»   »  ನಾಗತಿಹಳ್ಳಿಯ ತಪ್ಪಿದ ಒಲವಿನ ಲೆಕ್ಕಾಚಾರ

ನಾಗತಿಹಳ್ಳಿಯ ತಪ್ಪಿದ ಒಲವಿನ ಲೆಕ್ಕಾಚಾರ

By: * <a href="mailto:prasad.naik@greynium.com">ಪ್ರಸಾದ ನಾಯಿಕ</a>
Subscribe to Filmibeat Kannada

ಒಲವೆ ಜೀವನ ಲೆಕ್ಕಾಚಾರ, ಒಲವೆ ಮರೆಯದ ಗುಣಾಕಾರ!

ತಾಯಿ ಮಗುವಿನ ಮೇಲೆ ತೋರಿಸುವ ಮಮತೆಯಲ್ಲಿ ಲೆಕ್ಕಾಚಾರ, ತಂದೆ ಮಗಳ ಮೇಲೆ ತೋರುವ ಪ್ರೀತಿಯಲ್ಲೂ ಲೆಕ್ಕಾಚಾರ, ಪ್ರೇಮಿಸುವ ಹಕ್ಕಿಗಳ ನಡುವೆ ಲೆಕ್ಕಾಚಾರ, ಗುರು ಶಿಷ್ಯಂದಿರ ನಡುವೆಯೂ ಲೆಕ್ಕಾಚಾರ... ಅಷ್ಟೇ ಏಕೆ ಮೋಸ ಮಾಡುವಾಗಲೂ ಲೆಕ್ಕಾಚಾರವಿರಬೇಕು. ಹುಡುಗಿಯನ್ನ ಪ್ರೀತಿಸಿದ ಹಾಗಿರಬೇಕು ಆದರೆ ಪ್ರೀತಿಸಿರಬಾರದು, ಅನುಭವಿಸಿ ಮಜಾ ಉಡಾಯಿಸಿಬಿಡಬೇಕು ಆದರೆ ಮದುವೆಯಾಗಬಾರದು... ಒಟ್ಟಿನಲ್ಲಿ ಕ್ರಾಂತಿಯಾಗಬೇಕು ಕ್ರಾಂತಿ!

ಹೀಗೊಬ್ಬ ಕಾಲೇಜು ಪ್ರಾಧ್ಯಾಪಕ ತನ್ನ ಶಿಷ್ಯಂದಿರಿಗೆ ಕ್ರಾಂತಿ ಮಂತ್ರ ಪಠಿಸುತ್ತಿರುತ್ತಾನೆ. ದೇಹದ ಮೇಲೊಂದು ಜುಬ್ಬಾ, ಹೆಗಲ ಮೇಲೊಂದು ಕೆಂಪು ವಸ್ತ್ರ, ತಿಂಗಳಿಗೆರಡು ಬಾರಿ ಸ್ನಾನ, ಬಾಯಲ್ಲಿ ಲೇನೆನ್, ಕಾರ್ಲ್ ಮಾರ್ಕ್ಸ್, ಫಿಡೆಲ್ ಕ್ಯಾಸ್ಟ್ರೋ ಇವರ ಘೋಷವಾಕ್ಯಗಳ ಪಠನ. ಇಂಥ ಕ್ರಾಂತಿ ಪುರುಷನೊಬ್ಬನ ಮಾತನ್ನು ಕೇಳಿದ ಯುವಕನೊಬ್ಬ ಮೋಸ ಮಾಡುವುದೇ ಕ್ರಾಂತಿ ಅಂತ ತಿಳಿದು ಒಲವಿನಲ್ಲೂ ಲೆಕ್ಕಾಚಾರ ಹಾಕಿ, ಪ್ರಿಯತಮೆಗೆ ಪಂಗನಾಮ ಹಾಕಿ ತಾನೂ ಮತ್ತೊಬ್ಬ ಕ್ರಾಂತಿಕಾರಿ ಮೇಷ್ಟ್ರಾಗುತ್ತಾನೆ. ಅಲ್ಲಿಯೂ ಸಹೋದ್ಯೋಗಿ ಸುಂದರಿಯೊಡನೆ 'ಕ್ರಾಂತಿ' ಮಾಡಲು ಹೋಗಿ ಆಕೆಯಿಂದಲೇ ನಿಜವಾದ ಕ್ರಾಂತಿಯ ಬಗ್ಗೆ ಪಾಠ ಕಲಿಯುತ್ತಾನೆ. ಗಂಡ, ಬಂಧುಗಳು, ನೆರೆಹೊರೆಯವರೊಡನೆ ಪ್ರೀತಿಯಿಂದ ಬಾಳುವುದೇ ಕ್ರಾಂತಿ. ನಿಜವಾದ ಕ್ರಾಂತಿ ಮಾಡಿದ್ದು ನಾನಲ್ಲ ನೀವು ಎಂದು ತನ್ನ ಮಾಜಿ ಪ್ರಿಯತಮೆಯ ಬಳಿಗೆ ಬರುತ್ತಾನೆ. ಮುಂದೇನಾಗುತ್ತದೆ? ಚಿತ್ರ ನೋಡಿ.

ಕ್ರಾಂತಿ ಅಂದ್ರೆ ಏನು? ಲೆನಿನ್, ಕಾರ್ಲ್ ಮಾರ್ಕ್ಸ್ ಮುಂದಾದವರು ಮಾಡಿದ್ದು ಮಾತ್ರ ಕ್ರಾಂತಿಯಾ? ಕನ್ನಡದ ನಾಡಿನಲ್ಲಿ ಕ್ರಾಂತಿ ಮಾಡಿದವರು ಯಾರೂ ಇಲ್ಲವೆ? ನಕ್ಸಲರು ಮಾಡುತ್ತಿರುವುದೂ ಕ್ರಾಂತಿಯೆ? ಅಥವಾ ಗಂಡ ಹೆಂಡತಿಯ ಜೊತೆ, ಬಂಧು ಬಳಗದವರೆ ಜೊತೆ, ಮಕ್ಕಳನ್ನು ಲಾಲಿಸಿ ಪಾಲಿಸಿಕೊಂಡು ಸಹಬಾಳ್ವೆ ಸಾಗಿಸುವುದೇ ಕ್ರಾಂತಿಯೆ? ಕ್ರಾಂತಿ ಬೋಧಿಸುವ ಪ್ರೊಫೆಸರುಗಳೂ ಇದ್ದಾರೆಯೆ? ಕ್ರಾಂತಿ ಎಂಬುದು ಅಸ್ತಿತ್ವದಲ್ಲಿಯಾದರೂ ಇದೆಯೆ? ಕ್ರಾಂತಿ ಎಂಬುದು ಈ ಆಧುನಿಕ ಕಾಲದಲ್ಲಿ ಎಷ್ಟು ಪ್ರಸ್ತುತ? ಯಾವುದರಲ್ಲಿ ಲೆಕ್ಕಾಚಾರವಿರಬೇಕು ಯಾವುದರಲ್ಲಿ ಇರಬಾರದು?

ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಕ್ರಾಂತಿ, ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಭಾರೀ ಗೊಂದಲಕ್ಕೆ ಸಿಲುಕಿದ್ದಾರೆ. ಕ್ರಾಂತಿಕಾರಿ ಲೆಕ್ಕಾಚಾರವೇ ಎಲ್ಲೋ ಕೈಕೊಟ್ಟಂತಿದೆ. ಒಲವಿನ ಗುಣಾಕಾರ, ಭಾಗಾಕಾರ ಹಾಕಿದರೂ ನಿರ್ಮಾಪಕ ಕೊಬ್ರಿ ಮಂಜುರಿಗೆ ನೀಡಿದ ಲೆಕ್ಕಾಚಾರ ಎಲ್ಲೋ ತಪ್ಪಿದೆ. ಎಲ್ಲವೂ ಕೃತಕವೆನಿಸುತ್ತದೆ. ಕ್ರಾಂತಿಕಾರಿ ಭಾಷಣಗಳು, ಸಂಭಾಷಣೆ, ಹಾವಭಾವ, ವಸ್ತುಸ್ಥಿತಿ ಎಲ್ಲವೂ ಹೇಗಿರಬೇಕೋ ಹಾಗೆ ಇಲ್ಲ. ಲೆಕ್ಕ ಬಿಟ್ಟೋರು, ಲೋಕ ಬಿಟ್ರು. ಹಾಗೆಯೇ ಕ್ರಾಂತಿಯಲ್ಲಿ, ಒಲವಿನಲ್ಲಿ ಏನೇನೋ ಲೆಕ್ಕಾಚಾರ ಹಾಕಲು ಹೋಗಿ ನಾಗತಿ ಕೆಟ್ರು.

ಕ್ರಾಂತಿ, ಬದಲಾವಣೆ, ಬಡತನ ಮಣ್ಣುಮಸಿ ಏನೇ ಇರಲಿ, ದಗಲಬಾಜಿ ಕ್ರಾಂತಿಕಾರಿ ಪ್ರೊಫೆಸರಾಗಿ ರಂಗಾಯಣ ರಘು ಇಡೀ ಚಿತ್ರದ ಕೇಂದ್ರಬಿಂದುವಾಗಿದ್ದಾರೆ. ಹಿಂದಿನ ಎಲ್ಲ ಚಿತ್ರಗಳಿಗಿಂತ ಅವರು ಸಂಭಾಷಣೆ ಒಪ್ಪಿಸುವ ಪರಿ ವಿಭಿನ್ನವಾಗಿರದಿದ್ದರೂ ಅವರ ಪಾತ್ರಕ್ಕೆ ವಿಸ್ಕಿಯಲ್ಲಿ ಐಸ್ ಕ್ಯೂಬ್ ಹೊಂದಿಕೊಂಡಂತೆ ಹೊಂದಿಕೊಂಡಿದೆ. ಆದರೆ, ಪ್ರೊಫೆಸರ್ ಮಾತನ್ನು ಕೇಳಿ ಪ್ರಿಯತಮೆಗೆ ವಂಚಿಸುವ ಮರಿ ಪ್ರಾಧ್ಯಾಪಕನಾಗಿ ಶ್ರೀನಗರ ಕಿಟ್ಟಿ ಮಾತ್ರ ಮಿಸ್ ಮ್ಯಾಚ್. ಕ್ರಾಂತಿಕಾರಿ ಪಾತ್ರಧಾರಿಯಾಗಿ ರಘುವಿನ ಅರ್ಧದಷ್ಟೂ ಕ್ರಾಂತಿ ಮಾಡಲು ಕಿಟ್ಟಿಗೆ ಸಾಧ್ಯವಾಗಿಲ್ಲ. ರಾಧಿಕಾ ಪಂಡಿತ್ ನಗುವಿನಲ್ಲಿ ಕೂಡ ಸಹಜತೆ ತರಿಸಲು ನಾಗತಿ ಸೋತಿದ್ದಾರೆ.

ನಾಗತಿ ಕ್ರಾಂತಿ ಮಾಡಿದ್ದು ಒಂದೇ ಒಂದು ಸನ್ನಿವೇಶದಲ್ಲಿ ಮಾತ್ರ. ಒಂದೇ ಮಾತಿನಿಂದ ನಾಯಕನ ಮನಬದಲಿಸುವ ಸುಂದರಿ ಅಧ್ಯಾಪಕಿ ಡೈಸಿ ಬೋಪಣ್ಣ ತನ್ನ ಜನ್ಮದಿನವನ್ನು ಹುಟ್ಟುಕುರುಡರಿಂದ ದೀಪ ಹಚ್ಚಿಸುವ ಮುಖಾಂತರ ಕ್ರಾಂತಿ ಮಾಡಿದ್ದಾರೆ. ತಮ್ಮ ಪ್ರತಿ ಚಿತ್ರದಂತೆ ಈ ಚಿತ್ರದ ಕೊನೆಯಲ್ಲಿ ಕಾಣಿಸಿಕೊಂಡಿರುವ ನಾಗತಿ, ತನ್ನ ಮಾಜಿ ಪ್ರಿಯತಮೆಯ ಬಳಿ ಹೋಗುವ ನಾಯಕನಿಗೆ ಜೀವನಪಾಠ ಹೇಳುತ್ತಾರೆ. ಪ್ರೀತಿಯ ಬಗ್ಗೆ ಕೆಟ್ಟ ಕನಸು ಕಾಣುವ ನಾಯಕನಿಗೆ ಒಳ್ಳೆಯ ಕನಸು ಕಾಣುವ ಪಾಠ ಒಪ್ಪಿಸುತ್ತಾರೆ. ನೀನೀಗ ಕಂಡ ಕನಸೆಲ್ಲ ಮಿಥ್ಯ, ಈಗ ಕಾಣುವ ವಾಸ್ತವವೇ ಸತ್ಯ, ಇದೇ ನಿಜವಾದ ಕ್ಲೈಮ್ಯಾಕ್ಸ್ ಎಂದು ಹೇಳುತ್ತಾರೆ. ಅವರ ಮಾತಿನಲ್ಲಿ ಚಿತ್ರದ ವಿಷಯವಾಗಿಯೂ ಎಷ್ಟು ಸತ್ಯವಿದೆ!

ಪ್ರೇಕ್ಷಕರು ಸಾಕಷ್ಟು ಲೆಕ್ಕಾಚಾರ ಹಾಕಿದರೆ, ನಿರ್ಮಾಪಕ ಕೊಬ್ರಿ ಮಂಜುವಿಗೆ ತಪ್ಪಿದ್ದಲ್ಲ ಗ್ರಹಚಾರ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada