಲ್ಲಿ ನಟಿಸುವಾಗ ಮಾತ್ರ ಹೇಳುವುದಕ್ಕೂ ಮಾಡುವುದಕ್ಕೂ ಇದು ಸಮಯವಲ್ಲ. ಗುಲ್‌ಷನ್ ಗ್ರೋವರ್ ಹಿಂದಿಯಿಂದ ಬಂದು ಇಲ್ಲಿ ಕಡಿದಿದ್ದು ಏನೂ ಇಲ್ಲ. ಬಾಯಿ ಹರಿದುಕೊಳ್ಳುವುದಷ್ಟೇ ನಟನೆ ಎಂದು ತಿಳಿದಿದ್ದರೆ ಅದು ಅಲ್ಲಿ ಮಾತ್ರ ಸಹಿ... ಇನ್ನೊಬ್ಬ ವಿಲನ್ ಚಂದ್ರಶೇಖರ್ ಮುಖ ಹಿಂಡುವುದನ್ನು ಸ್ವಲ್ಪ ಕಡಿಮೆ ಮಾಡಲಿ. ಇಲ್ಲದಿದ್ದರೆ ಜನ ಮುಖ ಹಿಂಡಿ, ಮಂಡೆ ತುರಿಸಿಕೊಂಡು, ಅದು ಹುಣ್ಣಾಗಿ, ಹುಣ್ಣು ಹಣ್ಣಾಗಿ, ಹಣ್ಣು ಮಣ್ಣಾಗಿ... ಇವೆಲ್ಲಾ ಬೇಕಾ?

ಶೋಭರಾಜ್, ಜೈಜಗದೀಶ್, ರಮೇಶ್ ಭಟ್ ಮೊದಲಾದವರು ಪಾತ್ರಕ್ಕೆ ಮೋಸ ಮಾಡಿಲ್ಲ. ಆದರೆ ಅವರನ್ನು ಕತೆ, ಪಾತ್ರ, ಸನ್ನಿವೇಶಕ್ಕೆ ಬಳಸಿಕೊಂಡ ಪರಿ ಮೋಸಕ್ಕೆ ಮೋಸವಾಗಿದೆ. ಬುಲೆಟ್ ಪ್ರಕಾಶ್ ಕಾಮಿಡಿಯನ್ನು ಸಹಿಸಿಕೊಳ್ಳುವುದು ಅರ್ಧರಾತ್ರಿ ಚೇಳಿಂದ ಕಚ್ಚಿಸಿಕೊಳ್ಳುವುದಕ್ಕಿಂತ ಕಷ್ಟ ಕಷ್ಟ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada