»   » ನಾನು ನನ್ನ ಕನಸು...ಮಿಸ್ಸಿಂಗ್ ಲಿಂಕುಗಳು

ನಾನು ನನ್ನ ಕನಸು...ಮಿಸ್ಸಿಂಗ್ ಲಿಂಕುಗಳು

Posted By: * ಭವಾನಿ ಬಿಜಲಿ
Subscribe to Filmibeat Kannada

4. ತಂದೆಯ ಸ್ವಾಭಿಮಾನದ ಚಿತ್ರಣ ಮಿಸ್ಸಿಂಗ್!
ಮಗಳು ತನ್ನ ಜೀವನ ಸಂಗಾತಿಯನ್ನು ತಾನೇ ಹುಡುಕಿಕೊಂಡು ಮದುವೆಯಾಗುವ ನಿರ್ಧಾರವನ್ನು ತಂದೆಗೆ ಹೇಳಿದಾಗ, ತಂದೆಗೆ ಆತಂಕವಾಗುವುದು ಸಹಜ. ಮಗಳ ನಿರ್ಧಾರ ಸರಿಯೋ, ತಪ್ಪೋ ಎನ್ನುವ ಅನುಮಾನವಿರುತ್ತದೆ. ಮಗಳು ಸುಖವಾಗಿರುತ್ತಾಳೋ ಇಲ್ಲವೋ ಎನ್ನುವ ಕಾಳಜಿಯೂ ಇರುತ್ತದೆ. ಇದಷ್ಟೆ ಅಲ್ಲದೆ, ತನ್ನ ಪ್ರೀತಿಯ ಆಶ್ರಯದಲ್ಲಿ ಬೆಳೆದ ಮಗಳು ತನಗೆ ತಿಳಿಸದೇ ಮದುವೆಯ ನಿರ್ಧಾರ ತೆಗೆದುಕೊಂಡಳೆಂದು ತಂದೆಯ ಸ್ವಾಭಿಮಾನಕ್ಕೆ ತೀವ್ರ ಧಕ್ಕೆಯಾಗುತ್ತದೆ.

ಬೇರೆಲ್ಲ ನೋವುಗಳಿಗಿಂತ ಈ ನೋವು ತೀವ್ರವಾಗಿರುತ್ತದೆ. ಮಗಳಿಗೆ ಯಾವ ಉಡುಪು ಒಪ್ಪುತ್ತದೆ, ಮಗಳು ಯಾವ ಉಡುಪನ್ನು ಧರಿಸಬೇಕು, ಅವಳಿಗೆ ಯಾವ ಉಡುಪನ್ನು ಕೊಡಿಸಬೇಕೆಂದೂ ನಿರ್ಧರಿಸುತ್ತಿದ್ದ ವ್ಯಕ್ತಿಗೆ, ಮಗಳ ಮದುವೆ ಎನ್ನುವ ಲೈಫ್ ಡಿಸೈಡಿಂಗ್ ನಿರ್ಧಾರದಲ್ಲಿ ಯಾವುದೇ ಪಾತ್ರವಿರದೇ ಹೋಯಿತಲ್ಲ ಎನ್ನುವುದು ತಂದೆಯ ಕೊರಗಾಗಿರುತ್ತದೆ.

ಆದರೆ ಚಿತ್ರದಲ್ಲಿ ಈ ಸ್ವಾಭಿಮಾನದ ಅಂಶವೇ ಬಿಂಬಿತವಾಗಿಲ್ಲ. ತನ್ನ ಇಷ್ಟಕ್ಕೆ ವಿರುದ್ಧವಾಗಿ ಮದುವೆ ನಡೆದರೂ ಮುತ್ತಪ್ಪ ಆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಪರಿಣಾಮಕಾರಿಯಾಗಿಲ್ಲ. ನೋವು ಮತ್ತು ಒಂದು ರೀತಿಯ ಅವಮಾನದ ಭಾವನೆಗಳು ಸರಿಯಾಗಿ ವ್ಯಕ್ತವಾಗಿಲ್ಲ. ಏಕೆಂದರೆ ಎಗೋ ಹರ್ಟ್ ಆದಾಗಲೂ ಎಲ್ಲರೊಡನೆ ನಗುತ್ತ ಮದುವೆ ಕಾರ್ಯವನ್ನು ನಡೆಸಿಕೊಡುವುದು ಅಸಹನೀಯ ಶಿಕ್ಷೆಯೇ ಸರಿ!

5. ಹಾಡುಗಳು
ಹಾಡುಗಳು ಮಾತ್ರ ತಮಿಳು ಪದಗಳನ್ನು ತಿರುಚಿ ಮುರುಚಿ ಹಾಡಿದಂತಿವೆ (ಪುಟ್ಟ ಪುಟ್ಟ ಕಣ್, ಪುಟ್ಟ ಪುಟ್ಟ ಕಾಲ್...). ಈ ರತ್ನನ್ ಪದಗಳ್ ಶೈಲಿಯನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆಯೋ ಅಥವ ಹಾಡಿಗೆ ಸಾಹಿತ್ಯ ಒದಗಿಸಿದವರು ಕಣ್ ಗಳ ಮೇಲೆ ಕಣ್ಣು ಆಡಿಸದೇ ಇದ್ದುದರ ಫಲವೋ ತಿಳಿಯಲಿಲ್ಲ! ಆದರೆ ಹಾಡುಗಳು ಮಾತ್ರ ತುಂಬಾ ಇಂಪಾಗಿವೆ.

6.ಮೆಚ್ಚುಗೆಯ ಪಾತ್ರಗಳು
ಅಪ್ಪ ಮಗಳ ಚಿತ್ರದಲ್ಲಿ, ತೂಕದ ಪಾತ್ರಗಳೆಂದರೆ ಮನೆಕೆಲಸದ ಪಟೇಲ ಮತ್ತು ತಾಯಿ! ಪಟೇಲನ ಪಾತ್ರ ಚಿತ್ರಕ್ಕೆ ಜೀವ ಕಳೆ ತುಂಬುತ್ತದೆ. ಇಡೀ ಚಿತ್ರದಲ್ಲಿ ಎರಡು ಮೂರು ಸನ್ನಿವೇಶಗಳು ನನ್ನ ಕಣ್ಣಲ್ಲಿ ನೀರನ್ನು ತರಿಸಿದವು. ಹೋಟೆಲ್‌ನಲ್ಲಿ ಊಟಕ್ಕೆ ಕುಳಿತಾಗ ಪಟೇಲ ತನ್ನ ಧಣಿಯ ದೊಡ್ಡತನವನ್ನು ನೋಡಿ ಭಾವುಕನಾಗುವ ರೀತಿ ನಿಜಕ್ಕೂ ಮನಕರಗಿಸುವಂತಿತ್ತು. ಗುಬ್ಬಚ್ಚಿಯ ಹಾಡೂ ಭಾವನಾತ್ಮಕವಾಗಿತ್ತು (ನೃತ್ಯ ಚಿತ್ರೀಕರಣದಲ್ಲಿ ಸ್ವಲ್ಪ ನಾಟಕೀಯತೆಯಿತ್ತು).

ಮದುವೆಯದೇ ಸಂಭ್ರಮ ನಡೆದ ದಿನಗಳಲ್ಲಿ ಮಗಳು ಬಂದು ಹೋದ ಮೇಲೆ, ತಾಯಿಯು ಏನೋ ಕಳೆದುಕೊಂಡವರ ಹಾಗೆ ಕಟ್ಟೆಯ ಮೇಲೆ ಕುಳಿತಿದ್ದ ರೀತಿಯನ್ನು ನೋಡಿ ನನಗಂತೂ ಅಳು ಉಕ್ಕಿ ಬಂತು. ಆ ಸಂದರ್ಭದಲ್ಲಿ ತಾಯಿಯು ಅನುಭವಿಸುವ ಶೂನ್ಯತೆಯ ನೋವು, ಮಗಳ ವಿಷಯದಲ್ಲಿ ತಂದೆಯು ಜೀವನವಿಡೀ ಅನುಭವಿಸುವ ನೋವುಗಳಿಗಿಂತ ದೊಡ್ಡದಾಗಿರುತ್ತದೆ. ಮಗಳಿಗೆ (ಅದರಲ್ಲೂ ಏಕೈಕ ಪುತ್ರಿಗೆ) ಮದುವೆ ಮಾಡಿ ಕಳಿಸಿದ ಮೇಲೆ ತಾಯಿಗೆ ಹಠಾತ್ತನೇ ಜೀವನವೆಲ್ಲ ಶೂನ್ಯವೆನಿಸಿಬಿಡುತ್ತದೆ. ಮಾಡಲಿಕ್ಕೆ ಜೀವನದಲ್ಲಿ ಇನ್ನೇನೂ ಉಳಿದೇ ಇಲ್ಲವೇನೋ ಅನ್ನಿಸಿಬಿಡುತ್ತದೆ.

7.ಮತ್ತೆ ಮಡಿಕೇರಿಯ ಪ್ರವಾಸ
ಇತ್ತೀಚೆಗೆ ಮಡಿಕೇರಿಯ ಸುತ್ತ ಕಥೆ ಕಟ್ಟುವುದು, ಕನ್ನಡ ಚಿತ್ರರಂಗದಲ್ಲಿ ಫ್ಯಾಶನ್ ಆಗಿದೆಯೆನ್ನಿಸುತ್ತದೆ. ಆದರೂ ಮತ್ತೆ ಮತ್ತೆ ಮಡಿಕೇರಿಯನ್ನು ಸುತ್ತಿ ಬರಲು ಸಂತೋಷವೇ ಆಗುತ್ತದೆ. ಈ ಚಿತ್ರದ ಚಿತ್ರೀಕರಣವೂ ಅಂದವಾಗಿದೆ.

8.ಹಾಸ್ಯ ಮತ್ತು ಸಂಭಾಷಣೆ
ಬಹುದಿನಗಳ ಮೇಲೆ, ನಿಜಕ್ಕೂ ನಗೆ ಬರಿಸುವ ಒಳ್ಳೆಯ ಹಾಸ್ಯದ ಸಂಭಾಷಣೆ ಕೇಳುವ ಅವಕಾಶ ಈ ಚಿತ್ರದ ಮೂಲಕ ಸಿಕ್ಕಿತು. ಸಂಭಾಷಣೆಗಳು ಉತ್ತಮ ಗುಣಮಟ್ಟದ್ದಾಗಿವೆ. ಅಲ್ಪಪ್ರಾಣ, ಮಹಾಪ್ರಾಣಗಳ ಉಚ್ಛಾರಣೆಯೂ ಸರಿಯಾಗಿದೆ!

9.ಬಲ್ಲೇ ಬಲ್ಲೇ ಜೋಗಿ
ಜೋಗಿಯ ಪಾತ್ರ ಚಿತ್ರಕ್ಕೆ ಒಳ್ಳೆಯ ಮೆರುಗನ್ನು ಕೊಡುತ್ತದೆ. ಆ ಪಾತ್ರದ ಚಿತ್ರೀಕರಣದಲ್ಲಿ ಏನೋ ಹೊಸತನವಿದೆ. ಚಿತ್ರ ನೋಡಿ ಬಂದ ಎಷ್ಟೋ ದಿನಗಳ ನಂತರವೂ ಅಹ್ಲಾದ ನೀಡುವಂಥ ಫ್ರೆಶ್ ಪಾತ್ರ. ಜೋಗಿಯ ಸ್ಮೈಲ್ ಮರೆಯಲು ಸಾಧ್ಯವಿಲ್ಲ!

ಕನ್ನಡದಲ್ಲಿ ಸದಭಿರುಚಿಯ ಚಿತ್ರಗಳನ್ನು ನೋಡುತ್ತಲೇ ಇರಬೇಕೆನ್ನುವ ಅಭಿಮಾನಿ ಕನ್ನಡಿಗರ ಕನಸಿಗೆ ನಾನು ನನ್ನ ಕನಸು ಒಳ್ಳೆಯ ಪ್ರೇರಣೆ ನೀಡುತ್ತದೆ. ಎಷ್ಟೇ ಆಗಲಿ ಪ್ರಕಾಶ್ ರೈ ಎಂದಕೂಡಲೇ ನಮ್ಮ ನಿರೀಕ್ಷೆಗಳ ಪಟ್ಟಿ ದೊಡ್ಡದಾಗಿಬಿಡುತ್ತದೆ. ಆದ್ದರಿಂದ ನಾನೂ ಸ್ವಲ್ಪ ಉದಾರವಾಗಿ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದೆ. ಪ್ರಕಾಶ್ ರೈ ಕನ್ನಡ ಚಿತ್ರರಂಗಕ್ಕೆ ಭೇಟಿ ಕೊಟ್ಟಿದ್ದು ತುಂಬಾ ಸಂತೋಷದ ವಿಷಯ, ಉತ್ತಮ ಚಿತ್ರ ನಿರ್ದೇಶಿಸಿದ್ದು ಮಹದಾನಂದದ ವಿಷಯ, ಅದು ಇನ್ನೂ ಉನ್ನತ ಮಟ್ಟಕ್ಕೆ ಏರಬಹುದಾಗಿತ್ತು ಎನ್ನುವುದು ನನ್ನ ದೂ(ದು)ರಾಸೆ!

« ನಾನು ನನ್ನ ಕನಸು...ನಾನು ನನ್ನ ಅನಿಸಿಕೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada